ಅಗತ್ಯ ವಸ್ತುಗಳ ಬೆಲೆ ಏರಿಕೆ, ನೂತನ ಕೃಷಿ ಕಾಯ್ದೆಗಳ(Farm Laws) ಸೇರಿದಂತೆ ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಸೆ.27 ರಂದು (ನಾಳೆ) ಭಾರತ್ ಬಂದ್‌ಗೆ (Bharat Bandh) ಕರೆ ನೀಡಿದೆ.
ಸೋಮವಾರದಂದು ದೇಶಾದ್ಯಂತ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ (Samyuktha Kisan Morcha) ನೀಡಿರುವ ಕರೆಗೆ ರೈತಪರ, ದಲಿತ ಹಾಗೂ ಸಮಾನ ಮನಸ್ಕ ಸಂಘಟನೆಗಳು ಬೆಂಬಲವನ್ನು ಸೂಚಿಸಿದೆ. ಒಟ್ಟಾರೆ ದೇಶದಾದ್ಯಂತ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ನೀಡಲಿವೆ.
KSRTC, BMTC ನೈತಿಕ ಬೆಂಬಲ ನೀಡಿದಾಗ್ಯೂ, ಬಸ್ಸುಗಳ ಸಂಚಾರ ಇರುತ್ತದೆ. ಅದೇ ರೀತಿ ಆಟೋ, ಊಬರ್, ಓಲಾ ಚಾಲಕರ ಸಂಘಟನೆಗಳೂ ಕೂಡಾ ರೈತರ ಭಾರತ್ ಬಂದ್‌ಗೆ ನೈತಿಕ ಬೆಂಬಲ ನೀಡಿವೆ. ಹೋಟೆಲ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಟ್ಯಾಕ್ಸಿ ಮಾಲೀಕರ ಸಂಘ ಸೇರಿದಂತೆ ನಾನಾ ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡುತ್ತಿವೆ. ಪೆಟ್ರೋಲ್ ಸೇರಿದಂತೆ ದಿನನಿತ್ಯ ಬಳಕೆಯ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಇರುವ ಆಕ್ರೋಶವೂ ಬಂದ್‌ಗೆ ಬೆಂಬಲ ನೀಡಲು ಪ್ರೇರಕವಾಗಿದೆ.

ಕರ್ನಾಟಕ ಬಂದ್‌ಗೆ ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ ಸೇರಿ ಕೆಲ ಸಂಘಟನೆಗಳು ಬೆಂಬಲ ನೀಡಲಿವೆ. ಬಂದ್ ಇದ್ದರೂ ಕರ್ನಾಟಕದಲ್ಲಿ ಎಲ್ಲವೂ ಯಥಾಸ್ಥಿತಿ ಇರುವ ಸಾಧ್ಯತೆ ಇದೆ. ಬಹುತೇಕ ಸಂಘಟನೆಗಳು ಬಂದ್‌ಗೆ ನೈತಿಕ ಬೆಂಬಲ ನೀಡಲಿವೆ. ನೈತಿಕ ಬೆಂಬಲ ನೀಡುತ್ತೇವೆ, ಆದರೆ ಅಂಗಡಿ ಮುಂಗಟ್ಟು ಬಂದ್ ಮಾಡಲ್ಲ ಎಂದು ಹೇಳುತ್ತಿದ್ದಾರೆ. ಲಾಕ್‌ಡೌನ್, ಕರೋನಾ ಮೂರನೆ ಅಲೆಯ ಆರ್ಥಿಕ ಹೊಡೆತದಿಂದ ಬೇಸತ್ತಿರುವ ಅನೇಕ ವ್ಯಾಪಾರಿಗಳು ಬಂದ್‌ಗೆ ನೈತಿಕ ಬೆಂಬಲ ನೀಡಿ, ವ್ಯಾಪಾರ-ವಹಿವಾಟುಗಳನ್ನು ನಡೆಸಲು ಯೋಜಿಸಿದ್ದಾರೆ.
ಭಾರತ್ ಬಂದ್ ಬೆಂಬಲಿಸಿ ಕರ್ನಾಟಕ ಬಂದ್ ಅಂಗವಾಗಿ ನಾಳೆ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಗಾಂಧಿ ಪ್ರತಿಮೆ ಇಂದ, ರೈತ ಸಂಘಟನೆಗಳು ದಲಿತ ಸಂಘಟನೆಗಳು ಜನಪರ ಸಂಘಟನೆಗಳು ಕನ್ನಡ ಸಂಘಟನೆಗಳು ಮಹಿಳಾ ಸಂಘಟನೆಗಳು ಎಲ್ಲ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಸೇರಿ ವಿನೂತನ ರೀತಿಯಲ್ಲಿ ಭಾರತ್ ಬಂದ್ ಯಶಸ್ವಿಗೆ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪರವಾಗಿ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲ:
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ಗೆ ಕಾಂಗ್ರೆಸ್ ಕೂಡಾ ಬೆಂಬಲ ವ್ಯಕ್ತಪಡಿಸಿದೆ.

‘ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಕರೆಗೆ ಪಕ್ಷದ ಬೆಂಬಲವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
‘ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದ ದೇಶದ ಬಹುಸಂಖ್ಯಾತ ಅನ್ನದಾತ ಸಮುದಾಯ ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ಕೆಲವೇ ಮಂದಿ ಉದ್ಯಮಿಗಳ ಬೆಂಬಲಕ್ಕೆ ನಿಂತಿರುವ ಬಿಜೆಪಿ ಇಡೀ ಶ್ರಮಿಕ ಜನಸಮುದಾಯವನ್ನು ವಂಚಿಸುತ್ತಿದೆ. ಪ್ರಧಾನಿ ಮೋದಿ ಸರ್ಕಾರದ ಕರಾಳ ಶಾಸನ, ನೀತಿ ಹಾಗೂ ಧೋರಣೆ ವಿರುದ್ಧ ರೈತರು ದಿಲ್ಲಿಯ ರಸ್ತೆಗಳಲ್ಲಿ ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ನಿರಂತರ ಪ್ರಯತ್ನ ನಡೆಸಿದ ಬಿಜೆಪಿ ಸರ್ಕಾರಕ್ಕೆ, ಅವರ ನ್ಯಾಯಯುತ ಬೇಡಿಕೆಗಳನ್ನು ಕೇಳುವ ಕನಿಷ್ಠ ಸೌಜನ್ಯ ತೋರಿಲ್ಲ. ಇದು ಬಿಜೆಪಿಯ ಅಮಾನವೀಯ ಮನಃಸ್ಥಿತಿಗೆ ನಿದರ್ಶನ. ರೈತರ ಹಿತರಕ್ಷಣೆಗಾಗಿ ದಶಕದ ಹಿಂದೆಯೇ ಭೂಸ್ವಾಧೀನ ಕಾಯ್ದೆಯನ್ನು ಕಾಂಗ್ರೆಸ್ ನೇತ್ರತ್ವದ ಯುಪಿಎ ಸರ್ಕಾರ ಜಾರಿ ಮಾಡಿತ್ತು. ಆದರೆ, ಅದಕ್ಕೆ ವಿರುದ್ದವಾದ ದಿಕ್ಕಿನಲ್ಲಿ ಸಾಗಿದ ಮೋದಿ ಸರ್ಕಾರವು, ಏಳು ವರ್ಷಗಳಲ್ಲಿ ದೇಶದ ರೈತರ ಬದುಕನ್ನು ಅಸಹನೀಯಗೊಳಿಸಿದೆ. ಇದರ ವಿರುದ್ದ ರೈತರು ನಡೆಸುತ್ತಿರುವ ಹೋರಾಟವನ್ನು ಪಕ್ಷ ಬೆಂಬಲಿಸಲಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು ನಗರ ವಿವಿಯ ಎಲ್ಲ ಪರೀಕ್ಷೆ ಮುಂದೂಡಿಕೆ
ಭಾರತ್ ಬಂದ್ ಘೋಷಣೆಯಾಗಿರುವ ಬೆನ್ನಲ್ಲೇ ನಾಳೆ ನಡೆಯಬೇಕಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಎಲ್ಲ ಪರೀಕ್ಷೆಗಳು ಮುಂದೂಡಲಾಗಿದೆ. ಮುಂದಿನ ಆದೇಶದವರೆಗೂ ಪರೀಕ್ಷೆ ಮುಂದೂಡಿ ವಿಶ್ವವಿದ್ಯಾಲಯ ಆದೇಶ ಪ್ರಕಟಿಸಿದೆ.

ಸದ್ಯ ಪದವಿ, ಸ್ನಾತಕೋತ್ತರ, Bed ಪರೀಕ್ಷೆಗಳು ಮುಂದೂಡಲ್ಪಟ್ಟಿದ್ದಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಭಾರತ್ ಬಂದ್ ಹಿನ್ನೆಲೆ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಪ್ರತಿಭಟನಾ ಮೆರವಣಿಗೆ ಮೈಸೂರು ರಸ್ತೆ, ಕೆ.ಆರ್. ಪುರಂ, ಮಾಗಡಿ ರಸ್ತೆ, ಹೊಸೂರು ರಸ್ತೆಯಿಂದ ಬರಲಿದೆ. ಅಲ್ಲದೆ ಬೆಂಗಳೂರಿನಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಗಳ ಜತೆಗೆ ಮೆರವಣಿಗೆ ಹಿನ್ನೆಲೆ ಟ್ರಾಫಿಕ್ ಜಾಮ್ ಆಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ವಿವಿ ಮುನ್ನೆಚ್ಚರಿಕೆ ವಹಿಸಿಕೊಂಡಿದೆ.
ಬೆಂಗಳೂರಿನಾದ್ಯಂತ ಪೊಲೀಸರಿಂದ ಹೈಅಲರ್ಟ್
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಪೊಲೀಸರಿಂದ ಹೈಅಲರ್ಟ್ ಘೋಷಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 12 ಡಿಸಿಪಿ, ಎಲ್ಲಾ ಎಸಿಪಿಗಳು, 120ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 150ಕ್ಕೂ ಹೆಚ್ಚು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ, ಭದ್ರತೆಗಾಗಿ ನಾಳೆ 5 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆ.

ಮುಂಜಾನೆ 5 ಗಂಟೆಯಿಂದಲೇ ಪೊಲೀಸರ ನಿಯೋಜನೆ ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಡಿಸಿಪಿಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದೆ. ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಫ್ರೀಡಂಪಾರ್ಕ್, ಟೌನ್‌ಹಾಲ್‌ನಲ್ಲಿ ಹೆಚ್ಚುವರಿ ಭದ್ರತೆ ಇದೆ. ಹೆಚ್ಚುವರಿಯಾಗಿ ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.
ಸಾರ್ವಜನಿಕರ ದೈನಂದಿನ ಕೆಲಸಕ್ಕೆ ಅಡ್ಡಿಪಡಿಸುವಂತಿಲ್ಲ. ನಾಳೆ ಯಾವುದೇ ರಸ್ತೆ ತಡೆಗಳಿಗೆ ಅನುಮತಿ ನೀಡಿಲ್ಲ. ಈವರೆಗೂ ಯಾರೂ ಮೆರವಣಿಗೆಗೆ ಅನುಮತಿ ಕೇಳಿಲ್ಲ. ಪ್ರತಿಭಟನೆ ಹೆಸರಿನಲ್ಲಿ ನಿಯಮ ಉಲ್ಲಂಘಿಸುವಂತಿಲ್ಲ. ದುಷ್ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.







