ನಮ್ಮ ರಾಷ್ಟ್ರಧ್ವಜಕ್ಕೆ ತನ್ನದೆ ಆದ ಗೌರವ ಇದೆ. ಮೌಲ್ಯ, ಘನತೆ ಇದೆ. ಇದು ನಮ್ಮ ಸ್ವಾಭಿಮಾನದ ಸಂಕೇತ. ಇದನ್ನ ಹೊರದೇಶದವರು ಸಿದ್ದಪಡಿಸಲು ಅವಕಾಶ ನೀಡುವುದು ದೇಶದ್ರೋಹ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಬುಧವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ದೇಶಾಭಿಮಾನಾ ಇದೇನಾ? ಇವರ ರಾಷ್ಟ್ರಗೀತೆನೇ ಬೇರೆ. ಧ್ವಜವೇ ಬೇರೆ. ರಾಷ್ಟ್ರಧ್ವಜ ಅವರ ಧ್ವಜ ಅಲ್ಲವೇ ಅಲ್ಲ ಎಂದರು.
ಬೇರೆ ದೇಶದವರ ಧ್ವಜವೇ ಬೇರೆ ಇದೆ. ಅವರು ಸಿದ್ಧಪಡಿಸುವುದೇ ಬೇರೆ. ಅವರು ಕಾಣುತ್ತಿರುವ ಕನಸೆ ಬೇರೆ. ಅವರ ಕಲ್ಪನೆ ಬೇರೆ ಇದೆ. ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಬಾಯಲ್ಲಿ ಮೇಕ್ ಇನ್ ಇಂಡಿಯಾ, ಧ್ವಜಗಳನ್ನು ತರಿಸಿಕೊಳ್ಳುವುದು ಚೀನಾದಿಂದ. ಪಾಲಿಸ್ಟರ್ ಬಟ್ಟೆಯ ಧ್ವಜವನ್ನೆ ಬಳಸಬಹುದು ಎನ್ನುವ ಚಿಂತನೆ ರಾಷ್ಟ್ರದ್ರೋಹ ಎಂದು ಅವರು ಆರೋಪಿಸಿದರು.
ರಾಷ್ಟ್ರಧ್ವಜವನ್ನು ಹೊರದೇಶದಿಂದ ತರಿಸಿಕೊಳ್ಳವುದು ಸರಿಯಲ್ಲ. ದೇಶದಲ್ಲಿರುವ ರಾಷ್ಟ್ರಧ್ವಜ ತಯಾರಕ ಘಟಕದಿಂದ ಧ್ವಜಗಳನ್ನು ತರೆಸಿಕೊಂಡಿದ್ದರೆ ಅದರ ಮೌಲ್ಯ ಹೆಚ್ಚುತ್ತಿತ್ತು. ರಾಷ್ಟ್ರಧ್ವಜಕ್ಕೆ ತನ್ನದೇ ಆದ ಮೌಲ್ಯಗಳಿವೆ. ಅದನ್ನು ಹೇಗೆಂದರೆ ಹಾಗೆ ಬಳಸಲು ಆಗುವುದಿಲ್ಲ ಎಂದು ಉಮಾಶ್ರೀ ನುಡಿದರು.
ಈ ಆದೇಶವನ್ನು ತಕ್ಷಣ ವಾಪಸ್ ಪಡೆಯಬೇಕು. ರಾಷ್ಟ್ರದ ಭಕ್ತಿ ಮಾತಿನಲ್ಲಿ ಬೇಡ, ಕೃತಿಯಲ್ಲಿ ಮಾಡಿ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.