ಕರ್ನಾಟಕದಲ್ಲಿ ಈಗ ರಾಜಕೀಯ ಪಕ್ಷಗಳ ಪಾದಯಾತ್ರೆಗಳ ಅಬ್ಬರವೋ ಅಬ್ಬರ. ಎಲ್ಲಿ ನೋಡಿದರೂ, ಯಾವ ಜಿಲ್ಲೆಗೆ ಕಾಲಿಟ್ಟರೂ ರಾಜಕಾರಣಿಗಳ ಪಾದಯಾತ್ರೆ ಕಾಣಸಿಗುವಂತಾಗಿದೆ.
ಹೌದು, ಚುನಾವಣೆ ಮುಗಿದು ೫ ವರ್ಷ ನಾಪತ್ತೆಯಾಗುವ ರಾಜಕಾರಣಿಗಳೆಲ್ಲಾ ಒಂದು ವರ್ಷದ ಮೊದಲೇ ಬೀದಿಗೆ ಬಂದಿದ್ದಾರೆ. ಒಂದು ಕಡೆ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಪಾದಯಾತ್ರೆ ನಡೆಯುತ್ತಿದ್ದರೆ, ಮತ್ತೊಂದಡೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಕೂಡ ಜನ ಸಂಪರ್ಕ ಯಾತ್ರೆ ಆರಂಭಿಸಿದೆ.
ಎರಡು ರಾಜಕೀಯ ಪಕ್ಷಗಳ ನಡುವೆ ಜಾತ್ಯತೀತ ಜನತಾದಳ ಕೂಡ ಎರಡನೇ ಹಂತದ ಯಾತ್ರೆಯನ್ನು ಆರಂಭಿಸಿದೆ. ಆರಂಭದಲ್ಲಿ ನದಿಗಳನ್ನು ಜೋಡಿಸುವ ಪಂಚರತ್ನ ನಡೆಸಿದ್ದ ಜೆಡಿಎಸ್ ಇದೀಗ ಜನತಾ ಮಿತ್ರಾ ಹೆಸರಿನಲ್ಲಿ ಎರಡನೇ ಸುತ್ತಿನ ಯಾತ್ರೆಗೆ ಚಾಲನೆ ನೀಡಲು ಸಜ್ಜಾಗಿದ್ದು, ನವೆಂಬರ್ 1 ರಾಜ್ಯೋತ್ಸವದಂದು ಆರಂಭವಾಗಲಿದೆ.

ಅರೆ ಇದೇನಿದು ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಪಾದಯಾತ್ರೆಗಳನ್ನು ನಡೆಸುತ್ತಿವೆ ಎಂದು ಅಚ್ಚರಿ ಪಡಬೇಡಿ. ಯಾಕೆಂದರೆ ಈ ಯಾತ್ರೆಗಳಿಂದ ಎರಡು ವರ್ಷಗಳಿಂದ ತಯಾರಿ ನಡೆದಿದೆ.
ಒಂದು ಕಡೆ ಆಡಳಿತಾರೂಢ ಬಿಜೆಪಿಯ ವೈಫಲ್ಯ, ಜನರ ಸಂಕಷ್ಟಗಳನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3500 ಕಿ.ಮೀ. ದೂರದ ಪಾದಯಾತ್ರೆ ಈಗ ರಾಜ್ಯದಲ್ಲಿ ಕಾಲಿಟ್ಟಿದ್ದು, ಇದೀಗ ಮಧ್ಯ ಕರ್ನಾಟಕ ಪ್ರವೇಶಿಸಿದೆ.

ಮತ್ತೊಂದೆಡೆ ಕಾಂಗ್ರೆಸ್ ಪಾದಯಾತ್ರೆಗೆ ಜನರು ಸೇರಿದ ರೀತಿ ಬೆಚ್ಚಿಬಿದ್ದ ಬಿಜೆಪಿ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನ ಸಂಪರ್ಕ ಯಾತ್ರೆಗೆ ಚಾಲನೆ ನೀಡಿದೆ. ಬಿಜೆಪಿ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಯೋಜನೆ ರೂಪಿಸಿದೆ.
ಮತ್ತೊಂದೆಡೆ ರಾಷ್ಟ್ರಿಯ ಪಕ್ಷಗಳ ಪೈಪೋಟಿ ನಡುವೆ ಪ್ರಾದೇಶಿಕ ಪಕ್ಷವಾಗಿ ತನ್ನಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಿರುವ ಜೆಡಿಎಸ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜನತಾ ಮಿತ್ರ ಯಾತ್ರೆ ನಡೆಸಲಿದೆ. ಇದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಸಾಥ್ ನೀಡಲಿದ್ದಾರೆ.
ಮುಂದಿನ ಚುನಾವಣೆ ದೃಷ್ಟಿಯಿಂದ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿವೆ. ಆದರೆ ಮತದಾರನ ಮನಸ್ಸಿನಲ್ಲಿ ಏನಿದೆ? ಯಾರಿದ್ದಾರೆ. ಯಾವ ವಿಚಾರಗಳ ಮೇಲೆ ಗಮನ ಹರಿಸಿದ್ದಾನೆ ಎಂಬುದು ಮಾತ್ರ ನಿಗೂಢವಾಗಿದೆ.
ರಾಜ್ಯದಲ್ಲಿ ಭಾರೀ ಮಳೆಯಿಂದ ಅನಾಹುತಗಳೇ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿಯಿಂದ ಜನರು ಕಂಗೆಟ್ಟಿದ್ದಾರೆ. ರಸ್ತೆಗಳು ಗುಂಡಿ ಬಿದ್ದಿವೆ. ಮನೆಗಳು ಕುಸಿದಿವೆ. ಬೆಳೆ ಹಾನಿಯಿಂದ ರೈತರು ಕಂಗೆಟ್ಟಿದ್ದಾರೆ. ಆದರೆ ಸಮಸ್ಯೆಗಳ ಬಗ್ಗೆ ಪರಿಹಾರದ ಬಗ್ಗೆ ಯಾರು ಏನು ಭರವಸೆ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.






