ಹಿಂದಿನ ಸರ್ಕಾರದ ತೈಲ ಬಾಂಡ್ ನೀತಿಯಿಂದಾಗಿ ನಮ್ಮ ಸರ್ಕಾರಕ್ಕೆ ಪೆಟ್ರೋಲ್-ಡೀಸೆಲ್-ಅಡುಗೆ ಅನಿಲದ ಬೆಲೆಯನ್ನು ತಗ್ಗಿಸಲು ಸಾಧ್ಯವಾಗುತ್ತಿಲ್ಲವೆಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲವನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಸಬ್ಸಿಡಿ ಮೊತ್ತವನ್ನು ಪಾವತಿಸುವ ಬದಲು ಆಗಿನ ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ₹ 1.34 ಲಕ್ಷ ಕೋಟಿ ಮೊತ್ತದ ತೈಲ ಬಾಂಡ್ ನೀಡಿತು. ಆ ಬಾಂಡ್‌ನ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಈಗ ಪಾವತಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ, ತೈಲ ಬಾಂಡ್‌ಗೆ ಸಂಬಂಧಿಸಿದ ಮೊತ್ತವನ್ನು ಪಾವತಿಸುವ ಹೊರೆ ಇಲ್ಲದಿದ್ದರೆ ನಾನು ಈಗ ತೈಲೋತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡುತ್ತಿದ್ದೆ. ತೈಲ ಬಾಂಡ್ ವಿತರಿಸುವ ಮೂಲಕ ಹಿಂದಿನ ಸರ್ಕಾರವು ನಮ್ಮ ಕೆಲಸವನ್ನು ಕಷ್ಟಕರವಾಗಿಸಿದೆ. ತೈಲ ಬಾಂಡ್‌ಗಳಿಗೆ ಭಾರಿ ಮೊತ್ತ ತೆಗೆದಿರಿಸಬೇಕಾಗಿದೆ ಎಂದು ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ತೈಲ ಬಾಂಡ್‌ಗಳ ಮೇಲಿನ ಬಡ್ಡಿ ಪಾವತಿಯು 70,195 ಕೋಟಿ ರೂ ಆಗಿದೆ. ತೈಲ ಬಾಂಡ್‌ನ ಅಸಲು ಮೊತ್ತ 1.34 ಲಕ್ಷ ಕೋಟಿ ರೂ. ಅಸಲು ಮೊತ್ತದಲ್ಲಿ 3,500 ಕೋಟಿ ರೂ ಮಾತ್ರ ಪಾವತಿಯಾಗಿದೆ. ಇನ್ನುಳಿದ 1.3 ಲಕ್ಷ ಕೋಟಿ ಮೊತ್ತವನ್ನು 2025–26ರೊಳಗೆ ಪಾವತಿಸಬೇಕಿದೆ. ಗಮನಾರ್ಹ ಮೊತ್ತವು ಬಡ್ಡಿ ಹಾಗೂ ಅಸಲು ಪಾವತಿಗೆ ವಿನಿಯೋಗ ಆಗುತ್ತಿದೆ. ನನ್ನ ಮೇಲೆ ಅನ್ಯಾಯದ ಹೊರೆ ಬಿದ್ದಿದೆ ಎಂದು ಅವರು ಯುಪಿಎ ಸರ್ಕಾರವನ್ನು ದೂಷಿಸಿದ್ದಾರೆ.
ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದು. ರಾಜ್ಯಗಳು ಹಾಗೂ ಕೇಂದ್ರ ಈ ವಿಷಯದಲ್ಲಿ ಒಮ್ಮತಕ್ಕೆ ಬರುವವರೆಗೆ ಇಂಧನ ಬೆಲೆ ಇಳಿಕೆಯಲ್ಲಿ ಒಂದಂಶವೂ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.













