ನವದೆಹಲಿ : ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ರೈಲು ಪ್ರಯಾಣದ ವೇಳೆ ಜೋರಾಗಿ ಮೊಬೈಲ್ (Mobile)ನಲ್ಲಿ ಮಾತನಾಡುವುದು ಅಥವಾ ಸ್ಪೀಕರ್ ಆನ್ ಮಾಡಿ ಹಾಡು, ವಿಡಿಯೋಗಳನ್ನು ವೀಕ್ಷಿಸುವುದು ಇನ್ನು ಮುಂದೆ ಪ್ರಯಾಣಿಕರಿಗೆ ದುಬಾರಿಯಾಗಲಿದೆ. ಇಂತಹ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ₹1,000 ವರೆಗೆ ದಂಡ, ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ರೈಲ್ವೆ ನಿಯಮಗಳಲ್ಲಿ ಅವಕಾಶವಿದೆ ಎಂದು ದಕ್ಷಿಣ ರೈಲ್ವೆ ಇಲಾಖೆ (Railway Department) ಎಚ್ಚರಿಕೆ ನೀಡಿದೆ.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ರೈಲ್ವೆ ಕಾಯ್ದೆಯ ಸೆಕ್ಷನ್ 145(2)ರ ಅಡಿಯಲ್ಲಿ ಸಾರ್ವಜನಿಕರಿಗೆ ಉಪದ್ರವ ಉಂಟುಮಾಡುವುದು, ಅಸಭ್ಯ ವರ್ತನೆ ತೋರುವುದು ಅಥವಾ ಆಕ್ಷೇಪಾರ್ಹ ಭಾಷೆ ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯ್ದೆಯನ್ವಯ ತಪ್ಪಿತಸ್ಥ ಪ್ರಯಾಣಿಕರನ್ನು ರೈಲಿನಿಂದ ಕೆಳಗಿಳಿಸುವುದರ ಜೊತೆಗೆ ಅವರ ಟಿಕೆಟ್ ಅಥವಾ ಪಾಸ್ ಮುಟ್ಟುಗೋಲು ಹಾಕಿಕೊಂಡು ₹1,000 ದಂಡ ವಿಧಿಸಬಹುದು.
ಟಿಕೆಟ್ ಪರೀಕ್ಷಕ (TTE) ಅಥವಾ ಅದಕ್ಕಿಂತ ಮೇಲಿನ ದರ್ಜೆಯ ವಾಣಿಜ್ಯ ಸಿಬ್ಬಂದಿಗೆ ಈ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ರೈಲ್ವೆ ಸಿಬ್ಬಂದಿ ಸೂಚನೆ ನೀಡಿದ ನಂತರವೂ ಉಪದ್ರವ ಮುಂದುವರಿಸಿದರೆ, ಅಂತಹವರಿಗೆ ಆರು ತಿಂಗಳವರೆಗೆ ಸಾದಾ ಜೈಲು ಶಿಕ್ಷೆ, ₹5,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ಜಾಗೃತಿ ಮೂಡಿಸಲು ರೈಲ್ವೆ ಸೂಚನೆ
ಅಕ್ಟೋಬರ್ 16 ರಂದು ಹೊರಡಿಸಲಾದ ಈ ನಿರ್ದೇಶನದಲ್ಲಿ, ಎಲ್ಲಾ ವಿಭಾಗಗಳು ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆಗಳ (ಮೈಕ್) ಮೂಲಕ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ನಿರಂತರ ಘೋಷಣೆಗಳನ್ನು ಹೊರಡಿಸುವಂತೆ ಸೂಚಿಸಲಾಗಿದೆ. “ರೈಲು ಪ್ರಯಾಣದ ವೇಳೆ ಹಾಗೂ ರೈಲ್ವೆ ಆವರಣದಲ್ಲಿ ಸ್ಪೀಕರ್ ಮೂಲಕ ಸಂಗೀತ ಅಥವಾ ವಿಡಿಯೋ ವೀಕ್ಷಿಸುವುದನ್ನು ತಪ್ಪಿಸಿ, ಜೋರಾಗಿ ಮಾತನಾಡುವುದನ್ನು ನಿಲ್ಲಿಸಿ. ಇಯರ್ಫೋನ್ಗಳನ್ನು ಬಳಸಿ” ಎಂದು ಪ್ರಯಾಣಿಕರಿಗೆ ಸ್ಪಷ್ಟ ಸಂದೇಶ ರವಾನಿಸಲು ಸೂಚಿಸಲಾಗಿದ್ದು, ಈ ಕ್ರಮಗಳ ಅನುಷ್ಠಾನ ವರದಿಯನ್ನು ಅಕ್ಟೋಬರ್ 20ರ ಮಂಗಳವಾರದೊಳಗೆ ಸಲ್ಲಿಸಲು ಆದೇಶಿಸಲಾಗಿದೆ.
ಕಠಿಣ ಆದೇಶಕ್ಕೆ ಕಾರಣವೇನು?
ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾದಾಗಿನಿಂದ ರೈಲುಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಸ್ಪೀಕರ್ ಹಾಕಿ ವಿಡಿಯೋ ನೋಡುವುದು ಮತ್ತು ಹಾಡು ಕೇಳುವುದು ಹೆಚ್ಚಾಗಿದೆ. ಇದರಿಂದ ಸಹಪ್ರಯಾಣಿಕರ ನೆಮ್ಮದಿಗೆ ಭಂಗ ಉಂಟಾಗುತ್ತಿರುವುದನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಮುಖ್ಯವಾಗಿ ಹವಾನಿಯಂತ್ರಿತ (AC) ಬೋಗಿಗಳಲ್ಲಿ ದೀರ್ಘಕಾಲ ಜೋರಾಗಿ ಫೋನ್ನಲ್ಲಿ ಮಾತನಾಡುವುದು ಮತ್ತು ಕರ್ಕಶ ರಿಂಗ್ಟೋನ್ಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ಸತತ ದೂರುಗಳು ಬಂದಿದ್ದವು. ಪ್ರಯಾಣಿಕರ ನೆಮ್ಮದಿಯ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಅಸಮಾಧಾನ ತಪ್ಪಿಸಲು ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸಕ್ಕರೆ ಬಳಕೆಗೆ ನಿಷೇಧ: ಎಫ್ಎಸ್ಎಸ್ಎಐ ಪ್ರಸ್ತಾವನೆ






