2020ರಲ್ಲಿ ನಡೆದ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ನಾಲ್ವರು ಬಿಜೆಪಿ ಮುಖಂಡರ ವಿರುದ್ದ ಎಫ್ಐಆರ್ ದಾಖಲಿಸಲು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ನಿರ್ಧರಿಸಲು ದೆಹಲಿ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲ ಕಾಲಾವಕಾಶ ನೀಡಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿ ಮುಖಂಡರಾದ ಕಪಿಲ್ ಮಿಶ್ರಾ, ಪರ್ವೇಶ್ ಮಿಶ್ರಾ ಮತ್ತು ಅಭಯ್ ವರ್ಮಾ ವಿರುದ್ದ ಎಫ್ಐಆರ್ ದಾಖಲಿಸಬೇಕು ಮತ್ತು ವಿಶೇಷ ತನಿಖಾ ತಂಡದಿಂದ (SIT) ತನಿಖೆ ನಡೆಸಲು ಆದೇಶಿಸಬೇಕು ಎಂದು ಘಟನೆಯಲ್ಲಿ ಬಲಿಪಶುಗಳಾದ ಮೂವರು ಸಂತ್ರಸ್ತರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಲ್ ನಾಗೇಶ್ವರ್ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ದ್ವಿಸದಸ್ಯ ಪೀಠವು ಮೂರು ತಿಂಗಳ ಒಳಗಾಗಿ ಈ ವಿಚಾರವನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ಗೆ ಆದೇಶಿಸಿದೆ.
ಅರ್ಜಿದಾರರು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂಸಾಚಾರದ ತನಿಖೆಯನ್ನು ಹೊರರಾಜ್ಯದ ಎಸ್ಐಟಿ ಅಧಿಕಾರಿಗಳೊಂದಿಗೆ ನಡೆಸಲು ನಿರ್ದೇಶನ ನೀಡಬೇಕು ಎಂದು ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿನ್ ʻʻಅರ್ಜಿದಾರರು ನ್ಯಾಯಾಲಯದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಜಾಮಿಯಾ ವಿವಿಯ ವಿದ್ಯಾರ್ಥಿಗಳಿಗೆ, ದೆಹಲಿ ಸಂತ್ರಸ್ತರಿಗೆ ಯಾವ ನ್ಯಾಯ ದೊರಕಿದೆ ಸಂತ್ರಸ್ತರನ್ನು ಕ್ರೂರವಾಗಿ ಥಳಿಸಲಾಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್ಗೆ ನಿರ್ದೇಶನ ನೀಡಿದ್ದರೂ ಸಹ ವಿಚಾರಣೆ ನಡೆಸಲು ವಿಳಂಬ ಮಾಡುತ್ತಿದೆ,” ಎಂದು ನ್ಯಾಯ ಪೀಠದ ಮುಂದೆ ವಿವರಿಸಿದ್ದಾರೆ.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಪೀಠವು ನಾವು ಈ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಆದರೆ, ದೆಹಲಿ ಹೈಕೋರ್ಟ್ಗೆ ಮೂರು ತಿಂಗಳೊಳಗೆ ತ್ವರಿತವಾಗಿ ಬಗೆಹರಿಸಲು ನಾವು ನಿರ್ದೇಶಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.
ಕಳೆದ ವರ್ಷ ಮಾರ್ಚ ತಿಂಗಳಲ್ಲಿ ದೆಹಲಿ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಅರ್ಜಿಯನ್ನು ಧೀರ್ಘ ಕಾಲ ಮುಂದೂಡುವುದು ಸರಿಯಲ್ಲ ಎಂದು ನ್ಯಾಯಪೀಠ ಕಿಡಿಕಾರಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್ನಲ್ಲಿ ಆಪಾದಿತರ ಮೇಲೆ ಪೊಲೀಸರ ದೌರ್ಜನ್ಯದ ಕುರಿತು ವಿಚಾರಣೆಯನ್ನು ನಡೆಸಿದ ನಂತರ ಅರ್ಜಿಯ ವಿಚಾರಣೆಯನ್ನು ನಡೆಸಲಾಗುವುದು ಎಂದು ಹೈಕೋರ್ಟ್ ಹೇಳಿರುವುದಾಗಿ ಉನ್ನತ ನ್ಯಾಯಾಲಯದ ಮುಂದೆ ಗೊನ್ಸಾಲ್ವೆಸ್ ತಿಳಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ದ್ವೇಷಪೂರಿತ ಭಾಷಣದ ಆರೋಪದ ಮೇಲೆ ಎಫ್ಐಆರ್ಗಳನ್ನು ದಾಖಲಿಸಲುವಲ್ಲಿ ವಿಳಂಬ ಮಾಡಬಾರದು ಎಂದು ದೆಹಲಿ ಹೈಕೋರ್ಟ್ ದೆಹಲಿ ಪೊಲೀಸರಿಗೆ ನಿರ್ದೇಶನವನ್ನ ನೀಡಿತ್ತು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಮುಖಂಡರು ಮಾಡಿದ ದ್ವೇಷಪೂರಿತ ಭಾಷಣವನ್ನು ವೀಕ್ಷಿಸಿದ ಮೇಲೆ ನ್ಯಾಯಾಲಯ ಈ ಮಾತನ್ನು ಹೇಳಿತ್ತು.
ಈ ನಾಲ್ವರ ವಿರುದ್ದ ಎಫ್ಐಆರ್ ಏಕೆ ದಾಖಲಿಸಬಾರದು? ಕೇಂದ್ರ ಸಚಿವ, ಸಂಸದ, ಶಾಸಕರ ವಿರುದ್ದ ಯಾಕೆ ಮೊಕದ್ದಮೆ ದಾಖಲಿಸಬಾರದು ಎಂದು ಹೇಳಿತ್ತು. ಆಸ್ತಿ ಹಾನಿ ಹಾಗೂ ಬೆಂಕಿ ಹಚ್ಚಿದ ಪ್ರಕರಣಗಳ ವಿರುದ್ದ ನೀವು ಎಫ್ಐಆರ್ಅನ್ನು ದಾಖಲಿಸುವಲ್ಲಿ ಅಜಾಗರೂಕತೆಯನ್ನು ತೋರಿದ್ದೀರಿ. ಈ ಭಾಷಣಗಳ ವಿರುದ್ದ ಏಕೆ ನೀವು ಮೊಕದ್ದಮೆ ದಾಖಲಿಸುತ್ತಿಲ್ಲ? ಅಲ್ಲಿ ಅಪರಾಧ ನಡೆದಿರುವುದನ್ನು ನೀವು ಒಪ್ಪಿಕೊಳ್ಳಲು ಇಷ್ಟವಿಲ್ಲವೇ ಎಂದು ಈ ಹಿಂದೆ ನ್ಯಾಯಧೀಶರಾಗಿದ್ದ ಎಸ್.ಮುರಳೀಧರ್ ಅವರು ದೆಹಲಿ ಪೊಲೀಸರಿಗೆ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಿಂಸಾಚಾರ ನಡೆಯುವ ಮೊದಲು ಕಪಿಲ್ ಮಿಶ್ರಾ ಪೊಲೀಸರಿಗೆ ಜಾಫ್ರಾಬಾದ್ ಮತ್ತು ಚಂದ್ಬಾಗ್ನಲ್ಲಿ ಪ್ರತಿಭಟನಾನಿರತರನ್ನು ಅಲ್ಲಿಂದ ಕಳೆಸಬೇಕು ಇಲ್ಲವಾದಲ್ಲಿ ಮುಂದಿನ ಪರಿಣಾಮಗಳನ್ನು ನೀವು ಎದುರಿಸಬೇಕಾಗುತ್ತದೆ ಎಂದು ಮಿಶ್ರಾ ಪೊಲೀಸರಿಗೆ ಆಜ್ಞೆ ಮಾಡುತ್ತಿರುವ ವಿಡಿಯೋ ವೈರಲ್ ಅಗಿತ್ತು.
ಪ್ರತಿಭಟನಕಾರರ ಮೇಲೆ ಪೊಲೀಸರು ಗುಂಡು ಹಾರಿಸುವ ಮೊದಲು ಕೇಂದ್ರ ಸಚಿವ ಅನುರಾಗ್ ಠಾಕೂರ್ ದ್ವೇಷ ಭಾಷಣ ಮಾಡಿದ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ʻದೇಶದ್ರೋಹಿಗಳ ಮೇಲೆ ಗುಂಡು ಹಾರಿಸಿʼ ಎಂದು ಭಾಷನದ ವೇಳೆ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಇವರ ಆದಿಯಾಗಿ ಬಿಜೆಪಿ ಶಾಸಕ ಅಭಯ್ ವರ್ಮಾ ಮತ್ತು ಬಿಜೆಪಿ ಸಂಸದ ಪರ್ವೇಶ್ ವರ್ಮಾ ದ್ವೇಷ ಭಾಷಣ ಮಾಡಿದ್ದರು.
2019ರ ಡಿಸೆಂಬರ್ನಲ್ಲಿ ಜಾರಿಗೆ ಬಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧ ರ್ಯಾಲಿಯಲ್ಲಿ ಈಶಾನ್ಯ ದೆಹಲಿ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.










