ಗಾಂಧಿ ಪರಿವಾರದಿಂದ ಮಾತ್ರ ಕಾಂಗ್ರೆಸ್ ಒಗ್ಗಟ್ಟಾಗಿರಲು ಸಾಧ್ಯ, ಹಾಗಾಗಿ ರಾಹುಲ್ ಗಾಂಧಿ ಅವರು ಪಕ್ಷದ ಅಧಿಕಾರವನ್ನು ವಹಿಸಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ದಿ.ಪ್ರಿಂಟ್ ಜಾಲತಾಣಕ್ಕೆ ನೀಡಿರುವ ಸಂದರ್ಶನದಲ್ಲಿ, ನೆಹರೂ-ಗಾಂಧಿ ಕುಟುಂಬ ಇಲ್ಲದಿದ್ದರೆ ಕಾಂಗ್ರೆಸ್ ಒಗ್ಗಟ್ಟಾಗಿರಲು ಸಾಧ್ಯವಿಲ್ಲ. ಅವರ ಕುಟುಂಬದಿಂದಷ್ಟೇ ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಿನಿಂದ ಮುಂದುವರೆಸಿಕೊಂಡು ಹೋಗಲು ಸಾಧ್ಯ ಎನ್ನುವುದು ವಾಸ್ತವ, ಹಾಗೆಂದು ನಾನು ವಂಶ ಪಾರಂಪರ್ಯ ರಾಜಕಾರಣ ಮುಂದುವರೆಯಲೇಬೇಕು ಎಂದು ನಾನು ಹೇಳುವುದಲ್ಲ, ಆದರೆ ಜನರು ಪಕ್ಷವನ್ನು ನೆಹರೂ ಕುಟುಂಬವೇ ಮುಂದುವರೆಸಲಿ ಎಂದು ಆಶಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜನಪ್ರಿಯ ಆಯ್ಕೆಗಳು, ಪ್ರಜಾತಾಂತ್ರಿಕ ಮಾದರಿಯಲ್ಲಿ ಅವರೇ ಪಕ್ಷವನ್ನು ಮುನ್ನಡೆಸಬೇಕು. ಹಾಗಾಗಿ, ರಾಹುಲ್ ಗಾಂಧಿ ಅವಶ್ಯವಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಮಯದಲ್ಲಿ ಪಕ್ಷವನ್ನು ಮುನ್ನಡೆಸಲು ನೆಹರೂ-ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಿಜಲಿಂಗಪ್ಪನಿಂದ ಹಿಡಿದು ನರಸಿಂಹ ರಾವ್ ವರೆಗೂ ಇತರೆ ನಾಯಕರು ಎಐಸಿಸಿ (AICC – All India Congress Committee) ಅಧ್ಯಕ್ಷರಾಗಿದ್ದರು, ಆದರೆ ಸದ್ಯ ನೆಹರು ಕುಟುಂಬ ಅಧ್ಯಕ್ಷರಾಗುವುದು ಸರಿಯಾದ ಆಯ್ಕೆ ಎಂದಿದ್ದಾರೆ.
ಸೋನಿಯಾ ಗಾಂಧಿ ಭೇಟಿ ವೇಳೆಯೂ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಶಿಫಾರಸ್ಸು ಮಾಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಿಯಾಂಕ ಗಾಂಧಿ ಕೂಡಾ ರಾಹುಲ್ ಗಾಂಧಿ ಅಧ್ಯಕ್ಷರಾಗಲಿ ಎಂದು ಬಯಸುತ್ತಾರೆ, ಅವರು ಬಹಳ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಉಳಿದೆಲ್ಲಾ ವಿರೋಧ ಪಕ್ಷದ ನಾಯಕರಿಗಿಂತ ಅವರು ತುಂಬಾ ಪ್ರಬಲವಾಗಿದ್ದಾರೆ. ಅಖಿಲೇಶ್ ಯಾದವ್ ಅಥವಾ ಮಾಯಾವತಿ ಅವರಿಗಿಂತ ಪ್ರಿಯಾಂಕ ಗಾಂಧಿ ತುಂಬಾ ಕ್ರಿಯಾಶೀಲರಾಗಿ ಜನರ ಧ್ವನಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.