ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳ ಪಾಲಿಗೆ ಅಕ್ಷರಶಃ ದೇವರೆನಿಸಿಕೊಂಡಿದ್ದಾರೆ. ಈ ಹಿಂದೆ ತಮ್ಮ ಫ್ಯಾನ್ಸ್ ಕಷ್ಟದಲ್ಲಿದ್ದಾರೆ ಅಂದರೆ ಸಾಕು ಅವರಿಗೆ ಸ್ಪಂದಿಸಿರುವ ಉದಾಹರಣೆ ಸಾಕಷ್ಟು ಇದೆ. ಕೆಲವರನ್ನು ಭೇಟಿ ಮಾಡಿ ಸಂತೈಸಿದ್ದೂ ಇದೆ. ಈಗ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಫ್ಯಾನ್ಸ್ಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲಿ ಅವರು ತಮ್ಮ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗೆ ಉಚಿತ ಅಪಘಾತ ವಿಮೆ ಘೋಷಿಸಿದ್ದಾರೆ. ಈ ಮೂಲಕ ಸ್ಟಾರ್ ನಟರೊಬ್ಬರು ತಮ್ಮ ಅಭಿಮಾನಿ ಬಳಗಕ್ಕೆ ಇನ್ಶೂರೆನ್ಸ್ ಮಾಡಿಸಿದ ದೇಶದ ಮೊದಲ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮ ಬರೋಬ್ಬರಿ ಆರು ಗಂಟೆಗಳ ಕಾಲ ನಡೆಯಿತು. ಅಷ್ಟು ಸಮಯವೂ ಅಲ್ಲು ಅರ್ಜುನ್ ನಿಂತುಕೊಂಡೇ ಅಭಿಮಾನಿಗಳನ್ನು ಬರಮಾಡಿಕೊಂಡರು. ಏಳು ರಾಜ್ಯಗಳಿಂದ ಬಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭಿಮಾನಿಗಳನ್ನು ವೈಯಕ್ತಿಕವಾಗಿ ಭೇಟಿಯಾದರು. ಪ್ರತಿಯೊಬ್ಬರ ಜೊತೆಗೂ ತಾಳ್ಮೆಯಿಂದ ಫೋಟೋಗೆ ಫೋಸ್ ನೀಡಿದರು. ಅಭಿಮಾನಿಗಳನ್ನು ಅಪ್ಪಿ, ಹಸ್ತಲಾಘವ ನೀಡಿ ಪ್ರೀತಿ ಹಂಚಿದರು. ಅಲ್ಲಿ ಆಗಮಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಅಭಿಮಾನಿಗಳ ಈ ಭೇಟಿ ಉದ್ದೇಶದ ಹಿಂದೆ ವಿಶೇಷವೂ ಇತ್ತು. ಅದು ಅಪಘಾತ ವಿಮೆ ಘೋಷಣೆ. ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್ ಸದಸ್ಯರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ರಾಜ್ಯ ಸಮಿತಿ ಸದಸ್ಯರಿಗೆ ಐದು ಲಕ್ಷ ರೂಪಾಯಿ ವಿಮೆ ಸಿಕ್ಕರೆ,. ಜಿಲ್ಲಾ ಸಮಿತಿ ಸದಸ್ಯರಿಗೆ ಮೂರು ಲಕ್ಷ ರೂಪಾಯಿ ವಿಮೆ ದೊರೆಯಲಿದೆ. ಇದರಿಂದ ಸುಮಾರು 900ಕ್ಕೂ ಹೆಚ್ಚು ಅಭಿಮಾನಿಗಳಿಗೆ ಪ್ರಯೋಜನ ಸಿಗಲಿದೆ.

ಇದೇ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಿಷ್ಟು. ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಳ್ಳೆಯ ಕೆಲಸಗಳಿಗೆ ಬಳಸಿ. ಸಮಾಜಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಸಾಮಾಜಿಕ ಜಾಲತಾಣಗಳಲ್ಲಿ ಇತರ ನಟರನ್ನು ಅಥವಾ ಅವರ ಅಭಿಮಾನಿಗಳನ್ನು ಟ್ರೋಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.







