ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈವರೆಗೂ ತಣ್ಣಗಾಗಿದ್ದ ಅಧಿಕಾರ ಹಸ್ತಾಂತರ ಮತ್ತೆ ಮುನ್ನಲೆಗೆ ಬರುತ್ತಿದ್ದು, ಅಚ್ಚರಿ ಎನ್ನುವಂತೆ ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar )ಮಾಜಿ ಸಚಿವ ಕೆ.ಎನ್ ರಾಜಣ್ಣ( KN Rajanna) ಅವರನ್ನು ಭೇಟಿಯಾಗಿದ್ದಾರೆ.

ಕೆ.ಎನ್ ರಾಜಣ್ಣ ಹಾಗೂ ಡಿ.ಕೆ ಶಿವಕುಮಾರ್ ಭೇಟಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಬೆನ್ನಲ್ಲೇ ಇದೀಗ ಡಿ.ಕೆ ಶಿವಕುಮಾರ್ ಭೇಟಿಯಾದ ಬಗ್ಗೆ ಕೆ.ಎನ್ ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಭೇಟಿ ಮಾಡಿದ್ದರು. ಅವರು ಯಾರನ್ನೂ ಬೇಕಾದರೂ ಭೇಟಿ ಮಾಡಬಹುದು. ಪಕ್ಷದ ಹಿತದೃಷ್ಟಿಯಿಂದ ಏನೆಲ್ಲ ಮಾಡಬೇಕು ಅದನ್ನು ಅವರು ಮಾಡುತ್ತಾರೆ. ಪಕ್ಷ ಸಂಘಟನೆಯ ಬಗ್ಗೆ ನನ್ನ ಜೊತೆ ಚರ್ಚಿಸಿದ್ದಾರೆ ಎಂದರು.

ಪಕ್ಷದ ವಿಚಾರ ಏನೇ ಇದ್ದರೂ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇನ್ನು ಪಕ್ಷದ ವಿಚಾರದಲ್ಲಿ ನನ್ನ ನಿರ್ಧಾರ ದೃಢವಾಗಿದೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ಅದೇ ನಿರ್ಧಾರ ಇದೆ. ನಾವು ಯಾವಾಗಲೂ ಸಿದ್ದರಾಮಯ್ಯ ಪರವಾಗಿಯೇ ಇದ್ದೇವೆ. ಡಿ.ಕೆ.ಶಿವಕುಮಾರ್ ಏನೇ ಪ್ರಯತ್ನ ಮಾಡಿದರೂ ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಗಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದರು.



