ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಬೆಂಗಳೂರು ಅಷ್ಟೇ ಅಲ್ಲದೆ ರಾಜ್ಯ ಮತ್ತು ಅಕ್ಕಪಕ್ಕದ ರಾಜ್ಯದಲ್ಲೂ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಇದೀಗ ಇದೇ ವಿಚಾರವಾಗಿ ತುಮಕೂರಿನ ಜನರಿಗೆ ಆತಂಕ ಶುರುವಾಗಿದೆ.
ಈ ಸ್ಫೋಟದಲ್ಲಿ ಭಾಗಿಯಾದ ಶಂಕಿತ ಭಯೋತ್ಪಾದಕನ ಸುಳಿವಿಗಾಗಿ ಇದೀಗ ತುಮಕೂರಿನಲ್ಲಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸುಮಾರು ೧೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತುಮಕೂರಿನಾದ್ಯಂತ ಶಂಕಿತ ಉಗ್ರನಿಗಾಗಿ ಮೂಲೆ-ಮೂಲೆಯನ್ನು ಜಾಲಾಡಿದ್ದರೆ.
ಶಂಕಿತ ಬಾಂಬರ್ ಮಾರ್ಚ್ 1 ರಂದು ತುಮಕೂರಿನಲ್ಲಿ ಓಡಾಡಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿರುವ ಹಿನ್ನೆಲೆ, ಸುಮಾರು 28 ವಾಹನಗಳಲ್ಲಿ ಆಗಮಿಸಿದ ಪೊಲೀಸರು ತುಮಕೂರಿನ ರೈಲ್ವೆ ನಿಲ್ದಾಣ, ಮಂಡಿಪೇಟೆ ಸೇರಿದಂತೆ, ನಗರದ ಹಲವೆಡೆ ಇಬ್ಬರು ಡಿಸಿಪಿ ನೇತೃತ್ವದಲ್ಲಿ ಫುಲ್ ಸರ್ಚಿಂಗ್ ಮಾಡಿದ್ದಾರೆ..
ಈ ವೇಳೆ ತುಮಕೂರು ಎಸ್‌ಪಿ ಅಶೋಕ್ ಕೆ.ವಿ, ಡಿವೈಎಸ್‌ಪಿ ಚಂದ್ರಶೇಖರ್ ಸೇರಿದಂತೆ, ಹಲವು ಅಧಿಕಾರಿಗಳು ಕೂಡ ಭಾಗಿಯಾಗಿದ್ದರು. ಕೇವಲ ಪೊಲೀಸರು ಮಾತ್ರವಲ್ಲದೇ ಎನ್.ಐ.ಎ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಸಾಥ್ ನೀಡಿದ್ದಾರೆ. ಆದಷ್ಟು ಬೇಗ ಆರೋಪಿಯ ಹೆಡೆಮುರಿ ಕಟ್ಟುವ ವಿಶ್ವಾಸದಲ್ಲಿ ಅಧಿಕಾರಿಗಳಿದ್ದಾರೆ.