
ನಾಯಿಯೊಂದನ್ನು ಹಿಡಿದುಕೊಂಡು ಅದರ ಪಾಲಕ ಗಾಳಿ ಸಂಚಾರಕ್ಕೆ ಹೊರಟಿರುತ್ತಾನೆ. ದಾರಿಹೋಕರೊಬ್ಬರು ನಾಯಿಯ ಸೌಂದರ್ಯಕ್ಕೆ ಆಕರ್ಷಿತರಾಗಿ “ನಾಯಿ ಎಷ್ಟು ಮುದ್ದಾಗಿದೆ, ಮುಟ್ಟ ಬಹುದಾ?” ಎಂದು ಕೇಳುತ್ತಾರೆ. ಅದಕ್ಕೆ ನಾಯಿಯ ಪಾಲಕ “ಮುಟ್ಟಿ” ಎನ್ನುತ್ತಾನೆ.ಆದರೆ ಆ ದಾರಿಹೋಕರು, “ನನಗೆ ಭಯ. ಕಚ್ಚಿಬಿಟ್ಟರೆ?” ಎಂದು ಹಿಂಜರಿಯುತ್ತಾರೆ.ಆ ನಾಯಿಯ ಪಾಲಕ “ಇಲ್ಲ. ಇದು ಬಹಳ ಸ್ನೇಹಶೀಲ ಪ್ರಾಣಿ. ಧೈರ್ಯವಾಗಿ ಮುಟ್ಟಿ ಮಾತಾಡಿಸಿ” ಎಂದು ಹೇಳುತ್ತಾನೆ. ಆದರೆ ಆ ದಾರಿಹೋಕರು ಅದನ್ನು ಮುಟ್ಟುವುದೂ ಇಲ್ಲ, ಅದರ ಹತ್ತಿರಕ್ಕೆ ಬರುವುದೂ ಇಲ್ಲ. ನಾಯಿಯನ್ನು ಹಾದು ಹೋಗುವ ಕಾರಣದಿಂದ “ದೂರ ಹಿಡಿದುಕೊಳ್ಳಿ. ನನಗೆ ಭಯ” ಎಂದು ಕೊಸರಾಡುತ್ತಾರೆ.
ನಾಯಿಯ ಪಾಲಕ ಆ ನಾಯಿ ಕಚ್ಚುವುದಿಲ್ಲ. ಸ್ನೇಹಶೀಲವಾದದ್ದು ಎಂದು ಎಷ್ಟೇ ಹೇಳಿದರೂ ಆ ದಾರಿಹೋಕರಿಗೆ ಧೈರ್ಯ ಬರುವುದಿಲ್ಲ. ನಾಯಿಯನ್ನು ಮುಟ್ಟುವುದಿಲ್ಲ. ಆ ನಾಯಿಯನ್ನು ದೂರದಿಂದಲೇ ನೋಡಿ, ಭಯದಿಂದಲೇ ಅದನ್ನು ಮುಟ್ಟುವ ಮೈದಡವುವ ಆಸೆಯನ್ನು ಹಾಗೆಯೇ ಅದುಮಿಟ್ಟುಕೊಂಡು ಹೊರಟುಹೋಗುತ್ತಾರೆ. ಇಲ್ಲಿ ಗಮನಿಸಬೇಕಾಗಿರುವ ವಿಷಯವೆಂದರೆ, ದಾರಿಹೋಕರಿಗೆ ನಾಯಿಯ ಮೇಲಿನ ಭಯದಿಂದಾಗಿ ಪಾಲಕನ ಮಾತಿನ ಮೇಲೆ ವಿಶ್ವಾಸ ಮೂಡುವುದಿಲ್ಲ. ಭಯವು ವಿಶ್ವಾಸವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತದೆ.

ದಾರಿಹೋಕರ ಹಿಂದಿನ ಅನುಭವವೋ ಅಥವಾ ಅನುಚಿತ ಭಯ (ಫೋಬಿಯಾ) ಇರಬಹುದು. ಒಟ್ಟಾರೆ ಒಳಮನಸ್ಸಿನ ಆಳದಲ್ಲಿ ಇರುವುದು ಭಯ. ಹಾಗಾಗಿ ಪಾಲಕರ ಮೇಲೆ ವಿಶ್ವಾಸವು ಮೂಡುತ್ತಿಲ್ಲ. ಆದರೆ ಆ ಭಯವನ್ನು ನೀಗಿಸುವುದೂ ಕೂಡಾ ವಿಶ್ವಾಸವೇ.ಆದರೆ ಭಯ ನೀಗಿಸಿ, ಆಸೆಯನ್ನು ಪೂರೈಸಿಕೊಳ್ಳಲು ಸಮಯ ಬೇಕಾಗುತ್ತದೆ.ಒಟ್ಟಾರೆ ವಿಶ್ವಾಸವೆನ್ನುವುದು ಭಯ ನಿವಾರಣೆಯ ಮತ್ತು ಆಸೆ ಪೂರೈಕೆಯ ಒಂದು ಭಾವುಕ ಸಾಧನ.

ವಿಶ್ವಾಸ ಎಂದರೇನು?:ವಿಶ್ವಾಸವೆನ್ನುವುದು ಏನೋ ಒಂದು ಒಳಿತಾಗುವುದು ಅಥವಾ ಕೇಡಾಗದು ಎಂಬ ಸಕಾರಾತ್ಮಕವಾದ ನಿರೀಕ್ಷೆ. ತಮ್ಮಲ್ಲಿರುವ ಮೆದುತನವನ್ನು ಅಥವಾ ಬಲಹೀನತೆಯನ್ನು ಯಾರಾದರೊಬ್ಬರು ದುರುಪಯೋಗಪಡಿಸಿಕೊಂಡು ಹಾನಿ ಮಾಡುವುದಿಲ್ಲ ಅಥವಾ ತೊಂದರೆಗೀಡು ಮಾಡುವುದಿಲ್ಲ ಎಂಬ ಖಚಿತತೆ. ಯಾರೋ ಒಬ್ಬ ವ್ಯಕ್ತಿ, ವಸ್ತು, ವಿಷಯ, ಸಿದ್ಧಾಂತ ಅಥವಾ ಪರಿಕಲ್ಪನೆಯು ಅನುಕರಣೆಗೆ ಯೋಗ್ಯವಾಗಿದ್ದು ಅದರಿಂದ ತನಗೆ ಒಳ್ಳೆಯದೇ ಆಗಬೇಕು, ತೊಂದರೆಯಾಗಬಾರದು ಎಂಬ ಅಪೇಕ್ಷೆ. ಈ ನಿರೀಕ್ಷೆ, ಅಪೇಕ್ಷೆ ಮತ್ತು ಖಚಿತತೆಗಳ ಒಟ್ಟಾರೆ ಸ್ವರೂಪವೇ ವಿಶ್ವಾಸ.
ವಿಶ್ವಾಸದ ಬಗೆಗಳು ವ್ಯಕ್ತಿಗತ ವಿಶ್ವಾಸ:ಈ ವಿಶ್ವಾಸವು ವ್ಯಕ್ತಿಗಳ ನಡುವಿನ ಸಂಬಂಧದಲ್ಲಿ ಇರುವುದು.ಕುಟುಂಬದ ಸದಸ್ಯರಲ್ಲಿ, ಸಂಗಾತಿಗಳಲ್ಲಿ, ಸ್ನೇಹಿತರಲ್ಲಿ ಅಥವಾ ಇನ್ನಾರೋ ಹಿತೈಷಿಗಳಲ್ಲಿ ತಮ್ಮ ಆತಂಕ ನಿವಾರಣೆಯ ಮತ್ತು ಬಯಕೆ ಪೂರೈಕೆಯ ನಿರೀಕ್ಷೆ, ಅಪೇಕ್ಷೆ ಮತ್ತು ಖಚಿತತೆಯನ್ನು ಹೊಂದಿರುವಂತಹ ವಿಶ್ವಾಸ.
ಸಾಂಸ್ಥಿಕ ವಿಶ್ವಾಸ:ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸಂಸ್ಥೆಗಳಲ್ಲಿ, ಸರ್ಕಾರಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ವೈದ್ಯಕೀಯ ಸಂಸ್ಥೆಗಳಲ್ಲಿ ಇರುವಂತಹ ವಿಶ್ವಾಸ. ವ್ಯಕ್ತಿಯೊಬ್ಬನು ತನ್ನನ್ನು ತಾನು ಅದಕ್ಕೆ ಒಪ್ಪಿಸಿಕೊಳ್ಳಲು ಸಿದ್ಧನಾಗಿರುತ್ತಾನೆ. ಉದಾಹರಣೆಗೆ ಶಾಲೆಯಲ್ಲಿ ತನಗೆ ಶಿಕ್ಷಣ ದೊರಕಿ ತಾನು ವಿದ್ಯಾವಂತನಾಗುವೆ ಎಂಬ ವಿಶ್ವಾಸ, ಆಸ್ಪತ್ರೆಯಲ್ಲಿ ತನ್ನ ರೋಗ ನಿವಾರಣೆಯಾಗಿ ಗುಣಮುಖರನ್ನಾಗಿ ಮಾಡುವರು ಎಂಬ ವಿಶ್ವಾಸ; ಈ ಬಗೆಯವು.
ವಿಶ್ವಾಸದ ಸಮಸ್ಯೆಗಳು
ಅವಿಶ್ವಾಸ ಅಥವಾ ಅಪನಂಬಿಕೆ:ಕೆಲವರ ಬಗ್ಗೆ ಅಥವಾ ಕೆಲವುದರ ಬಗ್ಗೆ ವಿಶ್ವಾಸವೇ ಇಲ್ಲದಿರುವಂತಹ ಮನಸ್ಥಿತಿ. ಇದಕ್ಕೆ ಕಾರಣ ವ್ಯಕ್ತಿಗಳ ಹಿಂದಿನ ಕಾರಣಗಳಿರಬಹುದು ಅಥವಾ ಅವರು ಸಣ್ಣವರಿಂದ ಬೆಳೆಯುವಾಗ ಕೆಲವು ಬಗೆಯ ವ್ಯಕ್ತಿಗಳ ಮತ್ತು ವಿಷಯಗಳ ಬಗ್ಗೆ ನಕಾರಾತ್ಮಕವಾಗಿರುವುದನ್ನೇ ಕೇಳುತ್ತಾ ಕೇಳುತ್ತಾ ಅವರ ಅಥವಾ ಅವುಗಳ ಬಗ್ಗೆ ಮಾನಸಿಕವಾಗಿ ವಿಶ್ವಾಸವೇ ಇಲ್ಲದಿರುವುದು. ಉದಾಹರಣೆಗೆ ಯಾವುದಾದರೂ ಜಾತಿ ಅಥವಾ ಧರ್ಮದವರು ಹೀಗೆ ಹಾಗೆ ಇಂದು ಹೇಳುತ್ತಾ ಹೇಳುತ್ತಾ ತಮ್ಮ ಜಾತಿ ಅಥವಾ ಧರ್ಮದ ವಿಷಯವಷ್ಟೇ ವಿಶ್ವಾಸಾರ್ಹ ಎಂದು ಅವರ ಅಂತರಾಳದಲ್ಲಿ ಬಿತ್ತಿರುವ ಬೀಜದ ಪ್ರಕಾರ ಇತರರಲ್ಲಿ ಅವಿಶ್ವಾಸವನ್ನು ಹೊಂದಿರುವುದು.
ವಿಶ್ವಾಸಭಂಗ:ಈ ಮೊದಲು ವ್ಯಕ್ತಿ ಅಥವಾ ಸಿದ್ಧಾಂತ ಅಥವಾ ವಿಷಯದಲ್ಲಿ ವಿಶ್ವಾಸವಿದ್ದು ನಂತರ ಅವರನ್ನು ಅಥವಾ ಅದನ್ನು ಅನುಸರಿಸುತ್ತಾ ಹೋಗಿ ನಂತರ ನಕಾರಾತ್ಮಕವಾದ ಭಾವನೆ ಉಂಟಾಗಿರಬಹುದು. ಅವರ ಅಪೇಕ್ಷೆ, ನಿರೀಕ್ಷೆ ಮತ್ತು ಖಚಿತತೆಗಳು ಭಂಗವಾಗಿ ತಮಗೆ ಭ್ರಮನಿರಸನವಾದಾಗ ವಿಶ್ವಾಸಭಂಗವಾಗಿ ಮತ್ತು ವಿಶ್ವಾಸಿಸಲು ಹಿಂಜರಿಯುತ್ತಾರೆ. ಉದಾಹರಣೆಗೆ ಹೇಳುವುದಾದರೆ ಯಾವುದೋ ಒಂದು ವ್ರತ ಅಥವಾ ಪೂಜೆ ಅಥವಾ ಆಚರಣೆಯನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ಉಂಟಾಗುವುದು ಎಂದು ಭಾವಿಸಿ ಅದನ್ನು ನೇಮ ನಿಷ್ಟೆಗಳಿಂದ ಎಷ್ಟೇ ಮಾಡಿದರೂ ಅಪೇಕ್ಷೆ ಮತ್ತು ನಿರೀಕ್ಷೆಗಳು ಕೈಗೂಡದಿದ್ದರೆ, ವಿಶ್ವಾಸಭಂಗವುಂಟಾಗಿ ನಂತರ ಅದನ್ನು ಮಾಡದೇ ಇರವಂತದ್ದು. ಅದೇ ರೀತಿಯಲ್ಲಿ ವ್ಯಕ್ತಿಗಳ ವಿಷಯದಲ್ಲಿಯೂ ಆಗುತ್ತದೆ.
ಅತಿ ವಿಶ್ವಾಸ:ಕೆಲವರು ಕೆಲವು ವ್ಯಕ್ತಿಗಳನ್ನು ಮತ್ತು ವಿಷಯಗಳನ್ನು ಅತಿಯಾಗಿ ವಿಶ್ವಾಸಿಸುತ್ತಾ ಒಂದಲ್ಲ ಒಂದು ದಿನ ತಮ್ಮ ನಿರೀಕ್ಷೆ ಮತ್ತು ಅಪೇಕ್ಷೆಗಳು ಕೈಗೂಡಬಹುದೆಂಬ ಖಚಿತತೆಯನ್ನು ಗಾಢವಾಗಿರಿಸಿಕೊಳ್ಳುವುದು ಅತಿ ವಿಶ್ವಾಸ ಅಥವಾ ಓವರ್ ಟ್ರಸ್ಟ್. ಒಂದು ವೇಳೆ ಅವರ ವಿಶ್ವಾಸಕ್ಕೆ ವ್ಯತಿರಿಕ್ತವಾಗಿ ಘಟಿಸಿದರೂ ಕೂಡಾ, ಆ ವೈಫಲ್ಯ ಬೇರೆ ಕಾರಣಕ್ಕೆ ಆಗಿರುತ್ತದೆ ಎಂದು ಭಾವಿಸುತ್ತಾರೆಯೇ ಹೊರತು ವಿಶ್ವಾಸದಿಂದ ವಿಮುಖವಾಗುವುದಿಲ್ಲ. ಉದಾಹರಣೆಗೆ ಯಾವುದೋ ದೇವರ ಆರಾಧನೆಯಿಂದ ನಿರೀಕ್ಷಿತ ಫಲ ದೊರಕುತ್ತದೆ ಎಂಬ ಅಪೇಕ್ಷೆಯಿಂದ ಪೂಜೆ ಪುನಸ್ಕಾರ ಮಾಡುತ್ತಾರೆ. ಆದರೆ ಅದು ಕೈಗೂಡದಿದ್ದರೂ ತಮ್ಮ ಕರ್ಮದ ಫಲ ಹಾಗಿರಬಹುದು, ಅಥವಾ ತಮಗಿನ್ನೂ ಸೂಕ್ತವಾದ ಕಾಲ ಬಂದಿದಿಲ್ಲದಿರಬಹುದು. ಅಥವಾ ಪೂರ್ವಜನ್ಮದ ಪಾಪವಿರಬಹುದು; ಈಗ ಅನುಭವಿಸಲೇ ಬೇಕಾಗಿರುವ ಕಾರಣದಿಂದ ತಮ್ಮ ಪೂಜೆಯು ಫಲ ಕೊಟ್ಟಿಲ್ಲವೆಂದು ಭಾವಿಸುತ್ತಾರೆ.
ವಿಶ್ವಾಸ ರಹಿತ: ಕೆಲವರು ಕೆಲವರನ್ನು ಅಥವಾ ಕೆಲವು ವಿಷಯಗಳನ್ನು ಏನಾದರಾಗಲಿ ವಿಶ್ವಾಸಿಸುವುದೇ ಇಲ್ಲ. ಅವರಿಗೆ ತಮ್ಮಲ್ಲಿ ಬೇರೂರಿರುವ ವಿಷಯಗಳ ಆಧಾರದಲ್ಲಿ ತಾವು ಅಂದುಕೊಂಡದ್ದನ್ನು ವಿಶ್ವಾಸಿಸುವರೇ ಹೊರತು, ಬೇರೆ ಯಾರನ್ನೂ ಅಥವಾ ಯಾವುದನ್ನೂ ಪ್ರಯೋಗಕ್ಕೆ ಒಳಪಡಿಸಲೂ ಸಿದ್ಧವಿರದೇ ವಿಶ್ವಾಸವನ್ನು ಹೊಂದುವುದಿಲ್ಲ.
ವಿಶ್ವಾಸ ಹೀನ:ಈ ಮೊದಲು ವಿಶ್ವಾಸಕ್ಕೆ ಅರ್ಹರಾಗಿದ್ದು ನಂತರ ಆ ವಿಶ್ವಾಸವು ಭಂಗವಾದ ಮೇಲೆ ಅವರನ್ನು ವಿಶ್ವಾಸ ಹೀನ ಎಂದು ಕರೆಯುತ್ತಾರೆ.ಆದರೆ ವಿಶ್ವಾಸ ರಹಿತರಾಗಿರುವವರೇ ವಿಶ್ವಾಸ ಹೀನರು.ವಿಶ್ವಾಸವನ್ನು ಭಂಗ ಮಾಡುವವರು ವಿಶ್ವಾಸಕ್ಕೆ ಅನರ್ಹರು ಅಷ್ಟೇ.
ವಿಶ್ವಾಸಾರ್ಹ: ಭಯವಿಲ್ಲದೇ ಭರವಸೆಯನ್ನು ಹೊಂದಿದ್ದು ಅವರು ತಮ್ಮ ನಿರೀಕ್ಷೆಯಂತೆ ನಡೆಯುತ್ತಾರೆ, ತಮ್ಮ ಅಪೇಕ್ಷೆಯನ್ನು ಪೂರೈಸುತ್ತಾರೆ ಎಂಬ ಖಚಿತತೆ ಇದ್ದಲ್ಲಿ ಅವರು ವಿಶ್ವಾಸಾರ್ಹ. ವಿಶ್ವಾಸ ಎಂಬ ಭಾವನಾತ್ಮಕ ಸಾಧನವನ್ನು ರೂಢಿಸಬಹುದೇ? ಅದರಿಂದ ಉಪಯೋಗಗಳಿವೆಯೇ? ಮುಂದೆ ನೋಡೋಣ. (ಮುಂದುವರಿಯುವುದು)