ಬೆಂಗಳೂರು : ಚುನಾವಣಾ ಆಯೋಗ ಇನ್ನೂ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕವನ್ನೇ ಘೋಷಣೆ ಮಾಡಿಲ್ಲ. ಅಷ್ಟರಲ್ಲಾಗಲೇ ಎಐಸಿಸಿ ರಾಜ್ಯದ 124 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಕಾಂಗ್ರೆಸ್ ರಿಲೀಸ್ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 61 ಹಾಲಿ ಶಾಸಕರು ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಲಿ ಐವರು ಶಾಸಕರಿಗೆ ಇನ್ನೂ ಟಿಕೆಟ್ ಘೋಷಣೆಯಾಗಬೇಕಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ವರುಣಾ ಕ್ಷೇತ್ರವನ್ನು ವಾಪಸ್ ತಮ್ಮ ತಂದೆ ಸಿದ್ದರಾಮಯ್ಯರಿಗೆ ಬಿಟ್ಟುಕೊಟ್ಟಿದ್ದಾರೆ. ಈ ಬಾರಿ ಭಾರೀ ಕುತೂಹಲ ಮೂಡಿಸಿದ್ದ ಕೋಲಾರ ಹಾಗೂ ಬಾದಾಮಿ ಕ್ಷೇತ್ರದಲ್ಲಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಎಐಸಿಸಿ ಇನ್ನೂ ತೆರೆ ಎಳೆದಿಲ್ಲ. ಕೋಲಾರ ಹಾಗೂ ಬಾದಾಮಿ ಕ್ಷೇತ್ರವನ್ನು ಎಐಸಿಸಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸಿಲ್ಲ.
ಎಐಸಿಸಿ ತನ್ನ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದು ಇದರಲ್ಲಿ ಎಂಟು ಮುಸ್ಲಿಂ ಅಭ್ಯರ್ಥಿಗಳಿಗೆ ಸ್ಥಾನ ಸಿಕ್ಕಂತಾಗಿದೆ. 32 ಲಿಂಗಾಯತ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ಇನ್ನುಳಿದಂತೆ ಐವರು ಬ್ರಾಹ್ಮಣ,ಐವರು ಕುರುಬ, 19 ಒಕ್ಕಲಿಗ, ತಲಾ ಒಂದು ಕ್ರೈಸ್ತ, ಬಂಟ, ಕುಂಬಾರ, ಮರಾಠಿ, ರಜಪೂತ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ಇದರ ಜೊತೆಯಲ್ಲಿ ಐವರು ರೆಡ್ಡಿ , ನಾಲ್ವರು ಈಡಿಗ, 22 ಪರಿಶಿಷ್ಟ ಜಾತಿ ಮತ್ತು 20 ಒಬಿಸಿ ಅಭ್ಯರ್ಥಿಗಳು ಕಾಂಗ್ರೆಸ್ನಿಂದ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.