ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ರಾಜಕೀಯವಾಗಿ ಕಟ್ಟಿಹಾಕುವ ಯತ್ನಗಳು ಅವರ ಸ್ವಪಕ್ಷೀಯರಿಂದಲೇ ನಡೆಯುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಲಿಂಗಾಯತ ಸಮುದಾಯದೊಳಗಿನ ತಮ್ಮ ಪ್ರಭಾವವನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಮೂಲಕ ಪಕ್ಷದ ವರಿಷ್ಠರ ತಂತ್ರಗಾರಿಕೆಗೆ ತಿರುಗೇಟು ಕೊಡುವ ಯತ್ನ ಬಿಎಸ್ ವೈ ಮತ್ತು ವಿಜಯೇಂದ್ರ ಕಡೆಯಿಂದ ಬಿರುಸುಗೊಂಡಿದೆ.
ತಮ್ಮ ತಂದೆಯನ್ನು ಮುಖ್ಯಮಂತ್ರಿ ಗಾದಿಯಿಂದ ಹೀನಾಯವಾಗಿ ಪದಚ್ಯುತಗೊಳಿಸಿದ ಬಿಜೆಪಿಯ ಹೈಕಮಾಂಡ್ ವಿರುದ್ಧ ಬಹಿರಂಗ ಬಂಡಾಯ ಸಾರದೇ ಹೋದರೂ, ವಿಜಯೇಂದ್ರ ತನ್ನ ಮತ್ತು ತಮ್ಮ ಕುಟುಂಬದ ರಾಜಕೀಯ ಹಿಡಿತ ಮತ್ತು ಪ್ರಭಾವ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಳೆದ ಎರಡು ತಿಂಗಳುಗಳಿಂದ ಎಡಬಿಡದೆ ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೆ ಓಡಾಡಿ ಸಮುದಾಯದ ಮಠಾಧೀಶರು, ಪ್ರಮುಖ ನಾಯಕರನ್ನು ಸಂಪರ್ಕಿಸುತ್ತಾ ಸಮುದಾಯದ ನಡುವೆ ತಮ್ಮ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸಿದ್ದಾರೆ.
ತತಕ್ಷಣಕ್ಕೆ ಬಿಜೆಪಿಯ ಹೈಕಮಾಂಡ್ ವಿರುದ್ಧ ಯಾವುದೇ ರೀತಿಯ ಬಂಡಾಯ ಸಾರದೆ, ಪಕ್ಷದ ವಿರುದ್ಧ ಬಂಡೇಳದೆ, ಮುಂದಿನ ಒಂದು ದಶಕದ ಯೋಜನೆಗಳನ್ನು, ಭವಿಷ್ಯದ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಆ ದೂರಗಾಮಿ ಯೋಜನೆಗೆ ತಕ್ಕಂತೆ ತಳಮಟ್ಟದಿಂದ ಗಟ್ಟಿಯಾಗುವ ತಂತ್ರಗಾರಿಕೆಯನ್ನು ವಿಜಯೇಂದ್ರ ಚಾಲನೆಯಲ್ಲಿಟ್ಟಿದ್ದಾರೆ. ಹಾಗೆ ನೋಡಿದರೆ, ಅವರು ರಾಜಕೀಯವಾಗಿ ಹೀಗೆ ದೂರಗಾಮಿ ಯೋಜನೆ ಮುಂದಿಟ್ಟುಕೊಂಡು ಕೆಲಸ ಮಾಡತೊಡಗಿ ಈಗಾಗಲೇ ಎರಡು ವರ್ಷ ಕಳೆದಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ನ ಹಿಂದುತ್ವ ಸಿದ್ಧಾಂತವನ್ನು ಮೀರಿ ತಮ್ಮದೇ ಆದ ಪರ್ಯಾಯ ರಾಜಕೀಯ ವೇದಿಕೆಗೆ ಅವರು ಆಗಿನಿಂದಲೇ ಅಡಿಪಾಯ ಹಾಕಿದ್ದರು. ಅದರ ಭಾಗವಾಗಿ ನಾಡಿನ ಉದ್ದಗಲಕ್ಕೆ ಬಿಜೆಪಿ ಮತ್ತು ಸಂಘಪರಿವಾರರೇತನ ನಾಯಕರು, ಹೋರಾಟಗಾರರು, ಸಾಹಿತಿ-ಚಿಂತಕರು, ಹಿರಿಯ ಪತ್ರಕರ್ತರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತಿದ್ದರು(ಪ್ರತಿಧ್ವನಿ ವರ್ಷದ ಹಿಂದೆಯೇ ಈ ಬಗ್ಗೆ ವರದಿ ಮಾಡಿತ್ತು).

ಇದೀಗ ಯಡಿಯೂರಪ್ಪ ಅವರ ಪದಚ್ಯುತಿಯ ಬಳಿಕ ಆ ಯೋಜನೆ ಇನ್ನಷ್ಟು ಬಿರುಸುಗೊಂಡಿದ್ದು, ರಾಜ್ಯದ ಉದ್ದಗಲಕ್ಕೆ ಸುತ್ತಾಡಿ ತಮ್ಮ ಮುಂದಿನ ಯೋಜನೆಗಳನ್ನು ಚರ್ಚಿಸಿ ಕಾರ್ಯಗತಗೊಳಿಸುವ ಮಾರ್ಗೋಪಾಯಗಳನ್ನು ಮತ್ತು ಅದಕ್ಕಾಗಿ ಸಮುದಾಯ ಮತ್ತು ಸಮುದಾಯದ ಆಚೆಯ ಪ್ರಮುಖರ ಸಲಹೆ- ಮಾರ್ಗದರ್ಶನ ಮತ್ತು ಬೆಂಬಲವನ್ನು ಯಾಚಿಸುತ್ತಿದ್ದಾರೆ.
ಇಂತಹ ತೆರೆಮರೆಯ ಬಿರುಸಿನ ತಯಾರಿಗಳ ಸುಳಿವರಿತೇ ಯಡಿಯೂರಪ್ಪ ಅವರೊಂದಿಗೆ ಎಣ್ಣೆ ಸೀಗೆಕಾಯಿ ಸಂಬಂಧ ಹೊಂದಿದ್ದ (ವಾಸ್ತವವಾಗಿ ಆ ಕಾರಣದಿಂದಾಗಿಯೇ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದ) ಆರ್ ಎಸ್ ಎಸ್ ಹಿನ್ನೆಲೆಯ ಬಿಜೆಪಿ ರಾಷ್ಟ್ರೀಯ ಪ್ರಮುಖ ಬಿ ಎಲ್ ಸಂತೋಷ್ ವಿಜಯದಶಮಿಯ ದಿನ ಖುದ್ದು ಯಡಿಯೂರಪ್ಪ ಮನೆಗೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ತಮ್ಮ ಆಪ್ತರ ಮೇಲಿನ ಐಟಿ ದಾಳಿಯಿಂದ ಕ್ರೋಧಗೊಂಡು ಉಪಚುನಾವಣೆಯಿಂದ ಸಂಪೂರ್ಣ ದೂರವುಳಿಯುವ ಸೂಚನೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಲಿಂಗಾಯತ ನಾಯಕ ಬಿಎಸ್ ವೈ ಅವರನ್ನು ಸಮಧಾನಪಡಿಸಿ ವಿಶ್ವಾಸಕ್ಕೆ ಪಡೆಯುವುದು ಮತ್ತು ಪರ್ಯಾಯ ರಾಜಕಾರಣದ ಪ್ರಯತ್ನಗಳಿಗೆ ಬ್ರೇಕ್ ಹಾಕುವುದೇ ಆ ಭೇಟಿಯ ತಂತ್ರವಾಗಿತ್ತು ಎಂಬುದು ಕೂಡ ಗುಟ್ಟೇನಲ್ಲ.
ಆದರೆ, ಬಿ ವೈ ವಿಜಯೇಂದ್ರ ಅಂತಹ ಪ್ರಯತ್ನಗಳಿಗೆ, ತಂತ್ರಗಾರಿಕೆಗೆ ಸೊಪ್ಪು ಹಾಕಿಲ್ಲ ಎಂಬುದಕ್ಕೆ ಕಳೆದ ವಾರ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಸೂಚನೆಗಳು ಹೊರಬಿದ್ದಿವೆ. 117 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ನಡೆದ ಆ ಮಹತ್ವದ ಕಾರ್ಯಕಾರಿಣಿಯಲ್ಲಿ “ಭವಿಷ್ಯದ ಸಿಎಂ ಬಿ ವೈ ವಿಜಯೇಂದ್ರ. ಅದಕ್ಕಾಗಿ ಈಗಿನಿಂದಲೇ ದೃಢ ನಿರ್ಧಾರ ಕೈಗೊಂಡು, ತತಕ್ಷಣದಿಂದಲೇ ಸಿದ್ಧತೆ ಆರಂಭಿಸಿ” ಎಂಬ ಸಂದೇಶ ಸಮುದಾಯಕ್ಕೆ ರವಾನೆಯಾಗಿದೆ.
ಕಾರ್ಯಕಾರಿಣಿಯಲ್ಲಿ ಮಾತನಾಡಿದ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ “ಮುಂದಿನ ಸಿಎಂ ಅಭ್ಯರ್ಥಿಯನ್ನಾಗಿ ಬಿ ವೈ ವಿಜಯೇಂದ್ರ ಅವರ ಹೆಸರನ್ನು ಶಿಫಾರಸು ಮಾಡಬೇಕು. ಈಗಿನಿಂದಲೇ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ ವಿಜಯೇಂದ್ರ ಅವರಿಗೆ ಸಿಎಂ ಆಗಲು ಎಲ್ಲಾ ರೀತಿಯ ಅರ್ಹತೆಯಿದೆ” ಎಂದು ಹೇಳುವ ಮೂಲಕ ಪ್ರಭಾವಿ ಲಿಂಗಾಯತ ಸಮುದಾಯದ ನಾಯಕತ್ವದ ವಿಷಯದಲ್ಲಿ ಯಡಿಯೂರಪ್ಪ ಬಳಿಕ ಅವರ ಪುತ್ರ ವಿಜಯೇಂದ್ರ ಅವರೇ ವಾರಸುದಾರರು ಮತ್ತು ಆ ಕಾರಣಕ್ಕಾಗಿ ಭವಿಷ್ಯದ ಮುಖ್ಯಮಂತ್ರಿಯಾಗಿ ಅವರನ್ನು ಮಾಡಲು ಸಮುದಾಯ ಈಗಿನಿಂದಲೇ ಸಿದ್ಧತೆ ನಡೆಸಬೇಕು ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಅಂದರೆ, ಕಳೆದ ಎರಡೂವರೆ ಮೂರು ವರ್ಷಗಳಿಂದ ವಿಜಯೇಂದ್ರ ಅವರು ದೂರಗಾಮಿ ಯೋಜನೆಯನ್ನು ರೂಪಿಸಿಕೊಂಡು ಹೆಣೆದಿದ್ದ ಕಾರ್ಯತಂತ್ರ ಇದೀಗ ಅವರ ಸಮುದಾಯದ ಮಟ್ಟದಲ್ಲಿ ಗಟ್ಟಿ ದನಿಯೊಂದನ್ನು ಸೃಷ್ಟಿಸಿದೆ. ಸಮುದಾಯದ ಪ್ರಭಾವಿ ವೇದಿಕೆಯ ಮೂಲಕವೇ ‘ಭವಿಷ್ಯದ ಸಿಎಂ ವಿಜಯೇಂದ್ರ’ ಎಂಬ ಹೇಳಿಕೆ ಹೊರಬಿದ್ದಿದೆ. ಅಂದರೆ, ಭಾರತೀಯ ಜನತಾ ಪಕ್ಷದ ಮಟ್ಟದಲ್ಲಿ ತಮ್ಮನ್ನು ಬದಿಗೆ ಸರಿಸುವ ಯತ್ನಗಳಿಗೆ ಪ್ರತಿಯಾಗಿ ವಿಜಯೇಂದ್ರ ಅವರು ಹೂಡಿದ ತಂತ್ರಗಾರಿಕೆಗೆ ಮೊದಲ ಯಶಸ್ಸು ದಕ್ಕಿದೆ ಮತ್ತು ಬಿಜೆಪಿಯ ಮತಬ್ಯಾಂಕ್ ಆದ ಸಮುದಾಯದ ನಡುವಿಂದಲೇ ಆ ಯಶಸ್ಸಿನ ಮೆಟ್ಟಿಲು ಆರಂಭವಾಗಿದೆ ಎಂಬುದು ಗಮನಾರ್ಹ!
ಆ ಹಿನ್ನೆಲೆಯಲ್ಲಿ ಬಳ್ಳಾರಿಯ ವೀರಶೈವ ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಹೊರಹೊಮ್ಮಿದ ಈ ಅಭಿಪ್ರಾಯ ಬಿಜೆಪಿ ಮತ್ತು ಸಂಘಪರಿವಾರದ ಪಾಳೆಯದಲ್ಲಿ ಹುಟ್ಟಿಸಿರುವ ಕಂಪನಗಳ ತೀವ್ರತೆ ಎಷ್ಟು ಮತ್ತು ಪರಿಣಾಮವೇನು ಎಂಬುದನ್ನು ಕಾದುನೋಡಬೇಕಿದೆ!