ಬೆಂಗಳೂರು (Bengaluru): ರಾಜ್ಯ ಸರ್ಕಾರ ಸಮಗ್ರ ಕೃಷಿಗೆ ಒತ್ತು ನೀಡುತ್ತದೆ. ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ ಸೇರಿದಂತೆ ಬಹು ಕೃಷಿ ಪದ್ಧತಿ ರೂಢಿಸಿಕೊಂಡಾಗ ಮಾತ್ರ ರೈತರ ಆದಾಯ ಹೆಚ್ಚಲು ಸಾಧ್ಯ. ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಜಿಕೆವಿಕೆ ಆವರಣದಲ್ಲಿ ಇಂಧನ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ‘ರೈತ ಸೌರಶಕ್ತಿ ಮೇಳ’ವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತ್ಯಂತ ಸಂತೋಷದಿಂದ ಮೇಳ ಉದ್ಘಾಟಿಸಿದ್ದೇನೆ. ಇಂಧನ ಸಚಿವ ಕೆ.ಜೆ ಜಾರ್ಜ್ (K. J. George) ನೇತೃತ್ವದಲ್ಲಿ ರೈತ ಸೌರ ಶಕ್ತಿ ಮೇಳ ಏರ್ಪಾಡಾಗಿದೆ. ಸೌರ ಶಕ್ತಿ ಕ್ಷೇತ್ರದಲ್ಲಿ ಆಗಿರುವಂಥ ಬೆಳವಣಿಗೆ ರೈತರನ್ನು ತಲುಪಿ, ಕೃಷಿಯಲ್ಲಿ ಬಳಸಿಕೊಂಡಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದರು.

“ಕೃಷಿ ಕ್ಷೇತ್ರದಲ್ಲಿ ಹೆಚ್ಚೆಚ್ಚು ಸಂಶೋಧನೆಗಳಾಗಿ, ಅದು ರೈತರಿಗೆ ತಲುಪಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಎಲ್ಲ ಪ್ರದೇಶಗಳಿಗೆ ನೀರಾವರಿ ಒದಗಿಸಲು ಸಾಧ್ಯವಾಗದು. ರಾಜಸ್ಥಾನ ಹೊರತುಪಡಿಸಿದರೆ ಹೆಚ್ಚು ಒಣ ಭೂಮಿ ಇರುವುದು ಕರ್ನಾಟಕದಲ್ಲಿ. ರೈತರು ಇಂಥ ಭೂಮಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿಕೊಂಡು ಕೃಷಿ ಮಾಡುವಂತಾಗಬೇಕು. ಹೈನುಗಾರಿಕೆ, ಮೀನುಗಾರಿಕೆ ತೋಟಗಾರಿಕೆ ಸೇರಿದಂತೆ ಬಹು ಕೃಷಿ ಪದ್ಧತಿ ರೂಢಿಸಿಕೊಂಡಾಗ ಮಾತ್ರ ರೈತರ ಆದಾಯ ಹೆಚ್ಚಲು ಸಾಧ್ಯ. ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಬೇಕು,”ಎಂದು ಹೇಳಿದು.
“ಯುವಜನರು ಗ್ರಾಮಗಳನ್ನು ತೊರೆದು ನಗರಗಳನ್ನು ಸೇರುತ್ತಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡಿ, ಅದನ್ನು ರೈತರು ಅಳವಡಿಸಿಕೊಂಡಾಗ ಮಾತ್ರ ಸಾರ್ಥಕವಾಗುತ್ತದೆ. ನೀರಾವರಿಗೆ ನವೀಕರೀಸಬಹುದಾದ ಇಂಧನವನ್ನೂ ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಸುಮ್ ಬಿ
ಸಾಂಪ್ರದಾಯಿಕ ಗ್ರಿಡ್-ಆಧಾರಿತ ವಿದ್ಯುತ್ ಅವಲಂಬನೆಯನ್ನು ತಗ್ಗಿಸಲು, ರೈತರಿಗೆ ಸೌರ ಚಾಲಿತ ಪಂಪ್‌ಸೆಟ್‌ಗಳ ಬಳಕೆಗೆ ಒತ್ತು ನೀಡಲು ಸರ್ಕಾರ ರೈತರಿಗೆ ಸಬ್ಸಿಡಿ ನೀಡುತ್ತದೆ. ಕುಸುಮ್ ಬಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಿಂದ 7.5 ಎಚ್.ಪಿ. ಸಾಮರ್ಥ್ಯದ ಸೌರ ಪಂಪ್ ಸೆಟ್‍ಗೆ ಶೇಕಡ 30 ಕೇಂದ್ರ ಸರ್ಕಾರದಿಂದ ಸಹಾಯಧನ ಒದಗಿಸುತ್ತದೆ. ರಾಜ್ಯದಿಂದ ನೀಡುತ್ತಿದ್ದ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಶೇ.50ಕ್ಕೆ ಏರಿಸಿದೆ. ಅಷ್ಟೇ ಅಲ್ಲ, ಯೋಜನೆಯಡಿ ಪಂಪ್, ಮೀಟರ್, ಪೈಪ್‌ಗಳನ್ನು ಒದಗಿಸುತ್ತಿದೆ.
ಸೌರ ಪಂಪ್‌ಸೆಟ್‌ಗಳ ಸ್ಥಾಪನೆ ಸುಲಭವಾಗಿದ್ದು, ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿವಾಗುತ್ತಿದೆ. ಕುಸುಮ್ ಕಾಂಪೋನೆಂಟ್ – ಬಿ ಯೋಜನೆಯಡಿ ಸೌರ ಪಂಪ್ ಸೆಟ್‌ಗಳನ್ನು ಅಳವಡಿಸುವ ಕಾರ್ಯಕ್ರಮವನ್ನು ಮುಂದುವರಿಸಲಾಗಿದ್ದು, ರಾಜ್ಯದಲ್ಲಿ ಈವರೆಗೆ ಸುಮಾರು 7000 ಸೌರ ಪಂಪ್ ಸೆಟ್‌ಗಳನ್ನು ಅಳವಡಿಸಲಾಗಿದೆ.
ಕುಸುಮ್ ಸಿ
ಫೀಡರ್ ಮಟ್ಟದ ಸೋಲಾರೈಸೇಶನ್ ಯೋಜನೆಯಾದ ‘ಕುಸುಮ್-ಸಿ’ ಮೂಲಕ, ನೀರಾವರಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಈ ಯೋಜನೆಯಡಿ ರೆಸ್ಕೋ ಡೆವಲಪರ್‌ಗಳ ಮೂಲಕ 1302 ಮೆ.ವ್ಯಾ. ವಿಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳನ್ನು 248 ಉಪಕೇಂದ್ರಗಳಿಗೆ ಸಂಪರ್ಕಿಸುವ ಮೂಲಕ 806 ಕೃಷಿ ಫೀಡರ್ ಗಳನ್ನೊಳಗೊಂಡ 3,37,331 ಕೃಷಿ ಪಂಪ್ ಸೆಟ್‌ಗಳಿಗೆ ಹಗಲಿನಲ್ಲಿ ವಿದ್ಯುತ್ ಪೂರೈಸುತ್ತದೆ. ಎಂಎನ್ಆರ್‌ಇಯು ಪ್ರತಿ ಮೆ.ವ್ಯಾ.ಗೆ 1.05 ಕೋಟಿ ರೂ. ಅನುದಾನ ನೀಡುತ್ತಿದೆ.
ಬೆಸ್ಕಾಂ ಮತ್ತು ಹೆಸ್ಕಾಂ ಗಳಲ್ಲಿ 753.18 ಮೆ.ವ್ಯಾ.ಗೆ ಬಿಡ್‌ಗಳನ್ನು ಸ್ವೀಕರಿಸಲಾಗಿದ್ದು, 107 ಉಪಕೇಂದ್ರಗಳ 1,80,430 ಕೃಷಿ ಪಂಪ್ ಸೆಟ್‌ಗಳು ಮತ್ತು 463 ಕೃಷಿ ಫೀಡರ್‌ಗಳನ್ನು ಒಳಗೊಂಡಿವೆ. 12 ಸೋಲಾರ್ ಪವರ್ ಜನರೇಟರ್‌ಗಳಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಈ ಸೌರ ವಿದ್ಯುತ್ ಸ್ಥಾವರಗಳನ್ನು ಮಾರ್ಚ್-2025 ರೊಳಗೆ ಗ್ರಿಡ್‌ಗೆ ಸಂಪರ್ಕಿಸಲಾಗುತ್ತದೆ.
ಮೇಳದ ಆಕರ್ಷಣೆ:
• ರಾಜ್ಯದ ನಾನಾ ಭಾಗಗಳಿಂದ ಬರುವ ರೈತರಿಗೆ ಸೌರ ಪಂಪ್‌ಸೆಟ್‌ಗಳ ಬಗ್ಗೆ ಮಾಹಿತಿ ನೀಡಲು ಮೇಳದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಸೌರ ವಿದ್ಯುತ್ ಉತ್ಪನ್ನಗಳ ಮಳಿಗೆಗಳಿದ್ದವು.
• ಸೌರ ಪಂಪ್‌ಸೆಟ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ನೇರವಾಗಿ ನೋಡಲು ಪ್ರಾತ್ಯಕ್ಷಿಕೆ ನೀಡಲಾಯಿತು.
• ಸೋಲಾರ್ ಪಂಪ್‌ಸೆಟ್ ಅಳವಡಿಕೊಳ್ಳುವ ರೈತರಿಗಾಗಿಯೇ ಆನ್‌ಲೈನ್ ಪೋರ್ಟಲ್ ವಿನ್ಯಾಸಗೊಳಿಸಲಾಗಿದೆ.ಈ ಮೂಲಕ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
• ರೈತರಿಗಾಗಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸೌರ ಪಂಪ್ ಸೆಟ್‌ಗಳ ಉತ್ಪಾದಕರು, ಮಾರಾಟಗಾರರು, ಬ್ಯಾಂಕ್ ಅಧಿಕಾರಿಗಳು, ಕೃಷಿ ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು.
#karnataka #Bengaluru #siddaramaiah #gkvk #FarmerSolarFair
