
ಹಾವೇರಿ: ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಜೋರಾಗಿರುವಂತೆಯೇ ಅತ್ತ ಹಾವೇರಿಯಲ್ಲಿ ಇಲಿ ಜ್ವರಕ್ಕೆ ತುತ್ತಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಹೌದು.. ನಿನ್ನೆಯಷ್ಟೇ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಕಾಣಿಸಿಕೊಂಡಿದ್ದು ಪತ್ತೆಯಾಗಿತ್ತು. ಈಗ ಹಾವೇರಿ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಮೊದಲ ಬಲಿಯಾಗಿದೆ. ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಉಮೇಶ್(72) ಎಂಬ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 15 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಉಮೇಶ್ ಅವರು ಹಾವೇರಿ, ಮಂಗಳೂರು ಸೇರಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ರಕ್ತ ತಪಾಸಣೆ ನಡೆಸಿದಾಗ ಇಲಿ ಜ್ವರ ಇರುವುದು ದೃಢಪಟ್ಟಿತ್ತು. ಇಲಿ ಜ್ವರದ ಜೊತೆ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ವೃದ್ಧ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
 
			
 
                                 
                                 
                                