ಬೆಳಗಾವಿ : ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗೋದಿಲ್ಲ ಅಂತಾ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಯಡಿಯೂರಪ್ಪರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಇದೀಗ ಮತ್ತೊಮ್ಮೆ ಈ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಸದ್ಯಕ್ಕೆ ಈ ವಿಚಾರದ ಬಗ್ಗೆ ಹೆಚ್ಚು ಮಹತ್ವ ನೀಡುವುದು ಬೇಡ ಎಂದು ಹೇಳಿದ್ದಾರೆ.
ಯಾರಿಗೆ ಟಿಕೆಟ್ ನೀಡಬೇಕು ಅನ್ನೋದ್ರ ಬಗ್ಗೆ ಹೈಕಮಾಂಡ್ ಚರ್ಚೆ ಮಾಡಿ ತೀರ್ಮಾನ ಮಾಡುತ್ತೆ. ಚುನಾವಣಾ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ಆಗುತ್ತೆ. ಅಂತಿಮವಾಗಿ ಯಾರಿಗೆ ಟಿಕೆಟ್ ಕೊಡೋದು ಅಂತಾ ತೀರ್ಮಾನವಾಗುತ್ತೆ. ಹಾಲಿ ಐದಾರು ಶಾಸಕರಿಗೆ ಟಿಕೆಟ್ ಸಿಗೋದಿಲ್ಲ ಅನ್ನೋ ವಾತಾವರಣ ಇದೆ ಎಂದು ನಾನು ಹೇಳಿದ್ದೇನೆ. ಅಂತಿಮವಾಗಿ ಏನೇ ತೀರ್ಮಾನ ಮಾಡೋದಾದರೂ ಅದು ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.

ಐವರು ಹಾಲಿ ಶಾಸಕರಿಗೆ ಟಿಕೆಟ್ ಸಿಗೋದಿಲ್ಲ ಎಂದು ಹೇಳಿದ್ದು ಕೇವಲ ನನ್ನ ಅಭಿಪ್ರಾಯ ಮಾತ್ರ. ಅಂತಿಮ ನಿರ್ಧಾರ ಹೈಕಮಾಂಡ್ ಕೈಗೊಳ್ಳುತ್ತೆ. ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ಸಿಕ್ಕರೂ ಆಶ್ಚರ್ಯವಿಲ್ಲ ಎಂದು ಹೇಳುವ ಮೂಲಕ ಯಡಿಯೂರಪ್ಪ ಉಲ್ಟಾ ಹೊಡೆದಿದ್ದಾರೆ. ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆಯಾಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆಉತ್ತರಿಸಿದ ಯಡಿಯೂರಪ್ಪ ಈ ರೀತಿಯ ಊಹಾಪೋಹಗಳಿಗೆ ನಾನು ಉತ್ತರ ಕೊಡೋದಿಲ್ಲ ಎಂದು ಹೇಳಿದ್ದಾರೆ .
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಯಡಿಯೂರಪ್ಪ, ಮೋದಿ , ಅಮಿತ್ ಶಾ ಎದುರು ರಾಹುಲ್ ಗಾಂಧಿ ಯಾವ ಲೆಕ್ಕಕ್ಕೂ ಬರೋದಿಲ್ಲ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ ಅನ್ನೋದಕ್ಕೆ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸೇರುತ್ತಿರುವ ಜನರ ಸಂಖ್ಯೆಯೇ ಸಾಕ್ಷಿ. ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಗೆ ಜನರೇ ಸೇರುತ್ತಿಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ತಾವೇ ಮುಂದಿನ ಸಿಎಂ ಎಂದು ಕನಸು ಕಾಣುತ್ತಿದ್ದಾರೆ. ಆದರೆ ಇವರ ಕನಸೆಲ್ಲ ಈಡೇರುವುದಿಲ್ಲ. ಎಂದು ವ್ಯಂಗ್ಯವಾಡಿದ್ದಾರೆ.