ದೇಶವನ್ನೇ ಬೆಚ್ಚಿಬೀಳಿಸಿದ್ದ ಫೆಬ್ರವರಿ 14ರ ಕರಾಳ ದಿನಕ್ಕೆ ಕಾರಣವಾದ ಐದು ವರ್ಷಗಳ ಹಿಂದಿನ ಘಟನೆ ಅಕ್ಷರಶಃ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪಾಕ್(Pakistan) ವಿರುದ್ಧ ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಭಾರತೀಯ ಮನೆಗಳಲ್ಲಿ ಶೋಕ ಮಡುಗಟ್ಟಿತ್ತು. ಪಾಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸರ್ಕಾರ ಯೋಜನೆಗಳನ್ನು ಹಮ್ಮಿಕೊಂಡಿತ್ತು. ಉಗ್ರರ ಅಟ್ಟಹಾಸಕ್ಕೆ ಗಡಿಯಲ್ಲಿ ನಮ್ಮ ಯೋಧರ ರಕ್ತ ಹರಿದ ಭೀಕರ ಘಟನೆಯೇ ಈ ಪುಲ್ವಾಮಾ(Pulwama attack) ದಾಳಿ. ಐದು ವರ್ಷಗಳ ಹಿಂದೆ ಪಾಕಿಸ್ತಾನ ಹಾಗೂ ಜೈಶ್–ಇ–ಮೊಹಮ್ಮದ್ ಸಂಘಟನೆಯ ಅಟ್ಟಹಾಸದಿಂದ 40 ಯೋಧರು ಪ್ರಾಣ ಕಳೆದುಕೊಂಡ ಮತ್ತು ಹಲವರು ಗಾಯಗೊಂಡ ಕರಾಳ ದಿನ(Black Day)
ಕರಾಳ ದಿನಕ್ಕೆ ಐದು ವರ್ಷ: ಈ ಕರಾಳ ದಿನಕ್ಕೆ ಇಂದಿಗೆ ಐದು ವರ್ಷ. 14 ಫೆಬ್ರವರಿ 2019ರಂದು ನಡೆದ ಆ ಘಟನೆಯನ್ನು ಮತ್ತು ನಮ್ಮನ್ನು ಕಾಯುವ ಯೋಧರ ಕ್ರೂರ ಮರಣವನ್ನು ಭಾರತೀಯರು ಮರೆಯಲು ಸಾಧ್ಯವೇ ಇಲ್ಲ.
ದಾಳಿ ಹೇಗೆ ನಡೆಯಿತು?: ಸರಿಯಾಗಿ ಇಂದಿಗೆ ಐದು ವರ್ಷಗಳ ಹಿಂದೆ ಅಂದರೆ, ಫೆಬ್ರವರಿ 14ರ ಮಧ್ಯಾಹ್ನ 3 ಗಂಟೆ ಸಮಯ. ಜಮ್ಮು ಮತ್ತು ಕಾಶ್ಮೀರದ(Jammu and Kashmir) ಪುಲ್ವಾಮಾ ಜಿಲ್ಲೆಯ ಲೆಥ್ಪೊರ ಬಳಿಯ ಅವಾಂತಿಪೋರಾ ಬಳಿ ಶ್ರೀನಗರಕ್ಕೆ 2500 ಕ್ಕೂ ಹೆಚ್ಚು ಭಾರತೀಯ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ 78 ಸೇನಾ ವಾಹನಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಾಲಿನಲ್ಲಿ ಸಾಗುತ್ತಿದ್ದವು. ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿಯೊಂದು ನೇರವಾಗಿ ಸೇನಾ ವಾಹನವೊಂದಕ್ಕೆ ಬಂದು ಅಪ್ಪಳಿಸಿತು. ಆತ್ಮಹತ್ಯಾ ಬಾಂಬರ್ನಿಂದ ದಾಳಿ ನಡೆಯುತ್ತಿದ್ದಂತೆ ಸೇನಾ ವಾಹನ ಹೊತ್ತಿ ಉರಿದಿತ್ತು. ಪರಿಣಾಮ, ಸೇನಾ ವಾಹನದಲ್ಲಿದ್ದ 76ನೇ ಬೆಟಾಲಿಯನ್ನ 40 ಯೋಧರು ಹುತಾತ್ಮರಾದರೆ, ಇನ್ನುಳಿದ ಸೈನಿಕರು ಗಾಯಗೊಂಡಿದ್ದರು. 2019 ರ ಪುಲ್ವಾಮಾ ದಾಳಿ ಎಂದೂ ಕರೆಯಲ್ಪಡುವ ಈ ದಾಳಿಯು 1989 ರಿಂದಾಚೆಗೆ ಕಾಶ್ಮೀರದಲ್ಲಿ ಭಾರತದ ಭದ್ರತಾ ಸಿಬ್ಬಂದಿಯ ಮೇಲೆ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದೆ.
ಘಟನೆಯಲ್ಲಿ ಮೃತಪಟ್ಟ ಭದ್ರತಾ ಸಿಬ್ಬಂದಿಗೆ ಅವರ ತವರು ರಾಜ್ಯಗಳಲ್ಲಿ ಸರ್ಕಾರಿ ಅಂತ್ಯಕ್ರಿಯೆ ನಡೆಸಲಾಯಿತು. ಉತ್ತರಪ್ರದೇಶದ ಒಟ್ಟು 12 ಯೋಧರು ಸೇರಿ ರಾಜಸ್ತಾನ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ, ಉತ್ತರಾಖಂಡ, ಬಿಹಾರ, ಮಹಾರಾಷ್ಟ್ರ, ತಮಿಳುನಾಡು, ಅಸ್ಸಾಂ, ಜಮ್ಮು ಕಾಶ್ಮೀರ, ಹಿಮಾಚಲಪ್ರದೇಶ, ಕೇರಳ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಕರ್ನಾಟಕದ ತಲಾ ಒಬ್ಬ ಯೋಧ ಹುತಾತ್ಮರಾಗಿದ್ದರು.
#Pulwamaattack #BlackDay #JammuKashmir #IndianArmy #BJPIndia #NarendraModi