ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಸಂಗ್ರಹಿಸಿರುವ ‘ದಿ ಥರ್ಡ್ ಪೋಲ್’ ಪತ್ರಿಕೆ 2010 ರಿಂದ 2019 ರ ನಡುವೆ ಬಿಹಾರದಲ್ಲಿ ಪ್ರವಾಹದಿಂದಾಗಿ ಅರ್ಧ ಮಿಲಿಯನ್ಗಿಂತಲೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಇದು ಹಲವಾರ ಮಂದಿಯನ್ನು ಪರಿಹಾರ ಶಿಬಿರಗಳಲ್ಲಿ ಇರುವಂತೆ ಮಾಡಿದೆ. ಆದರೆ ಅಲ್ಲಿ ಡೇರೆಗಳು ಪರಸ್ಪರ ಹತ್ತಿರವಿರುವುದರಿಂದ ಯುವತಿಯರು ಮತ್ತು ಹುಡುಗಿಯರು ಆಗಾಗ್ಗೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದಿದೆ.
“ಶಿಬಿರಗಳಲ್ಲಿ ವಾಸಿಸುವ ಕೆಲವೇ ದಿನಗಳಲ್ಲಿ, ಜನರು ತಮ್ಮ ಪಕ್ಕದಲ್ಲಿ ಯಾರು ಮತ್ತು ಎಲ್ಲಿ ವಾಸಿಸುತ್ತಾರೆ ಎಂಬುದನ್ನು ಬಹಳ ಬೇಗ ತಿಳಿದುಕೊಳ್ಳುತ್ತಾರೆ” ಎನ್ನುತ್ತಾರೆ ಬಿಹಾರದಲ್ಲಿ ದಲಿತರು ಮತ್ತು ಮಹಾದಲಿತರೊಂದಿಗೆ ಕೆಲಸ ಮಾಡುವ ಹೋರಾಟಗಾರ್ತಿ ಸುಧಾ ವರ್ಗೀಸ್. ಶಿಬಿರಗಳಲ್ಲಿ ಲೈಂಗಿಕ ಕಿರುಕುಳ ಮತ್ತು ಹಿಂಸಾಚಾರಗಳು ನಡೆಯುತ್ತವೆ ಮತ್ತು ಯುವತಿಯರು ಮತ್ತು ಮಹಿಳೆಯರೇ ಈ ದೌರ್ಜನ್ಯದ ಬಲಿಪಶುಗಳು ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.
ಬಿಹಾರದಲ್ಲಿ ಆಗಾಗ ಅಪ್ಪಳಿಸುವ ಪ್ರವಾಹವು ಮಹಿಳೆಯರ ಬದುಕಿನ ಮೇಲೆ ಬೀರುವ ಪ್ರಭಾವದ ಕುರಿತು 2016ರಲ್ಲಿ ಕೈಗೊಂಡ ಅಧ್ಯಯನವು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತದೆ. “ನಾವು ಪರಿಹಾರ ಶಿಬಿರಗಳಲ್ಲೂ ಪುರುಷರಿಂದ ಚುಡಾವಣೆಗೆ ಒಳಗಾಗಬೇಕಾಗುತ್ತದೆ” ಎಂದು ಹದಿನಾರು ವರ್ಷದ ರೇಖಾ ಯಾದವ್ ಹೇಳಿರುವುದಾಗಿಯೂ ಈ ಅಧ್ಯಯನ ವರದಿ ಮಾಡಿದೆ.
ಅಷ್ಟು ಮಾತ್ರವಲ್ಲದೆ ಜಾಗತಿಕವಾಗಿ, ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯವನ್ನು ಹವಾಮಾನ ವೈಪರೀತ್ಯಗಳು ಹೆಚ್ಚಿಸಿವೆ ಎಂದು ವಿವಿಧ ಅಂತರರಾಷ್ಟ್ರೀಯ ಅಧ್ಯಯನಗಳೂ ಒತ್ತಿ ಹೇಳಿವೆ. ‘ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್’ನ 2020 ರ ವರದಿಯು ಪರಿಸರ ವಿನಾಶವು ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸಾಚಾರ ಮತ್ತು ಬಲವಂತದ ವೇಶ್ಯಾವಾಟಿಕೆಯಂತಹ ವಿವಿಧ ರೀತಿಯ ಲಿಂಗಾಧಾರಿತ ಹಿಂಸೆಗೆ ಹೇಗೆ ಪ್ರಚೋದನೆ ನೀಡುತ್ತದೆ ಎಂಬುದನ್ನು ಎತ್ತಿ ತೋರಿಸಿದೆ.
2004ರಲ್ಲಿ ಶ್ರೀಲಂಕಾವನ್ನು ಅಪ್ಪಳಿಸಿದ ಹಿಂದೂ ಮಹಾಸಾಗರದ ತ್ಸುನಾಮಿ ಮತ್ತು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಉಂಟಾದ ಪ್ರವಾಹದ ನಂತರದ ಘಟಿಸಿದ ಲಿಂಗಾಧಾರಿತ ಹಿಂಸಾಚಾರದಲ್ಲಿ ಸಾಮ್ಯತೆ ಇದೆ, ಪ್ರಕೃತಿಯ ವಿಕೋಪದ ನಂತರ ಮಹಿಳೆಯರು ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಹಿಂಸೆಯನ್ನು ಅನುಭವಿಸಿದ್ದಾರೆ ಎಂದು ಅಧ್ಯಯನವೊಂದು ಕಂಡುಕೊಂಡಿದೆ. 2020ರಲ್ಲಿ ಭಾರತದಲ್ಲಿ ಕೈಗೊಂಡ ಅಧ್ಯಯನವೂ 2004ರ ತ್ಸುನಾಮಿಯಲ್ಲಿ ಮಹಿಳೆಯರು ಅನುಭವಿಸಿದ ದೌರ್ಜನ್ಯದ ಬಗ್ಗೆ ಬೊಟ್ಟು ಮಾಡಿದೆ.
ಆದರೆ ಈ ರೀತಿಯ ಸಣ್ಣ ಸಣ್ಣ ಅಧ್ಯಯನಗಳು ಪರೋಕ್ಷ ಲಿಂಕ್ಗಳನ್ನು ಎತ್ತಿ ತೋರಿಸುತ್ತವೆಯಾದರೂ, ಹಿಂಸಾಚಾರದ ಘಟನೆಗಳ ಮೇಲೆ ಅನೇಕ ಅಂಶಗಳು ಪ್ರಭಾವ ಬೀರುವುದರಿಂದ ನೇರವಾದ ಕಾರಣವನ್ನು ಕಮಡುಹಿಡಿಯುವುದು ಅಸಾಧ್ಯವೆಂದು ಸಂಶೋಧಕರು ಹೇಳುತ್ತಾರೆ. ಸಂಶೋಧನೆ ಮತ್ತು ಡೇಟಾದ ಕೊರತೆಯು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಲಿಂಗಾಧಾರಿತ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಸಂಗತಿಗಳನ್ನು ತಿಳಿದುಕೊಳ್ಳುವುದನ್ನು ತಡೆಯುತ್ತಿದೆ.
ಈ ಬಗ್ಗೆ ಮಾತನಾಡಿರುವ ‘ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್’ನ ‘ಭಾರ್ತಿ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿ’ಯ ಸಂಶೋಧನಾ ನಿರ್ದೇಶಕ ಮತ್ತು ಸಹಾಯಕ ಪ್ರಾಧ್ಯಾಪಕರಾದ ಅಂಜಲ್ ಪ್ರಕಾಶ್ ಅವರು “ಯಾವುದೇ ಸಂಶೋಧಕರು ಈ ಸಮಸ್ಯೆಗಳನ್ನು ಅನ್ವೇಷಿಸಲು , ಡೇಟಾವು ಲಿಂಗಾಧಾರಿತವಾಗಿ ವಿಂಗಡಣೆಯಾಗಿರಬೇಕು ಮತ್ತು ಸಾಮಾಜಿಕ ಅಸಮಾನತೆಯನ್ನು ಎತ್ತಿ ತೋರಿಸುವ ಸೂಚಕಗಳನ್ನು ಒಳಗೊಂಡಿರಬೇಕು” ಎನ್ನುತ್ತಾರೆ. ಆದರೆ ನಮ್ಮ ಹೆಚ್ಚಿನ ಸರ್ವೇಗಳು ಸಮಸ್ಯೆಗಳನ್ನು ಲಿಂಗಾಧಾರಿತವಾಗಿ ದಾಖಲಿಸುವುದಿಲ್ಲ.
ಹವಾಮಾನ ಬದಲಾವಣೆ ಮತ್ತು ವಿಪತ್ತುಗಳ ಮೇಲಿನ ಸರ್ಕಾರದ ನೀತಿಗಳು ಲಿಂಗ ದೃಷ್ಟಿಕೋನವನ್ನು ಹೊಂದಿಲ್ಲ. ಪ್ರವಾಹದ ಕುರಿತು ಇತ್ತೀಚೆಗೆ ಬಿಡುಗಡೆಯಾದ ಸಂಸದೀಯ ವರದಿಯೂ ಸಹ ಮಹಿಳೆಯರ ಸಮಸ್ಯೆಗಳನ್ನು ಉಲ್ಲೇಖಿಸಿಲ್ಲ. ಆದರೆ ಹವಾಮಾನ ಬದಲಾವಣೆಯ ಮೇಲಿನ 28 ರಾಜ್ಯಗಳ ಕ್ರಿಯಾ ಯೋಜನೆಗಳಲ್ಲಿ 43% ಲಿಂಗದ ಬಗ್ಗೆ ಯಾವುದೇ ಗಮನಾರ್ಹ ಉಲ್ಲೇಖವನ್ನು ಹೊಂದಿಲ್ಲ. ಲಿಂಗಾಧಾರಿತ ನೀತಿ ನಿಯಮಗಳು ಸರ್ಕಾರೀ ಮಟ್ಟದಲ್ಲಿ ಇದ್ದರೂ ಅದು ಸಮಾಜದ ಕಟ್ಟ ಕಡೆಯ ಮಹಿಳೆಗೆ ತಲುಪುವುದಿಲ್ಲ. ಹಾಗೆ ತಲುಪದಿರುವಲ್ಲಿ ಆರ್ಥಿಕ ಅಸಮಾನತೆ ಮತ್ತು ಜಾತಿ ಪ್ರಮುಖ ಪಾತ್ರ ವಹಿಸುತ್ತದೆ.