ಮೈಸೂರು: ಬಳ್ಳಾರಿ,(Ballari) ಶಿಡ್ಲಘಟ್ಟ ಬ್ಯಾನರ್ ವಿವಾದದ ಬಳಿಕ ಇದೀಗ ಸಿಎಂ ಸಿದ್ದರಾಮಯ್ಯ(CM Siddaramaiah) ತವರು ಜಿಲ್ಲೆ ಮೈಸೂರಲ್ಲೇ ಫ್ಲೆಕ್ಸ್ ಗಲಾಟೆ ಆರಂಭವಾಗಿದೆ. ಮೈಸೂರು(Mysuru) ಜಿಲ್ಲೆಯ ಕೆ.ಆರ್ ನಗರ ತಾಲೂಕಿನಲ್ಲಿ ಫ್ಲೆಕ್ಸ್ ವಿಚಾರವಾಗಿ ಭಾರೀ ವಿವಾದ ಉಂಟಾಗಿದೆ. ಚುಂಚನಕಟ್ಟೆ ರಥೋತ್ಸವದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ರಾಜಕೀಯ ನಾಯಕರ ಭಾವಚಿತ್ರಗಳಿದ್ದ ಫ್ಲೆಕ್ಸ್‌ನ್ನು ವ್ಯಕ್ತಿಯೊಬ್ಬ ಹರಿದು, ಕಾಲಿನಿಂದ ಒದ್ದು ಕೆಡವಿರುವ ಘಟನೆ ಬೆಳಕಿಗೆ ಬಂದಿದೆ.

ಕೆ.ಆರ್ ನಗರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಹುಣಸೂರು ಶಾಸಕ ಜಿ.ಡಿ.ಹರೀಶ್ ಗೌಡ, ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ಹಾಗೂ ಮಾಜಿ ಸಚಿವ ಸಾ.ರಾ ಮಹೇಶ್ ಅವರ ಭಾವಚಿತ್ರಗಳು ಒಳಗೊಂಡಿದ್ದ ಫ್ಲೆಕ್ಸ್‌ನ್ನು ಉದ್ದೇಶಪೂರ್ವಕವಾಗಿ ಹಾನಿಗೊಳಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Bheemanna Khandre: ಶತಾಯುಷಿ ಭೀಮಣ್ಣ ಖಂಡ್ರೆ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

ಈ ಕೃತ್ಯವನ್ನು ಶಾಸಕ ಡಿ.ರವಿಶಂಕರ್ ಅವರ ಅಭಿಮಾನಿಗಳು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಸಕ ಡಿ.ರವಿಶಂಕರ್ ಅವರ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಬೇರೆ ಯಾರೂ ಫ್ಲೆಕ್ಸ್ ಕಟ್ಟಬಾರದು ಎಂದು ಕೆಲವರು ತಾಕೀತು ಮಾಡಿದ್ದಾರೆ ಎನ್ನುವ ಆರೋಪ ಸಹ ಕೇಳಿಬಂದಿದೆ.

ಫ್ಲೆಕ್ಸ್‌ನ್ನು ಹರಿದು, ಕಾಲಿನಿಂದ ಒದೆಯುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ.












