ಹಿಜಾಬ್ ಗೊಂದಲದ ನಡುವೆಯೇ ಮೊದಲ ದಿನದ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದೆ. ಟೆನ್ಷನ್ ನಲ್ಲಿಂದ ಶಿಕ್ಷಣ ಇಲಾಖೆಗೆ ಕೆಲ ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಯರಿಂದ ಶಾಕ್ ಎದುರಾಗಿತ್ತು. ಆದ್ರೆ, ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿ ಬಂದಿದ್ದವರು, ಭವಿಷ್ಯವೇ ಮುಖ್ಯ ಅಂತ ಹಿಜಾಬ್ ನ ಬದಿಗಿಟ್ಟು ಪರೀಕ್ಷೆಗೆ ಹಾಜರಾಗಿದ್ರು.
ಕೇವಲ ಪರೀಕ್ಷಾ ಕೇಂದ್ರಕ್ಕೆ ಮಾತ್ರ ಸೀಮಿತವಾದ ಹಿಜಾಬ್ !
ಹಿಜಾಬ್ ಸಂಘರ್ಷ ಆರಂಭವಾಗಿದ್ದೇ ಕರಾವಳಿ ಭಾಗದಲ್ಲಿ. 6 ಜನ ಪಿಯು ವಿದ್ಯಾರ್ಥಿನಿಯರಿಂದ ಹಬ್ಬಿದ ಜ್ವಾಲೆ ರಾಜ್ಯದೆಲ್ಲೆಡೆ ಪಸರಿಸಿತ್ತು. SSLC ಪರೀಕ್ಷೆ ವೇಳೆಯೂ ಅಲ್ಲಲ್ಲಿ ಹಿಜಾಬ್ ಗಲಾಟೆ ಸದ್ದು ಮಾಡ್ತು. ಅದ್ರಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಪರೀಕ್ಷಾ ಕೇಂದ್ರಗಳವರೆಗೆ ಮಾತ್ರ ಹಿಜಾಬ್ ಸೀಮಿತವಾಗಿತ್ತು. SSLC ಪರೀಕ್ಷೆ ಬಳಿಕ ಶಿಕ್ಷಣ ಇಲಾಖೆಗೆ ದ್ವಿತೀಯ ಪಿಯುಸಿ ಪರೀಕ್ಷೆಯದ್ದೇ ಟೆನ್ಷನ್ ಹೆಚ್ಚಾಗಿತ್ತು. ಯಾಕಂದ್ರೆ ಸಮವಸ್ತ್ರ ಕಿಡಿ ಶುರುವಾಗಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ. ಹೀಗಾಗಿ ಪರೀಕ್ಷಾ ಕೇಂದ್ರದ ಬಳಿ ಖಾಕಿ ಕಟ್ಟೆಚ್ಚರ ವಹಿಸಿತ್ತು. ಯಾವುದೇ ಅಹಿತಕರ ಘಟನೆ ನಡರಯದಂತೆ ಪರೀಕ್ಷಾ ಕೇಂದ್ರದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. 200 ಮೀಟರ್ ನಿಷೇದಾಜ್ಞ ಮತ್ತು ಪರೀಕ್ಷಾ ಕೇಂದ್ರದ ಬಳಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.
ಯಾವುದೇ ಕಾರಣದಿಂದ ಪರೀಕ್ಷೆಗೆ ಗೈರಾದರೂ ಮರು ಪರೀಕ್ಷೆ !
ಇಂದಿನಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಮೇ 18ರವರೆಗೆ ನಡೆಯಲಿದೆ. ಈ ಬಾರೀ ಒಟ್ಟು 6,84,255 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದರು. ರಾಜ್ಯದ ಒಟ್ಟು 1,076 ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಮೊದಲ ದಿನದ ತರ್ಕಶಾಸ್ತ್ರಕ್ಕೆ 621 ಹಾಗೂ ವ್ಯವಹಾರ ಅಧ್ಯಯನ ಪರೀಕ್ಷೆಗೆ 2,35,498 ಗಳು ನೊಂದಣಿ ಮಾಡಿಕೊಂಡಿದ್ದರು. ತರ್ಕಶಾಸ್ತ್ರ 68 ವಿದ್ಯಾರ್ಥಿಗಳು ಗೈರಾದರೆ, 552 ವಿದ್ಯಾರ್ಥಿಗಳು ಹಾಜರಿಯಾಗಿದ್ದರು. ಇನ್ನು ಬ್ಯುಸಿನೆಸ್ ಸ್ಟಡೀಸ್ ವಿಷಯಕ್ಕೆ 11311 ಗೈರಾದರೆ 227453 ವಿದ್ಯಾರ್ಥಿಗಳು ಹಾಜರಾಗಿದ್ದರು. ಹಿಜಾಬ್ ಆಗಿರಬಹುದು ಅಥವಾ ಇತರೆ ಯಾವುದೇ ಕಾರಣದಿಂದ ಮುಖ್ಯ ಪರೀಕ್ಷೆಗೆ ಗೈರಾದವರಿಗೆ ಪೂರಕ ಪರೀಕ್ಷೆ ನಡೆಸುವುದಾಗಿ ಪಿಯು ಮಂಡಳಿಯ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.
ಇನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಬಳಿ ಹಿಜಾಬ್ ಧರಿಸಿಕೊಂಡು ಬಂದ ದೃಶ್ಯಗಳು ಸಾಮಾನ್ಯವಾಗಿತ್ತು. ಆದ್ರೆ, ಇವು ಕೇವಲ ಪರೀಕ್ಷಾ ಕೇಂದ್ರಕ್ಕೆ ಮಾತ್ರ ಸೀಮಿತವಾಗಿತ್ತು. ಪರೀಕ್ಷಾ ಕೊಠಡಿಯೊಳಗೆ ಹೋಗುವ ಮುನ್ನ ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಕಳಚಿಟ್ಟು ಭವಿಷ್ಯದ ದೃಷ್ಟಿಯಿಂದ ಪರೀಕ್ಷೆಯೇ ಮುಖ್ಯ ಅಂತ ಇಂದು ಎಕ್ಸಾಂಗೆ ಹಾಜರಾಗಿದ್ದರು. ಬೆಂಗಳೂರಿನಲ್ಲಿ ಯಾವುದೇ ರೀತಿಯ ಗಲಾಟೆ, ಸಂಘರ್ಷಗಳು ಇಂದಿನ ಪರೀಕ್ಷೆಯಲ್ಲಿ ಕಂಡು ಬಂದಿಲ್ಲ. ಹಿಜಾಬ್ ಬದಿಗಿಟ್ಟು ವಿದ್ಯಾರ್ಥಿನಿಯರು ಅಗ್ನಿ ಪರೀಕ್ಷೆಗೆ ಧುಮುಕಿದರು.
ಒಟ್ನಲ್ಲಿ SSLC ಪರೀಕ್ಷೆಯಂತೆಯೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪಿಯು ಪರೀಕ್ಷೆಗೆ ಹಿಜಾಬ್ ಸಮಸ್ಯೆಯಾಯ್ತು. ಬೆಂಗಳೂರಿನಲ್ಲಿ ಕೇವಲ ಪರೀಕ್ಷಾ ಕೇಂದ್ರದವರೆಗೆ ಮಾತ್ರ ಹಿಜಾಬ್ ಸೀಮಿತವಾಗಿದ್ದು, ಕೊಠಡಿಯೊಳಗೆ ಪ್ರವೇಶಿಸುವಾಗ ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ. ಧರ್ಮಕ್ಕಿಂತ ಭವಿಷ್ಯ ಹಾಗೂ ಪರೀಕ್ಷೆಯೇ ಮುಖ್ಯ ಅಂತ ತೋರಿಸಿದ್ದಾರೆ. ಆದ್ರೆ, ಬಾಕಿ ಉಳಿದ ಪರೀಕ್ಷೆಗೆ ಹೇಗೆ ನಡೆಯಲಿವೆ ಅನ್ನೊ ಟೆನ್ಷನ್ ಶಿಕ್ಷಣ ಇಲಾಖೆಯನ್ನ ಕಾಡ್ತಿದೆ.