ಹುಬ್ಬಳ್ಳಿ : ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸುತ್ತಿದ್ದಂತೆಯೇ ಎಲ್ಲರ ಗಮನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುಂದಿನ ನಡೆ ಮೇಲೆ ನೆಟ್ಟಿದೆ. ಈ ವಿಚಾರವಾಗಿ ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕಮಾಂಡ್ ನಿರ್ಧಾರ ಏನೇ ಆಗಿರಲಿ, ಧಾರವಾಡ – ಹುಬ್ಬಳ್ಳಿ ಕ್ಷೇತ್ರದಿಂದ ನನ್ನ ಸ್ಪರ್ಧೆಯಂತೂ ನಿಶ್ಚಿತ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಬಿಜೆಪಿ ವರಿಷ್ಠರು ನನಗೆ ಕರೆ ಮಾಡಿದ್ದು ನಿಜ. ನೀವು ಹಿರಿಯ ನಾಯಕ . ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು. ಆದರೆ ನಾನೇನು ತಪ್ಪು ಮಾಡಿದ್ದೇನೆ..? ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆಗೆ 30 ವರ್ಷ ದುಡಿದಿದ್ದೇನೆ ನಾನು. ನನಗೆ ಇದ್ಯಾವ ಶಿಕ್ಷೆ..? ಎಂದು ಪ್ರಶ್ನೆ ಮಾಡಿದರು.
ನನಗೆ ಬಿಜೆಪಿಯಿಂದ ಟಿಕೆಟ್ ನೀಡಬಾರದು ಎಂಬುದಕ್ಕೆ ಒಂದು ಕಾರಣವೂ ಇಲ್ಲ. ಆಂತರಿಕ ಸರ್ವೆಯಲ್ಲಿಯೂ ನನ್ನ ಗೆಲುವು ನಿಶ್ಚಿತ ಎಂದೇ ಇದೆ. ನಾನು ಎಂದಿಗೂ ಪಕ್ಷ ನಿಷ್ಠೆಯನ್ನು ಮರೆತವನಲ್ಲ. ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ನಾನು ಒಂದೇ ಒಂದು ಕಪ್ಪು ಚುಕ್ಕೆ ಇಟ್ಟುಕೊಂಡವನಲ್ಲ. ಹೀಗಿರುವಾಗ ನನಗೇಕೆ ಈ ಶಿಕ್ಷೆ ಎಂದು ಹೇಳುವ ಮೂಲಕ ಬಿಜೆಪಿ ಹೈಕಮಾಂಡ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.