ಶಿಕ್ಷಣ ಅನ್ನುವುದು ಈಗ ದುಬಾರಿಯಾಗಿದೆ. ಬಡಮಕ್ಕಳಿಗೆ ಇಷ್ಟು ದೊಡ್ಡ ಮೊತ್ತ ತುಂಬಿ ಶಿಕ್ಷಣ ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ರಾಜ್ಯ ಸರಕಾರ ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ದೊರೆಯಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಆರ್ ಟಿಇ (RTE) ನಿಯಮ ಜಾರಿಗೆ ತಂದಿದೆ. ಆದರೆ ಖಾಸಗಿ ಶಾಲೆಗಳು ಬಡ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳದೇ ಇರಲು ಇನ್ನಿಲ್ಲದ ಅಡ್ಡದಾರಿಗಳನ್ನು ಹುಡುಕಿ ಸಿಕ್ಕಿ ಬೀಳುತ್ತಿವೆ.
ಹಾಗೆ ಅಡ್ಡದಾರಿ ಹಿಡಿದ ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ದಾಖಲೆ ಸಮೇತ ಸಿಕ್ಕಿಬಿದ್ದಿದ್ದು, ಶಿಕ್ಷಣ ಇಲಾಖೆ ಈ ಸಂಸ್ಥೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡ್ತೀವಿ. ಬಡಮಕ್ಕಳ ಪರ ಇದ್ದೀವಿ. ನಮ್ಮ ಲಾಭರಹಿತ ಸಂಸ್ಥೆ ಎನ್ ಜಿಒ ಆಗಿದೆ. ಸೇವೆಯೇ ನಮ್ಮ ಧರ್ಮ ಎಂದು ಬೊಬ್ಬೆ ಹೊಡೆದುಕೊಳ್ಳುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೇ ಈ ರೀತಿ ಶಿಕ್ಷಣ ಇಲಾಖೆಗೆ, ಸಾರ್ವಜನಿಕರಿಗೆ ವಂಚಿಸಲು ಹೋಗಿ ರೆಡ್ ಹ್ಯಾಂಡಾಗಿ ಸಿಕ್ಕಬಿದ್ದಿದೆ.
ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ ಬೆಂಗಳೂರಿನ ಪೊಲೀಸರು ಈ ಶಿಕ್ಷಣ ಸಂಸ್ಥೆಯ 5 ಶಾಲೆಗಳ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ. ಅಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಾವುದು? ಅವರು ಮಾಡಿರುವ ವಂಚನೆ ಏನು ಎಂಬುದು ವಿವರವಾಗಿ ನೀಡಿದ್ದೇವೆ ನೋಡಿ.
ನ್ಯಾಷನಲ್ ಪಬ್ಲಿಕ್ ಸ್ಕೂಲ್ (National Public School) ಟ್ರಸ್ಟ್ ನಡೆಸಿಕೊಂಡು ಬರುತ್ತಿರುವ ಬೆಂಗಳೂರಿನ ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಬಳಿ ಇರುವ ನ್ಯಾಷನಲ್ ಪಬ್ಲಿಕ್ ಶಾಲೆ ಆಡಳಿತ ಮಂಡಳಿ ನಕಲಿ ಅಲ್ಪ ಸಂಖ್ಯಾತ ಘೋಷಣ ಪ್ರಮಾಣ ಪತ್ರವನ್ನು ರಾಷ್ಟ್ರೀಯ ಉರ್ದು (Urdu) ಮತ್ತು ಇತರೆ ಅಲ್ಪ ಸಂಖ್ಯಾತ ನಿರ್ದೇಶನಾಲಯಕ್ಕೆ ತೋರಿಸಿ ಸಿಬಿಎಸ್ ಇ (CBSE) ಮತ್ತು ಸಿಐಎಸ್ ಸಿಇ ಶಿಕ್ಷಣಕ್ಕೆ ಅನುಮತಿ ಪಡೆದು ರಾಜ್ಯದ ಆರ್ ಟಿಇ ವಿದ್ಯಾರ್ಥಿಗಳಿಗೆ ವಿನಾಯಿತಿ ಪಡೆಯಲು ಯತ್ನಿಸಿ ಸಿಕ್ಕಿಬಿದ್ದಿದೆ.
ಶಿಕ್ಷಣ ಕಾಯ್ದೆ ಹಕ್ಕು 2009 ಸೆಕ್ಷನ್-2 (ಎನ್) (4) ಅನ್ವಯ ನ್ಯಾಷನಲ್ ಪಬ್ಲೀಕ್ ಶಾಲೆಯು ಅನುದಾನ ರಹಿತ, ಅಲ್ಪ ಸಂಖ್ಯಾತವಲ್ಲದ ಶಿಕ್ಷಣ ಕಾಯ್ದೆ 2009ಕ್ಕೆ ಅನ್ವಯವಾಗುತ್ತದೆ. ಆದರೆ ಶಾಲೆಯ ಆಡಳಿತ ಮಂಡಳಿ ಈ ನಿಯಮಗಳನ್ನು ಉಲ್ಲಂಘಿಸಿ ಆರ್ ಟಿಇ ಸೆಕ್ಷನ್ (12) (1) (ಸಿ)ಯಿಂದ ವಿನಾಯಿತಿ ಪಡೆಯಲು ಅಡ್ಡದಾರಿ ತುಳಿದಿದೆ. ಈ ಮೂಲಕ ಹಿಂದುಳಿದ ಮಕ್ಕಳಿಗೆ ಆರ್ ಟಿಇ ಕಾಯ್ದೆಯಡಿ ಪ್ರವೇಶ ನಿರಾಕರಿಸಿರುವುದು ದೃಢಪಟ್ಟಿದೆ.
ಆರ್ ಟಿಇ ಸೆಕ್ಷನ್ (12) (1) (ಸಿ) ನಿಯಮ ಏನು ಹೇಳುತ್ತದೆ?
ಆರ್ ಟಿಇ ಸೆಕ್ಷನ್ (12) (1) (ಸಿ) ನಿಯಮದ ಪ್ರಕಾರ ಖಾಸಗಿ ಶಾಲೆಗಳು ಹಿಂದುಳಿದ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಹೊಂದಿದ್ದು, ಈ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.1ರಷ್ಟು ಬಡ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಅಲ್ಲದೇ ಮಕ್ಕಳ ಶಿಕ್ಷಣ ಹಕ್ಕು ವರದಿ ಪ್ರಕಾರ ಬಡ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಅವಕಾಶ ನೀಡುವುದು ಮಾತ್ರವಲ್ಲ, ಅವರನ್ನು ಇತರೆ ವಿದ್ಯಾರ್ಥಿಗಳಂತೆ ಸಮಾನ ರೀತಿಯಲ್ಲಿ ಪರಿಗಣಿಸಬೇಕು. ಅಲ್ಲದೇ ಆತನ ಶಿಕ್ಷಣ ಅವಧಿ ಮುಗಿಯುವವರೆಗೂ ಉಚಿತ ಶಿಕ್ಷಣ ನೀಡಬೇಕು.
ಇಷ್ಟಕ್ಕೂ ಸಿಬಿಎಸ್ ಇ ತರಗತಿ ನಡೆಯಲು ಅನುಮತಿ ಪಡೆಯಲು ನಕಲಿ ದಾಖಲೆ ನೀಡಿ ಪ್ರಯತ್ನಿಸಿರುವುದು ಏಕೆ ಗೊತೆ? ಆರ್ ಟಿಇ ನಿಯಮ ಇರುವುದು ರಾಜ್ಯದಲ್ಲಿ ಮಾತ್ರ. ರಾಜ್ಯ ಸರಕಾರ ಈ ನಿಯಮ ಜಾರಿಗೆ ತಂದಿದ್ದು, ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರದಿಂದ ಅಲ್ಪ ಸಂಖ್ಯಾತ ಪ್ರಮಾಣ ಪತ್ರ ಪಡೆದರೆ ಆರ್ ಟಿಇ ವ್ಯಾಪ್ತಿಯಿಂದ ಹೊರಗೆ ಬರಬಹದು. ಮತ್ತು ಈ ಸೆಕ್ಷನ್ ಅಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣ ತಪ್ಪಿಸಿ ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಬಹುದು ಎಂಬುದು ಈ ಸಂಸ್ಥೆಯ ಯೋಜನೆ ಆಗಿದೆ.
ಬೆಂಗಳೂರಿನ ಬಸವೇಶ್ವರ ನಗರ, ವಿಜಯನಗರ ಸೇರಿದಂತೆ ಹಲವು ಪ್ರತಿಷ್ಠಿತ ಬಡಾವಣೆಗಳಲ್ಲಿ ತಮ್ಮ ಶಾಲೆಗಳ ಶಾಖೆಗಳನ್ನು ಹೊಂದಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಕ್ಕಳನ್ನು ಸುಲಿಗೆ ಮಾಡುವುದು ಮಾತ್ರವಲ್ಲ, ಶಿಕ್ಷಣ ಇಲಾಖೆಯನ್ನೂ ವಂಚಿಸಿರುವುದು ಆಘಾತಕಾರಿ ವಿಷಯವಾಗಿದೆ. ಈ ಸಂಸ್ಥೆ ಶಿಕ್ಷಣ ಇಲಾಖೆಯನ್ನು ವಂಚಿಸಿರುವುದು ಒಂದು ಪ್ರಕರಣವಾದರೆ, ಈ ರೀತಿ ಇನ್ನೆಷ್ಟು ವಂಚನೆ ಮಾಡುತ್ತಿದೆಯೋ ಮಕ್ಕಳು ಹಾಗೂ ಪೋಷಕರನ್ನು ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ವಂಚಿಸುತ್ತಿದೆಯೋ ಎಂಬುದರ ಬಗ್ಗೆ ಇಲಾಖೆ ಹಾಗೂ ಪೊಲೀಸರು ಗಮನ ಹರಿಸಬೇಕಾಗಿದೆ.
ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಗಿರುವುದರಿಂದ ಪೊಲೀಸರು ಈ ತನಿಖೆಯ ಹಾದಿಯನ್ನು ಎಲ್ಲಿ ತಪ್ಪಿಸುತ್ತಾರೋ ಅಥವಾ ತನಿಖೆ ನಡೆಸದೇ ದೂರು ಧೂಳು ತಿನ್ನುವಂತೆ ಮಾಡುತ್ತಾರೋ ಎಂಬ ಅನುಮಾನಗಳು ಕೂಡ ಪೋಷಕರನ್ನು ಕಾಡತೊಡಗಿದೆ. ಆದ್ದರಿಂದ ಈ ರೀತಿಯ ಶಿಕ್ಷಣ ಸಂಸ್ಥೆಯ ಮೇಲೆ ಶೀಘ್ರ ತನಿಖೆ ನಡೆಸಿ ಶಿಕ್ಷೆ ಕೊಡಿಸಿದರೆ ಬೆಂಗಳೂರು ಮಾತ್ರವಲ್ಲ, ರಾಜ್ಯದ ಇತರೆ ಖಾಸಗಿ ಶಾಲೆಗಳಿಗೂ ಭಯ ಬರುತ್ತದೆ. ಹಾಗೂ ಇದೇ ರೀತಿ ಅಡ್ಡದಾರಿ ತುಳಿಯುವ ಪ್ರಯತ್ನ ಮಾಡದೇ ಉತ್ತಮ ಶಿಕ್ಷಣ ನೀಡುವತ್ತ ಗಮನಹರಿಸುತ್ತವೆ ಎಂಬುದು `ಪ್ರತಿಧ್ವನಿʼಯ ಕಾಳಜಿ.