• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಭವಿಷ್ಯ ಭಾರತದ ಮಾನವ ಸಂಪನ್ಮೂಲಗಳಿಗೆ ಒಂದು ಹೊಸ ದಿಕ್ಕು ದೆಸೆ2025

ನಾ ದಿವಾಕರ by ನಾ ದಿವಾಕರ
December 31, 2024
in Top Story, ಜೀವನದ ಶೈಲಿ, ದೇಶ, ರಾಜಕೀಯ
0
ಭವಿಷ್ಯ ಭಾರತದ ಮಾನವ ಸಂಪನ್ಮೂಲಗಳಿಗೆ ಒಂದು ಹೊಸ ದಿಕ್ಕು ದೆಸೆ2025
Share on WhatsAppShare on FacebookShare on Telegram



ADVERTISEMENT

—-ನಾ ದಿವಾಕರ—-
ಭವಿಷ್ಯ ಭಾರತದ ಮಾನವ ಸಂಪನ್ಮೂಲಗಳಿಗೆ ಒಂದು ಹೊಸ ದಿಕ್ಕು ದೆಸೆ ಅಗತ್ಯವಾಗಿ ಬೇಕಿದೆ
ಮಾನವ ಸಮಾಜ 21ನೇ ಶತಮಾನದ ಮೊದಲ 25 ವರ್ಷಗಳನ್ನು 2025ರಲ್ಲಿ ದಾಟಲಿದೆ. ಇಡೀ ಜಗತ್ತು ಡಿಜಿಟಲ್‌ ಕ್ರಾಂತಿಯ ಪರಿಣಾಮವಾಗಿ ಅತಿ ವೇಗದಿಂದ ಚಲಿಸುತ್ತಿರುವಂತೆ ಕಂಡರೂ, ಆಂತರಿಕವಾಗಿ ಪ್ರತಿಯೊಂದು ಸಮಾಜವೂ ಮನುಜ ಸೂಕ್ಷ್ಮತೆ ಮತ್ತು ಸಂವೇದನೆಗಳ ನೆಲೆಯಲ್ಲಿ ಜಡಗಟ್ಟಿದಂತೆ ತೋರುತ್ತಿದೆ. ನವ ಉದಾರವಾದಿ ಬಂಡವಾಳಶಾಹಿಯ ವಿಸ್ತರಣಾವಾದ ಮತ್ತು ಇದಕ್ಕೆ ಪೂರಕವಾದ ಬಲಪಂಥೀಯ ನಿರಂಕುಶಾಧಿಕಾರದ ಆಳ್ವಿಕೆಗಳು ಜಗತ್ತಿನ ಬಹುತೇಕ ದೇಶಗಳನ್ನು ಆವರಿಸಿದ್ದು, ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಮತ್ತು ತಳಸ್ತರದಲ್ಲಿರುವ ಅಸಂಖ್ಯಾತ ಜನರು ಈ ಜಡಗಟ್ಟಿದ ಸಾಮಾಜಿಕ-ಸಾಂಸ್ಕೃತಿಕ ಪರಿಸರದಲ್ಲಿ ಬದುಕು ಸವೆಸುವಂತಾಗಿದೆ. ಹವಾಮಾನ ವೈಪರೀತ್ಯ, ಪರಿಸರ ನಾಶ, ಅತಿಯಾದ ಅಸಮಾನತೆ ಮತ್ತು ಒಂದು ಸಣ್ಣ ವರ್ಗದ ಸಿರಿವಂತಿಕೆ, ಮಾನವ ಸಮಾಜವನ್ನು ನೈತಿಕವಾಗಿ ಮತ್ತೊಮ್ಮೆ ಪ್ರಾಚೀನತೆಯತ್ತ ಕೊಂಡೊಯ್ಯುತ್ತಿದೆ.
ವಿಕಸಿತ ಭಾರತವೂ ಇದಕ್ಕೆ ಹೊರತಾಗಿಲ್ಲ ಎನ್ನುವುದು ದಿಟ. ಈ ವಿಷಮ ಸನ್ನಿವೇಶದಲ್ಲಿ ಭಾರತದ ಮಿಲೆನಿಯಂ ಜನಸಂಖ್ಯೆ, ಅಂದರೆ 25 ವರ್ಷದೊಳಗಿನ ಬೃಹತ್‌ ಯುವ ಸಮೂಹ, ತನ್ನ ಭವಿಷ್ಯದ ದಿನಗಳಿಗಾಗಿ ಅನುಸರಿಸಬೇಕಾದ ಹಾದಿ ಮತ್ತು ಅನುಕರಿಸಬೇಕಾದ ಆದರ್ಶಗಳು ಮಸುಕಾಗಿರುವುದನ್ನು ಕಾಣುತ್ತಿದೆ. ಭಾರತ ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎನ್ನುವಾಗ ಈ ದಾರಿಯ ಫಲಾನುಭವಿಗಳು ಯಾರು ಎಂದು ನೋಡಿದಾಗ, ಇಕ್ಕೆಲಗಳಲ್ಲಿ ನಾಳೆಗಳನ್ನು ಎಣಿಸುತ್ತಾ ಕನಸು ಕಾಣುತ್ತಿರುವ ಬೃಹತ್‌ ಜನಸ್ತೋಮ ಕಣ್ಣಿಗೆ ರಾಚುತ್ತದೆ. ಒಳಗಣ್ಣಿರುವವರಿಗೆ ಮಾತ್ರವೇ ಗೋಚರಿಸಬಹುದಾದ ಈ ಜನಸ್ತೋಮದ ಒಂದು ಭಾಗವಾಗಿ ಭಾರತದ ಮಿಲೆನಿಯಂ ಮಕ್ಕಳು ತಮ್ಮ ಭವಿಷ್ಯದತ್ತ ನೋಡುತ್ತಿದ್ದಾರೆ. ಈ ಸಮುದಾಯವು 2025ರಲ್ಲಿ ನಡೆಯಬೇಕಾದ ದಾರಿ ಯಾವುದು ?
ಸಂಕೀರ್ಣ ಸಮಸ್ಯೆಗಳ ನಡುವೆ
ಈ ಸಂಕೀರ್ಣ ಪ್ರಶ್ನೆಗೆ ಉತ್ತರಗಳು ಹಲವು. ಇದರಿಂದ ಮರುಹುಟ್ಟು ಪಡೆಯುವ ಪ್ರಶ್ನೆಗಳೂ ಬಹಳ. ಏಕೆಂದರೆ ಭಾರತೀಯ ಸಮಾಜ ಸಾಗುತ್ತಿರುವ ದಾರಿಯನ್ನು ಗಮನಿಸಿದರೆ ಅಲ್ಲಿ ಹಲವು ದಶಕಗಳ ಪರಿಶ್ರಮದಿಂದ ಎರಡು ತಲೆಮಾರುಗಳು ನಿರ್ಮಿಸಿದ ಮೈಲಿಗಲ್ಲುಗಳು ಶಿಥಿಲವಾದಂತೆ ಕಾಣುತ್ತಿವೆ. ಆರ್ಥಿಕವಾಗಿ ಕಳೆದ ಐದು ದಶಕಗಳ ಬೆವರಿನ ದುಡಿಮೆ ಮತ್ತು ಜ್ಞಾನ ಸಂವಹನದ ಮೂಲಕ ನಿರ್ಮಿಸಲಾಗಿರುವ ತಾತ್ವಿಕ-ಸೈದ್ಧಾಂತಿಕ ನೆಲೆಗಳೆಲ್ಲವನ್ನೂ ಹಂತಹಂತವಾಗಿ ಶಿಥಿಲವಾಗಿಸುವ ಒಂದು ಸಾಂಸ್ಕೃತಿಕ ರಾಜಕಾರಣ, ವರ್ತಮಾನದ ಮಿಲೆನಿಯಂ ಮಕ್ಕಳನ್ನು ನಿರ್ದೇಶಿಸುತ್ತಿದೆ. ಈ ವಿಕೃತ ಹಾದಿಯಲ್ಲಿ ಸ್ಥಾವರಗಳು ನೆಲಸಮವಾಗುತ್ತಿರುವಂತೆಯೇ ಜಂಗಮವೆಲ್ಲವೂ ಮತ್ತೊಮ್ಮೆ ಸ್ಥಾವರವಾಗಿ ರೂಪಾಂತರಗೊಂಡು, ಸಾಂಸ್ಥೀಕರಣಕ್ಕೊಳಗಾಗುತ್ತಿವೆ. ಈ ಸಂದಿಗ್ಧ ಸನ್ನಿವೇಶ ಮತ್ತು ವಿಷಮ ಪರಿಸ್ಥಿತಿಗಳಲ್ಲಿ ಮಿಲೆನಿಯಂ ಮಕ್ಕಳು ಎತ್ತ ನೋಡಬೇಕು, ಎತ್ತ ಸಾಗಬೇಕು ?
ಈ ಮಕ್ಕಳ ದುರದೃಷ್ಟವೆಂದರೆ ಅನುಕರಣೀಯ ಎನ್ನಬಹುದಾದ ಸಮಕಾಲೀನ ಮಾದರಿಗಳು ನಮ್ಮ ನಡುವೆ ಇಲ್ಲ. ಅಧ್ಯಾತ್ಮ, ಧರ್ಮ, ಸಂಸ್ಕೃತಿ, ಸಮಾಜ ಮತ್ತು ರಾಜಕಾರಣ ಈ ಐದೂ ಭೌತಿಕ ನೆಲೆಗಳಲ್ಲಿ ಅನುಕರಣೀಯ ಎನ್ನಬಹುದಾದ ಮಾದರಿ ವ್ಯಕ್ತಿತ್ವಗಳನ್ನು ಸೃಜಿಸುವುದರಲ್ಲಿ 75 ವರ್ಷಗಳ ಭಾರತೀಯ ಗಣತಂತ್ರ ಸೋತಿದೆ. ಸ್ವಾಭಾವಿಕವಾಗಿಯೇ ಈ ಮಕ್ಕಳು ಸ್ವಾತಂತ್ರ್ಯಪೂರ್ವದ ಮತ್ತು 1950ರ ದಶಕದ ದಾರ್ಶನಿಕರ ಕಡೆಗೆ ನೋಡಬೇಕಿದೆ. ಠಾಗೋರ್‌, ವಿವೇಕಾನಂದ, ಗಾಂಧಿ, ಅಂಬೇಡ್ಕರ್‌ ಮತ್ತು ಮಾರ್ಕ್ಸ್‌ ಈ ದಾರ್ಶನಿಕರು ಬಿಟ್ಟುಹೋದ ಹಾದಿಯಲ್ಲೇ ಹೊಸತನ್ನು ಹುಡುಕುತ್ತಾ, ದೊರೆತುದನ್ನು ಸಮಕಾಲೀನಗೊಳಿಸುತ್ತಾ, ಹಳತನ್ನು ನಿಕಷಕ್ಕೊಡ್ಡುತ್ತಾ ಒಂದು ಪರ್ಯಾಯ ಸಾಂಸ್ಕೃತಿಕ ಜಗತ್ತಿನೆಡೆಗೆ ಮಿಲೆನಿಯಂ ಮಕ್ಕಳು ಸಾಗಬೇಕಿದೆ. ಈ ಹಾದಿಯಲ್ಲಿ ಮಿಲೆನಿಯಂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲವು ದೃಢ ನಿರ್ಣಯಗಳನ್ನು (Resolution) ಮಾಡಬೇಕಿದೆ.
ಹೊಸ ವರ್ಷದ ಆರು ಮೆಟ್ಟಿಲುಗಳು

Kiccha Sudeep vs  Darshan :  ಬಾಸಿಸಂ ಫೈಟ್.. ಕಿಚ್ಚ ಕ್ಲಾರಿಟಿ ದರ್ಶನ್ ಬಗ್ಗೆ ಸುದೀಪ್ ಮಾತು #pratidhvani

ಮೊದಲನೆಯದು ಚಾರಿತ್ರಿಕ ಸತ್ಯವನ್ನು ಸಮಾಧಿ ಮಾಡುತ್ತಾ, ಮಿಥ್ಯೆಗಳನ್ನೇ ಸತ್ಯವಾಗಿಸುತ್ತಾ ಇಡೀ ಸಮಾಜವನ್ನು ಆವರಿಸುತ್ತಿರುವ ಸತ್ಯೋತ್ತರ ಯುಗದ ಬೌದ್ಧಿಕ ಸಾಮ್ರಾಜ್ಯವನ್ನು ಮಿಲೆನಿಯಂ ಮಕ್ಕಳು ವಿಮರ್ಶಾತ್ಮಕವಾಗಿ ಎದುರಿಸಬೇಕಿದೆ. ಡಿಜಿಟಲ್‌ ಕ್ರಾಂತಿಯು ಜಗತ್ತಿನ ಎಲ್ಲ ಆಗುಹೋಗುಗಳನ್ನು ಮತ್ತು ಎಲ್ಲ ಬೌದ್ಧಿಕ ಪರಿಕರಗಳನ್ನು ಕ್ಷಣಮಾತ್ರದಲ್ಲಿ ಅಂಗೈ ಮೇಲಿನ ಆಂಡ್ರಾಯ್ಡ್‌ ಮೂಲಕ ತಲುಪಿಸುವ ಮೂಲಕ ಮಿಲೆನಿಯಂ ಮಕ್ಕಳನ್ನು ಸಮ್ಮೋಹನಕ್ಕೊಳಪಡಿಸಿದೆ. ಈ ಭ್ರಾಮಕ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿರುವ ಮಾಹಿತಿ ಮತ್ತು ಅದನ್ನು ಮುಂದಕ್ಕೊಯ್ಯುವ ತಂತ್ರಜ್ಞಾನ ಈ ಮಕ್ಕಳಲ್ಲಿ ಸೃಜಿಸಿರುವ ಭ್ರಮಾಧೀನತೆ ಅವರನ್ನು ಪರಾಧೀನತೆಯತ್ತ ದೂಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬದುಕು ಸಾಗಿಸಲು ಕಾರ್ಪೋರೇಟ್‌ ಮಾರುಕಟ್ಟೆ ಒಂದನ್ನೇ ಅವಲಂಬಿಸುವಂತೆಯೇ, ನಿತ್ಯ ಬದುಕಿನ ಚಟುವಟಿಕೆಗಳಿಗೆ ಡಿಜಿಟಲ್‌ ಮಾರುಕಟ್ಟೆ ಮತ್ತು ಮಾಹಿತಿಗೆ ಗೂಗಲ್‌ ಮುಂತಾದ ತಂತ್ರಜ್ಞಾನಾಧಾರಿತ ನೆಲೆಗಳನ್ನೇ ಅವಲಂಬಿಸುವುದು ಈ ಮಕ್ಕಳಿಗೆ ಅನಿವಾರ್ಯವಾದಂತಿದೆ.


ಎರಡನೆಯದಾಗಿ, ವರ್ತಮಾನದ ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ತನ್ನ ಉತ್ತುಂಗ ತಲುಪಿದೆ. 2025ರ ಆರಂಭದಲ್ಲೇ ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ISRO ತನ್ನ ನೂರನೇ ಮಿಷನ್‌ ʼಎನ್‌ವಿಎಸ್-02‌ʼ ಉಪಗ್ರಹವನ್ನು ಉಡಾಯಿಸಲಿದೆ. ಚಂದ್ರಯಾನ-4, ಗಗನಯಾನ ಮೊದಲಾದ ಸಾಧನೆಗಳಿಗೆ ಈ ವರ್ಷ ಸಾಕ್ಷಿಯಾಗಲಿದೆ. ಇದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೆಮ್ಮೆಯ ವಿಚಾರ. ಮತ್ತೊಂದೆಡೆ ಡಿಜಿಟಲ್‌ ತಂತ್ರಜ್ಞಾನದಲ್ಲಿ ವಿಶ್ವಮಾನ್ಯವಾಗುವತ್ತ ಹೊರಟಿರುವ ಭಾರತ, ತಂತ್ರಜ್ಞಾನದ ಹೊಸ ಅವಿಷ್ಕಾರಗಳಿಗೆ ಬಾಗಿಲು ತೆರೆಯಲಿದೆ. ಡಿಜಿಟಲ್‌ ಪಾವತಿ ಪದ್ಧತಿ ಯುಪಿಐ ವಿಶ್ವಕ್ಕೆ ಭಾರತದ ಕೊಡುಗೆಯಾಗಿರುವುದು ಹೆಮ್ಮೆಯ ವಿಚಾರ. ಆದರೆ ಈ ಸಂಭ್ರಮದ ನಡುವೆಯೇ ಹಿಂತಿರುಗಿ ನೋಡಿದಾಗ, ಬೆನ್ನ ಹಿಂದಿನ ವಾಸ್ತವಗಳು ಆಧುನಿಕತೆಯನ್ನೇ ಅಣಕಿಸುವಂತೆ ಕಾಣುತ್ತದೆ. ಜಾತಿ ಆಧಾರಿತ, ಲಿಂಗಾಧಾರಿತ ತಾರತಮ್ಯ ಮತ್ತು ದೌರ್ಜನ್ಯಗಳು ಬರುಬರುತ್ತಾ ಸಾಂಸ್ಥೀಕರಣಗೊಳ್ಳುತ್ತಿರುವುದನ್ನು, ಸಮಾಜ ಪ್ರಾಚೀನತೆಯತ್ತ ಜಾರುತ್ತಿರುವುದನ್ನೂ ಗಮನಿಸಬೇಕಿದೆ.ಮೂರನೆಯದಾಗಿ, ಶತಮಾನಗಳಿಂದಲೂ ಭಾರತೀಯ ಸಮಾಜವನ್ನು, ವಿಶೇಷವಾಗಿ ತಳಸಮಾಜವನ್ನು, ಕಾಡುತ್ತಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಎಲ್ಲ ಆಯಾಮಗಳೂ ಕಳೆದ ಹತ್ತು ವರ್ಷಗಳಲ್ಲಿ ಮರುಹುಟ್ಟು ಪಡೆದಿವೆ. ವಿಶ್ವದ ಶ್ರೇಷ್ಠ ಸಂವಿಧಾನ ಹೊಂದಿರುವ ಭಾರತವು, ಆ ಸಂವಿಧಾನವೇ ನಿಷೇಧಿಸಿರುವ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಗಳಿಗೆ ಸಾಕ್ಷಿಯಾಗುತ್ತಿದೆ. ಸಂವಿಧಾನದ ರಕ್ಷೆ ಪಡೆಯಲಿಚ್ಚಿಸುವ ಮಹಿಳಾ ಸಂಕುಲ ದೌರ್ಜನ್ಯ, ತಾರತಮ್ಯ, ಚಿತ್ರಹಿಂಸೆ, ಕಿರುಕುಳ, ಅಸಹಜ ಸಾವು ಮತ್ತು ಅತ್ಯಾಚಾರದಂತಹ ಅಮಾನವೀಯ ನಡವಳಿಕೆಗಳಿಗೆ ಬಲಿಯಾಗುತ್ತಲೇ ಇದೆ. ಮಹಿಳಾ ಸಮಾನತೆ ಮತ್ತು ಸಮಾನ ಅವಕಾಶಗಳು ಗ್ರಾಂಥಿಕವಾಗಿ ಕಾಣುತ್ತಿದ್ದರೂ ವಾಸ್ತವ ಸಮಾಜದಲ್ಲಿ ಇಂದಿಗೂ ಮಹಿಳೆ ಭ್ರೂಣಾವಸ್ಥೆಯಿಂದ ವೃದ್ಧಾಪ್ಯದವರೆಗೆ ಅಸಮಾನತೆ-ದೌರ್ಜನ್ಯಗಳಿಗೆ ಈಡಾಗುತ್ತಿದ್ದಾಳೆ. ಈ ಸಾಮಾಜಿಕ ವ್ಯಸನವನ್ನು ಕಾಪಾಡುವ ಪಿತೃಪ್ರಧಾನ ಮೌಲ್ಯಗಳು ಭಾರತೀಯ ಸಮಾಜದ ಪ್ರತಿ ಸ್ತರದಲ್ಲೂ ತಣ್ಣಗೆ ಅಡಗಿ ಕುಳಿತಿರುವುದು ಕಟು ವಾಸ್ತವ.

HD Kumaraswamy : ಸ್ವಾಮೀಜಿಗಳ ಮುಂದೆ ಸಿದ್ದರಾಮಯ್ಯನ ಮರ್ಯಾದೆ ತೆಗೆದ ಕುಮಾರಸ್ವಾಮಿ #pratidhvani


ನಾಲ್ಕನೆಯದಾಗಿ ಮಿಲೆನಿಯಂ ಸಂಕುಲಕ್ಕೆ ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಭ್ರಮಾಧೀನ ವಾತಾವರಣವೇ ಅಪಾಯಕಾರಿಯಾಗಿ ಕಾಣಬೇಕಿದೆ. 77 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಸಮಾಜವಾದ ಮತ್ತು ಸಮಾನತೆ ಎಷ್ಟೇ ಪ್ರಖರವಾಗಿ ಸದ್ದುಮಾಡಿದ್ದರೂ, ತಳಸ್ತರದ ಸಮಾಜದಲ್ಲಿನ ಒಳಬಿರುಕುಗಳು (Fault lines) ಇನ್ನೂ ಹಿಗ್ಗುತ್ತಲೇ ಇರುವುದು ಈ ಸಮೂಹದ ಭವಿಷ್ಯಕ್ಕೆ ಮಾರಕವಾಗಲಿದೆ. ಬಡವ-ಶ್ರೀಮಂತರ ನಡುವಿನ ಅಂತರ ಹಿಗ್ಗುತ್ತಲೇ ಇರುವುದಷ್ಟೇ ಅಲ್ಲದೆ, ಪ್ರಾಚೀನ ಸಮಾಜದಲ್ಲಿದ್ದಂತೆ ಕೆಲವೇ ಜನರ ಶ್ರೀಮಂತಿಕೆಯನ್ನು ಬಹುಸಂಖ್ಯೆಯ ಜನರು ಒಪ್ಪಿಕೊಳ್ಳುವಂತಹ ಮನಸ್ಥಿತಿ ಇಂದು ಸುಶಿಕ್ಷಿತ ಸಮಾಜವನ್ನೂ ಆವರಿಸಿದೆ. ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯು ಕಳೆದ ಮೂರು ದಶಕಗಳಲ್ಲಿ ಹುಟ್ಟುಹಾಕಿರುವ ಮೇಲ್ಪದರ ಸಮಾಜ (Elite society) ಕೆಳಸ್ತರದ ಸಮಾಜದತ್ತ ತಿರುಗಿ ನೋಡದಂತಹ ಒಂದು ಬೌದ್ಧಿಕ ವಲಯವನ್ನು ಆಧುನಿಕ ಭಾರತ ಸೃಷ್ಟಿಸಿದೆ. ಮಿಲೆನಿಯಂ ಮಕ್ಕಳು ಈ ಬೌದ್ಧಿಕತೆಗೆ ಮುಖಾಮುಖಿಯಾಗಬೇಕಿದೆ.


ಐದನೆಯದಾಗಿ, ಹೊರಜಗತ್ತಿಗೆ ಈಗ ಕಣ್ತೆರೆಯುತ್ತಿರುವ, 10-15 ವಯೋಮಾನದ, ಮಿಲೆನಿಯಂ ಮಕ್ಕಳಿಗೆ ನೈಜ ಇತಿಹಾಸವನ್ನು ತಿಳಿಸುವ, ವರ್ತಮಾನದ ವಾಸ್ತವಗಳನ್ನು ಮನದಟ್ಟು ಮಾಡುವ ಹಾಗೂ ಭವಿಷ್ಯದ ಹಾದಿಯನ್ನು ತೋರಿಸುವ ಬೌದ್ಧಿಕ ಜಗತ್ತು ಈಗ ಮರುಹುಟ್ಟು ಪಡೆಯಬೇಕಿದೆ. ಸ್ವತಂತ್ರ ಭಾರತದ ಸಾಂವಿಧಾನಿಕ ಅಂಗಳದಲ್ಲಿ ತನ್ನ ಸುಭದ್ರ ಅಡಿಪಾಯವನ್ನು ನಿರ್ಮಿಸಿಕೊಂಡಿರುವ ಶೈಕ್ಷಣಿಕ ಜಗತ್ತು ಮತ್ತು ಅದರೊಳಗಿನ ಬೌದ್ಧಿಕ ಚಿಂತನಾಧಾರೆಗಳು ಇಂದು ಕವಲು ಹಾದಿ ಹಿಡಿದಿವೆ. ಚಾರಿತ್ರಿಕ ಸತ್ಯಗಳನ್ನು ಸುಳ್ಳಾಗಿಸುವ, ಪೌರಾಣಿಕ ಮಿಥ್ಯೆಗಳನ್ನು ಸತ್ಯವಾಗಿಸುವ ಬೃಹತ್‌ ಸಂಸ್ಥೆಯೊಂದು “ ವಾಟ್ಸಾಪ್‌ ವಿಶ್ವವಿದ್ಯಾಲಯ ” ದ ರೂಪದಲ್ಲಿ ಸಮಾಜದ ಕಟ್ಟಕಡೆಯ ಮಗುವನ್ನೂ ತಲುಪಲು ಶಕ್ಯವಾಗಿದೆ. ದುರಂತ ಎಂದರೆ ಈ ಭ್ರಾಮಕ ಸಂಸ್ಥೆಯು ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳನ್ನೂ ಆಕ್ರಮಿಸಿದ್ದು, ವೈಚಾರಿಕ-ವೈಜ್ಞಾನಿಕ ಭೂಮಿಕೆಗಳನ್ನು ಶಿಥಿಲಗೊಳಿಸುತ್ತಿದೆ.
ಆರನೆಯದಾಗಿ ಈ ಐದೂ ಬೆಳವಣಿಗೆಗಳನ್ನು ಸಮರ್ಥವಾಗಿ ನಿಯಂತ್ರಿಸುವುದೇ ಅಲ್ಲದೆ, ಆಳ್ವಿಕೆಯ ಕೇಂದ್ರಗಳ ಮೂಲಕ, ಸರ್ಕಾರಿ ಸಂಸ್ಥೆಗಳ ಮೂಲಕ ಹಾಗೂ ಬೌದ್ಧಿಕ ಕೇಂದ್ರಗಳ ಮೂಲಕ ನಿರ್ದೇಶಿಸುವ ಸಾಂಸ್ಕೃತಿಕ ಪ್ರಪಂಚವೊಂದನ್ನು ಕಳೆದ ಹತ್ತು ವರ್ಷಗಳಲ್ಲಿ ನಿರ್ಮಿಸಲಾಗಿದೆ. ರಂಗಭೂಮಿಯಂತh ಸೃಜನಶೀಲ ವೇದಿಕೆಗಳೂ ಇದಕ್ಕೆ ಬಲಿಯಾಗಿರುವುದನ್ನು ಕಂಡಿದ್ದೇವೆ. ಈ ನಿರ್ದೇಶಕ ತತ್ವಗಳು ಮಿಲೆನಿಯಂ ಮಕ್ಕಳನ್ನು ವರ್ತಮಾನಕ್ಕೆ ಕುರುಡಾಗಿಸಿ, ಇತಿಹಾಸಕ್ಕೆ ವಿಮುಖವಾಗಿಸುವಲ್ಲಿ ಯಶಸ್ವಿಯಾಗಿವೆ. ಹಾಗಾಗಿಯೇ ಇಲ್ಲಿ ಗಾಂಧಿ, ನೆಹರೂ, ಅಂಬೇಡ್ಕರ್‌, ಮಾರ್ಕ್ಸ್‌ ಎಲ್ಲರೂ ʼವ್ಯಸನವಾಗಿʼ ಅಥವಾ ʼಫ್ಯಾಶನ್‌ʼ ಆಗಿ ಕಾಣಲಾರಂಭಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಮತ್ತೊಂದು ಜಗತ್ತನ್ನು ತೋರಿಸಬೇಕಾದ ಹಿರಿ ತಲೆಮಾರಿನ ಸಾಹಿತ್ಯ ವಲಯ, ತಾನೇ ನಿರ್ಮಿಸಿಕೊಂಡ ಕೋಶದೊಳಗೆ ಹುದುಗಿ, ಆತ್ಮರತಿಯಲ್ಲಿ ಕಳೆದುಹೋಗಿದೆ. ಕೆಲವೇ ಕ್ಷೀಣ ದನಿಗಳು ತಳಸಮಾಜವನ್ನು ತಲುಪಲು ಸಾಧ್ಯವಾಗುತ್ತಿಲ್ಲ.


ಕೊಂಚ ಹಿಂತಿರುಗಿ ನೋಡೋಣ
ಈ ಸಂಕೀರ್ಣ ಸನ್ನಿವೇಶದಲ್ಲಿ ಮಿಲೆನಿಯಂ ಮಕ್ಕಳು ಯಾರ ಕಡೆ ನೋಡಬೇಕು ? ಯಾರನ್ನು ಆಲಿಸಬೇಕು ? ಯಾರನ್ನು ಅನುಕರಿಸಬೇಕು ? ಯಾವ ವಿಚಾರಧಾರೆಯನ್ನು ಅವಲಂಬಿಸಬೇಕು ? ಇದಕ್ಕೆ ಉತ್ತರ ನಮ್ಮೊಳಗೇ ಇದೆ. ಶತಮಾನದಷ್ಟು ಹಿಂದಕ್ಕೆ ನೋಡಬೇಕಿಲ್ಲ, ಕೇವಲ ಐದಾರು ದಶಕಗಳ ಹಿಂದೆ, 1960-70ರ ಸಮಯದಲ್ಲಿ, ನಮ್ಮ ಸಮಾಜ ಹೇಗಿತ್ತು ಎಂದು ಹೇಳಿದರೆ ಇಂದಿನ ಮಕ್ಕಳಿಗೆ ಅದೊಂದು ಜಾತಕ ಕತೆಯಂತೆ ಕೇಳಿಸಬಹುದು. ಆದರೆ ಈ ಮಕ್ಕಳಿಗೆ ಅಂದಿನ ಸಮಾಜದ ಸೌಹಾರ್ದತೆ, ಸಮನ್ವಯತೆ ಮತ್ತು ಕೂಡಿಬಾಳುವ ಮನಸ್ಥಿತಿಯನ್ನು ಕೂರಿಸಿ ಹೇಳುವ ಜವಾಬ್ದಾರಿ ಹಿರಿ ತಲೆಮಾರಿನ ಮೇಲಿದೆ. ನಾವು ಈ ಮಕ್ಕಳನ್ನು ಚರಿತ್ರೆಗೆ ಕರೆದೊಯ್ಯಬೇಕಿಲ್ಲ. ಈ ಅವಧಿಯಲ್ಲೂ ಭಾರತೀಯ ಸಮಾಜವನ್ನು ಇಂದು ಕಾಡುತ್ತಿರುವ ಎಲ್ಲ ಅಪಸವ್ಯಗಳೂ, ಅಮಾನುಷತೆಗಳೂ ಜೀವಂತವಾಗಿದ್ದವು.
ಆದರೆ ಅಲ್ಲೊಂದು ಸುಂದರವಾದ ಅಂಗಳ ಇತ್ತು. ಅಲ್ಲಿ ಮುಳ್ಳಿನ ಬೇಲಿಗಳ ನಡುವೆಯೇ ನಳನಳಿಸುವ ಹೂಗಿಡಗಳಿದ್ದವು. ಸುವಾಸಿತ ಹೂಗಳು ವಾತಾವರಣವನ್ನು ತಿಳಿಗೊಳಿಸುವಂತಿರುತ್ತಿದ್ದವು. ಎಷ್ಟೇ ತಾರತಮ್ಯ ದೌರ್ಜನ್ಯಗಳ ಹೊರತಾಗಿಯೂ ಮನುಷ್ಯರು ಪರಸ್ಪರ ಸ್ಪಂದಿಸುವ ಸೂಕ್ಷ್ಮ ಸಂವೇದನೆಯ ತಂತುಗಳು ಅಂದು ಉಸಿರಾಡುತ್ತಿದ್ದವು. ರಾಷ್ಟ್ರಕವಿ ಕುವೆಂಪು ಆಶಯದ ʼ ಸರ್ವಜನಾಂಗದ ಶಾಂತಿಯ ತೋಟ ʼ ತನ್ನೊಳಗಿನ ಅಸಮಾಧಾನಗಳನ್ನು, ಸುಪ್ತ ದ್ವೇಷಾಸೂಯೆಗಳನ್ನು ಬಗಲಲ್ಲಿರಿಸಿಕೊಂಡೇ, ಕನಿಷ್ಠ ಎಲ್ಲರೂ ನೆಮ್ಮದಿಯಿಂದ ಬಾಳಬಹುದಾದ ಒಂದು ವಿಶಾಲ ಮೈದಾನದಂತೆ ಕಾಣುತ್ತಿತ್ತು. ಅಂದು ʼ ಮಾದರಿ -ಅನುಕರಣೀಯ ʼ ಎನ್ನಬಹುದಾದ ರಾಜಕೀಯ ವ್ಯಕ್ತಿತ್ವಗಳಿದ್ದವು, ಸಾಂಸ್ಕೃತಿಕ ವ್ಯಕ್ತಿಗಳಿದ್ದರು, ಸಾಮಾಜಿಕ ಚಿಂತನಾವಾಹಿನಿಗಳು ಸಾಂಸ್ಥಿಕವಾಗಿ-ಸಾಂಘಿಕವಾಗಿ ಅಸ್ತಿತ್ವದಲ್ಲಿದ್ದವು. ಈ ಪ್ರಪಂಚವನ್ನು ಮಿಲೆನಿಯಂ ಮಕ್ಕಳೆದುರು ತೆರೆದಿಟ್ಟು, “ ನೋಡಿ ಮಕ್ಕಳೇ ನಾವು ಹೀಗೂ ಬದುಕಿದ್ದೆವು ” ಎಂದು ಹೇಳಬೇಕು.

Dr. g paramawashar : ದರ್ಶನ್ ತನಿಖೆ ಗೆ ಸುಪ್ರೀಂ ಕೋರ್ಟ್ ಆದೇಶ ಗೃಹ ಸಚಿವ  ಶಾಕಿಂಗ್ ಹೇಳಿಕೆ #pratidhvani


ಈ ಪ್ರಯತ್ನವನ್ನೂ ಹಾಳುಮಾಡುವ ದುಷ್ಟ ಶಕ್ತಿಗಳು ಸುತ್ತಲೂ ಆವರಿಸಿರುವ ಹೊತ್ತಿನಲ್ಲಿ ಇದು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವಿಸದಿರದು. ಆದರೆ ಪ್ರತಿಯೊಂದು ಮನೆಯಲ್ಲೂ ಇರಬಹುದಾದ ಆ ಕಳೆದುಹೋದ ಪ್ರಪಂಚದ ಪ್ರತಿನಿಧಿಗಳು ಇದನ್ನು ನಾಲ್ಕು ಗೋಡೆಗಳ ನಡುವೆಯೇ ಮಾಡಬಹುದು. ವಿದ್ಯಾರ್ಜನೆಯ ಕೇಂದ್ರಗಳಲ್ಲಿರುವ ಈ ತಲೆಮಾರಿನ ವ್ಯಕ್ತಿಗಳು ಯಾವುದೇ ಸೈದ್ಧಾಂತಿಕ ಸೂತ್ರಗಳಿಗೊಳಗಾಗದೆ ಈ ಕೆಲಸ ಮಾಡಬಹುದು. ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಸಂಖ್ಯಾತ ಸಂಘಟನೆಗಳು ಸಣ್ಣ ಗುಂಪುಗಳ ನಡುವೆ ಈ ಪ್ರಯತ್ನ ಮಾಡಬಹುದು. ಆಗ ಮಿಲೆನಿಯಂ ಮಕ್ಕಳಲ್ಲಾದರೂ ಈಗ ವ್ಯಾಪಕವಾಗಿರುವ ಸ್ತ್ರೀ ದ್ವೇಷದ ಭಾವನೆಗಳನ್ನು, ಪಿತೃಪ್ರಧಾನ ಮೌಲ್ಯಗಳನ್ನು, ಯಜಮಾನಿಕೆಯ ಧೋರಣೆಗಳನ್ನು , ಜಾತಿ ಶ್ರೇಷ್ಠತೆ-ಮೇಲರಿಮೆಗಳನ್ನು ಇಲ್ಲವಾಗಿಸಬಹುದು. ಈ ಕೈಂಕರ್ಯಕ್ಕಾಗಿ ಯಾವ ಸೈದ್ಧಾಂತಿಕ ಚೌಕಟ್ಟೂ ಅತ್ಯವಶ್ಯವೇನಲ್ಲ. ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪು ವರೆಗೆ ಹರಿದು ಬಂದಿರುವ “ ಮನುಷ್ಯ ಜಾತಿ ತಾನೊಂದೇ ವಲಂ ” ಎಂಬ ನಾಲ್ಕು ಪದಗಳೇ ಸಾಕಲ್ಲವೇ ?
ಭವಿತವ್ಯದ ಮುಂಗಾಣ್ಕೆಯೊಂದಿಗೆ


ಈ ಸಂಕೀರ್ಣ ಸನ್ನಿವೇಶದಲ್ಲಿ ಮಿಲೆನಿಯಂ ಮಕ್ಕಳು ಭವಿಷ್ಯದ ಹಾದಿಗೆ ಯಾರ ಕಡೆ ನೋಡಬೇಕು ? ಇಲ್ಲಿ ನಮಗೆ ಚಿಂತನಾ ಧಾರೆಗಳು ಬೃಹತ್‌ ಕಡಲಿನಂತೆ ಕಾಣುತ್ತವೆ. ಆಧುನಿಕತೆಯ ಠಾಗೋರ್‌, ಸಾಂಸ್ಕೃತಿಕ ಚಿಂತನೆಯ ವಿವೇಕಾನಂದ, ಸಾಮಾಜಿಕ ನ್ಯಾಯದ ಅಂಬೇಡ್ಕರ್‌, ವೈಚಾರಿಕತೆಯ ಪೆರಿಯಾರ್‌, ಶಾಂತಿ ಸೌಹಾರ್ದತೆಯ ಗಾಂಧಿ, ನವ ಭಾರತ ಕಲ್ಪನೆಯ ನೆಹರೂ, ಆರ್ಥಿಕ ವಿಮೋಚನೆಯ ಮಾರ್ಕ್ಸ್‌ ಈ ಎಲ್ಲ ದಾರ್ಶನಿಕರು ಬಿಟ್ಟುಹೋದ ಬೌದ್ಧಿಕ ಸರಕುಗಳು ನಮ್ಮ ನಡುವೆ ಡಿಜಿಟಲ್‌ ರೂಪದಲ್ಲೂ ಇವೆ. ಈ ವಿಚಾರಧಾರೆಗಳನ್ನು ಒಳಗಿಳಿಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವ ಚಿಂತನೆಯ ಬೀಜಗಳನ್ನು ಮಿಲೆನಿಯಂ ಮಕ್ಕಳಲ್ಲಿ ಬಿತ್ತಬೇಕಿದೆ. ಸೈದ್ಧಾಂತಿಕವಾಗಿ ಯಾರನ್ನು ಅನುಕರಿಸಬೇಕು ಎನ್ನುವುದು ವೈಯುಕ್ತಿಕ ಆಯ್ಕೆಯ ಪ್ರಶ್ನೆ ಆದರೆ ಈ ಎಲ್ಲ ವಿಚಾರಧಾರೆಗಳಲ್ಲೂ ಇರುವ ಮಾನವೀಯ ಮೌಲ್ಯಗಳನ್ನು ಅನುಸರಿಸುವುದು ಸಾಮಾಜಿಕ ಜವಾಬ್ದಾರಿ ಎನ್ನುವುದನ್ನು ಈ ಮಕ್ಕಳಿಗೆ ಮನದಟ್ಟು ಮಾಡಬೇಕಿದೆ.


ಇಂತಹ ಒಂದು ಪಾಠಶಾಲೆಯನ್ನು ನಮ್ಮ ಮನೆಗಳೊಳಗೆ, ಮನೆಯಂಗಳಗಳಲ್ಲಿ, ಸುತ್ತಲಿನ ಬಯಲಿನಲ್ಲಿ ತೆರೆಯಲು ಹಿರಿಯ ತಲೆಮಾರು ಮುಂದಾಗಬೇಕಿದೆ. ಇಲ್ಲಿ ನಾವು ಬಿತ್ತಬಹುದಾದ ಬೀಜಗಳು ಮೊಳಕೆಯೊಡೆದು ಚಿಗುರುವ ವೇಳೆಗೆ ಈ ತಲೆಮಾರು ಮರೆಯಾಗಿರಬಹುದು. ಆದರೆ ಆ ಸುಂದರ ತೋಟದಲ್ಲಿ ʼ ವಿಕಸಿತ ಭಾರತ ʼ ಆರೋಗ್ಯಕರವಾಗಿರುತ್ತದೆ ಎಂಬ ಭರವಸೆಯೇ ಸಮಾಧಾನ ತರುವುದಲ್ಲವೇ ? ಇದಕ್ಕಾಗಿ ನಮ್ಮೊಳಗೆ ಉಳಿದಿರುವ ಭೌತಿಕ, ಬೌದ್ಧಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಶಕ್ತಿಯನ್ನು ಮೀಸಲಾಗಿಡೋಣ, ಆಗ ಭ್ರಮಾಧೀನತೆಗೊಳಗಾಗಿರುವ ಮಿಲೆನಿಯಂ ಮಕ್ಕಳು ನಮ್ಮತ್ತ ತಿರುಗಿ ನೋಡುತ್ತಾರೆ. ಹೊಸ ವರ್ಷದ ಶುಭಾಶಯಗಳನ್ನು ಹರಿದಾಡಿಸುವ ಮುನ್ನ ಈ ಆಲೋಚನೆ ನಮ್ಮೊಳಗೆ ಜಾಗೃತವಾದರೆ, ಭವಿಷ್ಯ ಭಾರತ ನಮ್ಮನ್ನು ಆದರಿಸುತ್ತದೆ. ಇಲ್ಲವಾದರೆ ಇತಿಹಾಸ ನಮ್ಮನ್ನು ಕ್ಷಮಿಸುವುದಿಲ್ಲ. ಈ ಎಚ್ಚರಿಕೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಲ್ಲರಿಗೂ ಶುಭ ಕೋರೋಣ.
2025- ಹೊಸ ವರ್ಷದ ಹಾರ್ದಿಕ ಶುಭಾಶಯಗಳು
-೦-೦-೦-

Tags: gaganyaan human missionhuman calculator of indiahuman drones in india 2025human space flightindia economy size 2025india first human space misionindia maiden human space missionindia's first human space mission planned for 2022india's first human spaceflight programmekumbh 2025kumbh mela 2025kumbh mela 2025 prayagrajmaha kumbh 2025maha kumbh mela 2025mahakumbh 2025prayagraj 2025prayagraj mahakumbh 2025
Previous Post

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

Next Post

ದೂಪದ್ ಕಾಂಪ್ಲೆಸ್ ನಲ್ಲಿ ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಗೆ ಮಾರಾಟ:ಸ್ಥಾನೀಯ ಸಮಿತಿ ದೂರು

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post

ದೂಪದ್ ಕಾಂಪ್ಲೆಸ್ ನಲ್ಲಿ ಗೃಹೋಪಯೋಗಿ ವಸ್ತುಗಳು ಕಡಿಮೆ ಬೆಲೆಗೆ ಮಾರಾಟ:ಸ್ಥಾನೀಯ ಸಮಿತಿ ದೂರು

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada