• Home
  • About Us
  • ಕರ್ನಾಟಕ
Friday, August 22, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ರೈತ , ಭೂಮಿ ಮತ್ತು ಕಾರ್ಪೋರೇಟ್‌ ಬಂಡವಾಳ

ನಾ ದಿವಾಕರ by ನಾ ದಿವಾಕರ
June 30, 2025
in Top Story, ಕರ್ನಾಟಕ, ರಾಜಕೀಯ, ವಾಣಿಜ್ಯ, ಶೋಧ
0
ರೈತ , ಭೂಮಿ ಮತ್ತು ಕಾರ್ಪೋರೇಟ್‌ ಬಂಡವಾಳ
Share on WhatsAppShare on FacebookShare on Telegram

—-ನಾ ದಿವಾಕರ —–

ADVERTISEMENT

ಒಂದು ಕೃಷಿ ಆಧಾರಿತ ದೇಶದಲ್ಲಿ ಕೃಷಿ ಭೂಮಿಯೇ ಮಾಯವಾಗುತ್ತಿರುವ ಆತಂಕಗಳ ನಡುವೆ

ಭಾರತ ಒಂದು ಕೃಷಿ ಪ್ರಧಾನ ದೇಶ ಎನ್ನುವ ಸಾರ್ವತ್ರಿಕ-ಸಾರ್ವಕಾಲಿಕ ಸತ್ಯವನ್ನು ಯಾರೂ ಅಲ್ಲಗಳೆಯಲಾಗುವುದಿಲ್ಲ. ಏಳು ದಶಕಗಳಿಗೂ ಹೆಚ್ಚು ಅವಧಿಯ ನಗರಕೇಂದ್ರಿತ ಆರ್ಥಿಕಾಭಿವೃದ್ಧಿ, ಕೈಗಾರಿಕೀಕರಣ ಮತ್ತು ಬಂಡವಾಳಶಾಹಿ ಮಾರುಕಟ್ಟೆಯ ಪ್ರಭಾವದ ಹೊರತಾಗಿಯೂ ಭಾರತ ಇಂದಿಗೂ ತನ್ನ ಈ ವಾಸ್ತವ ನೆಲೆಯನ್ನು ಉಳಿಸಿಕೊಂಡೇ ಬಂದಿದೆ. ಕೃಷಿ ಮತ್ತು ಕೃಷಿಕ ಎರಡೂ ವಿದ್ಯಮಾನಗಳು ಯಾಂತ್ರೀಕರಣ, ತಂತ್ರಜ್ಞಾನ ಹಾಗೂ ಆಧುನಿಕ ಉಪಕರಣಗಳ ಬಳಕೆಯ ಮೂಲಕ ರೂಪಾಂತರಗೊಂಡಿವೆಯೇ ಹೊರತು, ಮೂಲದಲ್ಲಿ ಭಾರತದ ಜನಸಾಮಾನ್ಯರ ಬದುಕು ಇಂದಿಗೂ ಸಹ ಕೃಷಿ, ಬೇಸಾಯ, ತೋಟಗಾರಿಕೆ, ಹೈನುಗಾರಿಕೆ, ಕೃಷಿ ಅವಲಂಬಿತ ಉದ್ಯಮ ಮತ್ತು ಕೃಷಿ ಉತ್ಪಾದನೆಯನ್ನಾಧರಿಸಿದ ಮಾರುಕಟ್ಟೆಯನ್ನೇ ಅವಲಂಬಿಸಿರುವುದು ವರ್ತಮಾನದ ವಾಸ್ತವ. ಈ ನೆಲೆಯಲ್ಲೇ ಕೃಷಿ ಭೂಮಿ ಭಾರತದ ಜನಜೀವನದ ಮುಖ್ಯ ಭಾಗವಾಗಿ ರೂಪುಗೊಂಡಿದೆ.

ಹಾಗಾಗಿಯೇ ಆಧುನಿಕ ಭಾರತವನ್ನೂ ಪ್ರಧಾನವಾಗಿ ಪ್ರತಿನಿಧಿಸುವ ತಳಸಮಾಜಗಳ ದೃಷ್ಟಿಯಲ್ಲಿ ʼಭೂಮಿ ಮತ್ತು ಭೂಮಿಯ ಹಕ್ಕುʼ ಸದಾ ಪ್ರಾಶಸ್ತ್ಯ ಹೊಂದಿರುವುದನ್ನು ಗಮನಿಸಬಹುದು. ಆದರೆ 1990ರ ಜಾಗತೀಕರಣ ಹಾಗೂ 2000ರ ನಂತರದ ತೀವ್ರಗತಿಯ ನವ ಉದಾರವಾದ ಮತ್ತು 2010ರ ನಂತರದ ತಂತ್ರಜ್ಞಾನ ಆಧಾರಿತ ಡಿಜಿಟಲ್‌ ಆರ್ಥಿಕತೆ ಭಾರತದ ಪ್ರಗತಿಯ ಸಂಕೇತವಾಗಿ ಪರಿಣಮಿಸಿದೆ. ಮಾರುಕಟ್ಟೆ ಕೇಂದ್ರಿತ ಜಿಡಿಪಿ ಆಧರಿಸಿದ ಅಭಿವೃದ್ಧಿ ಮಾದರಿಯಲ್ಲಿ ದೇಶದ ಬಹುಸಂಖ್ಯಾತರನ್ನು ಒಳಗೊಳ್ಳುವ ಒಂದು ಉತ್ಪಾದಕ ಕ್ಷೇತ್ರ ಪಕ್ಷಾತೀತವಾಗಿ ಸರ್ಕಾರಗಳ ಅವಗಣನೆಗೆ ಒಳಗಾಗುತ್ತಲೇ ಬಂದಿದೆ. 2017-18ರ ಮಾಹಿತಿಯ ಅನುಸಾರ ಭಾರತದ ಶೇಕಡಾ 70ರಷ್ಟು ಗ್ರಾಮೀಣ ಕುಟುಂಬಗಳ ಜೀವನೋಪಾಯದ ಆಧಾರ ಕೃಷಿಯೇ ಆಗಿದೆ. ಇವರ ಪೈಕಿ ಶೇಕಡಾ 82ರಷ್ಟು ರೈತರು 2 ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿ ಹೊಂದಿದ್ದಾರೆ.

Illegal auto ban : ಬೆಂಗಳೂರು ಅಕ್ರಮ ಆಟೋ  #pratidhvani

2014-15ರ ಮಾರುಕಟ್ಟೆ ದರ ಮತ್ತು 2011-12ರ ಸೂಚ್ಯಂಕ ಸರಣಿಯ ಆಧಾರದಲ್ಲಿ ಕೃಷಿ ವಲಯ ಭಾರತದ ಜಿಡಿಪಿಯಲ್ಲಿ ಶೇಕಡಾ 17.4ರಷ್ಟನ್ನು ಒದಗಿಸುತ್ತಿದೆ. 2020-21ರ ಭಾರತೀಯ ಆರ್ಥಿಕ ಸಮೀಕ್ಷೆಯ ಅನುಸಾರ ಕೃಷಿ ಕ್ಷೇತ್ರ ದೇಶದ ಶೇಕಡಾ 50ಕ್ಕೂ ಹೆಚ್ಚು ದುಡಿಮೆಗಾರರಿಗೆ ಆಶ್ರಯವಾಗಿದ್ದು, ಜಿಡಿಪಿಯ ಶೇಕಡಾ 20.2ರಷ್ಟನ್ನು ಒದಗಿಸುತ್ತಿದ್ದಾರೆ. ಲಭ್ಯವಿರುವ 2016ರ ಮಾಹಿತಿಗಳ ಅನುಸಾರ ಕೃಷಿ, ಕೃಷಿ ಆಧಾರಿತ ಹೈನುಗಾರಿಕೆ, ಅರಣ್ಯ ಮತ್ತು ಮೀನುಗಾರಿಕೆ ವಲಯಗಳು ಜಿಡಿಪಿಯ ಶೇಕಡಾ 17.5ರಷ್ಟನ್ನು ಒದಗಿಸುತ್ತಿವೆ. ಈ ಅಂಕಿಸಂಖ್ಯೆ, ದತ್ತಾಂಶಗಳಿಂದಾಚೆಗೆ ನೋಡಿದರೂ, ವಿಶ್ವದರ್ಜೆಗೆ ಉನ್ನತಿ ಪಡೆದಿರುವ ಭಾರತದ ಮೆಟ್ರೋಪಾಲಿಟನ್‌ ನಗರಗಳಲ್ಲೂ ಸಹ ಬಹುಪಾಲು ಜನತೆ ತಮ್ಮ ಜೀವನೋಪಾಯದ ಮಾರ್ಗವಾಗಿ ಕೃಷಿಯನ್ನೇ ಅವಲಂಬಿಸಿರುತ್ತಾರೆ. ಇದು ಒಪ್ಪಲೇಬೇಕಾದ ವಾಸ್ತವ ಸನ್ನಿವೇಶ.

ಭೂಮಿಗಾಗಿ ಹೋರಾಟಗಳು

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭೂ ಹೋರಾಟಗಳು ಒಂದು ಹಂತದಲ್ಲಿ ತೀವ್ರತೆಯನ್ನು ಪಡೆದುಕೊಂಡರೂ ಕ್ರಮೇಣ ಸಾಂಘಿಕ ವಿಘಟನೆ ಮತ್ತು ರಾಜಕೀಯ-ಸೈದ್ಧಾಂತಿಕ ಧೃವೀಕರಣದ ಪರಿಣಾಮವಾಗಿ ಚದುರಿಹೋಗಿವೆ. ಸಮಸ್ತ ದೇಶದ ರೈತರನ್ನು ಪ್ರತಿನಿಧಿಸುವ ಒಂದು ಏಕೀಕೃತ ರೈತ ಸಂಘಟನೆ ಈವರೆಗೂ ಸಾಧ್ಯವಾಗಿಲ್ಲ ಎನ್ನುವುದು ವಾಸ್ತವವೇ ಆದರೂ, ಕೃಷಿ ಒಂದನ್ನೇ ಆಧರಿಸಿ ಬದುಕು ಸವೆಸುತ್ತಿರುವ ಜನಸಂಖ್ಯೆ ಇಂದಿಗೂ ತಮ್ಮ ಇರುವ ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟದ ಮಾರ್ಗವನ್ನೇ ಅನುಸರಿಸಬೇಕಾಗಿದೆ. ಕೃಷಿ-ಕೃಷಿಕ ಎಂಬ ವಿಶಾಲ ಆವರಣದಲ್ಲಿ ಭೂ ಹೀನರು, ಒಕ್ಕಲು ಅಥವಾ ಗುತ್ತಿಗೆ ರೈತರು, ಕೃಷಿ ಕಾರ್ಮಿಕರನ್ನೂ ಒಳಗೊಂಡಾಗ, ಭಾರತದ ರೈತಾಪಿ ಸಮುದಾಯದ ಬೃಹತ್‌ ಜನಸಂಖ್ಯೆಗೆ ಭೂಮಿ ಒಂದು ಜೀವನಾಧಾರದ ಪ್ರಶ್ನೆಯಾಗಿಯೇ ಕಾಣುತ್ತದೆ.

ಹಾಗಾಗಿಯೇ ಭೂ ಹೋರಾಟಗಳು ಅಥವಾ ಭೂಮಿಯ ಹಕ್ಕುಗಳಿಗಾಗಿ ನಡೆಯುವ ಚಳುವಳಿಗಳು, ಸಾಮಾನ್ಯವಾಗಿ ವಿಘಟಿತವಾಗಿದ್ದರೂ, ಕೆಲವು ಸಂದರ್ಭಗಳಲ್ಲಿ ಏಕೀಕೃತ-ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳುತ್ತವೆ. ತತ್ವ ಸಿದ್ಧಾಂತಗಳನ್ನು ದಾಟಿ ರೈತ ಸಮುದಾಯ ತನ್ನ ಭವಿಷ್ಯದ ಉಳಿವಿಗಾಗಿ ಉಳುಮೆಯ ಹಕ್ಕನ್ನು ಪ್ರತಿಪಾದಿಸುತ್ತಾ, ಭೂಮಿ ಮತ್ತು ಕೃಷಿ ಉತ್ಪನ್ನದ ಮೇಲಿನ ಹಿಡಿತವನ್ನು ರಕ್ಷಿಸಿಕೊಳ್ಳಲು ತೀವ್ರ ಸ್ವರೂಪದ ಹೋರಾಟಗಳನ್ನು ನಡೆಸುತ್ತವೆ. ಇರುವ ಅಲ್ಪಸ್ವಲ್ಪ ಭೂಮಿಯನ್ನು ಉಳಿಸಿಕೊಳ್ಳುವುದು ಈ ಹೋರಾಟಗಳ ಮೂಲಕ ಧ್ಯೇಯವಾಗಿ ಕಂಡರೂ ಸಹ ತನ್ಮೂಲಕ ಭವಿಷ್ಯದ ತಲೆಮಾರುಗಳ ಜೀವನಾಧಾರದ ನೆಲೆಗಳನ್ನು ಸಂರಕ್ಷಿಸುವ ಒಂದು ಔದಾತ್ಯವನ್ನೂ ಇಲ್ಲಿ ಗುರುತಿಸಬೇಕಾಗುತ್ತದೆ. ಆಧುನಿಕ ಮಾರುಕಟ್ಟೆ ಎಷ್ಟೇ ಆಕರ್ಷಕವಾಗಿ ಕಂಡರೂ, ತಳಸಮಾಜದತ್ತ ನೋಡಿದಾಗ ಈ ಶ್ರಮಿಕ ವರ್ಗಗಳ ನಿತ್ಯಬದುಕನ್ನು ಸಮತೋಲನಗೊಳಿಸುವ ತಂತ್ರಗಳನ್ನು ಅನುಸರಿಸುತ್ತದೆಯೇ ಹೊರತು ಸುಸ್ಥಿರ ಬದುಕನ್ನು ಕಟ್ಟಲು ನೆರವಾಗುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಸಂದರ್ಭದಲ್ಲಿ ಕಳೆದ ಮೂರ್ನಾಲ್ಕು ದಶಕಗಳ ರೈತ ಹೋರಾಟಗಳನ್ನು ಗಮನಿಸಿದಾಗ, ಬಹುತೇಕ ಹೋರಾಟಗಳು ರೈತಾಪಿ ಸಮುದಾಯ ತಮ್ಮ ಬಳಿ ಇರುವ ಭೂಮಿಯನ್ನು ರಕ್ಷಿಸಿಕೊಳ್ಳಲು, ತಾವು ನಂಬಿರುವ ಕೃಷಿ ಆಧಾರಿತ ಬದುಕನ್ನು ಉಳಿಸಿಕೊಳ್ಳಲು ಹಾಗೂ ಕೃಷಿ ಉತ್ಪಾದನೆ, ವಿನಿಮಯ, ಸಂಗ್ರಹಣೆ, ಮಾರುಕಟ್ಟೆ ಮತ್ತು ಬೆಳೆದ ಫಸಲಿಗೆ ಸೂಕ್ತ ಬೆಲೆಯನ್ನು ಪಡೆಯುವ ಸಲುವಾಗಿಯೇ ನಡೆದಿರುವುದನ್ನು ಗಮನಿಸಬಹುದು. ನೀರಾವರಿ ಸೌಲಭ್ಯಕ್ಕಾಗಿ, ಜಲಸಂಪನ್ಮೂಲದ ಸಮರ್ಪಕ ವಿತರಣೆಗಾಗಿ ರೈತ ಹೋರಾಟಗಳು ನಡೆದಿವೆ. ಭೂ ಹೀನರಿಗೆ ಭೂಮಿಯ ಹಕ್ಕನ್ನು ಪ್ರತಿಪಾದಿಸುವ ಹೋರಾಟಗಳು ವಿರಳಾತಿವಿರಳ ಎನ್ನಬಹುದು. ಎಡಪಂಥೀಯ ಮತ್ತು ದಲಿತ ಚಳುವಳಿಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿದ್ದರೂ, ನವ ಉದಾರವಾದದ ಪ್ರವೇಶವಾದ ನಂತರ ಭೂಮಿಯ ಹಕ್ಕು ಹೋರಾಟಗಳಿಂದ ವಿಮುಖವಾಗಿರುವುದು ವಾಸ್ತವ. ಕರ್ನಾಟಕದ ದಲಿತ ಚಳುವಳಿಗಳು ಭೂ ಹೋರಾಟಗಳಿಂದಲೇ ಸಂಪೂರ್ಣ ವಿಮುಖವಾಗಿರುವುದು ಚಾರಿತ್ರಿಕ ಸತ್ಯ.

ರೈತ ಹೋರಾಟಗಳ ವ್ಯಾಪ್ತಿ-ಒಳಗೊಳ್ಳುವಿಕೆ

ಹಾಗಾಗಿ ವರ್ತಮಾನ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಭೂ ಹೋರಾಟಗಳನ್ನು ರೈತ ಸಮುದಾಯದ ಜೀವನ ಮತ್ತು ಜೀವನೋಪಾಯದ ಅಸ್ತಿತ್ವವಾದಿ ನೆಲೆಯಲ್ಲಿ ನೋಡಬಹುದಾಗಿದೆ. ಈ ಹೋರಾಟಗಳಲ್ಲಿ ಭೂಮಿ ಇಲ್ಲದವರ ಅಥವಾ ಕೃಷಿಯನ್ನೇ ಜೀವನೋಪಾಯದ ಮಾರ್ಗವಾಗಿಟ್ಟುಕೊಂಡೂ, ತುಂಡು ಭೂಮಿಯನ್ನೂ ಪಡೆಯಲಾಗದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರಾಗಿ, ಅರೆಕಾಲಿಕ ವಲಸೆ ಕಾರ್ಮಿಕರಾಗಿ ಅಸ್ಥಿರ ಬದುಕನ್ನೇ ಅವಲಂಬಿಸಿರುವ ದುಡಿಮೆಗಾರರ, ಕಾಳಜಿಗಳು ಎಷ್ಟರ ಮಟ್ಟಿಗೆ ಬಿಂಬಿಸಲ್ಪಡುತ್ತಿದೆ ಎಂಬ ಸೂಕ್ಷ್ಮ ಅಂಶವನ್ನು ಪರಿಗಣಿಸಬೇಕಿದೆ. ಏಕೆಂದರೆ ಕೃಷಿ ಅವಲಂಬಿತ ರೈತಾಪಿಯ ಸ್ವರೂಪ ಪ್ರಾದೇಶಿಕವಾಗಿ ಭಿನ್ನವಾಗಿರುವುದೇ ಅಲ್ಲದೆ, ನೀರಾವರಿ, ಮಳೆ ಆಧಾರಿತ ಹಾಗು ಒಣಬೇಸಾಯದ ಪ್ರದೇಶಗಳಲ್ಲಿ ರೈತರ ಬದುಕು ಬವಣೆಗಳನ್ನು ಭಿನ್ನ ನೆಲೆಯಲ್ಲೇ ವಿಶ್ಲೇಷಣೆಗೊಳಪಡಿಸಬೇಕಾಗುತ್ತದೆ.

ಸಾಮಾನ್ಯವಾಗಿ ಎಡಪಕ್ಷಗಳನ್ನು ಹೊರತುಪಡಿಸಿ ಇತರ ಯಾವುದೇ ಪಕ್ಷಗಳಾಗಲಿ, ದಲಿತ-ರೈತ-ನಾಗರಿಕ ಸಂಘಟನೆಗಳಾಗಲೀ ಈ ಭೂಹೀನ ಕೃಷಿ ಅವಲಂಬಿತ ಶ್ರಮಜೀವಿಗಳನ್ನು ಸಂಘಟಿಸಲು ಮುಂದಾಗಿಲ್ಲ. ಬಿಹಾರದಿಂದ ಕೋಲಾರದವರೆಗೂ ಕೃಷಿ ಕಾರ್ಮಿಕ ಸಂಘಟನೆಗಳು ಮುಖ್ಯವಾಹಿನಿಯ ಎಡಪಕ್ಷಗಳ ಮುಂದಾಳತ್ವದಲ್ಲೇ ನಡೆಯುತ್ತಿರುವುದು ವಾಸ್ತವ. ಇಲ್ಲಿ ಭೂಮಿಯ ಹಕ್ಕು ಅಥವಾ ಭೂ ಸ್ವಾಧೀನದ ದನಿಗಿಂತಲೂ ಹೆಚ್ಚಾಗಿ, ಸಮಪರ್ಕ ಕೂಲಿ, ಶಿಕ್ಷಣ ಆರೋಗ್ಯ ವಸತಿ ಮತ್ತಿತರ ಮೂಲ ಸೌಕರ್ಯಗಳು ಹಾಗೂ ಸುಸ್ಥಿರ ಜೀವನ ನಿರ್ವಹಣೆಯ ಹಕ್ಕೊತ್ತಾಯಗಳು ಪ್ರಧಾನವಾಗಿ ಕಾಣುತ್ತವೆ.                    ʼಉಳುವವರಿಗೇ ಭೂಮಿʼ ಎಂಬ ಉದಾತ್ತ ವಿಚಾರಧಾರೆ ರಾಜಕೀಯವಾಗಿ ಮಾತ್ರವೇ ಅಲ್ಲದೆ, ಸಂಘಟನಾತ್ಮಕವಾಗಿಯೂ ಸಹ ಹಿನ್ನಲೆಗೆ ಜಾರಿರುವುದು ಒಪ್ಪಲೇಬೇಕಾದ ಸತ್ಯ. ಮುಖ್ಯವಾಹಿನಿಯ ರೈತ-ದಲಿತ ಸಂಘಟನೆಗಳು ಈ ಘೋಷಣೆಯಿಂದಲೇ ಹಿಂದೆ ಸರಿದಿರುವುದೂ ಸಹ ಸುಡು ವಾಸ್ತವ.

RGV ಎಂಬ ವಿವಾದಾತ್ಮಕ ಡೈರೆಕ್ಟರ್! #pratidhvani

ಈ ಹಿನ್ನೆಲೆಯಿಂದಲೇ ನವ ಉದಾರವಾದಿ ಆರ್ಥಿಕತೆ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕ ನೀತಿಗಳ ನೆಲೆಯಲ್ಲಿ ನೋಡಿದಾಗ, ನವ ಶತಮಾನದಲ್ಲಿ ಭೂಮಿ ಪ್ರಶ್ನೆ ಹೆಚ್ಚಾಗಿ ಕಾಡುತ್ತಿರುವುದು ಔದ್ಯಮಿಕ ಜಗತ್ತನ್ನು, ಕಾರ್ಪೋರೇಟ್‌ ಮಾರುಕಟ್ಟೆಯನ್ನು ಮತ್ತು ಕ್ಷಿಪ್ರಗತಿಯ ನಗರೀಕರಣಕ್ಕೆ ವಾರಸುದಾರರಾಗಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ. ಈ ಮಾರುಕಟ್ಟೆ ಶಕ್ತಿಗಳ ರಾಜಕೀಯ ಪ್ರಾಬಲ್ಯ-ಪ್ರಾತಿನಿಧ್ಯವೂ ಕಳೆದ ಎರಡೂವರೆ ದಶಕಗಳಲ್ಲಿ ಹೆಚ್ಚಾಗಿರುವುದನ್ನು ಎಲ್ಲ ರಾಜ್ಯಗಳಲ್ಲಿ-ಕೇಂದ್ರದಲ್ಲೂ ಸಹ ಗುರುತಿಸಬಹುದು. ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮೂಲ ಸೌಕರ್ಯಾಭಿವೃದ್ಧಿ ಆಧಾರಿತ (Infrastructure Development) ಮಾದರಿಯಲ್ಲಿ ಹೆದ್ದಾರಿ, ಎಕ್ಸ್‌ಪ್ರೆಸ್‌ವೇ,  ಮೇಲ್ಸೇತುವೆ-ಸುರಂಗಗಳು, ರಸ್ತೆ ಅಗಲೀಕರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೋರೇಟ್‌ ಸುಪರ್ದಿಗೆ ಅರ್ಪಿಸುವ ಗಣಿಗಾರಿಕೆ ಮುಂತಾದ ಔದ್ಯಮಿಕ ಚಟುವಟಿಕೆಗಳು, ರೈತಾಪಿ ಸಮುದಾಯದ ಪಾಲಿಗೆ ಕರಾಳ ಸ್ವಪ್ನವಾಗಿ ಕಾಡುತ್ತಿದೆ.

ಕೃಷಿ ವಲಯದ ವಾಣಿಜ್ಯೀಕರಣ-ಕಾರ್ಪೋರೇಟೀಕರಣದೊಂದಿಗೆ, ಈ ಮೂಲ ಸೌಕರ್ಯಗಳ ಅಭಿವೃದ್ಧಿಯ ಮಾದರಿಗಳಲ್ಲಿ ರೈತರು ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಂಡು, ಸರ್ಕಾರಗಳು ನೀಡುವ ಪರಿಹಾರಗಳ ಮೂಲಕ ಭವಿಷ್ಯದ ಜೀವನ ಸವೆಸುತ್ತಿರುವುದು ದೇಶವ್ಯಾಪಿ ವಿದ್ಯಮಾನ. ಆಧುನಿಕ ನಗರ ಜೀವನ ಶೈಲಿ, ವಾಹನ ಸಂಚಾರ ಮತ್ತು ಐಟಿ ಜಗತ್ತಿನ ಐಷಾರಾಮಿ ಮಾರುಕಟ್ಟೆ ಹಾಗೂ ಈ ಮೇಲ್ವರ್ಗಗಳಿಗೆ ಪೂರಕವಾಗಿ ಬದಲಾಗುತ್ತಿರುವ ನಗರ ನಿರ್ಮಾಣ ವಿನ್ಯಾಸಗಳು, ದೇಶದ ಹಸಿರು ಸಂಪತ್ತನ್ನು ಕ್ರಮೇಣವಾಗಿ ಇಲ್ಲವಾಗಿಸುತ್ತಿವೆ. ಎಕ್ಸ್‌ಪ್ರೆಸ್‌ ವೇ ಅಥವಾ ಆರು-ಎಂಟು-ಹತ್ತು ಭಾಗಗಳ ವಿಶಾಲ ಹೆದ್ದಾರಿಗಳು ಲಕ್ಷಾಂತರ ಹೆಕ್ಟೇರ್‌ ಭೂಮಿಯನ್ನು ಈಗಾಗಲೇ ಕಬಳಿಸಿದ್ದು, ಇಲ್ಲಿ ನಿರ್ಗತಿಕರಾದ ರೈತ ಸಮುದಾಯದ ಒಂದು ವರ್ಗ ನಗರೀಕರಣಕ್ಕೆ ಹೊಂದುಕೊಂಡು ಬದುಕು ಸಾಗಿಸಿದರೆ, ಮತ್ತೊಂದು ವರ್ಗದ ನವ ತಲೆಮಾರು ನಗರ ಶ್ರಮಜೀವಿಗಳಾಗಿ ಪರಿವರ್ತನೆ ಹೊಂದಿದ್ದಾರೆ. ಕಟ್ಟಡ ನಿರ್ಮಾಣ, ಹೋಟೆಲ್‌ ಉದ್ಯಮ ಮತ್ತು ಷಾಪಿಂಗ್‌ ಮಾಲ್‌ ಮುಂತಾದ ಔದ್ಯಮಿಕ ಜಗತ್ತಿನಲ್ಲಿ ಈ ಕೃಷಿ ಸಮುದಾಯ ಕಾರ್ಮಿಕರಾಗಿ ದುಡಿಯವಂತಾಗಿರುವುದು ವರ್ತಮಾನದ ವಾಸ್ತವಿಕ ದುರಂತ.

ಚನ್ನರಾಯಪಟ್ಟಣದ ಭೂ ಹೋರಾಟ

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತ ಹೋರಾಟವನ್ನು ಈ ನೆಲೆಯಲ್ಲೇ ವಿಶ್ಲೇಷಿಸಬೇಕಿದೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಈ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ವಾಣಿಜ್ಯ-ಔದ್ಯಮಿಕ ಚಟುಟಿಕೆಗಳಿಗೆ ಬಳಸುವ ಒಂದು ವಿಧಾನವನ್ನೇ ಸರ್ಕಾರಗಳು ರೂಪಿಸಿವೆ. ಈ ನಿಟ್ಟಿನಲ್ಲಿ ಇಲ್ಲಿ ನಿರ್ಮಾಣವಾಗಲಿರುವ ʼಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ʼಗಾಗಿ ಇಲ್ಲಿನ 1777 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ 13 ಗ್ರಾಮಗಳ ರೈತ ಸಮುದಾಯ ಕಳೆದ ಮೂರು ವರ್ಷಗಳ ಹೋರಾಡುತ್ತಿವೆ. ಕೃಷಿ ಭೂಮಿಯನ್ನು ಕಾರ್ಪೋರೇಟ್‌ ಮಾರುಕಟ್ಟೆ ಒಪ್ಪಿಸುವ ಸಲುವಾಗಿಯೇ ಸೃಷ್ಟಿಯಾಗಿರುವ ಔದ್ಯಮಿಕ ಸಂಸ್ಥೆ ಕೆಐಎಡಿಬಿ ( ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ) 10 ಗ್ರಾಮಗಳ 1282 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ 2021ರಲ್ಲೇ ಅಧಿಸೂಚನೆ ಹೊರಡಿಸಿದೆ.

ಈ ನಿಟ್ಟಿನಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದಾಗಲೇ 13 ಗ್ರಾಮಗಳ ಶೇಕಡಾ 80ರಷ್ಟು ರೈತರು ತಾವು ಭೂಮಿಯನ್ನು ಕೊಡಲು ಒಪ್ಪುವುದಿಲ್ಲ ಎಂದು ಲಿಖಿತ ಮನವಿಯನ್ನು ದಾಖಲೆಗಳ ಸಮೇತ ಸಲ್ಲಿಸಿದ್ದಾರೆ. ಶೇಕಡಾ 50ಕ್ಕೂ ಹೆಚ್ಚು ರೈತರು ನಿರಾಕರಿಸಿದರೆ, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವ ಬಿಜೆಪಿ ಸರ್ಕಾರದ ಆಶ್ವಾಸನೆಗೆ ಕಾಂಗ್ರೆಸ್‌ ಸರ್ಕಾರವೂ ಮನ್ನಣೆ ನೀಡದೆ, ಈಗ ರೈತರ ಹೋರಾಟಕ್ಕೆ ಮಣಿದು, ಮೂರು ಗ್ರಾಮಗಳ 495 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಒಪ್ಪಿದೆ. ಈಗ ಸ್ವಾಧೀನಕ್ಕೆ ಒಳಗಾಗಲಿರುವ ಉಳಿದ ಪ್ರದೇಶದಲ್ಲಿ 3000ಕ್ಕೂ ಹೆಚ್ಚು ರೈತರು ತಮ್ಮ ನಾಳೆಗಳನ್ನು ಎಣಿಸುವಂತಾಗಿದ್ದು. ಈ ಪ್ರದೇಶದಲ್ಲಿ ಶೇಕಡಾ 33ರಷ್ಟು ನೀರಾವರಿ, ಶೇಕಡಾ 50ರಷ್ಟು ಖುಷ್ಕಿ ಭೂಮಿ ಇದ್ದು , ಸಾವಿರಾರು ಟನ್‌ ರಾಗಿ, ತರಕಾರಿ, ಹೂವು ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಪ್ರತಿದಿನ 6 ರಿಂದ 8 ಸಾವಿರ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ಇಲ್ಲಿನ ರೇಷ್ಮೆ ಬೆಳೆಗಾರಿಕೆ ರಾಜ್ಯದ ರೇಷ್ಮೆ ಮಾರುಕಟ್ಟೆಯ ಪ್ರಧಾನ ಭಾಗವಾಗಿದೆ.

ಈ ಭೂಸ್ವಾಧೀನ ನಡೆದರೆ 600 ಕುಟುಂಬಗಳು ಅಪಾಯ ಎದುರಿಸಲಿದ್ದು 387 ಕುಟುಂಬಗಳು ಭೂರಹಿತ ಆಗಲಿವೆ. ಈ ಕುಟುಂಬಗಳ 3000 ಸದಸ್ಯರು ನಗರೀಕರಣದ ಕೂಪದಲ್ಲಿ ತಳ್ಳಲ್ಪಟ್ಟು ಜೀವನ ಸವೆಸಬೇಕಾಗುತ್ತದೆ. ಈ ಅಪಾಯಗಳ ಹಿನ್ನೆಲೆಯಲ್ಲೇ ಚನ್ನರಾಯಪಟ್ಟಣ ಭೂಸ್ವಾಧೀನ ಸಮಿತಿ ನೇತೃತ್ವದಲ್ಲಿ ದಲಿತ-ಮಹಿಳಾ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು 2022ರ ಏಪ್ರಿಲ್‌ 4 ರಿಂದಲೂ ಅನಿರ್ದಾವಧಿ ಮುಷ್ಕರ ನಡೆಸುತ್ತಿವೆ. ʼನಾವೂ ಮಣ್ಣಿನ ಮಕ್ಕಳೇʼ ಎಂದು ಬೆನ್ನುತಟ್ಟಿಕೊಳ್ಳುವ ಸರ್ಕಾರಗಳು ಈ ಹೋರಾಟವನ್ನು ಹತ್ತಿಕ್ಕಲು ಇತ್ತೀಚೆಗೆ ಪೊಲೀಸ್‌ ದಬ್ಬಾಳಿಕೆಯನ್ನೂ ಬಳಸಿಕೊಂಡಿರುವುದು ದುರದೃಷ್ಟಕರವಾದರೂ, ಇದು ಕಳೆದ ನಾಲ್ಕು ದಶಕಗಳಲ್ಲಿ ರೈತ ಹೋರಾಟಗಳು ಎದುರಿಸಿರುವ ದಮನಕಾರೀ ವ್ಯವಸ್ಥೆಯ ಮುಂದುವರಿಕೆಯಾಗಿದೆ.  ನರಗುಂದ-ನವಲಗುಂದ-ಸಿಂಗೂರು ನಂದೀಗ್ರಾಮ-ಬಾಗೂರು ನವಿಲೆ-ನೈಸ್‌ ಕಾರಿಡಾರ್-ದಶಪಥ ಎಕ್ಸ್‌ಪ್ರೆಸ್‌ವೇ ಇಂದ ಚನ್ನರಾಯಪಟ್ಟಣದವರೆಗೂ ರೈತರ ಹೋರಾಟವನ್ನು ಹತ್ತಿಕ್ಕುವ ಈ ಪ್ರಕ್ರಿಯೆ ನಿರಂತರವಾಗಿ ಚಾಲನೆಯಲ್ಲಿದೆ.

ಪರಿಹಾರ-ಪುನರ್ವಸತಿಗಳ ನಡುವೆ

ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿರುವ ಕೃಷಿ ಭೂಮಿಗೆ ಪರ್ಯಾಯವಾಗಿ ರೈತರಿಗೆ ನೀಡುವ ಪರಿಹಾರವನ್ನು ನಗದು ರೂಪದಲ್ಲಿ ಅಥವಾ ಅಭಿವೃದ್ಧಿಯಾದ ಭೂಮಿಯಲ್ಲಿ 10771 ಚದರಡಿ ನಿವೇಶನವನ್ನು ನೀಡುವ ಪ್ರಸ್ತಾವನೆಯನ್ನು ಸರ್ಕಾರ ಹೋರಾಟಗಾರರ ಮುಂದಿಟ್ಟಿದೆ. ಇದನ್ನು ಒಪ್ಪದ ಹೋರಾಟ ಸಮಿತಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿರುವುದು ಸಮಕಾಲೀನ ಚರಿತ್ರೆಯ ಪುನರಾವರ್ತನೆಯಾಗಿಯೇ ಕಾಣುತ್ತದೆ. ಭಾರತ ಸಾಗುತ್ತಿರುವ ಆಪ್ತ ಬಂಡವಾಳಶಾಹಿ (Croney Capitalism) ಆರ್ಥಿಕ ಮಾದರಿಯಲ್ಲಿ, ಪಕ್ಷಾತೀತವಾಗಿ ಗುರುತಿಸಬಹುದಾದ ಸಮಾನ ಎಳೆ ಎಂದರೆ ರೈತ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ದಮನಿಸುವುದು ಮತ್ತು ಹೋರಾಟನಿರತ ರೈತರೊಂದಿಗೆ ಸಾಂಭಾಷಿಸಲೂ ಮುಂದಾಗದೆ ಆಡಳಿತಾತ್ಮಕ ಕ್ರಮಗಳ ಮೂಲಕವೇ ಅನ್ನದಾತರ ಹತಾಶೆ, ಆಕ್ರೋಶಗಳನ್ನು ಶಮನಗೊಳಿಸಲು ಪ್ರಯತ್ನಿಸುವುದು. ದೆಹಲಿಯ ಚಾರಿತ್ರಿಕ ರೈತ ಮುಷ್ಕರ ಒಂದು ಚಾರಿತ್ರಿಕ ನಿದರ್ಶನ.

ಕರ್ನಾಟಕದ ಕಾಂಗ್ರೆಸ್‌ ಸರ್ಕಾರವೂ ಇದಕ್ಕೆ ಹೊರತಾಗಿಲ್ಲ. ಇತ್ತೀಚೆಗೆ ನಡೆದ ಪೊಲೀಸ್‌ ದೌರ್ಜನ್ಯದ ನಂತರವೂ ರಾಜ್ಯ ಮುಖ್ಯಮಂತ್ರಿಗಳು ಜುಲೈ ನಾಲ್ಕರಂದು ರೈತರೊಡನೆ ಸಮಾಲೋಚನೆ ನಡೆಸುವುದಾಗಿ ಹೇಳಿರುವುದು, ಆಳ್ವಿಕೆಯ ಅಸೂಕ್ಷ್ಮತೆಯನ್ನು ಪ್ರದರ್ಶಿಸುತ್ತದೆ.  ಹಗಲು ರಾತ್ರಿಯೆನ್ನದೆ, ಮಹಿಳೆಯರು , ಮಕ್ಕಳು, ವೃದ್ಧರನ್ನೊಳಗೊಂಡಂತೆ ನಡೆಯುತ್ತಿರುವ ದೀರ್ಘ ಹೋರಾಟಕ್ಕೆ ತಕ್ಷಣವೇ ಸ್ಪಂದಿಸುವ ಮಾನವೀಯ ವಿವೇಕವಾದರೂ ಸರ್ಕಾರಗಳಿಗೆ ಇರಬೇಕಲ್ಲವೇ ? ಆದರೆ ಕಾರ್ಪೋರೇಟ್‌ ಹಿತಾಸಕ್ತಿಯ ಪ್ರಭಾವ ಮತ್ತು ಬಂಡವಾಳ ಮಾರುಕಟ್ಟೆಯ ಒತ್ತಾಸೆಗಳು ಸರ್ಕಾರಗಳನ್ನು ನಿರ್ಬಂಧಿಸುತ್ತವೆ. “ಕೃಷಿ ಮತ್ತು ಕೈಗಾರಿಕೆ ಎರಡೂ ಒಂದೇ ರಥದ ಚಕ್ರಗಳಂತೆ ” ಎಂಬ ತತ್ವಶಾಸ್ತ್ರೀಯ ಉಪದೇಶ ನೀಡುವ ಕರ್ನಾಟಕದ ಸಚಿವರು, ವಾಸ್ತವವನ್ನು ಅರ್ಥೈಸಿಕೊಳ್ಳಿ ಎಂದು ರೈತರಿಗೆ ಮನವಿ ಮಾಡುತ್ತಾರೆ. (ಪ್ರವಾ 27 ಜೂನ್‌ 2025). ಆದರೆ ರಥದ ಒಂದು ಚಕ್ರದ ಅಡಿಯಲ್ಲಿ ಸಿಲುಕಿ ನಲುಗಿಹೋಗುವ ನೂರಾರು ರೈತ ಕುಟುಂಬಗಳು ಮತ್ತು ಶಾಶ್ವತ ನಿರ್ಗತಿಕತೆಗೆ ದೂಡಲ್ಪಡುವ ಭವಿಷ್ಯದ ತಲೆಮಾರು ಎದುರಿಸುವ ಸಂಕಷ್ಟಗಳ ಹೆದ್ದಾರಿಯೇ ಇರುವುದನ್ನು ಸಚಿವರು ಗಮನಿಸುವುದಿಲ್ಲ. ಈ ಹೆದ್ದಾರಿಯಲ್ಲಿ ಕೇಳಿಬರುವ ನೋವು, ಹಸಿವು, ಬಡತನ, ಹತಾಶೆ, ಆಕ್ರಂದನಗಳಿಗೆ ಸರ್ಕಾರಗಳು ಕಿವುಡಾಗಿರುತ್ತವೆ.

ಇಲ್ಲಿ ವಿಡಂಬನೆ ಎಂದರೆ 2013ರಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಅನುಷ್ಠಾನಗೊಳಿಸಿದ ಭೂ ಸ್ವಾಧೀನ ಕಾಯ್ದೆಯ ನಿಯಮಗಳ ಉಲ್ಲಂಘನೆಯಾಗುತ್ತಿದ್ದರೂ, ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತಿರುವುದು ತಮ್ಮ ಬದುಕಿಗಾಗಿ ಹೋರಾಡುತ್ತಿರುವ ರೈತ ಸಮುದಾಯ. ಶ್ರೀರಂಗಪಟ್ಟಣ-ಬೀದರ್‌ ಚತುಷ್ಪದ ರಾಜ್ಯ ಹೆದ್ದಾರಿ ನಿರ್ಮಾಣದ ಪ್ರಕ್ರಿಯೆಯೂ ಜಾರಿಯಲ್ಲಿದ್ದು 145 ಕಿಮೀ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಈ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಸಣ್ಣ, ಅತಿಸಣ್ಣ ಮತ್ತು ಅಂಚಿನಲ್ಲಿರುವ ರೈತರು ಭವಿಷ್ಯದಲ್ಲಿ ಪರಾವಲಂಬಿಗಳಾಗಿ, ನಗರೀಕರಣದ ನಿರ್ಲಕ್ಷಿತ ದುಡಿಮೆಗಾರರಾಗಿ-ವಲಸೆ ಕಾರ್ಮಿಕರಾಗಿ ಪರಿವರ್ತನೆಯಾಗುತ್ತಾರೆ. ಅಥವಾ ನಿರ್ಮಾಣವಾಗುವ ಹೊಸನಗರಗಳ ಐಷಾರಾಮಿ ಬದುಕಿಗೆ ನೆರವಾಗುವ ಜೀತದಾಳುಗಳಾಗಿ ಬದುಕು ಸವೆಸಬೇಕಾಗುತ್ತದೆ. ಇದನ್ನು Re proletarisation (ಮರು ಶ್ರಮಜೀವೀಕರಣ) ಎಂದು ಗುರುತಿಸಲಾಗುತ್ತದೆ. ಅಂದರೆ ತಮ್ಮ ಸ್ವಾವಲಂಬಿ ನೆಲೆಯಿಂದ ಪರಾವಲಂಬಿ ನೆಲೆಗೆ ಕುಸಿಯುವ ಒಂದು ಕ್ರೂರ ಸಾಮಾಜಿಕ ಪ್ರಕ್ರಿಯೆ. ಈ ಸಾಮಾಜಿಕ ಕ್ರೌರ್ಯ, ಆಡಳಿತದ ಅಮಾನುಷತೆ ಮತ್ತು ಅಭಿವೃದ್ಧಿ ಮಾದರಿಯ ವಿಕಲ್ಪದ ವಿರುದ್ಧ ಹೋರಾಡಬೇಕಿದೆ. ‌

ಹೋರಾಟದ ಸಾಫಲ್ಯ-ವೈಫಲ್ಯದಿಂದಾಚೆಗೆ

ದೇವನಹಳ್ಳಿ ರೈತ ಹೋರಾಟ ಈ ಆಡಳಿತಾತ್ಮಕ ದಬ್ಬಾಳಿಕೆ, ಮಾರುಕಟ್ಟೆ ಕ್ರೌರ್ಯ, ಬಂಡವಾಳದ ಅಮಾನುಷತೆ ಮತ್ತು ಅಭಿವೃದ್ಧಿ ಮಾದರಿಯ ಕರಾಳ ಮುಖವಾಡವನ್ನು ಮತ್ತೊಮ್ಮೆ ನಮ್ಮ ಮುಂದಿಟ್ಟಿದೆ. ಈ ಹೋರಾಟಗಳ ಯಶಸ್ಸು ಅಥವಾ ವೈಫಲ್ಯವನ್ನು ಶೋಧಿಸಿದಾಗ, ಬಹುತೇಕ ಹೋರಾಟಗಳು ಅಂತಿಮವಾಗಿ ಪರಿಹಾರ-ಪುನರ್ವಸತಿಗಳ ನೆಲೆಯಲ್ಲಿ ಪರ್ಯವಸಾನಗೊಳ್ಳುವುದನ್ನು ಕಾಣಬಹುದು. ಭೂಮಿಯನ್ನು ಉಳಿಸಿಕೊಂಡಿರುವ ಕೆಲವು ಹೋರಾಟಗಳು ನಿದರ್ಶನ ರೂಪದಲ್ಲಿ ನಮ್ಮ ಮುಂದಿವೆ. ಹೀಗೆ ಸುದೀರ್ಘ ಹೋರಾಟದ ಹೊರತಾಗಿಯೂ ತಮ್ಮ ಕೃಷಿ ಭೂಮಿ, ಕೃಷಿ ಆಧಾರಿತ ಬದುಕನ್ನು ಕಳೆದುಕೊಂಡು, ಹೊಸ ಬದುಕಿಗೆ ಹೊರಳಿಕೊಂಡಿರುವ ರೈತರ ಸಂಖ್ಯೆ ಲಕ್ಷಾಂತರ.

ಈ ರೈತ ಕುಟುಂಬಗಳ ಪಲ್ಲಟಗೊಂಡ ಜೀವನ ಭವಿಷ್ಯದಲ್ಲಿ ಹೇಗೆ ರೂಪುಗೊಂಡಿದೆ, ಮುಂದಿನ ತಲೆಮಾರು ಇದನ್ನು ಹೇಗೆ ಸರಿದೂಗಿಸಿ ಮುನ್ನಡೆದಿದೆ, ಭೂತಾಯಿಯ ಮಕ್ಕಳಾಗಿದ್ದವರು ಕಾಂಕ್ರೀಟ್‌ ಕಾಡುಗಳಲ್ಲಿ ವಾಸಿಸುವ ಕ್ರೂರ ಪ್ರಕ್ರಿಯೆಯಲ್ಲಿ ಈ ಅನ್ನದಾತರ ಬದುಕು ಯಾವ ರೀತಿಯ ಸವಾಲುಗಳನ್ನು, ಸಂಕೀರ್ಣತೆಗಳನ್ನು, ಸಂಕಷ್ಟಗಳನ್ನು ಎದುರಿಸಿದೆ, ನವ ಉದಾರವಾದದ ಸುಂದರ ಜಗತ್ತು ಈ ಮಣ್ಣಿನ ಮಕ್ಕಳಿಗೆ ಎಂತಹ ಸುಂದರ ಜಗತನ್ನು ಕಟ್ಟಿಕೊಟ್ಟಿದೆ ಅಥವಾ ಮಣ್ಣಿನ ಮಕ್ಕಳ ಆಳ್ವಿಕೆಗಳಲ್ಲಿ ಈ ಸಮಾಜಗಳು ಹೇಗೆ ತಮ್ಮ ಮೂಲ ಸೆಲೆಯನ್ನೇ ಕಳೆದುಕೊಂಡು ಬದುಕುತ್ತಿವೆ ಎಂಬ ಜಟಿಲ ಪ್ರಶ್ನೆಗಳಿಗೆ ಗಂಭೀರವಾದ ಅಧ್ಯಯನ, ಸಂಶೋಧನೆ, ಕ್ಷೇತ್ರ ಕಾರ್ಯ ಹಾಗೂ ಮಾನವೀಯ ಸ್ಪಂದನೆಯನ್ನೊಳಗೊಂಡ ಸಮೀಕ್ಷೆ ಅತ್ಯವಶ್ಯವಾಗಿದೆ. ನನ್ನ ವೈಯುಕ್ತಿಕ ಅರಿವಿಗೆ ಬಂದಂತೆ ಈ ರೀತಿಯ ಒಂದು ಅಧ್ಯಯನ-ಸಮೀಕ್ಷೆ ಈವರೆಗೂ ಎಲ್ಲಿಯೂ ನಡೆದಂತಿಲ್ಲ. ಭೂಮಿ ಕಳೆದುಕೊಂಡವರಿಗೆ ಬದುಕು ಮುಖ್ಯವಾಗಿ, ಹೇಗೋ ಬದುಕುಳಿಯುತ್ತಾರೆ. ಆದರೆ ಈ ಜನರ ಬುನಾದಿಯಾಗಿದ್ದ ಒಂದು ಸಮಾಜ, ಸಂಸ್ಕೃತಿ ಮತ್ತು ಜೀವನಶೈಲಿ ತನ್ನ ಗತಿಬದಲಿಸಿ ಇತಿಹಾಸದ ವಿಸ್ಮೃತಿಗೆ ಜಾರಿಬಿಡುತ್ತದೆ.

ಇಂತಹ ಗಂಭೀರ ಅಧ್ಯಯನಗಳನ್ನು ನಡೆಸುವ ನೈತಿಕ ಜವಾಬ್ದಾರಿ ನಮ್ಮ ವಿಶ್ವವಿದ್ಯಾಲಯಗಳ ಮತ್ತು ಇತರ ಬೌದ್ಧಿಕ-ಶೈಕ್ಷಣಿಕ ಸಂಸ್ಥೆಗಳ ಮೇಲಿದೆ. ರೈತ ಸಂಘಟನೆಗಳು, ದಲಿತ ಚಳುವಳಿಗಳು ಮತ್ತು ಎಡಪಕ್ಷಗಳು ತಮ್ಮ ಬಳಿ ಇರುವ ಸಂಪನ್ಮೂಲಗಳ ಇತಿಮಿತಿಯಲ್ಲೇ ಇಂತಹ ಅಧ್ಯಯನಗಳನ್ನು ನಡೆಸುವ ಮೂಲಕ ನವ ಉದಾರವಾದದ ಅಭಿವೃದ್ಧಿ ಮಾದರಿ ಸೃಷ್ಟಿಸುತ್ತಿರುವ ಅನಾಹುತಗಳನ್ನು ಜನಸಾಮಾನ್ಯರ ಮುಂದಿಡಬಹುದು. ಆದರೆ ಈ ದೂರಗಾಮಿ ದೃಷ್ಟಿಕೋನ ಮತ್ತು ಸಾಂಘಿಕ ಧ್ಯೇಯ ಪ್ರಗತಿಪರ ಎನ್ನಲಾಗುವ ಸಂಘಟನೆಗಳಲ್ಲಿ ಇರುವುದು ಅತ್ಯವಶ್ಯ. ಇದೆ ಅಥವಾ ಇಲ್ಲ ಎನ್ನಲು ಇತಿಹಾಸ ಸಾಕ್ಷಿಯಾಗುತ್ತದೆ. ಶೈಕ್ಷಣಿಕ ವಲಯವೂ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಒಂದು ಭಾಗವಾಗುತ್ತಿರುವ ಸನ್ನಿವೇಶದಲ್ಲಿ, ಈ ಜವಾಬ್ದಾರಿಯನ್ನು ಜನಪರ ಚಳುವಳಿಗಳು, ಸಂಘಟನೆಗಳೇ ಹೊರಬೇಕಿದೆ. ಸುತ್ತಲಿನ ಹಸಿರು, ಕಾಡು, ಕೃಷಿ ಭೂಮಿ ಪೂರ್ಣ ಬೆಂಗಾಡಾಗುವ ಮುನ್ನ ಈ ಜಾಗೃತಿ ನಮ್ಮಲ್ಲಿ ಮೂಡಿದರೆ, 22ನೆ ಶತಮಾನದ ವೇಳೆಗೆ ʼಹಸಿರುʼ ಎಂಬ ವಿದ್ಯಮಾನ ಪಠ್ಯಪುಸ್ತಕಗಳ ಹಾಳೆಗಳಿಗೆ ಸೀಮಿತವಾಗುವುದನ್ನು  ತಪ್ಪಿಸಲು ಸಾಧ್ಯ.

(ಚನ್ನರಾಯಪಟ್ಟಣ ಹೋರಾಟ ಮತ್ತು ಪ್ರಸ್ತುತ ಪರಿಸ್ಥಿತಿಯ ಮಾಹಿತಿಗಳಿಗೆ ಆಧಾರ ; ಭೂಮಿ ಬದುಕಿಗಾಗಿ ಸಾವಿರದ ಹೋರಾಟ – ಬಿ.ವಿ. ಶ್ರೀನಾಥ್‌ ಮತ್ತು ಸಂದೀಪ್‌ ಲೇಖನ ಪ್ರಜಾವಾಣಿ ದಿನಾಂಕ 27 ಜೂನ್‌ 2025 )

-೦-೦-೦-

Tags: Devanahallidevanahalli bunddevanahalli chalkdevanahalli chalodevanahalli chalo farmer protestdevanahalli farmer news in kannadadevanahalli farmersdevanahalli farmers landdevanahalli farmers newsdevanahalli farmers protestdevanahalli farmers stage protestdevanahalli farmers videodevanahalli newsdevanahalli propertiesdevanahalli protestdevanahallifarmersprotestfarmers protest in devanhalliland in devanahalliprotest in devanahalli
Previous Post

E-Khata: ಇ-ಖಾತೆ ಮಾಡಿಸಿಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ: ಡಿಸಿಎಂ ಡಿ.ಕೆ. ಶಿವಕುಮಾರ್

Next Post

ಸರಳವಾಸ್ತು ಎಂಬುದು ಜನರಿಗೆ ಮಂಕುಬೂದಿ ಎರಚಿ ಹಣ ಗುಡ್ಡೆಹಾಕುವ ವಾಮಮಾರ್ಗ

Related Posts

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
0

ಅಂದು ಮೈಸೂರಿನ ಮೂಡಾ ( MUDA ) ಭೂ ಹಗರಣಕ್ಕೆ ಸಿದ್ದರಾಮಯ್ಯ ಗೆ ಸಂಕಷ್ಟ ತಂದಿದ್ದ ಸ್ನೇಹಮಹಿ ಕೃಷ್ಣ ಇದೀಗ ಧರ್ಮಸ್ಥಳ ಗ್ರಾಮದ ಪ್ರಕರಣಕ್ಕೆ ಮತ್ತೆ ಎಂಟ್ರಿ...

Read moreDetails

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

August 21, 2025

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

August 21, 2025
Next Post
ಸರಳವಾಸ್ತು ಎಂಬುದು ಜನರಿಗೆ ಮಂಕುಬೂದಿ ಎರಚಿ ಹಣ ಗುಡ್ಡೆಹಾಕುವ ವಾಮಮಾರ್ಗ

ಸರಳವಾಸ್ತು ಎಂಬುದು ಜನರಿಗೆ ಮಂಕುಬೂದಿ ಎರಚಿ ಹಣ ಗುಡ್ಡೆಹಾಕುವ ವಾಮಮಾರ್ಗ

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!
Top Story

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

by ಪ್ರತಿಧ್ವನಿ
August 21, 2025
Top Story

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

by ಪ್ರತಿಧ್ವನಿ
August 21, 2025
Top Story

ದರ್ಶನ್‌ ಮತ್ತೆ ಜೈಲ್‌ಗೆ ಹೋಗಲು ಆ ಪ್ರಭಾವಿ ಮಂತ್ರಿಗಳು ಕಾರಣ..?

by ಪ್ರತಿಧ್ವನಿ
August 21, 2025
Top Story

ಮಾತ್ನಾಡಲು ಅವಕಾಶ ಕೊಡದಿದ್ದಕ್ಕೆ ಸ್ಪೀಕರ್ ಮೇಲೆನೇ ಸಿಡಿದ ಶಿವಲಿಂಗೇಗೌಡ

by ಪ್ರತಿಧ್ವನಿ
August 21, 2025
ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ
Top Story

ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಸಂವಾದ

by ಪ್ರತಿಧ್ವನಿ
August 21, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

ಅಂದು ಸಿಎಂ ಸಿದ್ದರಾಮಯ್ಯ ಇಂದು ಮಹೇಶ್ ಶೆಟ್ಟಿ ತಿಮರೋಡಿ. ತನಿಕೆಗೆ ಸ್ನೇಹಮಹಿ ಕೃಷ್ಣ ಆಗ್ರಹ..!

August 21, 2025

ಸದನದಲ್ಲಿ ಶರಣಗೌಡ ಕಂದಕುರ್ ಗಂಭೀರ ಆರೋಪ..!

August 21, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada