ಗದಗ ಜಿಲ್ಲೆಯಲ್ಲಿರುವ ಅರಣ್ಯ ಶ್ರೇಣಿ ಎಂದರೆ ಕಪ್ಪತ್ತಗುಡ್ಡ ಒಂದೇ. ಅದು ಮೂರು ತಾಲೂಕುಗಳನ್ನು (ಗದಗ, ಮುಂಡರಗಿ, ಶಿರಹಟ್ಟಿ) ವ್ಯಾಪಿಸಿದ್ದು ಸುತ್ತಲಿನ ಗ್ರಾಮಸ್ಥರು ಅಂಚಿನ ಹಳ್ಳಿಗಳಲ್ಲಿ ಕೃಷಿ ಮಾಡಿಕೊಂಡು ಹೇಗೋ ಜೀವನ ಮಾಡುತ್ತ ಬಂದಿದ್ದಾರೆ. ಆದರೆ ಇವರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಸತತ ಪ್ರಯತ್ನ ಮಾಡುತ್ತಲೇ ಬಂದಿದೆ. ಇದರ ಹಿಂದೆ ಮರಳು ಮಾಫಿಯಾ, ಜಲ್ಲಿ ಕಲ್ಲು ಮಾಫಿಯಾ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಅದಿರು ಮಾಫಿಯಾ ಕೆಲಸ ಮಾಡುತ್ತಿವೆ.
ಸದ್ಯ ಕಳೆದ ಮೂರು ದಿನಗಳಿಂದ ಶಿರಹಟ್ಟಿ ತಾಲೂಕಿನ ದೇವಿಹಾಳದ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಅರಣ್ಯ ಇಲಾಖೆ ತಂತಿ ಬೇಲಿ ಹಾಕುವುದನ್ನು 8 ದಿನಗಳಲ್ಲಿ ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ತಂತಿ ಬೇಲಿ ಹಾಕುವುದು ನೆಂದರೆ ಅವರ ಜಮೀನುಗಳಿಗೆ ಪ್ರವೇಶ ನಿರ್ಭಂಧಿಸಿದಣಂತೆ.
ಕಪ್ಪತ್ತಗುಡ್ಡಕ್ಕೆ ಸಂಬಂಧಿಸಿದಂತೆ ಇದು ಈ ಒಂದು ಹಳ್ದಳಿಯ ಸಮಸ್ಯೆಯಲ್ಲ. ಶಿರಹಟ್ಟಿ, ಮುಂಡರಗಿ ತಾಲೂಕಿನ 27 ಹಳ್ಳಿಗಳು ಈ ಸಮಸ್ಯೆ ಎದುರುಸುತ್ತಿವೆ. ಬಗರ್ಹುಕುಂ ಸಾಗುವಳಿದಾರರಿಗೆ ಜಿಲ್ಲಾಡಳಿತ ಹಕ್ಕು ಪತ್ರ ನೀಡುತ್ತಿಲ್ಲ. ಬರೀ ಭರವಸೆ ನೀಡುತ್ತಿದೆ.
4 ತಿಂಗಳ ಹಿಂದೆ 27 ಹಳ್ಳಿಗಳ ಗ್ರಾಮಸ್ಥರು 21 ಕಿ.ಮೀ ಪಾದಯಾತ್ರೆ ನಡೆಸಿದಾಗ ಜಿಲ್ಲಾಡಳಿತ ಹಕ್ಕುಪತ್ರ ನೀಡುವ ಭರವಸೆ ನೀಡಿತ್ತು, ಅದು ಇಂದಿಗೂ ಸಾಕಾರವಾಗಿಲ್ಲ. ಅರಣ್ಯ ಇಲಾಖೆ ಮಾತ್ರ ಮೈನಿಂಗ್ ಮಾಫಿಯಾಕ್ಕೆ ಮಣಿದು ಕಪ್ಪತ್ತಗುಡ್ಡದ ಅಂಚಿನಲ್ಲಿರುವ ಮೂರೂ ತಾಲೂಕುಗಳ ಗ್ರಾಮಸ್ಥರನ್ನು ಒಕ್ಕಲೆಬ್ಬಿಸಲು ಹೊರಟಿದೆ. ಇದಕ್ಕೆ ಪರೋಕ್ಷವಾಗಿ ಬಿಜೆಪಿ ಪ್ರೆತಿನಿಧಿಗಳ ಬೆಂಬಲ ಇರುವಂತೆ ಕಾಣುತ್ತಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಪ್ಪತ್ತಗುಡ್ಡದ ಕೆಲವು ಭಾಗವನ್ನು ಸಂರಕ್ಷಿತ ಅರಣ್ಯ, ಇನ್ನು ಕೆಲವು ಭಾಗವನ್ನು ವನ್ಯಜೀವಿಧಾಮ ಎಂದು ಘೋಷಿಸುವ ಮೂಲಕ ಸಡನ್ ಶಾಕ್ ಕೊಟ್ಟಿತ್ತು ಅರಣ್ಯ ಇಲಾಖೆ. ಆಗ ಈ ಕುರಿತು ತೀವ್ರ ಚರ್ಚೆ ಶುರು ಮಾಡಿದ ಯುವ ವಕೀಲ ರವಿಕಾಂತ ಅಂಗಡಿ, ಇದರ ಹಿಂದೆ ಮೈನಿಂಗ್ ಮಾಫಿಯಾ ಇದೆ ಎಂಬುದನ್ನು ಬಿಡಿಬಿಡಿಯಾಗಿ ಎಳೆದು ತೋರಿಸಿದರು. ಅವರ ಬೆಂಬಲಕ್ಕೆ ಆಗಿನ ತೋಂಟದಾರ್ಯ ಸ್ವಾಮೀಜಿ, ಕೆಆರ್ಎಸ್ ಪಕ್ಷದ ರವಿ ಕೃಷ್ಣಾ ರೆಡ್ಡಿ ನಿಂತರು. ಗದಗಿನ ಗಾಂಧಿ ವೃತ್ರದಲ್ಲಿ ರವಿ ಕೃಷ್ಣಾ ರೆಡ್ಡಿ, ರವಿಕಾಂತ ಅಂಗಡಿ ಮುಂತಾದ ಹಲವರು ಉಪವಾಸ ಸತ್ಯಾಗ್ರಹವನ್ನು ತೋಂಟದಾರ್ಯ ಸಿದ್ಧಲಿಂಗಸ್ವಾಮಿಗಳ ಸಲಹೆಯೊಂದಿಗೆ ಆರಂಭಿಸಿದರು. ಮೂರೇ ದಿನಕ್ಕೆ ಸರ್ಕಾರ ಆದೇಶ ಹಿಂಪಡೆಯಿತು. ಆಗಿನ ಸಿಎಂ ಸಿದ್ಧರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲರ ಗಮನಕ್ಕೆ ತರದೇ ಅರಣ್ಯ ಇಲಾಖೆ ಆ ಕ್ರಮಕ್ಕೆ ಮುಂದಾಗಿತ್ತು. ವನ್ಯಜೀವಿಧಾಮ ಎಂದು ಘೋಷಿಸುವ ಮೂಲಕ ಕಪ್ಪತ್ತಗುಡ್ಡದ ಅಂಚಿನ ಬಡ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ಇದರ ಹಿಂದೆ ಇತ್ತು.

ಪೊಸ್ಕೊ ಸಂಚು, ಬಲ್ಡೋಟಾ ಬಂಗಾರ
ಈ ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಇಲ್ಲಿ ಪೊಸ್ಕೊ ಕಂಪನಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದರು. ಅದರಲ್ಲಿ ಆಗಿನ ಕೈಗಾರಿಕಾ ಸಚವ ಮುರುಗೇಶ ನಿರಾಣಿ ಕೈವಾಡವಿತ್ತು. ಆಗ ಇಲ್ಲಿ ತೋಂಟದ ಸಿದ್ದಲಿಂಗಸ್ವಾಮಿ (ಈಗ ಅವರಿಲ್ಲ) ಮುಂದಾಳತ್ವದಲ್ಲಿ ಬೃಹತ್ ಆಂದೋಲನ ಶುರುವಾಗಿತು. ಎಡಪಕ್ಷದ ಸಂಘಟನೆಗಳೂ ಕೈ ಜೋಡಿಸಿದವು. ಮೇಧಾ ಪಾಟ್ಕರ್ ಇಲ್ಲಿಗೇ ಬಂದು ಜನರನ್ನು ಉದ್ದೇಶಿಸಿ ಮಾತನಾಡಿದರು. ಬೆದರಿದ ಯಡಿಯೂರಪ್ಪ ಪೊಸ್ಕೊಗೆ ಕೊಟ್ಟ ಅನುಮತಿಯನ್ನು ಹಿಂಪಡೆದರು.
ಆ ಹೋರಾಟದಲ್ಲೂ ಇದ್ದ ರವಿಕಾಂತ್ ಅಂಗಡಿ ನಂತರದ ದಿನಗಳಲ್ಲಿ ಕಪ್ಪತ್ತಗುಡ್ಡ ಅಂಚಿನ ಗ್ರಾಮಗಳ ರೈತರನ್ನು ಸಂಘಟಿಸಿದರು. ಕಪ್ಪತ್ತಗುಡ್ಡದಲ್ಲಿ ಗಾಳಿ ವಿದ್ಯುತ್ ಘಟಕ ಸ್ಥಾಪಿಸಿರುವ ಸುಜ್ಲಾನ್ ಕಂಪನಿ ಯಾವುದೇ ನೋಟಿಸ್ ನೀಡದೇ 130 ನ್ಔಕರರನ್ನು ತೆರಗೆದು ಹಾಕಿದಾಗ 29 ದಿನ ಹೋರಾಟ ನಡೆಸಿದ ಕೊನೆಯಲ್ಲಿ ಪ್ರತಿ ನ್ಔಕರನಿಗೂ ತಲಾ 4 ಲಕ್ಷ ರೂ ಪರಿಹಾರ ಸಿಗುವಂತೆ ಮಾಡಿದರು.
ಈಗ ನಡೆದ ದೇವಿಹಾಳದ ಪ್ರತಿಭಟನೆ ಸಾಂಕೇತಿಕ. ಆದರೆ 27 ಹಳ್ಳಿಗಳ ಗ್ರಾಮಸ್ಥರೂ ಈಗ ಮತ್ತೆ ಹೋರಾಟಕ್ಕೆ ಸಿದ್ಧವಾಗಿದ್ದಾರೆ. ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಗೇ ಬಂದು ಸಕ್ರಿಯವಾಗಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಧ್ವನಿ ಜೊತೆಗೆ ಮಾತನಾಡಿದ ಹೋರಾಟದ ಮುಂದಾಳು ರವಿಕಾಂತ್ ಅಂಗಡಿ, ‘ಇಲ್ಲಿನ ಬಗರ್ಹುಕುಂ ಸಾಗುವಳಿದಾರರು ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರು. ಅದರಲ್ಲೂ ಅಲೆಮಾರಿ ಜನಾಂಗ ಎನಿಸಿದ ಲಂಬಾಣಿ ಸಮೂಹಕ್ಕೆ ಸೇರಿದವರು. ಮೈನಿಂಗ್ ಮಾಫಿಯಾದ ಒತ್ತಡದಿಂದ ಇವರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಲಾಗುತ್ತಿದೆ. ನಮ್ಮ ಗುರಿ ಕಪ್ಪತ್ತಗುಡ್ಡ ರಕ್ಷಣೆ ಮತ್ತು ಸುತ್ತಲಿನ ಗ್ರಾಮಸ್ಥರ ಬದುಕಿನ ಸಂರಕ್ಷಣೆ’ ಎಂದರು.

‘ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸದೆ. ಅರಣ್ಯ ಪ್ರದೇಶದ ಗಡಿ ಗುರುತಿಸಿ ತಂತಿಬೇಲಿ ಹಾಕುತ್ತಿರುವುದು ಖಂಡನೀಯ, ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರವನ್ನು ಕೈ ಬಿಡಬೇಕು’ ಎಂದು ಅವರು ಒತ್ತಾಯಿಸಿದರು
‘ನಾಲ್ಕು ತಿಂಗಳ ಹಿಂದೆ ತಂತಿಬೇಲಿ ಅಳವಡಿಸುವುದನ್ನು ವಿರೋಧಿಸಿ ಪಾದಯಾತ್ರೆ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳ ಆದೇಶದಂತೆ ಅಪರ ಜಿಲ್ಲಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಂತಿಬೇಲಿ ಹಾಕುವುದನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದಿದ್ದರು. ತಾಲ್ಲೂಕಿನ ಅರ್ಹ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ವಿಳಂಬವಾಗಿದೆ. ಕೂಡಲೇ ಹಕ್ಕುಪತ್ರ ನೀಡಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂಬ ಆದೇಶ ನೀಡಿದ್ದರು. ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಅರಣ್ಯ ಇಲಾಖೆ ಸಿಬ್ಬಂದಿ ತಂತಿಬೇಲಿ ಅಳವಡಿಸುತ್ತಿರುವುದು’ ಖಂಡನೀಯ ಎಂದರು.
ಸಾಕಷ್ಟು ಬಗೆಯ ಅದಿರು ಹೊಂದಿರುವ ಕಪ್ಪತ್ತಗುಡ್ಡದ ಮೇಲೆ ಮೈನಿಂಗ್ ಮಾಫಿಯಾ ಮುಗಿಬಿದ್ದಿದೆ. ಇದರ ಹಿಂದೆ ಹಲವು ಜನಪ್ರತಿನಿಧಿಗಳ ಕೈವಾಡವೂ ಇದೆ. ಕಪ್ಪತ್ತಗುಡ್ಡ ರಕ್ಷಿಸಿಕೊಳ್ಳೋಣ, ಅಂಚಿನ ಬಗರ್ಹುಕುಂ ರೈತರನ್ನು ಕಾಪಾಡೋಣ ಎಂದು ಒಂದು ದೊಡ್ಡ ಆಂದೋಲನ ಸೃಷ್ಟಿಸುವ ಕಾಲ ಬಂದಾಗಿದೆ.
