ದೆಹಲಿ ಗಡಿಗಳಲ್ಲಿ ಕಳೆದ ಆರು ತಿಂಗಳಿಂದ ನಡೆಯುತ್ತಿರುವ ರೈತ ಚಳುವಳಿಯ ಬೇಡಿಕೆ ಈಡೇರಿಸಲು ಕೂಡಲೇ ಮಾತುಕತೆ ಪುನಾರಾರಂಭಿಸುವಂತೆ ಹಾಗೂ ಕೋವಿಡ್ ಬಿಕ್ಕಟ್ಟು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಜೀವ ಹಾಗೂ ಜೀವನ ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರಾಳ ದಿನ ಆಚರಣೆ ಆಗ್ರಹಿಸಿದ ಸಂಯುಕ್ತ ಹೋರಾಟ ಕರ್ನಾಟಕ ಸಂಘ ಈಗ ಪ್ರಧಾನಿ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮುಂದೆ ತಮ್ಮ ಹಕ್ಕೊತ್ತಾಯವನ್ನು ಮುಂದಿರಿಸಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಲು, ವಿದ್ಯುತ್ ಮಸೂದೆ ಹಿಂಪೆಡೆಯಲು ಆಗ್ರಹಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಖಾತರಿಗೆ ಕೇಂದ್ರೀಯ ಕಾನೂನು ಅಂಗೀಕರಿಸುವಂತೆ ಒತ್ತಾಯಿಸಿ ನವೆಂಬರ್ 26, 2020 ರಂದು “ದೆಹಲಿ ಚಲೋ” ನಡೆಸಿದ ರೈತರು, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ಪರ ಹಠಮಾರಿತನದಿಂದ ಕಳೆದ ಆರು ತಿಂಗಳಗಳಿಂದಲೂ ತಡೆಹಿಡಿಯಲ್ಪಟ್ಟ ದೆಹಲಿ ಗಡಿಗಳಲ್ಲೇ ಬೀಡು ಬಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರು “ದೆಹಲಿ ಚಲೋ” ಪ್ರಾರಂಭಿಸಿದ ನವೆಂಬರ್ 26, 2020 ರಂದು ಕಾರ್ಮಿಕರು ದೇಶದಾದ್ಯಂತ ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ, ನಾಲ್ಕು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಲು ಹಾಗೂ ಖಾಸಗೀಕರಣ ಧೋರಣೆ ಖಂಡಿಸಿ ಅಭೂತಪೂರ್ವ ಮುಷ್ಕರ ನಡೆಸಿದ್ದರು.
ಚಳಿಗಾಲದ ಆರಂಭದಲ್ಲಿ ಆರಂಭಗೊಂಡ ಈ ಹೋರಾಟ ಅಸಾಧ್ಯವಾದ ಚಳಿ, ಮಳೆಗಳನ್ನು ದಾಟಿ ಈಗ ಅತ್ಯಂತ ಹೆಚ್ಚು ತಾಪದ ಬಿಸಿಲಿನ ಝಳದಲ್ಲೂ ತಮ್ಮ ಪ್ರಾಣವನ್ನು ಲೆಕ್ಕಿಸದೇ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಅಪಾರ ತ್ಯಾಗ-ಬಲಿದಾನದ ಸಮರ್ಪಣಾ ಮನೋಭಾವದಿಂದ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಈಗಾಗಲೇ 600 ಕ್ಕೂ ಹೆಚ್ಚು ರೈತ ಪ್ರತಿಭಟನಾಕಾರರು ಹುತಾತ್ಮರಾಗಿದ್ದಾರೆ. ಇದೊಂದು ಜಗತ್ತಿನ ರೈತ ಚಳುವಳಿಯಲ್ಲೇ ಅಭೂತಪೂರ್ವ ಚರಿತ್ರೆ ಸೃಷ್ಟಿಸಿದೆ.
ಕೋವಿಡ್ -19 ರ ಸಾಂಕ್ರಾಮಿಕ ತಡೆ ಹಿನ್ನೆಲೆಯಲ್ಲಿ ದೇಶವನ್ನು ಲಾಕ್ ಡೌನ್ ಗೆ ದೂಡಿ ಮನೆಯಲ್ಲಿ ಬಂಧಿಯಾಗಿಸಿದ್ದ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಸದೇ ಸುಗ್ರಿವಾಜ್ಞೆ ಮೂಲಕ ಜಾರಿಗೆ ಬಂದಿರುವ ಈ ಕೃಷಿ ಕಾಯ್ದೆಗಳನ್ನು ಮೊದಲನೆಯ ಅಲೆಯ ಸೋಂಕು ಗರಿಷ್ಠ ಪ್ರಮಾಣದಲ್ಲಿ ಇದ್ದಾಗಲೇ ಸಂಸತ್ತಿನಲ್ಲಿ ಅತ್ಯಂತ ಅಪ್ರಜಾಸತ್ತಾತ್ಮಕವಾಗಿ ಹಾಗೂ ಸಂಸದೀಯ ಕಾನೂನು-ನಿಯಮಗಳನ್ನು ಉಲ್ಲಂಘಿಸಿ ಅಂಗೀಕರಿಸಲಾಗಿತ್ತು. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು.
ಈಗ ಕೋವಿಡ್-19 ರ ಎರಡನೇ ಅಲೆಯು ದೊಡ್ಡ ಪ್ರಮಾಣದಲ್ಲಿ ಹರಡಿ ಎಲ್ಲೆಡೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಾಣಗಳನ್ನು ಬಲಿ ಪಡೆಯುತ್ತಿರುವಾಗಲೂ ಲಕ್ಷಾಂತರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಈಡೇರಿಸಿ ಇತ್ಯರ್ಥ ಪಡಿಸಲು ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂಬುದು ಜನರ ಬದುಕಿನ ರಕ್ಷಣೆ ಬಗ್ಗೆ ಎಷ್ಟೊಂದು ನಿಷ್ಕಾಳಜಿ ಮತ್ತು ನಿಷ್ಕರುಣೆ ಇದೆ ಎಂಬುದನ್ನು ತೋರಿಸುತ್ತದೆ.
ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ರವರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನವ ಉದಾರೀಕರಣ ಧೋರಣೆಗಳನ್ನು ಅತ್ಯಂತ ಉತ್ಸಾಹದಿಂದ ಹಾಗೂ ರಭಸದಿಂದ ಜಾರಿ ಮಾಡುತ್ತಾ ರೈತ-ಕಾರ್ಮಿಕರ ಹಿತಕ್ಕೆ ವಿರುದ್ದವಾಗಿ ನಡೆದುಕೊಂಡು ಇತ್ತೀಚಿನ ಭಾರತೀಯ ಚರಿತ್ರೆಯಲ್ಲೇ ಈ ಅವಧಿಯನ್ನು ಕರಾಳ ಅವಧಿಯನ್ನಾಗಿಸಿದೆ. ನೋಟು ರದ್ದು, ಜಿ.ಎಸ್.ಟಿ. ಯಂತಹ ಕ್ರಮಗಳು ದೇಶದ ಆರ್ಥಿಕತೆ ಮತ್ತು ಜನ ಜೀವನದ ಮೇಲೆ ಉಂಟು ಮಾಡಿದ ಅನಾಹುತಗಳನ್ನು ನಮ್ಮ ದೇಶ ಮರೆಯುವಂತಿಲ್ಲ.
ಕರೋನಾ ಸಾಂಕ್ರಾಮಿಕ ಪಿಡುಗನ್ನು ನಿವಾರಿಸಲು ಜಾಗರೂಕತೆ, ಅಗತ್ಯ ಕ್ರಮ ವಹಿಸದೇ ಇಂತಹ ಸಂದರ್ಭದಲ್ಲೂ ರೈತ-ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗಿರುವ ಕಾರ್ಪೊರೇಟ್ ಕಂಪನಿಗಳ ಆಸ್ತಿ-ಸಂಪತ್ತು ಹೆಚ್ಚಿಸುವ ನವ ಉದಾರೀಕರಣ ಧೋರಣೆಗಳ ಫಲವಾಗಿಯೇ ಇಂದು ಜಗತ್ತಿನಲ್ಲೇ ಅತಿ ಹೆಚ್ಚು ಕರೋನಾ ಸಾವು-ನೋವುಗಳಿಗೆ ಭಾರತ ತುತ್ತಾಗಿದೆ.
ದೇಶದ ಎಲ್ಲಾ ಪ್ರಜೆಗಳಿಗೂ ಘನತೆಯ ಜೀವನ ಮಾತ್ರವಲ್ಲ ಮರಣದ ಹಕ್ಕುಗಳನ್ನು ಕೂಡ ಈ ಸರ್ಕಾರ ನಿರಾಕರಿಸಿದೆ. ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ ತುರ್ತು ಸ್ಥಿತಿಯನ್ನು ನಿಭಾಯಿಸಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹಾಸಿಗೆ, ಆಕ್ಸಿಜನ್, ವೆಂಟಿಲೇಟರ್ ಹಾಗೂ ಅಗತ್ಯ ಔಷಧಿಗಳಿಲ್ಲದೇ ಜನರು ಸಾಯುತ್ತಿದ್ದಾರೆ. ಮರಣದ ನಂತರವೂ ಶವ ಸಂಸ್ಕಾರಕ್ಕೆ ಗಂಟೆಗಟ್ಟಲೆ ಕಾಯುವಂತಾಗಿದೆ. ಸಾವಿರಾರು ಹೆಣಗಳು ಹಲವಾರು ನದಿಗಳಲ್ಲಿ ತೇಲಿ ಹೋಗುತ್ತಿದ್ದರೂ ಯಾವುದೇ ನಾಚೀಕೆಯಿಲ್ಲದೇ ಲಸಿಕೆಯ ವಿಷಯದಲ್ಲೂ ಕಾರ್ಪೊರೇಟ್ ಕಂಪನಿಗಳ ಸೂಪರ್ ಲಾಭವೇ ಮುಖ್ಯವಾದಂತಹ ಧೋರಣೆಗಳನ್ನು ಅನುಸರಿಸುತ್ತಿದೆ.
ಇಂತಹ ಜನ ವಿರೋಧಿ ಧೋರಣೆಗಳನ್ನು 500 ಕ್ಕೂ ಹೆಚ್ಚು ರೈತ ಸಂಘಟನೆಗಳ ವಿಶಾಲ ವೇದಿಕೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರಾಳ ದಿನ ಆಚರಿಸುವಂತೆ ಕರೆ ನೀಡಿದ್ದು ಸಂಯುಕ್ತ ಹೋರಾಟ ಕರ್ನಾಟಕವು ಸಹ ರಾಜ್ಯದಲ್ಲಿ ಯಶಸ್ವಿಗೊಳಿಸುವಂತೆ ನೀಡಿರುವ ಕರೆಯಂತೆ ಈ ದಿನ ಪ್ರತಿಭಟಿಸಿ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಈಡೇರಿಸಬೇಕೇಂದು ಆಗ್ರಹಿಸುತ್ತಿದ್ದೇವೆ.
ಹಕ್ಕೊತ್ತಾಯಗಳು:
೧. ದೆಹಲಿ ಗಡಿಗಳಲ್ಲಿ ಹೋರಾಡುತ್ತಿರುವ ರೈತ ಹೋರಾಟದ ನಾಯಕತ್ವದ ಸಂಯುಕ್ತ ಕಿಸಾನ್ ಮೋರ್ಚಾದ ಜೊತೆ ಕೂಡಲೇ ಮಾತುಕತೆ ಪುನಾರಾರಂಭಿಸಬೇಕು.
೨. ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ವಿದ್ಯುತ್ ಮಸೂದೆ ವಾಪಸ್ಸು ಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸುವ ಕೇಂದ್ರೀಯ ಕಾಯ್ದೆ ಜಾರಿ ಮಾಡಬೇಕು.
೩. ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಾಪಸ್ಸು ಪಡೆದು ಭಾರತೀಯ ಕಾರ್ಮಿಕ ಸಮ್ಮೇಳನವನ್ನು ಈ ಕೂಡಲೇ ಸಂಘಟಿಸಬೇಕು. ಖಾಸಗೀಕರಣ ಧೋರಣೆ ಕೈ ಬಿಟ್ಟು, ಸಾರ್ವಜನಿಕ ಉದ್ದಿಮೆಗಳನ್ನು ಬಲಪಡಿಸಬೇಕು.
೪. ಕರೋನಾ ಸಂಕಷ್ಟದಿಂದ ಉದ್ಬವಿಸಿರುವ ಆರೋಗ್ಯ ಬಿಕ್ಕಟ್ಟು ಹಾಗೂ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು, ದೇಶದ ಎಲ್ಲಾ ಜನತೆಯ ಜೀವ ಹಾಗೂ ಜೀವನವನ್ನು ರಕ್ಷಿಸಲು ಅಗತ್ಯ ಕ್ರಮಗಳಾದ ಕೋವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ, ಸಾರ್ವತ್ರಿಕ ಉಚಿತ ಲಸಿಕೆ ನೀಡಿಕೆ, ಕನಿಷ್ಠ ತಲಾ 10 ಕೆ.ಜಿ. ಆಹಾರ ಧಾನ್ಯ, ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಎಲ್ಲಾ ಕುಟುಂಬಗಳಿಗೆ ಕನಿಷ್ಠ ಆರು ತಿಂಗಳು ಕನಿಷ್ಠ ಹತ್ತು ಸಾವಿರ ರೂಗಳ ನಗದು ವರ್ಗಾವಣೆ, ಉದ್ಯೋಗ ಖಾತರಿ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಳ ಹಾಗೂ ನಗರ ಪ್ರದೇಶಗಳಿಗೂ ವಿಸ್ತರಣೆ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು.
೫. ಕೇಂದ್ರ ಸರ್ಕಾರದ ಹಾದಿಯಲ್ಲೇ ರಾಜ್ಯದ ಯಡಿಯೂರಪ್ಪ ರವರ ಸರ್ಕಾರವು ತಂದಿರುವ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸಬೇಕು. ಕರೋನಾ ಸಾವುಗಳು ಹೆಚ್ಚಲು ಕಾರಣವಾಗಿರುವ ಆಸ್ಪತ್ರೆ ಅವ್ಯವಸ್ಥೆ, ಆಕ್ಸಿಜನ್ ಕೊರತೆ, ಅಗತ್ಯ ಔಷಧಿ ಗಳ ಕೊರತೆಗಳನ್ನು ನಿವಾರಿಸಬೇಕು ಹಾಗೂ ಚಾಮರಾಜನಗರ ಸೇರಿದಂತೆ ರಾಜ್ಯದೆಲ್ಲಡೆ ಆಕ್ಸಿಜನ್ ಕೊರತೆ ಯಿಂದ ಸಾವನಪ್ಪಿದ ಪ್ರತಿ ಕುಟುಂಬಗಳಿಗೆ ಕನಿಷ್ಠ ಹತ್ತು ಲಕ್ಷ ರೂ.ಗಳ ಪರಿಹಾರ ನೀಡಬೇಕು.