ಅರಸೀಕೆರೆ ಏ.೧೦: ಇತ್ತೀಚಿನ ದಿನಗಳಲ್ಲಿ ಇತಿಹಾಸ ಸೃಷ್ಟಿಸುವ ರೀತಿಯಲ್ಲಿ ಜೆಡಿಎಶ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಅನೇಕ ನಾಯಕರು ಸೇರ್ಪಡೆಯಾಗುತ್ತಿದ್ದಾರೆ. ಅಧಿಕಾರ ನಶ್ವರ, ಶಿವಲಿಂಗೇಗೌಡರು ಮಾಡಿರುವ ಸಾಧನೆ ಅಜರಾಮರ. ಆದರೆ ಕೊನೆಗೆ ಮತದಾರರೇ ಈಶ್ವರ ಎಂದು ನಿಮ್ಮ ಬದುಕು ಹಸನ ಮಾಡಲು ಶಿವಲಿಂಗೇಗೌಡರು ಹಾಗೂ ಅವರ ಆಪ್ತರು ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶಿವಲಿಂಗೇಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಪಕ್ಷದ ಅಧ್ಯಕ್ಷನಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪರವಾಗಿ, ಪಕ್ಷದ ಇತರ ನಾಯಕರ ಪರವಾಗಿ ಶಿವಲಿಂಗೇಗೌಡರಿಗೆ ತುಂಬು ಹೃದಯದ ಸ್ವಾಗತ ಮಾಡಿಕೊಳ್ಳುತ್ತೇನೆ. ಇಂದು ನಾವು ಚುನಾವಣೆ ಹಂತದಲ್ಲಿದ್ದೇವೆ. ನಾನು ಶಿವಲಿಂಗೇಗೌಡರಿಗೆ 10 ವರ್ಷಗಲಿಂದ ಗಾಳ ಹಾಕುತ್ತಿದ್ದೆ. ಸಿದ್ದರಾಮಯ್ಯನವರು ಕೂಡ ಇವರಿಗೆ ಗಾಳ ಹಾಕುತ್ತಿದ್ದರು. ಆದರೆ ಇವರು ಗಾಳಕ್ಕೆ ಬಿದ್ದಿರಲಿಲ್ಲ. ಕೊನೆಗೆ ಇವರು ಕ್ಷೇತ್ರದ ಜನರ ಅಭಿವೃದ್ಧಿಯ ಗಾಳಕ್ಕೆ ಬಿದ್ದಿದ್ದಾರೆ. ನಾನು ಕ್ಷೇತ್ರದ ಋಣ ತೀರಿಸಬೇಕು ಎಂದು ಸಂಕಲ್ಪ ಮಾಡಿ ಪಕ್ಷಕ್ಕೆ ಬಂದಿದ್ದಾರೆ.
ನಾನು ಇಲ್ಲಿಗೆ ಬರುವಾಗ ನನ್ನ ಮಿತ್ರ ಶಶಿಧರ್ ಅವರ ಜತೆ ಮಾತನಾಡಿದೆ. ಅವರು ನಮಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅವರ ಜತೆಯಲ್ಲಿ ಗುರುತಿಸಿಕೊಂಡಿರುವ ಎಲ್ಲ ಕಾರ್ಯಕರ್ತರಿಗೆ ಒಂದು ಭರವಸೆ ನೀಡಲು ಬಯಸುತ್ತೇನೆ. ನೀವು ನಮ್ಮ ಕಷ್ಟ ಕಾಲದಲ್ಲಿ ನಮ್ಮ ಧ್ವಜ ಹಿಡಿದಿದ್ದೀರಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧ್ವಜವನ್ನು ಹಾಕಿ ಮೆರೆಸಿ ನೀವು ತೊಂದರೆ ಅನುಭವಿಸಿದ್ದೀರಿ. ರಾಜಕಾರಣದಲ್ಲಿ ದ್ವೇಷ ಸಹಜ. ಆದರೆ ಕಾಲ ಬದಲಾದಂತೆ ನಾವು ನಮ್ಮ ವೈಯಕ್ತಿಕ ವಿಚಾರ ಬಿಟ್ಟು ಬಹಳ ದೂರದೃಷ್ಟಿಯಿಂದ ಬಹಳ ಯೋಚನೆ ಮಾಡಬೇಕಿದೆ.

ನನಗೆ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ರಾಜಕಾರಣದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿದೆ. ನಾನು ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋತಿದ್ದೇನೆ, ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. ಕುಮಾರಸ್ವಾಮಿ ಅವರ ಧರ್ಮಪತ್ನಿ ವಿರುದ್ಧ ನನ್ನ ಸಹೋದರನನ್ನು ನಿಲ್ಲಿಸಿ ಗೆಲ್ಲಿಸಿದ್ದೇನೆ. ಇವೆಲ್ಲಾ ರಾಜಕಾರಣದಲ್ಲಿ ನಡೆದಿದೆ. ಕಳೆದ ಚುನಾವಣೆಯಲ್ಲಿ ಸಷ್ಟ ಬಹುಮತ ಸಿಗದಿದ್ದಾಗ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ನಮ್ಮ ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿದೆವು. ಆದರೆ ಈ ಅಧಿಕಾರವನ್ನು ಕುಮಾರಣ್ಣ ಉಳಿಸಿಕೊಳ್ಳಲಿಲ್ಲ. ನಾನು ಶಿವಲಿಂಗೇಗೌಡರು ಸರ್ಕಾರ ಉಳಿಸಲು ಬಾಂಬೆಗೆ ಹೋಗಿ ಬೀದಿಯಲ್ಲಿ ನಿಂತು ಎಷ್ಟು ಹೋರಾಟ ಮಾಡಿದ್ದೇವೆ ಎಂದು ನಮಗೆ ಗೊತ್ತು. ಪೊಲೀಸರು ನಮ್ಮನ್ನು ಹೇಗೆ ನಡೆಸಿಕೊಂಡರು ಎಂದು ನೀವೆಲ್ಲ ನೋಡಿದ್ದೀರಿ. ನಮಗೆ ಕುಮಾರಣ್ಣನ ಸರ್ಕಾರ ಉಳಿಸಿಕೊಳ್ಳಬೇಕು ಎಂಬ ನಿಷ್ಠೆಯಿಂದ ಆ ಹೋರಾಟ ಮಾಡಿದ್ದೆವು. ಆದರೆ ಉಲಿಸಿಕೊಳ್ಳಲು ಆಗಲಿಲ್ಲ. ನಮಗೆ ಜಾತ್ಯಾತೀತ ತತ್ವದ ಮೇಲೆ ನಂಬಿಕೆ ಇದ್ದ ಕಾರಣ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದ್ದೆವು.
ಈ ಹಿಂದೆ ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತ್ತು. ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಶಿವಲಿಗೇಂಗೌಡರೂ ಹೊರಾಟ ಮಾಡಿಕೊಂಡು ಬಂದಿದ್ದಾರೆ. ಹೋರಾಟ ಮಾಡುವವರು ಗೆದ್ದೇ ಗೆಲ್ಲುತ್ತಾರೆ. ಅವರಿಗೆ ಸೋಲು ಹಾಗೂ ಸಾವಿನ ಭಯ ಇರುವುದಿಲ್ಲ ಎಂಬ ಮಾತನ್ನೂ ಅಂಬೇಡ್ಕರ್ ಅವರು ಹೇಳಿದ್ದಾರೆ.

ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಆ ಅವಕಾಶವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರ ಎಂಬುದು ಬಹಳ ಮುಖ್ಯ. ನೀವೆಲ್ಲರೂ ರೈತನ ಮಕ್ಕಳು. ನಿಮಗೆ ಸಂಬಳ, ಪಿಂಚಣಿ, ಬಡ್ತಿ, ಲಂಚ ಯಾವುದೂ ಇಲ್ಲ. ಬಿಜೆಪಿಯವರು ನಿಮ್ಮ ಆದಾಯ ಡಬಲ್ ಮಾಡುತ್ತೇವೆ, 1 ಲಕ್ಷದವರೆಗಿನ ಸಾಲ ಮನ್ನಾ ಮಾಡುತ್ತೇವೆ, ನಿಮ್ಮ ಖಾತೆಗಳಿಗೆ 15 ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಆದರೆ ಯಾವುದನ್ನು ಮಾಡಲಿಲ್ಲ. ಈ ಬಗ್ಗೆ ನೀವು ಬಿಜೆಪಿಯನ್ನು ಪ್ರಶ್ನಿಸಬೇಕು.
ಜೀವನದಲ್ಲಿ ನಂಬಿಕೆ ಬಹಳ ಮುಖ್ಯ. ನಾವು ಬದುಕುತ್ತಿರುವುದೇ ನಂಬಿಕೆ ಮೇಲೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಪಕ್ಷ ಸಮಾಜಕ್ಕೆ ನೀಡಿರುವ ಬದ್ಧತೆ, ಬಡವರನ್ನು ರಕ್ಷಣೆ ಮಾಡಿಕೊಂಡು ಬರುವ ಸಿದ್ಧಾಂತ ಇಟ್ಟುಕೊಂಡಿದ್ದು, ಅದರ ಮೇಲೆ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ರಾಜ್ಯ, ದೇಶದ ಹಿತಕ್ಕಾಗಿ ನಾವು ನಮ್ಮ ಸ್ವಾರ್ಥವನ್ನು ತ್ಯಾಗ ಮಾಡಬೇಕು. ಮೇ 10 ರಂದು ಚುನಾವಣೆ ನಡೆಯುತ್ತಿದ್ದು, ಆ ದಿನ ಕೇವಲ ಮತದಾನ ಮಾಡುವ ದಿನ ಮಾತ್ರವಲ್ಲ. ಕರ್ನಾಟಕದಲ್ಲಿ ಬದಲಾವಣೆ ತರುವ ದಿನ. ಭ್ರಷ್ಟ ಬಿಜೆಪಿಯನ್ನು ಬಡಿದೋಡಿಸುವ ದಿನ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧಾರ ಮಾಡಿಕೊಳ್ಳುವ ದಿನ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.