ಬೆಂಗಳೂರು: ಬಾಣಸವಾಡಿಯ(Banaswadi) ಖಾಲಿ ಜಾಗದಲ್ಲಿ ಪತ್ತೆಯಾದ ನಾಯಿ, ಬೆಕ್ಕುಗಳು ಮೃತದೇಹ ವಿಚಾರವಾಗಿ ಪೊಲೀಸರು ಎಫ್ಐಆರ್(FIR) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಬಾಣಸವಾಡಿಯ ಸುಬ್ಬಣ್ಣಪಾಳ್ಯದ ಖಾಲಿ ಜಾಗದಲ್ಲಿ ಇತ್ತೀಚೆಗೆ ನಾಯಿಗಳು, ಬೆಕ್ಕುಗಳ ಮೃತದೇಹ ಪತ್ತೆಯಾಗುತ್ತಿವೆ ಎಂದು ಸ್ಥಳೀಯರು ಮತ್ತು ಪ್ರಾಣಿ ದಯಾ ಸಂಘದವರು ಆರೋಪ ಮಾಡಿದ್ದರು. ನಿನ್ನೆಯು ಕೂಡ ಅದೇ ಜಾಗದಲ್ಲಿ ಒಂದು ನಾಯಿ ಮತ್ತು ಮರಕ್ಕೆ ಕಟ್ಟಿದ್ದಂತೆ ಒಂದು ಬೆಕ್ಕಿನ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಪ್ರಾಣಿ ದಯಾ ಸಂಘದವರು ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಘಟನೆ ಬಗ್ಗೆ ದೂರಿನ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 325(ಉದ್ದೇಶಪೂರ್ವಕವಾಗಿ ಪ್ರಾಣಿಗಳ ಮೇಲೆ ಕ್ರೌರ್ಯವೆಸಗುವುದು) ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಸದ್ಯ ತನಿಖೆ ವೇಳೆ ಸ್ಥಳದಲ್ಲಿ ಒಂದು ನಾಯಿ, ಒಂದು ಬೆಕ್ಕಿನ ಮೃತದೇಹ ಪತ್ತೆಯಾಗಿದ್ದು, ಪಶು ವೈದ್ಯಕೀಯ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.






