ಗುಜರಾತ್ ರಾಜ್ಯದ ಅಹಮದಾಬಾದ್ ನಗರದ 10 ಅಂತಸ್ತಿನ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಭಾನುವಾರ (ಜು.30) ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 125 ರೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಸಾಹಿಬಾಗ್ ಪ್ರದೇಶದಲ್ಲಿರುವ ‘ರಾಜಸ್ಥಾನ ಆಸ್ಪತ್ರೆ’ಯ ನೆಲಮಾಳಿಗೆಯಲ್ಲಿ ಬೆಳಗಿನ ಜಾವ 4.30ರ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಯಾವುದೇ ಅನಾಹುತಗಳು ವರದಿಯಾಗಿಲ್ಲ.
“ಆಸ್ಪತ್ರೆಯಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು, ನೆಲ ಮಾಳಿಗೆಯಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ಹಲವಾರು ವಸ್ತುಗಳನ್ನು ಇಟ್ಟಿದ್ದರು. ಅವುಗಳಿಗೆ ಬೆಂಕಿ ತಗುಲಿದ ಪರಿಣಾಮ ಆಸ್ಪತ್ರೆಯ ಸುತ್ತಮುತ್ತ ಬೆಂಕಿಯು ಹರಡಿದೆ. ಇದರಿಂದ ದಟ್ಟ ಹೊಗೆ ಆವರಿಸಿದೆ” ಎಂದು ಗುಜರಾತ್ ಅಹಮದಾಬಾದ್ನ ಸಾಹಿಬಾಗ್ ಪೊಲೀಸ್ ಠಾಣೆಯ ಅಧಿಕಾರಿ ಎಂ. ಡಿ. ಚಾಂಪವತ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಾಹನಗಳಲ್ಲಿ ಸಿಸಿಟಿವಿ | ಪಿಐಎಲ್ ನಿರಾಕರಿಸಿದ ಸುಪ್ರೀಂ ಕೋರ್ಟ್
“ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಆಸ್ಪತ್ರೆಯ ನೆಲಮಾಳಿಗೆಯಿಂದ ದಟ್ಟ ಹೊಗೆ ಹೊರಹೊಮ್ಮುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ 125 ರೋಗಿಗಳನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ” ಎಂದು ಗುಜರಾತ್ ಅಗ್ನಿ ಶಾಮಕ ದಳದ ಅಧಿಕಾರಿ ಜಯೇಶ್ ಖಾಡಿಯಾ ತಿಳಿಸಿದರು.
ಗುಜರಾತ್ ರಾಜ್ಯದ ಒಂದು ಸೇವಾ ಸಂಸ್ಥೆಯು ಆಸ್ಪತ್ರೆಯನ್ನು ನಿರ್ವಹಿಸುತ್ತಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.