ಜಗತ್ತಿನಾದ್ಯಂತ ಬಲಪಂಥೀಯ ಮೂಲಭೂತವಾದಿಗಳು ಮತ್ತು ಅವರ ಬೆಂಬಲಿಗ ಬಂಡವಾಳಶಾಹಿಗಳ ಕೈಯಲ್ಲಿ ಆಡಳಿತದ ಚುಕ್ಕಾಣಿ ಇತ್ತೀಚಿಗೆ ಹೆಚ್ಚಿನ ಮಟ್ಟದಲ್ಲಿ ಲಭಿಸುತ್ತಿದೆ. ಸಮಾಜವಾದಿ ಚಿಂತನೆಗಳು ವಿಶ್ವದ ಎಲ್ಲಾ ಕಡೆಗಳಲ್ಲಿ ಕ್ಷೀಣಿಸುತ್ತಿವೆ. ಇದು ಇಡೀ ವಿಶ್ವದ ಎಲ್ಲಾ ಬಡವರ ಹಾಗು ತುಳಿತಕ್ಕೊಳಗಾದವರ ಪಾಲಿಗೆ ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಯುರೋಪಿನಲ್ಲಿ ಅತ್ಯುತ್ತಮ ಪ್ರಗತಿಪರ ರಾಜ್ಯ ಯಾವುದು ಎಂಬ ಪ್ರಶ್ನೆಗೆ ಥಟ್ಟನೆ ಫ್ರಾನ್ಸ್ ಎಂಬ ಸಿದ್ಧ ಉತ್ತರ ಸಿಗುತ್ತದೆ. ಫ್ರಾನ್ಸನಲ್ಲಿ ಅಲ್ಲಿ ಅತಿ ಹೆಚ್ಚು ರಾಷ್ಟ್ರೀಕರಣದ ಕಾರ್ಯಗಳಾಗಿವೆ. ಅಲ್ಲಿನ ನಿರೋದ್ಯೋಗಿ ಯುವ ಸಮೂಹಕ್ಕೆ ನಿರುದ್ಯೋಗ ಭತ್ಯೆಯನ್ನು ಪರಿಣಾಮಕಾರಿಯಾಗಿ ನೀಡಲಾಗುತ್ತದೆ.
ಫ್ರಾನ್ಸನಲ್ಲಿ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಉತ್ತಮ ಸಾರ್ವಜನಿಕ ಶಿಕ್ಷಣ ಪರಿಣಾಮಕಾರಿಯಾಗಿ ಕಾರ್ಯ ಮಾಡಿದ್ದು ಅಲ್ಲಿನ ಸಾರ್ವಜನಿಕರಿಗೆ ಬಹಳ ಅಗ್ಗದ ದರದಲ್ಲಿ ಆರೋಗ್ಯ ಸೇವೆ ಹಾಗು ಶಿಕ್ಷಣ ಲಭ್ಯವಿದೆ. ಫ್ರಾನ್ಸ್ ನಲ್ಲಿ ಶ್ರೀಮಂತರ ಮೇಲೆ ಅಧಿಕ ತೆರಿಗೆ ಹೇರಲಾಗುತ್ತದೆ ಮತ್ತು ಬಡವರಿಗೆ ಹಲವಾರು ತೆರಿಗೆಗಳಿಂದ ವಿನಾಯತಿ ನೀಡಲಾಗಿದೆ. ಇದು ಸಮಾಜವಾದಿ ಚಿಂತನೆಯನ್ನು ಹೊಂದಿರುವ ರಾಷ್ಟ್ರವೊಂದರ ಲಕ್ಷಣ ಎನ್ನಬಹುದಾಗಿದೆ. ಜಗತ್ತಿನ ಅನೇಕ ಕಮ್ಯುನಿಷ್ಟ್ ರಾಷ್ಟ್ರಗಳು ಹೀಗೆ ಜನಪರವಾಗಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯ ಜೀವಪರ ಚಿಂತನೆಗಳಿಗೆ ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಹಿನ್ನೆಡೆಯಾಗುತ್ತಿದೆ.
ಇದಕ್ಕೆಲ್ಲ ಕಾರಣ ದಾರಾಳವಾಗಿ ಸೊಕ್ಕುತ್ತಿರುವ ಧಾರ್ಮಿಕ ಮೂಲಭೂತವಾದಿಗಳು ಮತ್ತು ಬಂಡವಾಳಶಾಹಿಗಳ ಅನೈತಿಕ ಸಂಬಂಧ ಎನ್ನುವುದು ಬಹಿರಂಗ ಸತ್ಯ. ಹಲವು ವರ್ಷಗಳಿಂದ ಫ್ರಾನ್ಸನಲ್ಲಿ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸಲು ಐಎಂಎಫ್-ವಿಶ್ವ ಬ್ಯಾಂಕ್-ಅಮೇರಿಕನ್-ಬ್ರಿಟಿಷ್ ಈ ಒಕ್ಕೂಟದ ಶಕ್ತಿಶಾಲಿ ಲಾಬಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಫ್ರಾನ್ಸ್ ನಲ್ಲಿ ಅಲ್ಲಿನ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಆರೋಗ್ಯ ವಿಜ್ಞಾನ ಶಿಕ್ಷಣವನ್ನು ಅತ್ಯಂತ ದುಬಾರಿಗೊಳಿಸಬೇಕು ಎನ್ನುವ ದುರುದ್ದೇಶದಿಂದ ಈ ಲಾಬಿಯ ಹಿಂದಿರುವ ಶಕ್ತಿಗಳು ಪ್ರಖರ ಬಲಪಂಥೀಯ ಸಿದ್ಧಾಂತಕ್ಕೆ ಸೇರಿರುವ ಲೀ ಪೆನ್ ರನ್ನು ನೀರುಣಿಸಿ ಬೆಳೆಸುತ್ತಿವೆ. ಇತ್ತೀಚಿಗೆ ಇಸ್ಲಾಮೋಫೋಬಿಯಾವನ್ನು ಫ್ರಾನ್ಸ್‌ನ ನಾಗರಿಕರಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ.
ಭಾರತದಲ್ಲಿ ಬಲಪಂಥಿಯ ಸಂಘಟನೆಗಳು ದೇಶದ ಜನರಲ್ಲಿ ಹೇಗೆ ಅಲ್ಪಸಂಖ್ಯಾತರುˌ ಅದರಲ್ಲೂ ಮುಸ್ಲಿಮರ ಬಗ್ಗೆ ದ್ವೇಷ ಭಾವನೆ ಬಿತ್ತುತ್ತಿವೆಯೊ ಅದೇ ಮಾದರಿಯಲ್ಲಿ ಫ್ರಾನ್ಸ್ ನಲ್ಲೂ ಮಾಡಲಾಗುತ್ತಿದೆ. ಬಲಪಂಥಿಯ ಶಕ್ತಿಗಳು ಭಾರತದಲ್ಲಿ ಮುಸ್ಲಿಂರ ಬಗ್ಗೆ ಇಲ್ಲಿನ ಜನರಲ್ಲಿ ದ್ವೇಷ ಬಿತ್ತುವ ಮೂಲಕ ಮೋದಿಯಂತ ಪ್ರಖರ ಧಾರ್ಮಿಕ ಮೂಲಭೂತವಾದಿಯನ್ನು ಪ್ರತಿಷ್ಠಾಪಿಸಿವೆ. ಮೋದಿ ಆಡಳಿತದ ಹತ್ತು ವರ್ಷಗಳಲ್ಲಿ ಬೃಹತ್ ಪ್ರಮಾಣದಲ್ಲಿ ಭಯಾನಕವಾಗಿ ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲಾಗಿದೆ. ಮೊದಲಿನ ಸರಕಾರಗಳು ಜಾರಿಗೆ ತಂದಿರುವ ಅನೇಕ ಜನಕಲ್ಯಾಣ ನೀತಿಗಳನ್ನು ಟೊಳ್ಳುಗೊಳಿಸಲಾಗಿದೆ ಹಾಗು ಅವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಅಂಬಾನಿ-ಅದಾನಿಯಂತ ಬಲಪಂಥಿಯ ಉದ್ಯಮಿಗಳ ವ್ಯವಹಾರಗಳಿಂದ ಬರುವ ಆದಾಯವು ಮೊದಲಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ. ಇಡೀ ದೇಶದ ಆರ್ಥಿಕತೆ ಕೋವಿಡ್ ಸಾಂಕ್ರಮಿಕ ಸಂಕಷ್ಟದಲ್ಲಿ ಕುಸಿಯುತ್ತಿದ್ದಾಗಲೂ ಕೂಡ ಅದಾನಿ-ಅಂಬಾನಿಗಳ ಆದಾಯವು ಆಕಾಶದೆತ್ತರಕ್ಕೆ ಬೆಳೆದಿದೆ. ದೇಶದ ಬಡವರು ಮೋದಿ ದುರಾಡಳಿತದ ಪರಿಣಾಮದಿಂದ ಇನ್ನಷ್ಟು ಬಡವರಾಗಿದ್ದಾರೆ. ಕೋವಿಡ್ ಸಂದರ್ಭದ ಅವೈಜ್ಞಾಕ ಲಾಕ್ಡೌನ್ ಮತ್ತು ಅಸಮರ್ಪಕ ನಿರ್ವಹಣೆಯ ನೋಟು ನಿಷೇಧ ನಿರ್ಧಾರಗಳಿಂದ ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ದಿವಾಳಿಯಾಗಿವೆ. ಭಾರತದ ಆರ್ಥಿಕ ಬೆಳವಣಿಗೆಯ ವೇಗದ ಗತಿಯು ಮೈನಸ್ ಗೆ ಹೋಗಿದ್ದು ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.
ಫ್ರಾನ್ಸ್ ನಲ್ಲೂ ಕೂಡ ಇದೇ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಫ್ರಾನ್ಸ್ ಮತ್ತು ಭಾರತದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿ ಹಿಂಸಾತ್ಮಕ ಊಳಿಗಮಾನ್ಯ ವಿರೋಧಿ ಕ್ರಾಂತಿಯ ಬಲದ ಮೇಲೆ ಆಧುನಿಕ ಫ್ರಾನ್ಸ್ ಅನ್ನು ಕಟ್ಟಲಾಗಿದೆ. ಭಾರತವು ಇನ್ನೂ ಗುಲಾಮರ ದೇಶವಾಗಿದ್ದ ಸಮಯದಲ್ಲಿ ಫ್ರಾನ್ಸ್ ನಲ್ಲಿ ಕೈಗಾರಿಕಾ ಕ್ರಾಂತಿ ನಡೆದುಹೋಗಿತ್ತು. ಆದ್ದರಿಂದ, ಫ್ರಾನ್ಸ್ ಆಡಳಿತದ ಮೇಲೆ ಎಡಪಂಥೀಯ-ಪ್ರಗತಿಪರ ಚಿಂತನೆಯ ಪ್ರಭಾವ ಹೆಚ್ಚಿದೆ. ಈಗ ಐಎಂಎಫ್-ವಿಶ್ವಬ್ಯಾಂಕ್ ಒಕ್ಕೂಟಕ್ಕೆ ಫ್ರಾನ್ಸ್‌ನ ಪ್ರಗತಿಪರ-ಎಡಪಂಥೀಯ ಸಂಪ್ರದಾಯವನ್ನು ಬಲಪಂಥೀಯ ಹಿತಾಸಕ್ತಿಗಳಿಗಾಗಿ ಬಳಸಲು ಇಂತಹ ತಿರುವುಗಳ ಅಗತ್ಯವಿತ್ತು. ಈಗ ಫ್ರಾನ್ಸ್ ನಲ್ಲಿ ಪ್ರಗತಿಶೀಲತೆಯ ಹೊಸ ನಕಲಿ ‘ಶತ್ರು’ ಹುಟ್ಟಿಕೊಂಡಿದೆ.
ಅದಕ್ಕೆ ಈ ಕ್ಯಾಪಿಟಲಿಸ್ಟ್ ಲಾಭಿಗಳು ಈಗ ನೀರೆರೆದು ಪೋಷಿಸುಸುವ ಎಲ್ಲ ಪ್ರಯತ್ನಗಳು ಮಾಡುತ್ತಿವೆ. ಇದರಿಂದ ಜಗತ್ತಿನ ಕ್ಯಾಪಿಕಲಿಸ್ಟ್ ಲಾಭಿಗಳು ಮತ್ತು ಅಲ್ಲಿನ ಬಲಪಂಥೀಯ ಶಕ್ತಿಗಳ ಒಕ್ಕೂಟವು ಫ್ರಾನ್ಸ್ ನಲ್ಲಿ ಭಯೋತ್ಪಾದನೆˌ ಅದರಲ್ಲೂ ವಿಶೇಷವಾಗಿ ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚುವಂತೆ ಮಾಡಲಿವೆ. ಆ ಮೂಲಕ ಫ್ರಾನ್ಸ್‌ನ ಪ್ರಗತಿಪರ ಮೌಲ್ಯಗಳ ಮೇಲೆ ಮುಸ್ಲಿಮರ ಕೈಯಲ್ಲಿ ದಾಳಿ ಮಾಡಿಸುವ ಎಲ್ಲ ಪ್ರಯತ್ನಗಳು ನಡೆಯಲಿವೆ. ಇಸ್ರೇಲ್-ಪ್ಯಾಲೆಸ್ತೈನ್ ವಿವಾದದಲ್ಲಿ ಫ್ರಾನ್ಸ್ ಪ್ಯಾಲೆಸ್ತೈನ್ ಜೊತೆ ಕೈಜೋಡಿಸಿದಾಗ ಚಾರ್ಲಿ ಹೆಬ್ಡೊ ಹಗರಣ ಸಂಭವಿಸಿತು. ಆ ಘಟನೆಯ ನಂತರ ಬಲಪಂಥೀಯ ಲೀ ಪೆನ್‌ನ ಜನಪ್ರಿಯತೆ ಹೆಚ್ಚಲಾರಂಭಿಸಿತು.
ಈಗ ನಡೆಯುತ್ತಿರುವ ಘಟನೆಗಳು ಕೂಡ ಲೀ ಪೆನ್ ಅನ್ನು ಜನಪ್ರೀಯತೆಯ ಶಿಖರಕ್ಕೆ ಕರೆದೊಯ್ಯುತ್ತಿವೆ. ಬಲಪಂಥೀಯ ಸಿದ್ಧಾಂತದ ಲೀ ಪೆನ್ ಮೂಲಕ, ಫ್ರಾನ್ಸ್ ನ ಪ್ರಗತಿಶೀಲ ಮತ್ತು ಜನಕಲ್ಯಾಣದ ನೀತಿಗಳನ್ನು ಕೊನೆಗಾಣಿಸಿˌ ಐಎಂಎಫ್-ವಿಶ್ವ ಬ್ಯಾಂಕ್- ಅಮೇರಿಕನ್-ಬ್ರಿಟಿಷ್ ಲಾಬಿಗಳು ಫ್ರಾನ್ಸ್ ಅನ್ನು ಖಾಸಗೀಕರಣಗೊಳಿಸಲಿವೆ. ಆನಂತರ ಅಲ್ಲಿ ಬಂಡವಾಳಶಾಹಿಗಳ ಕಾರಬಾರು ಆರಂಭಗೊಳ್ಳುತ್ತದೆ. ತಮಾಷೆಯ ಸಂಗತಿಯೆಂದರೆ, ಮೋದಿ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಮೊದಲು ಭಾರತದಲ್ಲಿ ಬಲಪಂಥೀಯ ಶಕ್ತಿಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಬಹುದೊಡ್ಡ ಕಂದಕವನ್ನೇ ನಿರ್ಮಿಸಿದ್ದವು. ಬಲಪಂಥೀಯ ಶಕ್ತಿಗಳ ಅದೊಂದು ಸುದೀರ್ಘ ಹಾಗು ವ್ಯವಸ್ಥಿತ ಗೇಮ್ ಪ್ಲ್ಯಾನ್ ಆಗಿತ್ತು.

ಈಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಆಟವೂ ಕೂಡ ಒಂದು ಧಾರ್ಮಿಕ ಯುದ್ಧ ಅಥವಾ ಪ್ರಗತಿ ಹಾಗು ಮೂಲಭೂತವಾದದ ನಡುವಿನ ಸಂಘರ್ಷವಾಗಿ ಪರಿವರ್ತಿಸಲಾಗುತ್ತಿದೆ. ಓವೈಸಿಯಂತಹ ಅನೇಕ ಅವಕಾಶವಾದಿ ಮುಸ್ಲಿಂ ನಾಯಕರು ಭಾರತದಲ್ಲಿ ಮಾಡಿದಂತೆ ಫ್ರಾನ್ಸ್ ನಲ್ಲೂ ಸಹ ಸುಳ್ಳು ಧ್ರುವೀಕರಣದ ರಾಜಕೀಯ ಮುಂದುವರಿಯಬೇಕೆಂದು ಬಯಸುತ್ತಿದ್ದಾರೆ. ಅದಕ್ಕಾಗಿ ಅವರು ವಿದ್ಯಾವಂತ ಮತ್ತು ಸುಶಿಕ್ಷಿತ ಮುಸ್ಲಿಮರಿಗೆ ಅದರ ಹಿಂದಿನ ನಿಜವಾದ ಆಟವನ್ನು ತಿಳಿಸಿ ಹೇಳುತ್ತಿಲ್ಲ. ಆದರೆ ಪ್ರತಿಯೊಂದು ದೇಶದ ಸಂವೇದನಾಶೀಲ ಪ್ರಜೆಗಳಿಗೆ ತನ್ನದೇ ಆದ ಅನುಭವ ಮತ್ತು ಗ್ರಹಿಕೆ ಇರುತ್ತದೆ. ಅದು ಸಾಮಾನ್ಯ ಜನರಿಗೆ ತಡವಾಗಿಯಾದರೂ ಅರಿವಿಗೆ ಬರುತ್ತದೆ.
ಭಾರತದ ಬಲಪಂಥೀಯರು ಯಾವ ಕಾಲಕ್ಕೂ ಈ ದೇಶವನ್ನು ಪ್ರೀತಿಸಿದ ಉದಾಹರಣೆಗಳಿಲ್ಲ. ಅವರದ್ದು ಮೋಘಲರಿಂದ ಹಿಡಿದು ಬ್ರಿಟೀಷರ ಆಡಳಿತದ ತನಕ ಅವಕಾಶವಾದಿ ಹೊಂದಾಣಿಕೆ ಮಾತ್ರ. ನರೇಂದ್ರ ಮೋದಿ ಅವರು ಯಾವತ್ತೂ ಹಿಂದೂ ರಾಷ್ಟ್ರದ ಪರ ವಕಾಲತ್ತು ವಹಿಸುವ ವಕೀಲರಲ್ಲ, ಅವರು ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಆ ಕಳ್ಳೋದ್ಯಮಿಗಳ ಆಪ್ತ ಸ್ನೇಹಿತ ಎಂದು ಜನರು ಅರಿತುಕೊಂಡಿದ್ದಾರೆ. ಅದೇ ರೀತಿ, ಫ್ರಾನ್ಸ್‌ನಲ್ಲಿ ಅಲ್ಲಿನ ಪ್ರಜೆಗಳು ಈ ಆಟವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಲಪಂಥೀಯ ಶಕ್ತಿಗಳ ‘ಮನ್ ಕಿ ಬಾತ್’ ಮಾಧ್ಯಮಗಳು ಜನರ ವರೆಗೆ ಸತ್ಯವನ್ನು ತಲುಪದಂತೆ ತಡೆಯುವ ಮತ್ತು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಬಿತ್ತುವ ಕೆಲಸ ನಿರಂತರವಾಗಿ ಮಾಡುತ್ತಿವೆ.
~ ಡಾ. ಜೆ ಎಸ್ ಪಾಟೀಲ.













