ಧಾರವಾಡ: ಮತದಾನದ ಪ್ರಮಾಣ ಏರಿಕೆ ಮಾಡಲು ಚುನಾವಣಾ ಆಯೋಗದಿಂದ ಹಿಡಿದು ಸಂಘ- ಸಂಸ್ಥೆಗಳು ಹಲವಾರು ವಿನೂತನ ಕಾರ್ಯಕ್ರಮ ಆಯೋಜಿಸುತ್ತಿವೆ. ಆದರೆ, ನಗರದಲ್ಲಿ ಮತದಾನ ಮಾಡಿದವರಿಗೆ ಉಚಿತ ಆರೋಗ್ಯ ತಪಾಸಣೆ ಕೂಡ ನಡೆಸುವುದರ ಮೂಲಕ ಸೆಳೆಯಲಾಯಿತು.
ಈ ವಿನೂತನ ಕಾರ್ಯಕ್ರಮವು ಧಾರವಾಡದಲ್ಲಿ ನಡೆಯಿತು. ಮತದಾನ ಮಾಡಿದವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಇಸಿಜಿ(ECG) ತಪಾಸಣೆ ಮಾಡಲಾಯಿತು.
ಧಾರವಾಡದ ಹರೀಶ ಮೆಡಿಕಲ್ ಲ್ಯಾಬ್, ಮಾಳಮಡ್ಡಿ ಮತ್ತು ಕಾಮನಕಟ್ಟಿರುವ ಲ್ಯಾಬ್ ನಲ್ಲಿ ಮತದಾನ ಮಾಡಿ ಕೈ ಬೆರಳಿನ ಶಾಹಿ ತೋರಿಸಿದವರಿಗೆ ಉಚಿತ ತಪಾಸಣೆ ನಡೆಸಲಾಯಿತು. ನೂರಾರು ಮತದಾರರು ಇದರ ಲಾಭ ಮಾಡಿಕೊಂಡಿದ್ದಾರೆ. ಮೂರು ತಪಾಸಣೆಯನ್ನು ಇಲ್ಲಿ ಮಾಡಲಾಗಿದೆ. ಇದರ ಒಟ್ಟು ದರ 500 ರೂ. ಆಗಿರುತ್ತದೆ. ಆದರೆ, ಮತದಾನ ಮಾಡಿದವರಿಗೆ ಉಚಿತವಾಗಿ ತಪಾಸಣೆ ನಡೆಸಲಾಗಿದೆ.
ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಹಕ್ಕು ಚಲಾಯಿಸಿದವರಿಗೆ ಐಸ್ ಕ್ರೀಂ ನೀಡಲಾಗಿದೆ. ಹೆಚ್ಚಿನ ಮತದಾನ ನಡೆಯಬೇಕು ಎಂಬ ಉದ್ಧೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.