ದುಡಿಯುವ ವರ್ಗಗಳ ಭದ್ರಕೋಟೆಗಳು ಏಕೆ ಮತಾಂಧತೆಯ ಪ್ರಯೋಗಾಲಯಗಳಾಗುತ್ತಿವೆ ?
-ನಾ ದಿವಾಕರ
ಕರ್ನಾಟಕದಲ್ಲಿ ಕೇವಲ ಮೂರು ನಾಲ್ಕು ದಶಕಗಳ ಹಿಂದೆ ಕಾರ್ಮಿಕ ಶಕ್ತಿಯ ಭದ್ರಕೋಟೆ, ರೈತ ಹೋರಾಟಗಳ ಕರ್ಮಭೂಮಿ, ವರ್ಗ ಸಂಘರ್ಷದ ಸುಭದ್ರ ನೆಲೆ ಎಂದೆಲ್ಲಾ ಹೆಸರಾಗಿದ್ದ ಹಲವು ಜಿಲ್ಲೆಗಳು ಇಂದು ಮತೀಯವಾದ, ಮತಾಂಧತೆ ಮತ್ತು ದ್ವೇಷ ರಾಜಕಾರಣದ ಪ್ರಯೋಗಾಲಯಗಳಾಗಿ, ದಶಕಗಳ ಹೋರಾಟಗಳ ಮೂಲಕ ಅಲ್ಲಿ ಸ್ಥಾಪಿತವಾಗಿದ್ದ ಸಮನ್ವಯ ಸಮಾಜಗಳನ್ನು ಬೇರು ಸಹಿತ ಅಲುಗಾಡಿಸಿಬಿಟ್ಟಿದೆ. 1990ರ ನಂತರದಲ್ಲಿ ದೇಶದ ರಾಜಕಾರಣವನ್ನು ಆವರಿಸಿರುವ ಕೋಮುವಾದ ಮತ್ತು ಮತೀಯವಾದವು ಸಮಾಜದ ಎಲ್ಲ ಸ್ತರಗಳನ್ನೂ ಆಕ್ರಮಿಸಿದ್ದು ಶ್ರಮಿಕ ವರ್ಗಗಳಲ್ಲೂ ಜಾತಿ-ಮತ-ಧರ್ಮಗಳ ಅಸ್ಮಿತೆಗಳನ್ನು ಸೃಷ್ಟಿಸಿದೆ. ಕರ್ನಾಟಕದಲ್ಲಿ ಕಳೆದ ಒಂದು ವರ್ಷದಿಂದ ಸಾಹಿತಿ ಬರಹಗಾರರಿಗೆ ಜೀವಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ ವ್ಯಕ್ತಿ ದಾವಣಗೆರೆ ಮೂಲದವನೆಂದು ಗುರುತಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಹೋರಾಟಗಳ ಪ್ರಸ್ಥಭೂಮಿಯೊಂದು ಮತೀಯವಾದದ ಪ್ರಯೋಗಾಲವಾಗಿದೆಯೇ ಎಂಬ ಪ್ರಶ್ನೆ ಕಾಡುವುದು ಸಹಜ.
ಒಂದು ಕಾಲದಲ್ಲಿ ಮಹಾರಾಷ್ಟ್ರ ಮತ್ತು ಸುತ್ತಲಿನ ಬರಪೀಡಿತ ಪ್ರದೇಶಗಳಿಂದ ಬದುಕು ಅರಸಿ ವಲಸೆ ಬಂದ ಶ್ರಮಿಕ ವರ್ಗ ದಾವಣಗೆರೆಯ ಜವಳಿ ಗಿರಣಿಗಳಲ್ಲಿ ದುಡಿಯುವ ಮೂಲಕ ತಮ್ಮ ಬದುಕು ಕಟ್ಟಿಕೊಂಡಿದ್ದು ಈಗ ಇತಿಹಾಸ. ಕೆಂಬಾವುಟಗಳಿಂದ ಕಂಗೊಳಿಸುತ್ತಿದ್ದ ದಾವಣಗೆರೆ ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆ ಎಂದೂ ಹೆಸರಾಗಿತ್ತು. ನೂರಾರು ಕಾರ್ಮಿಕ ಹೋರಾಟಗಳಿಗೆ ನೆಲೆಯಾಗಿದ್ದ ಈ ನಗರವನ್ನು ಕರ್ನಾಟಕದ ಮ್ಯಾಂಚೆಸ್ಟರ್ ಎಂದೂ ಕರೆಯಲಾಗುತ್ತಿತ್ತು. ಇಂದು ದಾವಣಗೆರೆ ಒಂದು ಆಧುನಿಕ ನಗರವಾಗಿ ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿ ರೂಪುಗೊಂಡಿದ್ದರೆ ಅದರ ಹಿಂದೆ ಸಾವಿರಾರು ಶ್ರಮಜೀವಿಗಳ ಬೆವರಿನ ದುಡಿಮೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇತಿಹಾಸದ ವಿಸ್ಮೃತಿಗೆ ಸೇರಿರುವ ಜವಳಿ ಗಿರಣಿಗಳು ಇಂದು ಅತ್ಯಾಧುನಿಕ ಸ್ಥಾವರಗಳಾಗಿ ಕಂಡುಬಂದರೂ, ಈ ನೆಲದ ಉತ್ಪಾದಕೀಯ ಶಕ್ತಿಗಳು ತಮ್ಮ ಶ್ರಮಶಕ್ತಿಯ ಮೂಲಕ ನಿರ್ಮಿಸಿದ ಬುನಾದಿಯನ್ನು ಅಲ್ಲಗಳೆಯಲಾಗುವುದಿಲ್ಲ.
ನವ ಉದಾರವಾದದ ಆಕ್ರಮಣ
ಆದರೆ ಬದಲಾದ ಭಾರತದಲ್ಲಿ ಕೈಗಾರಿಕಾ ಬಂಡವಾಳವು ಜಾಗತೀಕರಣದ ಮೂಲಕ ಜಾಗತಿಕ ಬಂಡವಾಳಕ್ಕೆ ತೆರೆದುಕೊಂಡ ನಂತರ ತಮ್ಮ ದುಡಿಮೆಯನ್ನೇ ಅವಲಂಬಿಸಿ ಬದುಕು ಸವೆಸುತ್ತಿದ್ದ ಸಾವಿರಾರು ಶ್ರಮಿಕ ಕುಟುಂಬಗಳು ಹೊಸ ಜಗತ್ತಿಗೆ ತೆರೆದುಕೊಂಡಿವೆ. ಅತಿರೇಕದ ನಗರೀಕರಣ ಪ್ರಕ್ರಿಯೆ, ವಿಸ್ತರಣೆಗೊಳಗಾದ ಜನವಸತಿ ಕೇಂದ್ರಗಳು, ವ್ಯಾಪಾರ ಮತ್ತು ವಾಣಿಜ್ಯದ ಹೊಸ ರೂಪಗಳು ಈ ನಗರವನ್ನು ರೂಪಾಂತರಗೊಳಿಸಿದ್ದು, ಕಾರ್ಮಿಕರ ಭದ್ರಕೋಟೆಯನ್ನು ಔದ್ಯಮಿಕ ಸಾಮ್ರಾಜ್ಯವನ್ನಾಗಿ ಪರಿವರ್ತಿಸಿದೆ. ಈ ಮನ್ವಂತರದ ಹಾದಿಯಲ್ಲಿ ಸಾವಿರಾರು ಶ್ರಮಿಕ ಕುಟುಂಬಗಳು ತಮ್ಮ ಮೂಲ ನೆಲೆ ಕಳೆದುಕೊಂಡು ವಲಸೆ ಹೋಗಿರುವುದೂ ಉಂಟು. ಇನ್ನು ಕೆಲವು ಅಲ್ಲಿಯೇ ಹೊಸ ದುಡಿಮೆಯ ಮಾರ್ಗಗಳನ್ನು ಅನುಸರಿಸಿ ಬದುಕುತ್ತಿರುವುದೂ ಉಂಟು. ಆಧುನಿಕತೆ ಮತ್ತು ಆರ್ಥಿಕ ಅಭಿವೃದ್ಧಿಯ ಹಾದಿಗಳು ಪರಸ್ಪರ ಪೂರಕವಾಗಿ ಚಲಿಸಿದಾಗ, ತಳಮಟ್ಟದಲ್ಲಿ ಶ್ರಮಜೀವಿ ವರ್ಗಗಳು ಎದುರಿಸುವ ಸಂಕೀರ್ಣ ಸವಾಲುಗಳೆಲ್ಲವೂ ನಗಣ್ಯವಾಗಿಬಿಡುತ್ತವೆ. ತಮ್ಮ ವರುಷಗಳ ದುಡಿಮೆಯ ಬೆವರಿನಿಂದ ಕಟ್ಟಿದ ನಗರದಲ್ಲಿ ಶ್ರಮಿಕ ವರ್ಗ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಾಗಿ ಕಾಣತೊಡಗುತ್ತಾರೆ.
ಇದೇ ಸ್ಥಿತಿಗತಿಗಳನ್ನು ಕೋಲಾರ ಚಿನ್ನದ ಗಣಿ ಪ್ರದೇಶದಲ್ಲೂ ಕಾಣಬಹುದು. ನೂರು ವರ್ಷಗಳ ಇತಿಹಾಸ ಇರುವ ಚಿನ್ನದ ಗಣಿ ಪ್ರದೇಶದ ಹಿರಿಯ ತಲೆಮಾರಿನ ಶ್ರಮಜೀವಿಗಳು ಇಂದಿಗೂ ಸಹ ಬೆಂಕಿಪೊಟ್ಟಣದಂತಹ ಪುಟ್ಟ ಗೂಡುಗಳಲ್ಲಿ ವಾಸಿಸುತ್ತಾ ತಮ್ಮ ದುಡಿಮೆಯ ನೆಲಕ್ಕೆ ಅಂಟಿಕೊಂಡಿದ್ದಾರೆ. ಹೊಸ ತಲೆಮಾರಿನ ಯುವಕರು ಉದ್ಯೋಗಗಳನ್ನು ಅರಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಲಸಿಗರಾಗಿ ಬಂದ ಸಾವಿರಾರು ಗಣಿ ಕಾರ್ಮಿಕರು ಸ್ಥಳೀಯರಾಗಿ ತಮ್ಮದೇ ಆದ ಸಂಸ್ಕೃತಿಯನ್ನು ಕಟ್ಟಿಕೊಂಡಿದ್ದು, ತಮ್ಮ ಬೆವರಿನ ಕೋಟೆಯ ಮೇಲೆ ಆಧುನಿಕ ನಗರವೊಂದು ತಲೆ ಎತ್ತಿರುವುದನ್ನು ದೂರದಿಂದಲೇ ನೋಡುತ್ತಿದ್ದಾರೆ. ಆರ್ಥಿಕ ಅಭಿವೃದ್ಧಿ ಸೃಷ್ಟಿಸುವಂತಹ ಬಾಹ್ಯ ಸೌಂದರ್ಯದ ಹಿಂದೆ ಅಡಗಿರುವ ಕರಾಳ ಬದುಕಿನ ಚಿತ್ರಣಗಳು ಕ್ರಮೇಣ ಇತಿಹಾಸದ ವಿಸ್ಮೃತಿಗೆ ಜಾರಿಬಿಡುತ್ತವೆ. ಅತ್ಯಾಧುನಿಕ ಮೂಲ ಸೌಕರ್ಯಗಳನ್ನೊಳಗೊಂಡ ಕೆಜಿಎಫ್ ನಗರದ ಹಿತ್ತಲಲ್ಲಿ ಹೀನಾಯ ಬದುಕು ಸವೆಸುತ್ತಿರುವ ಸಾವಿರಾರು ಜನರು ವರ್ತಮಾನದ ದ್ವಂದ್ವವಾಗಿಯೇ ಕಾಣುತ್ತಾರೆ.
ಕೆಜಿಎಫ್‌ನಿಂದ ಬೆಂಗಳೂರಿಗೆ ಮತ್ತಿತರ ಔದ್ಯೋಗಿಕ ವಲಯಗಳಿಗೆ ನಿತ್ಯ ಪ್ರಯಾಣ ಮಾಡುವ ಲಕ್ಷಾಂತರ ಯುವ ಶ್ರಮಿಕರೊಂದಿಗೆ ಇಂದು ಚಿನ್ನದ ಗಣಿ ಪ್ರದೇಶ ರೂಪಾಂತರ ಹೊಂದುತ್ತಿದೆ. ಮೇಲ್ನೋಟಕ್ಕೆ ಕಾಣುವ ಆಧುನಿಕತೆ ಮತ್ತು ಹಿತಕರ ವಾತಾವರಣದ ಹಿಂದೆ ಶತಮಾನಗಳ ಶೋಷಣೆ ಮತ್ತು ಶ್ರಮಜೀವಿಗಳ ಬವಣೆ ಅಡಗಿರುವುದನ್ನು ಸಮಕಾಲೀನ ಸಮಾಜ ಗುರುತಿಸುವುದೂ ಇಲ್ಲ. ಆದರೆ ಕೆಜಿಎಫ್‌ನಲ್ಲಿರುವ ಕಾರ್ಮಿಕರ ಕಾಲೋನಿಗಳು ಇತಿಹಾಸವನ್ನು ಇಂದಿಗೂ ಮೆಲುಕು ಹಾಕುತ್ತವೆ. ಶ್ರಮಜೀವಿಗಳನ್ನೂ ಮಾರುಕಟ್ಟೆಯ ಕಚ್ಚಾವಸ್ತುಗಳಂತೆ ಕಾಣುವ ನವ ಉದಾರವಾದದ ನೆಲೆಯಲ್ಲಿ ತಮ್ಮ ಉಪಯೋಗಿ ಮೌಲ್ಯವನ್ನು ಕಳೆದುಕೊಂಡಿರುವ ಅಪಾರ ಶ್ರಮಿಕ ವರ್ಗವು ಬದುಕಿನ ಸಂಧ್ಯಾಕಾಲದ ವ್ಯತ್ಯಯಗಳಲ್ಲೇ ಉಳಿದ ದಿನಗಳನ್ನು ಕಳೆಯುತ್ತಿರುತ್ತಾರೆ. ನಗರೀಕರಣ ಮತ್ತು ಆಧುನಿಕತೆಯ ವಿಸ್ತರಣೆಯ ವೈಭೋಗದಲ್ಲಿ, ಹಿಂಬದಿಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಸಾಮಾಜಿಕ ಶೋಷಣೆ ಮತ್ತು ಸಾಂಸ್ಕೃತಿಕ ಅವಗಣನೆಗಳು ಮುಚ್ಚಿಹೋಗುತ್ತವೆ.
ಉಡುಪಿ-ಮಂಗಳೂರು ಸುತ್ತಲಿನ ದಕ್ಷಿಣ ಕನ್ನಡ ಜಿಲ್ಲೆಯೂ ಸಹ ಒಂದು ಕಾಲಕ್ಕೆ ಮೀನುಗಾರರು, ಬಂದರು ಕಾರ್ಮಿಕರು, ಬೀಡಿ ಕಾರ್ಮಿಕರು ಮತ್ತಿತರ ಔದ್ಯೋಗಿಕ ಶ್ರಮಿಕರ ಕೇಂದ್ರ ಸ್ಥಾನವಾಗಿತ್ತು. ಕನಿಷ್ಠ ವೇತನ ಮತ್ತು ಜೀವನ ಸೌಕರ್ಯಗಳೊಂದಿಗೆ ಒಂದು ಸದೃಢ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಈ ಕಾರ್ಮಿಕರ ಚಾರಿತ್ರಿಕ ಕೊಡುಗೆ ಇಂದಿಗೂ ಚಾಲ್ತಿಯಲ್ಲಿರುವುದನ್ನು ಕಾಣಬಹುದು. ಹಲವಾರು ವರ್ಷಗಳ ಶ್ರಮಜೀವಿಗಳ ಬೆವರಿನ ದುಡಿಮೆ ಒಂದು ಅತ್ಯಾಧುನಿಕ ಕಡಲತೀರದ ನಗರವನ್ನು ನಿರ್ಮಿಸಿದ್ದು, ಇಂದು ದಕ್ಷಿಣ ಕನ್ನಡ ಅತ್ಯುನ್ನತ ಶೈಕ್ಷಣಿಕ ಭೂ ಪ್ರದೇಶವಾಗಿ ಹೊರಹೊಮ್ಮಿದೆ. ಇಂದಿಗೂ ಜೀವಂತವಾಗಿರುವ ಶ್ರಮಜೀವಿಗಳ ಹೋರಾಟಗಳ ನಡುವೆ ನವ ಉದಾರವಾದಿ ಜಾಗತಿಕ ಬಂಡವಾಳವು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಇಂದು ಝಗಮಗಿಸುವ ಅತ್ಯಾಧುನಿಕ ನಗರ ಜೀವನದ ಹಿಂದೆ ಲಕ್ಷಾಂತರ ದುಡಿಮೆಗಾರರ ಬೆವರಿನ ಶ್ರಮ ಇರುವುದನ್ನು ವರ್ತಮಾನದ ಸಮಾಜ ಗುರುತಿಸದೆ ಹೋದರೂ, ಕಡಲ ತೀರದ ಸುತ್ತ ತಮ್ಮದೇ ಆದ ಸಾಂಸ್ಕೃತಿಕ ನೆಲೆಗಳನ್ನು ಸೃಷ್ಟಿಸಿಕೊಂಡಿರುವ ಶ್ರಮಿಕ ವರ್ಗ ತನ್ನ ಅಸ್ತಿತ್ವವನ್ನು ಸಾರಿ ಹೇಳುತ್ತಲೇ ಇರುತ್ತದೆ.
ಮೂಲಭೂತವಾದದ ವಿಸ್ತರಣೆ
ಕೈಗಾರಿಕಾ ಬಂಡವಾಳದ ಹಂತದಿಂದ ಆಧುನಿಕ ಹಣಕಾಸು ಬಂಡವಾಳಕ್ಕೆ , ತದನಂತರ ಡಿಜಿಟಲ್ ಯುಗದ ನವ ಉದಾರವಾದಿ ಬಂಡವಾಳ ವ್ಯವಸ್ಥೆಗೆ ಮನ್ವಂತರ ಹೊಂದಿರುವ ಹೊತ್ತಿನಲ್ಲಿ ಕರ್ನಾಟಕದ ಶ್ರಮಿಕರ ಅಥವಾ ವರ್ಗಸಂಘರ್ಷದ ಭದ್ರಕೋಟೆಗಳು ಎಂದೇ ಹೆಸರಾಗಿದ್ದ ದಕ್ಷಿಣ ಕನ್ನಡ, ಬೆಂಗಳೂರು ನಗರ ಮತ್ತು ಸುತ್ತಲಿನ ಕಾರ್ಮಿಕ ವಲಯಗಳು, ದಾವಣಗೆರೆ, ಕೆಜಿಎಫ್ ಮುಂತಾದ ಪ್ರದೇಶಗಳತ್ತ ಒಮ್ಮೆ ಕಣ್ಣುಹಾಯಿಸಿದಾಗ ನಮಗೆ ಕಾಣುವುದು ಈ ಪ್ರದೇಶಗಳಲ್ಲಿ ಉದ್ಭವಿಸಿರುವ ಮತೀಯವಾದ, ಮತಾಂಧತೆ, ದ್ವೇಷಾಸೂಯೆಗಳಿಂದ ಕೂಡಿದ ಕೋಮುವಾದ ಮತ್ತು ಸವೆದುಹೋಗಿರುವ ಸಂವೇದನಾಶೀಲ ಮನುಜ ಸಂಬಂಧಗಳು. ಬೆಂಗಳೂರಿನ ಶ್ರಮಿಕರ ಕೋಟೆ ಎಂದೇ ಹೆಸರಾಗಿದ್ದ ಚಾಮರಾಜಪೇಟೆ ಮತ್ತು ದಕ್ಷಿಣ ಕನ್ನಡ ಇಂದು ಕೋಮುದ್ವೇಷದ ಸುಭದ್ರ ನೆಲೆಗಳಾಗಿ ಕಾಣುತ್ತಿವೆ. ದಾವಣಗೆರೆ ಸಹ ಇದೇ ಹಾದಿಯಲ್ಲಿದೆಯೇ ಎಂಬ ಅನುಮಾನವೂ ಕಾಡುತ್ತದೆ.
ತಮ್ಮ ವ್ಯಕ್ತಿಗತ ಬದುಕು, ಜೀವನ ಮತ್ತು ಜೀವನೋಪಾಯ ಮಾರ್ಗಗಳನ್ನು ಅರಸುತ್ತಾ ಬಂಡವಾಳಶಾಹಿ-ಊಳಿಗಮಾನ್ಯ ಶೋಷಣೆಯ ವಿರುದ್ಧ ನಿರಂತರವಾಗಿ ಹೋರಾಡುತ್ತಾ, ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟಿಕೊಂಡಿದ್ದ ಈ ಪ್ರದೇಶಗಳ ಜನತೆ ಇಂದು ಕೋಮು ದ್ವೇಷದ ದಳ್ಳುರಿಯಲ್ಲಿ ಬೆಂದು ಹೋಗುತ್ತಿರುವುದು ದುರಂತವಾದರೂ ಸತ್ಯ. ತಳಮಟ್ಟದ ಜನಸಮುದಾಯಗಳ ನಡುವೆ ಇಂದಿಗೂ ಇರಬಹುದಾದ ಸೌಹಾರ್ದತೆ, ಸೋದರತ್ವ ಹಾಗೂ ಸಮನ್ವಯ ಬದುಕಿನ ಭಾವನೆಗಳನ್ನು ಹೊಸಕಿಹಾಕುವ ಮತೀಯ ಶಕ್ತಿಗಳು ಈ ಪ್ರದೇಶಗಳನ್ನು ಆಕ್ರಮಿಸಿಕೊಂಡಿವೆ. ದುರಂತ ಎಂದರೆ ಒಂದು ಕಾಲದಲ್ಲಿ ಕೂಡಿಬಾಳುವ ಸಂಸ್ಕೃತಿಯ ಪರಿಚಾರಕರಾಗಿದ್ದ ಶ್ರಮಿಕ ವರ್ಗಗಳ ಒಂದು ವರ್ಗವೇ ಇಂದು ಸಮಾಜವನ್ನು ಛಿದ್ರೀಕರಿಸುವ ದ್ವೇಷಾಸೂಯೆಗಳ ಮತಾಂಧ ಶಕ್ತಿಗಳಿಗೆ ಕಾಲಾಳುಗಳಾಗಿವೆ.
ಚಾರಿತ್ರಿಕವಾಗಿ ಇದು ಗಂಭೀರ ಅಧ್ಯಯನಕ್ಕೊಳಗಾಗಬೇಕಾದ ಒಂದು ವಿದ್ಯಮಾನ. ಸ್ಥಳೀಯ ಸಂಸ್ಕೃತಿಗಳನ್ನು ಮೈಗೂಡಿಸಿಕೊಂಡೇ ತಮ್ಮ ಬದುಕು ಕಟ್ಟಿಕೊಂಡ ಶ್ರಮಿಕ ಜಗತ್ತು ಶತಮಾನಗಳ ಸಾಂಸ್ಕೃತಿಕ ನೆಲೆಗಳನ್ನೂ ಕಳೆದುಕೊಂಡು, ಸಂಘಪರಿವಾರದ ಬಹುಸಂಖ್ಯಾವಾದಕ್ಕೆ ಅಥವಾ ಮುಸ್ಲಿಂ ಮತಾಂಧರ ಇಸ್ಲಾಮಿಕ್ ಮತೀಯವಾದಕ್ಕೆ ಬಲಿಯಾಗಿರುವುದು ಸಂಶೋಧನೆಗೊಳಪಡಬೇಕಾದ ವಿದ್ಯಮಾನವಾಗಿದೆ. ಒಂದು ಶತಮಾನ ಕಾಲದ ಕಾರ್ಮಿಕ ಹೋರಾಟಗಳ ಚರಿತ್ರೆಯನ್ನು ಹೊಂದಿರುವ ಪ್ರದೇಶಗಳು ಕೋಮುವಾದದ ಅಥವಾ ದ್ವೇಷ ರಾಜಕಾರಣದ ಪ್ರಯೋಗಾಲಯಗಳಾಗಿ ಮಾರ್ಪಾಡಾಗಿರುವುದಕ್ಕೆ ಹಲವು ಕಾರಣಗಳನ್ನು ಗುರುತಿಸಬಹುದು. ನವ ಉದಾರವಾದ, ಜಾಗತೀಕರಣ ಹಾಗೂ ಮಾರುಕಟ್ಟೆ ಬಂಡವಾಳವು ದೇಶದಲ್ಲಿ ಉಲ್ಬಣಿಸುತ್ತಿರುವ ಬಲಪಂಥೀಯ ರಾಜಕಾರಣವನ್ನು ಬಳಸಿಕೊಂಡೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರುವುದು ಒಂದು ಕಾರಣವಾದರೆ ಮತ್ತೊಂದೆಡೆ ಶ್ರಮಜೀವಿಗಳ ಹೋರಾಟಗಳನ್ನು ನಿಷ್ಕ್ರಿಯಗೊಳಿಸುವ ಮಾರುಕಟ್ಟೆ ಪ್ರೇರಿತ ಕಾಯ್ದೆ ಕಾನೂನುಗಳು, ಶೋಷಿತ ಸಮುದಾಯಗಳ ನಡುವೆ ಜಾತಿ ಮತಗಳ ಅಸ್ಮಿತೆಯ ಭಾವನೆಗಳನ್ನು ಉದ್ಧೀಪನಗೊಳಿಸುವ ಮತೀಯ ರಾಜಕಾರಣವೂ ಕಾರಣವಾಗಿದೆ. ಇಂದಿಗೂ ಈ ಪ್ರದೇಶಗಳಲ್ಲಿ ಕಾರ್ಮಿಕ ಹೋರಾಟಗಳ ಮುಂದಾಳತ್ವವು ಕೆಂಬಾವುಟದ ಅಡಿಯಲ್ಲೇ ಕಂಡುಬಂದರೂ, ತಮ್ಮ ಮೇಲೆ ನಡೆಯುವ ಶೋಷಣೆಯ ಮೂಲವನ್ನು ಶ್ರಮಿಕ ವರ್ಗವು ಸಂಘಪರಿವಾರ ಸೃಷ್ಟಿಸಿರುವ “ಅನ್ಯರಲ್ಲಿ” ಕಾಣುತ್ತಿದೆ. ನಿತ್ಯ ಬದುಕಿನ ಆರ್ಥಿಕ ಜೀವನೋಪಾಯಕ್ಕಾಗಿ ಕೆಂಬಾವುಟ ಆಶ್ರಯಿಸುವ ಶ್ರಮಜೀವಿಗಳು ಸಾಂಸ್ಕೃತಿಕವಾಗಿ ಮತೀಯ ಮೂಲಭೂತವಾದವನ್ನು ಆಶ್ರಯಿಸುತ್ತಾರೆ. ಈ ದ್ವಂದ್ವವನ್ನು ಪರಿಶೋಧಿಸುವುದು ಇವತ್ತಿನ ಆದ್ಯತೆಯಾಗಬೇಕಿದೆ.
ಸಾಂಸ್ಥಿಕ ಕಾರಣಗಳು
ಏಕೆ ಹೀಗೆ ಎಂದು ಯೋಚಿಸುವಾಗ, ಹಲವು ದಶಕಗಳ ಕಾರ್ಮಿಕ ಹೋರಾಟಗಳು ಹಾಗೂ ವರ್ಗಸಂಘರ್ಷದ ನೆಲೆಯಲ್ಲಿ ರೂಪುಗೊಂಡ ಚಳುವಳಿಗಳತ್ತ ಗಮನಹರಿಸಬೇಕಾಗುತ್ತದೆ. ಎಡಪಂಥೀಯ ಕಾರ್ಮಿಕ ಚಳುವಳಿಗಳು ಮಾರ್ಕ್ಸ್‌ವಾದದ ವೈಜ್ಞಾನಿಕ ದೃಷ್ಟಿಕೋನ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ಕಾರ್ಮಿಕರನ್ನು ಸಂಘಟಿಸಿ ಅವರ ಜೀವನೋಪಾಯದ ಹಕ್ಕೊತ್ತಾಯಗಳನ್ನು ಸಮರ್ಪಕವಾಗಿ ಮಂಡಿಸುತ್ತಾ ಆರ್ಥಿಕ ಪ್ರಗತಿಗೆ ಕಾರಣವಾಗಿರುವುದು ನಿಸ್ಸಂದೇಹ ವಾಸ್ತವ. ಆದರೆ ತಮ್ಮ ದುಡಿಮೆ ಮತ್ತು ವರಮಾನದಿಂದಾಚೆಗೂ ಶ್ರಮಿಕ ಸಮಾಜವು ತನ್ನದೇ ಆದ ಸಾಂಸ್ಕೃತಿಕ ತಳಹದಿಯನ್ನು ಹೊಂದಿರುತ್ತದೆ, ಭಾರತದ ಸಂದರ್ಭದಲ್ಲಿ ತಳಸಮುದಾಯಗಳ ನಡುವೆಯೂ ಸಹ ಈ ಸಾಂಸ್ಕೃತಿಕ ಅಡಿಪಾಯಕ್ಕೆ ಧಾರ್ಮಿಕ ಲೇಪನ, ಆಚರಣಾತ್ಮಕ ಜೀವನ ವಿಧಾನಗಳು ಅಂಟಿಕೊಂಡಿರುತ್ತವೆ, ಎನ್ನುವ ವಾಸ್ತವವನ್ನು ಕಾರ್ಮಿಕ ಚಳುವಳಿಗಳು ಗುರುತಿಸಲು ಮುಂದಾಗಲಿಲ್ಲ.
ನೆಲಮೂಲ ಸಂಸ್ಕೃತಿಯ ಈ ಸಾಂಸ್ಕೃತಿಕ ಬೇರುಗಳನ್ನು ತಲುಪುವಲ್ಲಿ ಎಡ ಪಕ್ಷಗಳು ಎಡವಿರುವಂತೆಯೇ ಕಾರ್ಮಿಕ ಸಂಘಟನೆಗಳೂ ಎಡವಿರುವುದನ್ನು ಸೂಕ್ಷ್ಮವಾಗಿ ಗುರುತಿಸಬೇಕಿದೆ. ದುಡಿಮೆಯ ಆವರಣದಿಂದಾಚೆಗಿನ ಶ್ರಮಿಕರ ಸಾಂಸ್ಕೃತಿಕ ಜಗತ್ತನ್ನು ಆಕ್ರಮಿಸುವ ಧರ್ಮ ಮತ್ತು ಜಾತಿಯ ಆಚರಣೆಗಳು ಸಹಜವಾಗಿಯೇ ಅವರನ್ನು ಮಠಮಾನ್ಯಗಳತ್ತ, ಆಧ್ಯಾತ್ಮಿಕ ಅಥವಾ ಧಾರ್ಮಿಕ ಕೇಂದ್ರಗಳ ಶ್ರದ್ಧಾನಂಬಿಕೆಗಳತ್ತ ಸೆಳೆಯುತ್ತವೆ. ಆರ್ಥಿಕ ನೆಲೆಗಟ್ಟಿನಲ್ಲಿ ಶ್ರಮಜೀವಿಗಳ ಐಕ್ಯತೆ ಸಾಧಿಸಿ ಅವರ ಮುನ್ನಡೆಗೆ ಶ್ರಮಿಸುವ ಕಾರ್ಮಿಕರ ಸಂಘಟನೆಗಳು ಅವರ ಕೌಟುಂಬಿಕ ಬದುಕಿನಲ್ಲಿ, ಸಾಮಾಜಿಕ ಪರಿಸರದಲ್ಲಿ ಆಳವಾಗಿ ಬೇರೂರಿರಬಹುದಾದ ಸಾಂಸ್ಕೃತಿಕ ಸೂಕ್ಷ್ಮಗಳತ್ತ ಗಮನ ನೀಡಲು ವಿಫಲವಾಗಿರುವುದರಿಂದಲೇ, ಧಾರ್ಮಿಕ ಶಕ್ತಿಗಳು ಅಲ್ಲಿ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ.
ಈ ಧಾರ್ಮಿಕ ನೆಲೆಗಳನ್ನು ಆವರಿಸುವ ಮತೀಯ ಮೂಲಭೂತವಾದ, ಮೌಢ್ಯಾಚರಣೆಗಳು, ಮೂಢ ನಂಬಿಕೆಗಳು ಹಾಗೂ ಇತರ ಶ್ರದ್ಧಾನಂಬಿಕೆಯ ಆಚರಣೆಗಳು ಸಹಜವಾಗಿಯೇ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಅಪ್ಯಾಯಮಾನವಾಗಿ ಕಾಣುತ್ತದೆ. ತಮ್ಮ ಆರ್ಥಿಕ ಅಸ್ತಿತ್ವಕ್ಕಾಗಿ ಕೆಂಬಾವುಟದಡಿ ಹೋರಾಟಕ್ಕಿಳಿಯುವ ಶ್ರಮಿಕರೇ ಸಾಮಾಜಿಕ ಅಸ್ತಿತ್ವಕ್ಕಾಗಿ ಜಾತಿ-ಮತಗಳನ್ನು ಆಶ್ರಯಿಸಿ ತಮ್ಮದೇ ಆದ ಸಾಂಸ್ಕೃತಿಕ ಅಸ್ಮಿತೆಗಾಗಿ ಹೆಣಗಾಡುತ್ತಾರೆ. ಎಡಪಕ್ಷಗಳು-ಎಡಪಂಥೀಯ ಕಾರ್ಮಿಕ ಚಳುವಳಿಗಳು ಧಾರ್ಮಿಕ ಮೂಲಭೂತವಾದ ಮತ್ತು ಮೌಢ್ಯಗಳ ವಿರುದ್ಧ ಸತತವಾಗಿ ಮಾತನಾಡುತ್ತಲೇ ಇದ್ದರೂ, ಭೌತಿಕವಾಗಿ-ಬೌದ್ಧಿಕವಾಗಿ ತಳಸಮುದಾಯದ-ಮಧ್ಯಮ ವರ್ಗದ ಶ್ರಮಿಕರ ಕೌಟುಂಬಿಕ ಬದುಕಿನ ಸಾಂಸ್ಕೃತಿಕ ವಲಯವನ್ನು ತಲುಪುವ ಪ್ರಯತ್ನಗಳನ್ನು ಹೆಚ್ಚಾಗಿ ಮಾಡಿಲ್ಲ ಎನ್ನುವುದು ವಾಸ್ತವ.
ಇಲ್ಲಿ ಉಂಟಾಗಬಹುದಾದ ನಿರ್ವಾತವನ್ನು ಅಥವಾ ಶೂನ್ಯವನ್ನು ಮತೀಯ ಮೂಲಭೂತವಾದಿ ಸಂಘಟನೆಗಳು ಆಕ್ರಮಿಸಿಕೊಳ್ಳುತ್ತವೆ. ತಮ್ಮ ಶ್ರಮಶಕ್ತಿಗೆ ಪೂರಕವಾದ ಆದಾಯವಿಲ್ಲದೆ ನಿರಂತರ ಮಾರುಕಟ್ಟೆ ಶೋಷಣೆಗೊಳಗಾಗುವ ಶ್ರಮಜೀವಿಗಳು ನಿತ್ಯಬದುಕಿನ ಸಾಂತ್ವನಕ್ಕಾಗಿ ಧಾರ್ಮಿಕ ಸಂಸ್ಥೆಗಳ/ಆಚರಣೆಗಳ ಮೊರೆಹೋಗುತ್ತಾರೆ. ಈ ಸನ್ನಿವೇಶದಲ್ಲೇ ಬಹುಪಾಲು ಶ್ರಮಿಕರು ತಮ್ಮ ಬದುಕಿನ ಸಂಕಷ್ಟಗಳಿಗೆ ಕಾರಣವಾಗುವ ಶತ್ರುಗಳನ್ನು ಬಂಡವಾಳ ಮತ್ತು ಮಾರುಕಟ್ಟೆಯ ಔದ್ಯಮಿಕ ಜಗತ್ತಿನಲ್ಲಿ ಕಾಣದೆ ಮತ್ತೊಂದು ಮತ-ಧರ್ಮ-ಜಾತಿ ಅಥವಾ ಭಾಷಿಕರಲ್ಲಿ ಕಾಣತೊಡಗುತ್ತಾರೆ. ಮೂಲಭೂತವಾದಿಗಳಿಗೆ ಇದು ಪ್ರಶಸ್ತ ಭೂಮಿಕೆಯಾಗಿ ಪರಿಣಮಿಸುತ್ತದೆ. ಹಾಗಾಗಿಯೇ ಶ್ರಮಿಕ ವರ್ಗದ ಒಂದು ವಲಯವು ತನ್ನ ಸಮನ್ವಯದ ನೆಲೆಗಳನ್ನು ದಾಟಿ ಮತೀಯ ಮೂಲಭೂತವಾದ ಮತ್ತು ಮತಾಂಧತೆಯ ಕಾವಲುಪಡೆಗಳಾಗುತ್ತವೆ. ತಳಮಟ್ಟದಲ್ಲಿ ಜನಸಾಮಾನ್ಯರ ಸಾಂಸ್ಕೃತಿಕ ನೆಲೆಗಳ ನಡುವೆ ತಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ಉತ್ಪಾದಕೀಯ ಶಕ್ತಿಗೂ ಸಾಂಸ್ಕೃತಿಕ ಬದುಕಿಗೂ ಇರುವ ಸಂಬಂಧಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ, ಅಲ್ಲಿರಬಹುದಾದ ಮೌಢ್ಯಗಳ ವಿರುದ್ಧ, ಕರ್ಮಠತನದ ವಿರುದ್ಧ ಮಾತನಾಡುವುದು ಎಷ್ಟೋ ಸಂದರ್ಭಗಳಲ್ಲಿ ವ್ಯರ್ಥಾಲಾಪವಾಗಿ ಕಾಣುತ್ತದೆ.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಶತಮಾನದ ಇತಿಹಾಸ ಇರುವ ಕಾರ್ಮಿಕ ಹೋರಾಟಗಳು ಹಾಗೂ ವರ್ಗಸಂಘರ್ಷಗಳು ಕಾರ್ಮಿಕರ ಕೌಟುಂಬಿಕ ಬದುಕಿನ ಸಾಮಾಜಿಕ-ಸಾಂಸ್ಕೃತಿಕ ಆವರಣವನ್ನು ಪ್ರವೇಶಿಸುವುದರಲ್ಲಿ ವಿಫಲವಾಗಿವೆ ಎಂದೇ ಹೇಳಬೇಕು. ಹಾಗಾಗಿಯೇ ಎಡಪಂಥವನ್ನೂ ಸೇರಿದಂತೆ, ಬಹುತೇಕ ಕಾರ್ಮಿಕ ಸಂಘಟನೆಗಳಲ್ಲಿ ಲಿಂಗ ಸೂಕ್ಷ್ಮತೆ ಹಾಗು ಲಿಂಗ ಸಂವೇದನೆ ಇಲ್ಲವಾಗಿದ್ದು ಇಂದಿಗೂ ಸಹ ಪಿತೃಪ್ರಧಾನತೆಯೇ ಎದ್ದು ಕಾಣುವಂತಿದೆ. ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆ ಹಾಗೂ ಕಾರ್ಪೋರೇಟ್ ಮಾರುಕಟ್ಟೆಯ ಆಕ್ರಮಣದಿಂದ ಶ್ರಮಜೀವಿ ವರ್ಗವು ನಲುಗಿಹೋಗುತ್ತಿರುವ ಈ ಸಂದರ್ಭದಲ್ಲಿ ಒಂದು ಕಾಲದಲ್ಲಿ ಸಮಾಜವಾದ-ಕಾರ್ಮಿಕ ಹೋರಾಟಗಳ ಕೆಂಪುಕೋಟೆಯಾಗಿದ್ದ ಪ್ರದೇಶಗಳು ಮತೀಯವಾದದ ಬೇಗೆಯಲ್ಲಿ ಬೇಯುತ್ತಿರುವುದು ನಮ್ಮನ್ನು ಹೊಸ ಚಿಂತನೆಯತ್ತ, ಆತ್ಮಾವಲೋಕನದ ಹಾದಿಯತ್ತ ಕೊಂಡೊಯ್ಯಬೇಕಿದೆ.
-೦-೦-೦-