ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸುದ್ದಿ ಬೆನ್ನಲ್ಲೇ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಇಂದು ಶುಕ್ರವಾರ ದೆಹಲಿಯಲ್ಲಿ ಬೆಳಗ್ಗೆ ಮಹತ್ವದ ಸುದ್ದಿಗೋಷ್ಠಿ ಕರೆದಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮೈತ್ರಿ ಕುರಿತು ಮತ್ತು ಎಷ್ಟು ಸೀಟುಗಳಲ್ಲಿ ಮೈತ್ರಿ ಮಾಡಿಕೊಳ್ಳಲಿವೆ ಎಂಬುದನ್ನು ದೇವೇಗೌಡರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ದೆಹಲಿಗೆ ಕುಮಾರಸ್ವಾಮಿ ಮತ್ತು ಹೆಚ್ ಡಿ ರೇವಣ್ಣ ಹಾಗೂ ಜೆಡಿಎಸ್ ನಾಯಕ ಕುಪೇಂದ್ರ ರೆಡ್ಡಿ ದೆಹಲಿಗೆ ಆಗಮಿಸಿದ್ದು ರಹಸ್ಯ ಸಭೆಗಳನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ದೇವೇಗೌಡರ ನಿವಾಸಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಆಗಮಿಸಿ ಭೇಟಿ ನೀಡಿದ್ದು ಕೂಡ ಹಲವು ಕುತೂಹಲಕ್ಕೆ ಕಾರಣವಾಗಿದೆ.