ಕೇರಳದಲ್ಲಿ ಬಿಜೆಪಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಳಿ ಇದ್ದಂತಹ ಒಂದು ಸೀಟನ್ನು ಕೂಡಾ ಉಳಿಸಿಕೊಳ್ಳಲು ಸಾಧ್ಯವಾಗದೇ ತೀವ್ರವಾದ ಮುಖಭಂಗ ಅನುಭವಿಸಿದ ಬಿಜೆಪಿ, ಈಗ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿದೆ. ಅದು ಕೂಡಾ, ಕೇರಳ ಬಿಜೆಪಿ ರಾಜ್ಯಾಧ್ಯಕ್ಷರೇ ಅಕ್ರಮ ಎಸಗಿರುವ ಕುರಿತು ಆರೋಪ ಕೇಳಿ ಬಂದಿರುವುದು, ಪಕ್ಷಕ್ಕೆ ನುಂಗಲಾಗದ ತುಪ್ಪವಾಗಿ ಪರಿಣಮಿಸಿದೆ.
ಕರ್ನಾಟಕ-ಕೇರಳದ ಗಡಿ ಜಿಲ್ಲೆಯಾಗಿರುವ ಕಾಸರಗೋಡಿನ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ತಮ್ಮ ಎದುರಾಳಿ ಅಭ್ಯರ್ಥಿಗೆ ಆಮೀಷವೊಡ್ಡಿ ಚುನಾವಣೆಯಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುರೇಂದ್ರನ್ ಅವರಿಗೆ ಕ್ಷೇತ್ರದಲ್ಲಿ ಉಂಟಾದ ಸೋಲಿನ ಮೇಲೆ ಈಗ ಬರೆ ಎಳೆದಂತಾಗಿದೆ.
ಸಿಪಿಐ(ಎಂ) ನಾಯಕರಾದ ವಿ ವಿ ರಮೇಶನ್ ಅವರು, ಸುರೇಂದ್ರನ್ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್ ಅವರ ಬಳಿ ಅನುಮತಿ ಕೋರಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಮ್ಯಾಜಿಸ್ಟ್ರೇಟ್, ಕಾಸರಗೋಡು ಪೊಲೀಸರಿಗೆ ಎಫ್ಐಆರ್ ದಾಖಲಿಸುವಂತೆ ಸೂಚಿಸಿತ್ತು. ಹೀಗಾಗಿ ಪೊಲೀಸರು, IPC section 171 (B) ಮತ್ತು 171 (E) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಮೇಶನ್ ಅವರು ಕೂಡಾ ಮಂಜೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಯುಡಿಎಫ್ ಅಭ್ಯರ್ಥಿ ಮುಸ್ಲಿಂ ಲೀಗ್’ನ ಎ ಕೆ ಎಂ ಅಶ್ರಫ್ ಅವರು ಈ ಕ್ಷೇತ್ರವನ್ನು ಗೆದ್ದುಕೊಂಡಿದ್ದರು.
‘ಲಂಚ’ ಪ್ರಕರಣ:
ಕಳೆದ ಶನಿವಾರದಂದು, ಬಹುಜನ ಸಮಾಜವಾದಿ ಪಕ್ಷದ ನಾಯಕರಾದ ಕೆ ಸುಂದರ ಅವರು, ಚುನಾವಣೆಯಿಂದ ಹಿಂದೆ ಸರಿಯಲು ತಮಗೆ ಬಿಜೆಪಿ ನಾಯಕರು ಆಮೀಷವೊಡ್ಡಿದ್ದ ಕುರಿತು ಬಹಿರಂಗಪಡಿಸಿದ್ದರು. ಸ್ಪರ್ಧೆಯಿಂದ ಹಿಂದೆ ಸರಿದರೆ ಬಿಜೆಪಿಯವರು 2.5 ಲಕ್ಷ ಮತ್ತು ಸ್ಮಾರ್ಟ್’ಪೋನ್ ನೀಡುವುದಾಗಿ ಆಮೀಷವೊಡ್ಡಿದ್ದರು. ಇದರೊಂದಿಗೆ, ೨೦೧೬ರಲ್ಲಿ ಒಂದು ವೈನ್ ಪಾರ್ಲರ್ ಮತ್ತು ಕರ್ನಾಟಕದಲ್ಲಿ ಒಂದು ಮನೆಯನ್ನು ಕೊಡಿಸುವ ಕುರಿತಾಗಿಯೂ ಹೇಳಿದ್ದರು, ಎಂದು ಸುಂದರ ಮಾಹಿತಿ ನೀಡಿದ್ದರು.
ಇನ್ನು ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ನನ್ನನ್ನು ಕೆಲವು ಸ್ಥಳಿಯ ಬಿಜೆಪಿ ನಾಯಕರು ಅಪಹರಿಸಿ ಬಲವಂತವಾಗಿ ನಾಮಪತ್ರ ಹಿಂದಕ್ಕೆ ಪಡೆಯುವಂತೆ ಮಾಡಿದ್ದರು ಎಂದು ದೂರಿದ್ದರು.
ನಾಮಪತ್ರ ಹಿಂಪಡೆದ ಮೇಲೆ ಸುಂದರ ಅವರು ಬಿಜೆಪಿ ಸೇರಿದ್ದರು. ನಾಮಪತ್ರ ಹಿಂಪಡೆದ ದಿನವೇ ರಾಜ್ಯ ಬಿಜೆಪಿ ಯುವ ಮೋರ್ಚಾ ಕೋಶಾಧಿಕಾರಿಯಾದ ಸುನಿಲ್ ನಾಯ್ಕ್ ಅವರು ಸುಂದರ ಅವರ ಕಾಸರಗೋಡಿನ ಮನೆಗೆ ಭೇಟಿ ನೀಡಿದ್ದರು. ಸುಮದರ ಅವರು ನಾಮಪತ್ರವನ್ನು ಹಿಂಪಡೆಯುವ ಸುದ್ದಿಯನ್ನು ತಮ್ಮ ಫೇಸ್ಬುಕ್ ಖಾತೆಯ ಮೂಲಕ ಸುನಿಲ್ ಅವರೇ ಬಹಿರಂಗಪಡಿಸಿದ್ದರು.
ಅಚ್ಚರಿಯ ವಿಚಾರವೇನೆಂದರೆ, ಈ ಸುನಿಲ್ ನಾಯ್ಕ್, ವಿಧಾನಸಭಾ ಚುನಾವಣೆಯ ಮೂರು ದಿನಗಳ ಹಿಂದೆ ನಡೆದ ಹಯವೇ ದರೋಡೆಯಲ್ಲಿ ಭಾಗವಹಿಸಿದ್ದರು ಎಂಬ ಕುರಿತಾಗಿಯೂ ಸಾಕ್ಷ್ಯಾಧಾರಗಳಿವೆ. ಮೂರುವರೆ ಕೋಟಿಯಷ್ಟು ಹಣವನ್ನು ಹೈವೇಯಲ್ಲಿ ದರೋಡೆ ನಡೆಸಿದ ಪ್ರಕರಣ ಇದಾಗಿದೆ. ಈ ಕುರಿತಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದ ಸುನಿಲ್, RSS ಕಾರ್ಯಕರ್ತರಾಗಿರುವ ಎ ಕೆ ಧರ್ಮರಾಜನ್ ಎಂಬವರಿಗೆ ರಿಯಲ್ ಎಸ್ಟೇಟ್’ನಲ್ಲಿ ಬಂಡವಾಳ ಹೂಡಲು ರೂ. 25 ಲಕ್ಷ ನೀಡಿರುವುದಾಗಿ ಹೇಳಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ, ಈಗ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಕುರಿತು ಆರೋಪ ಕೇಳಿಬರುತ್ತಿರುವುದು, ಕೇರಳದಲ್ಲಿ ತನ್ನ ಪಾದವನ್ನು ಗಟ್ಟಿಯಾಗಿ ಊರಲು ಪ್ರಯತ್ನಿಸುತ್ತಿದ್ದ ಬಿಜೆಪಿಗೆ ಹಿನ್ನಡೆ ಉಂಟುಮಾಡಿದೆ. ಇದರೊಂದಿಗೆ, ಶಬರಿಮಲೆ ಹೊರಾಟ, ಹಿಂದುತ್ವ ಪರ ಹೋರಾಟಗಳಿಂದ ಕೇರಳದಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿದ್ದ ಸುರೇಂದ್ರನ್ ಅವರೇ ಚುನಾವಣೆಯಲ್ಲಿ ಗೆಲ್ಲಲು ಅಡ್ಡದಾರಿ ಹಿಡಿಯಬೇಕಾದ ಪರಿಸ್ಥಿತಿ ಎದುರಾದರೆ, ಉಳಿದ ನಾಯಕರ ಸ್ಥಿತಿ ಹೇಗಿರಬಹುದು ಎಂಬುದು ಕೂಡಾ ಸ್ಪಷ್ಟವಾಗಿ ಗೋಚರಿಸುತ್ತಿದೆ.