ಅನ್ನದಾತರು ಅಂದ್ರೆ ಅವರನ್ನು ದೇಶದ ಹಸಿವು ನೀಗಿಸುವ ಸೈನಿಕರು ಎಂದೇ ಕರೆಯಲಾಗುತ್ತದೆ. ಆದರೆ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರವೇಶ ಮಾಡದಂತೆ ದೆಹಲಿ ಸುತ್ತಲು ಕೋಟೆ ನಿರ್ಮಾಣ ಮಾಡಿದೆ ಕೇಂದ್ರ ಸರ್ಕಾರ. ದೆಹಲಿಯಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದು, ಅನ್ನದಾತರ ಆಕ್ರೋಶ ಗಡಿಯಲ್ಲೇ ಕೊನೆಯಾಗುವಂತೆ ಮಾಡುವ ಕೆಲಸಕ್ಕೆ ಮುಂದಾಗಿದೆ ಕೇಂದ್ರ. 2021ರಲ್ಲಿ ದೆಹಲಿಯಲ್ಲಿ ನಡೆದಿದ್ದ ರೈತರ ಹೋರಾಟ ಮೀರಿಸುವಂತೆ ಈ ಬಾರಿಯ ಹೋರಾಟ ರೂಪುಗೊಂಡಿದೆ. ಅನ್ನದಾತರ ಹೋರಾಟದಲ್ಲಿ ದೇಶಾದ್ಯಂತ ಇರುವ 200ಕ್ಕೂ ಹೆಚ್ಚು ರೈತ ಸಂಘಟನೆಗಳು ದೆಹಲಿ ಕಡೆಗೆ ಮುನ್ನುಗ್ಗುತ್ತಿವೆ.
ಕೇಂದ್ರದ ಎದುರು ರೈತರ ‘ದೆಹಲಿ ಚಲೋ’ ಬೇಡಿಕೆಗಳು
ಅನ್ನದಾತರು ಸುಖಾಸುಮ್ಮನೆ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ಕೆಲವೊಂದು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಎದುರು ಇರಿಸಿದ್ದಾರೆ. ಅದರಲ್ಲಿ ಪ್ರಮುಖ ಅಂಶಗಳು ಎಂದರೆ ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಬೇಕು. ರೈತರಿಗಾಗಿ ಅಧ್ಯಯನ ಮಾಡಿ ಮಂಡಿಸಿರುವ ಸ್ವಾಮಿನಾಥನ್ ವರದಿ ಜಾರಿ ಆಗಬೇಕು. ರೈತರ ಎಲ್ಲಾ ಕೃಷಿ ಸಾಲ ಮನ್ನಾ ಮಾಡಬೇಕು. ರೈತರ ಮೇಲಿರುವ ಎಲ್ಲಾ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು. ಲಖಿಂ ಪುರ್ ಖೇರಿ ಹಿಂಸಾಚಾರ ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಕರೆದು ಮಾತನಾಡುವ ಬದಲು ರೈತರ ಹೋರಾಟವನ್ನೇ ಬಗ್ಗುಬಡಿಯುವ ಕೆಲಸಕ್ಕೆ ಕೈ ಹಾಕಿದೆ.
ನಮ್ಮ ಹೋರಾಟ ಸಂಪೂರ್ಣ ಶಾಂತಿಯುತವಾಗಿ ಇರುತ್ತೆ, ಸರ್ಕಾರದ ಜೊತೆ ಯಾವ ಘರ್ಷಣೆನೂ ಇರಲ್ಲ. ಪೊಲೀಸ್ರು ಗುಂಡು ಹಾರಿಸಿದ್ರೂ, ಲಾಠಿ ಬೀಸಿದ್ರೂ ನಾವು ತಾಳ್ಮೆ ಕಳೆದುಕೊಳ್ಳಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ಆದರೆ ದೆಹಲಿಗೆ ಪ್ರವೇಶ ಮಾಡಲು ರೈತರಿಗೆ ಅವಕಾಶ ಕೊಡದೆ ದೆಹಲಿ ಪೊಲೀಸರು ಎಲ್ಲಾ ಕಡೆ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಪಂಜಾಬ್, ಹರಿಯಾಣದಿಂದ ದೆಹಲಿಗೆ ಬರುವ ಎಲ್ಲಾ ಪ್ರಮುಖ ಮಾರ್ಗಗಳನ್ನೂ ಮುಚ್ಚಿದ್ದಾರೆ. ಟ್ರಾಕ್ಟರ್ ಬರುವುದನ್ನು ತಡೆಯೋಕೆ ಕಬ್ಬಿಣದ ಮೊಳೆಗಳನ್ನ ರಸ್ತೆಗೆ ಹಾಕಿದ್ದಾರೆ. 2ನೇ ಹಂತದಲ್ಲಿ ಸಿಮೆಂಟ್ ಕಾಂಕ್ರಿಟ್ ರಸ್ತೆಗೆ ಸುರಿದಿದ್ದಾರೆ. 3ನೇ ಹಂತದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ ಅಂತ ಬೋರ್ಡ್ ಹಾಕಿದ್ದಾರೆ. 4ನೇ ಹಂತದಲ್ಲಿ ಬ್ಯಾರಿಕೇಡ್ಗಳ ಜೊತೆ ಮುಳ್ಳುತಂತಿ ಬೇಲಿ ಹಾಕಿದ್ದಾರೆ.. ಇದೆಲ್ಲವನ್ನೂ ದಾಟಿ ಬಂದ್ರೆ ಜಲಫಿರಂಗಿ ಬಳಸಿ ರೈತರನ್ನು ಚದುರಿಸಲಾಗ್ತಿದೆ. ಅಶ್ರುವಾಯು ಸಿಡಿಸಲಾಗ್ತಿದೆ.
ಅಶ್ರುವಾಯು ಸಿಡಿಸಿದ್ರೂ ಬಗ್ಗದ ರೈತರು ಅಕ್ಕಪಕ್ಕದ ಹೊಲ ಗದ್ದೆಗಳಿಗೆ ನುಗ್ಗಿದ್ದಾರೆ. ಟ್ರ್ಯಾಕ್ಟರ್ಗಳ ಮೂಲಕ ಮತ್ತೆ ದೆಹಲಿ ಕಡೆ ಹೊರಟಿದ್ದಾರೆ. ಈ ಬಾರಿ ಅಶ್ರುವಾಯು ಸಿಡಿಸಲು ದೆಹಲಿ ಪೊಲೀಸ್ರು ಡ್ರೋಣ್ಗಳನ್ನ ಬಳಸಿಕೊಂಡಿದ್ದಾರೆ. ಈ ವೇಳೆ ಪೊಲೀಸ್ರ ಜೊತೆಗೆ ಅನ್ನದಾತರು ವಾಕ್ಸಮರ ನಡೆಸಿದ್ದಾರೆ. ಉದ್ರಿಕ್ತರಾದ ರೈತರು ಕೆಲವೆಡೆ ಕಲ್ಲು ತೂರಿದ್ದಾರೆ. ಟ್ರ್ಯಾಕ್ಟರ್ಗಳ ಮೂಲಕ ಸಿಮೆಂಟ್ ಬ್ಲಾಕ್ ತೆರವು ಮಾಡಿ ಮುನ್ನುಗ್ಗುವ ಪ್ರಯತ್ನ ಮಾಡಿದ್ದಾರೆ. ದೆಹಲಿ ಸಂಪರ್ಕಿಸುವ ಹರಿಯಾಣ, ಪಂಜಾಬ್ನ ಜಿಂಧ್ ಗಡಿ, ಶಂಭು ಗಡಿ, ಟಿಕ್ರಿ ಗಡಿಭಾಗದಲ್ಲಿ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದೆ. ಸರ್ಕಾರ ಮಧ್ಯಪ್ರವೇಶ ಮಾಡಿ ಬೇಡಿಕೆ ಈಡೇರಿಸದಿದ್ದರೆ 6 ತಿಂಗಳಾದರೂ ಸರಿ, ನಾವು ಇಲ್ಲಿಂದ ವಾಪಸ್ ಹೋಗಲ್ಲ ಎನ್ನುತ್ತಿದ್ದಾರೆ ರೈತರು.
#Newdelhi #farmersprotest #farmers #msp #modigovt