ಭಾರತದಲ್ಲಿ ಸದ್ಯ ಕೊರೊನಾ ಸೋಂಕು ಕಡಿಮೆಯಾಗಿದ್ದು, ಹೊಸ ಕೇಸ್ಗಳು ತಹಬದಿಗೆ ಬರುತ್ತಿವೆ. ಆದರೂ, ಕೋವಿಡ್ 19 ಮೂರನೇ ಅಲೆ ಯಾವಾಗ ಆರಂಭವಾಗುತ್ತೆ ಎಂಬ ಆತಂಕ ಇದ್ದೇ ಇದೆ. ಒಂದು ವೇಳೆ ಮತ್ತೊಂದು ಅಲೆ ಬಂದರೆ ಅದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ..? ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆಯೇ..? ಎಂಬ ಚರ್ಚೆಗಳೂ ನಡೆಯುತ್ತಲೇ ಇದೆ. ಆದರೆ, ಫ್ರಾನ್ಸ್‌ನಲ್ಲಿ ಈಗಾಗಲೇ ಕೊರೊನಾ ಐದನೇ ಅಲೆ ಆರಂಭವಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಹೌದು, ಫ್ರಾನ್ಸ್‌ನಲ್ಲಿ ಐದನೇ ತರಂಗದ ಕೊರೊನಾ ವೈರಸ್ ಸೋಂಕುಗಳು ಅಪಾಯಕಾರಿ ಮಟ್ಟದಲ್ಲಿ ಏರುತ್ತಿವೆ ಎಂದು ಸರ್ಕಾರ ವರದಿ ಮಾಡಿದೆ. ಕಳೆದ ವಾರದಿಂದ ಹೊಸ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿವೆ ಎಂದೂ ತಿಳಿದುಬಂದಿದೆ.
ಫ್ರಾನ್ಸ್ನಲ್ಲಿ ದೈನಂದಿನ ಪ್ರಕರಣಗಳೆಷ್ಟು..?
7 ದಿನಗಳ ಸರಾಸರಿ ಹೊಸ ಪ್ರಕರಣಗಳು 17,153ಕ್ಕೆ ತಲುಪಿದ್ದು, ಇದು ವಾರದ ಹಿಂದಿನ 9,458ಕ್ಕಿಂತ ಹೆಚ್ಚಾಗಿದ್ದು,81 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಫ್ರಾನ್ಸ್ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಐದನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ” ಎಂದೂ ಅಲ್ಲಿನ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದುಪ್ಪಟ್ಟಾದ ಕೋವಿಡ್ ಕೇಸ್.!!
ಇತ್ತೀಚಿನ 7 ದಿನಗಳ ಹೆಚ್ಚಳವು ಹಿಂದಿನ 3 ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ 3 ಪಟ್ಟು ಹೆಚ್ಚಾಗಿದೆ, ಇದು ಸೋಂಕು ಹರಡುತ್ತಿರುವ ವೇಗವನ್ನು ಸೂಚಿಸುತ್ತದೆ ಎಂದು ಫ್ರಾನ್ಸ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಐದನೇ ಅಲೆ ಎದುರಿಸಲು ಫ್ರಾನ್ಸ್ ಸಜ್ಜು.!!
ಆದರೂ, ಸದ್ಯಕ್ಕೆ ಸೋಂಕುಗಳ ಹೆಚ್ಚಳವು ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳ ಬೃಹತ್ ಒಳಹರಿವಿಗೆ ಕಾರಣವಾಗಿಲ್ಲ ಎನ್ನಲಾಗಿದೆ. ಅಲ್ಲದೆ, ತೀವ್ರ ನಿಗಾ ಘಟಕ ಅಥವಾ ಐಸಿಯುನಲ್ಲಿರುವ ರೋಗಿಗಳ ಸಂಖ್ಯೆಯೂ ಸೀಮತವಾಗಿದ್ದು, ಇದಕ್ಕೆ ಕಾರಣ ಫ್ರಾನ್ಸ್‌ನ ಹೆಚ್ಚಿನ ಪ್ರಮಾಣದ ವ್ಯಾಕ್ಸಿನೇಷನ್. ಲಸಿಕೆ ಹಾಕಿಸಿದ ಕಾರಣದಿಂದ ಕೋವಿಡ್‌ನ ಅತ್ಯಂತ ಅಪಾಯಕಾರಿ ರೂಪಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಂಡುಬರುತ್ತದೆ ಎಂದು ಫ್ರಾನ್ಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಮಂದಿ. ?
ಒಟ್ಟು 7,974 ಕೋವಿಡ್ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಪೈಕಿ 1,333 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒಂದು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಕ್ರಮವಾಗಿ 6,500 ಮತ್ತು 1,000ಕ್ಕೆ ಮಂದಿ ಚಿಕಿತ್ಸೆ ಪಡೆಯುತ್ತಿದ್ದರು.
ವ್ಯಾಕ್ಸಿನೇಷನ್ ಹೆಚ್ಚಿಸಿದ ಫ್ರಾನ್ಸ್ !
ಸೋಂಕಿನ ಪ್ರಮಾಣ ಫ್ರಾನ್ಸ್‌ನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಫ್ರಾನ್ಸ್‌ನಲ್ಲಿ ಹೆಚ್ಚೆಚ್ಚು ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಫ್ರಾನ್ಸ್ ಸರ್ಕಾರದ ವಕ್ತಾರ ಗೇಬ್ರಿಯಲ್ ಅಟ್ಟಲ್ ನಾವು ಬಹಳ ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ನಡೆಸುತ್ತಿದ್ದೇವೆ. ನಾಡಿನ ಮುಕ್ಕಾಲು ಭಾಗ ಮಂದಿ ಈಗಾಗಲೇ ಲಸಿಕೆ ಪಡೆದು ರಕ್ಷಣೆ ಹೊಂದಿದ್ದಾರೆ. ಅಲ್ಲದೆ, ಬೂಸ್ಟರ್ ಡೋಸ್‌ಗಳಿಗೆ ಸಂಬಂಧಿಸಿದಂತೆಯೂ ನಾವು ಇತರೆ ರಾಷ್ಟ್ರಗಳಿಗಿಂತ ಮುಂದುವರೆದಿದ್ದೇವೆ ಎಂದು ಹೇಳಿದ್ದಾರೆ. ಇತರ ದೇಶಗಳಿಗಿಂತ ಮೊದಲೇ ಫ್ರಾನ್ಸ್ ಆರೋಗ್ಯ ಪಾಸ್ ಪರಿಚಯಿಸಿದ್ದು ಸಹ ಕೋವಿಡ್ ನಿಯಂತ್ರಣದಲ್ಲಿಡಲು ಸಹಾಯ ಮಾಡಿದೆ. ಆರೋಗ್ಯ ಪಾಸ್ ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಅನೇಕ ಸಾಂಸ್ಕೃತಿಕ ಸ್ಥಳಗಳಲ್ಲಿ ಕಡ್ಡಾಯ ಮಾಡಲಾಗಿದೆ. ಇನ್ನು ಸಂಪೂರ್ಣವಾಗಿ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಂಡರೂ ಗಂಭೀರವಾದ ಸಮಸ್ಯೆಗಳೇನು ಕಾಣಿಸಿಕೊಳ್ಳದೇ ಇರುವುದು ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುವುದಕ್ಕಿರುವ ಸಾಕ್ಷಿ. ಇನ್ನೂ ಲಸಿಕೆ ಪಡೆಯ ಜನರ ಮೇಲೆ ಸಾರ್ವಜನಿಕವಾಗಿ ಓಡಾಡುವುದನ್ನು ಫ್ರಾನ್ಸ್ ನಿರ್ಬಂಧ ತಂದಿದೆ ಎಂದೂ ಅವರು ಹೇಳಿದ್ದಾರೆ.