
ಕೇರಳದ ವಯನಾಡು ಭೂಕುಸಿತದಲ್ಲಿ ಇಲ್ಲಿವರೆಗೆ 120 ಜನರು ಸಾವನ್ನಪ್ಪಿದ್ದಾರೆ. ಕಣ್ಮರೆಯಾಗಿರುವ 200ಕ್ಕೂ ಹೆಚ್ಚು ಜನರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಭೂಕುಸಿತದಿಂದ ಉಂಟಾದ ಜಲಪ್ರಳಯದಲ್ಲಿ ಬದುಕುಳಿದವರ ರಕ್ಷಣೆಗೆ ಹರಸಾಹಸ ಮಾಡಲಾಗ್ತಿದೆ. ದುರಂತ ನಡೆದಿರುವ ಜಾಗದಲ್ಲಿ ಕಾರ್ಯಾಚರಣೆಗೆ ಕರ್ನಾಟಕ ಸರ್ಕಾರದಿಂದ ನೆರವು ನೀಡಲು ನಿರ್ಧಾರ ಮಾಡಲಾಗಿದೆ. ಕನ್ನಡಿಗರ ರಕ್ಷಣೆಗೆ ಸಹಾಯವಾಣಿಯನ್ನೂ ತೆರೆಯಲಾಗಿದೆ. ಕೇರಳಕ್ಕೆ ಆಂಬ್ಯುಲೆನ್ಸ್, ಔಷಧಿ, ಜೆಸಿಬಿ, ಕ್ರೇನ್, ಲಾರಿಗಳ ರವಾನೆ ಮಾಡಲಾಗಿದೆ.
ಕೇರಳದ ವಯನಾಡು ಭೂಕುಸಿತ ದುರಂತದಲ್ಲಿ ಕರ್ನಾಟಕದ ನಾಲ್ವರ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆಯ ರಾಜೇಂದ್ರ (50), ರತ್ನಮ್ಮ (45), ಪುಟ್ಟಸಿದ್ದಶೆಟ್ಟಿ (62), ರಾಣಿ (50) ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪುಟ್ಟಸಿದ್ದ ಶೆಟ್ಟಿ, ರಾಣಿ ಶವ ಹೊರತೆಗೆದಿದ್ದಾರೆ ರಕ್ಷಣಾ ಪಡೆಗಳು. ತ್ರಯಂಬಕಪುರದ ಸ್ವಾಮಿಶೆಟ್ಟಿ ಎಂಬವರಿಗೆ ಗಾಯಗಳಾಗಿದ್ದು, ರಾಜೇಂದ್ರ, ರತ್ನಮ್ಮ ಇಬ್ಬರ ಶವಕ್ಕಾಗಿ ಇನ್ನೂ ಹುಡುಕಾಟ ನಡೆಸಲಾಗ್ತಿದೆ. ಚಾಮರಾಜನಗರದ ಇರಸವಾಡಿ ಮೂಲದ ರಾಜನ್ ಹಾಗು ರಜನಿ, ಕಳೆದ 30 ವರ್ಷಗಳಿಂದ ಕೇರಳದ ಮೆಪ್ಪಾಡಿಯಲ್ಲಿ ವಾಸವಿದ್ದರು. ಕೇರಳದ ಮೆಪ್ಪಾಡಿಯಲ್ಲಿ ವಾಸವಿದ್ದ ಚಾಮರಾಜನಗರದ ಪುಟ್ಟ ಸಿದ್ದಿ ಕುಟುಂಬ ದುರಂತದಲ್ಲಿ ಪ್ರಾಣ ಕಳೆದುಕೊಂಡಿದೆ.

ಇನ್ನು ವಯನಾಡು ದುರಂತದಲ್ಲಿ ಮಂಡ್ಯ ಮೂಲದ ಸಂಬಂಧಿಕರು ಇಬ್ಬರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಕೆ.ಆರ್ ಪೇಟೆಯ ಕತ್ತರಘಟ್ಟದ ಗ್ರಾಮದ ಝಾನ್ಸಿರಾಣಿ, 2020ರಲ್ಲಿ ಕೇರಳದ ಮಂಡಕಾಯಿ ಗ್ರಾಮದ ಅನಿಲ್ ಕುಮಾರ್ ಜೊತೆ ಮದುವೆ ಮಾಡಲಾಗಿತ್ತು. ಮದುವೆ ಬಳಿಕ ಗಂಡ, ಮಗು ಹಾಗು ಅತ್ತೆ, ಮಾವನ ಜೊತೆ ವಯನಾಡಲ್ಲಿ ಝಾನ್ಸಿರಾಣಿ ವಾಸವಿದ್ರು. ಮೊನ್ನೆ ರಾತ್ರಿ ನಡೆದ ಭೂಕುಸಿತದಲ್ಲಿ ಅತ್ತೆ ಲೀಲಾವತಿ, ಮಗ ನಿಹಾಲ್ ನಾಪತ್ತೆಯಾಗಿದ್ದಾರೆ. ಭೂಕುಸಿತದಲ್ಲಿ ಝಾನ್ಸಿರಾಣಿ, ಪತಿ ಅನಿಲ್, ಮಾವ ದೇವರಾಜು ಗಂಭೀರ ಗಾಯಗೊಂಡಿದ್ದಾರೆ. ಬದುಕುಳಿದ ಮೂವರನ್ನು ವಯನಾಡು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ವಯನಾಡಿಗೆ ಕರ್ನಾಟಕದಿಂದ ಸಹಾಯ ಹಸ್ತ ಚಾಚಲಾಗಿದೆ. ಬೆಂಗಳೂರಿನಿಂದ NDRF ತಂಡದಿಂದ 70 ಸಿಬ್ಬಂದಿ, MEG ಮದ್ರಾಸ್ ಎಂಜಿನಿಯರ್ ಗ್ರೂಪ್ ತಂಡ 15 ವಾಹನಗಳಲ್ಲಿ ವಯನಾಡಲ್ಲಿ ಕಾರ್ಯಾಚರಣೆಗೆ ತೆರಳಿದೆ. 4 ಜೆ.ಸಿ.ಓ. 100 ಸೇನಾ ಸಿಬ್ಬಂದಿ ಟೀಂ ಪ್ರಯಾಣ ಮಾಡಿದೆ. ಬಂಡಿಪುರ ಮಾರ್ಗದಲ್ಲಿ 40 ವಾಹನಗಳಲ್ಲಿ ಪ್ರಯಾಣ ಮಾಡಿದ್ದಾರೆ. ಗಡಿ ಜಿಲ್ಲೆಗಳ ರಸ್ತೆಗಳಲ್ಲಿ ಅಗತ್ಯ ನೆರವಿಗೆ ಸೂಚನೆ ಕೊಡಲಾಗಿದೆ. ಮೈಸೂರು, ಚಾಮರಾಜನಗರ ಡಿಸಿಗಳಿಗೆ ಆದೇಶ ಕೊಟ್ಟಿದ್ದು, ಔಷಧಿ, ಆಹಾರ, ವೈದ್ಯಕೀಯ ನೆರವು, ಆಂಬ್ಯುಲೆನ್ಸ್ ಒದಗಿಸಲು ಸೂಚಿಸಲಾಗಿದೆ. H.D ಕೋಟೆ, ಕೆ.ಆರ್.ನಗರ ಆಸ್ಪತ್ರೆಯಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ. ಚಿಕಿತ್ಸೆಗೆ ಕರ್ನಾಟಕಕ್ಕೆ ಬಂದ್ರೆ ಅಗತ್ಯ ಸಹಾಯ ನೀಡುವಂತೆ ತಿಳಿಸಲಾಗಿದೆ. ಭೂಕುಸಿತದ ತ್ಯಾಜ್ಯ ವಿಲೇವಾರಿಗೆ PWD ಇಲಾಖೆ ನೆರವು ನೀಡಬೇಕು ಎಂದು ತಿಳಿಸಲಾಗಿದೆ.
ಕನ್ನಡಿಗರಿಗಾಗಿ ಸಹಾಯವಾಣಿ
94483 55577-ಪಿ.ಸಿ.ಜಾಫರ್, IAS ಅಧಿಕಾರಿ
94460 00514-ದಿಲೀಶ್ ಶಶಿ, IAS ಅಧಿಕಾರಿ
08226-223163 ಹಾಗು 08226-223161
08226-223160 ಚಾಮರಾಜನಗರ ಡಿಸಿ ಕಚೇರಿ
97409 42901 ವಾಟ್ಸಾಪ್ ಸಹಾಯವಾಣಿ ಸಂಖ್ಯೆ
0821-2423800 ಮೈಸೂರು ಜಿಲ್ಲಾಧಿಕಾರಿ ಕಚೇರಿ
ಕೃಷ್ಣಮಣಿ






