
ಭಾರತ ಸಾಗುತ್ತಿರುವ ಆರ್ಥಿಕ ಹಾದಿಯಲ್ಲಿ ರೈತ ಹೋರಾಟಗಳ ಭವಿಷ್ಯಕ್ಕೆ ಹೊಸಮಾದರಿ ಬೇಕಿದೆ
ನಾ ದಿವಾಕರ
ಭಾಗ 2
ನವ ಆರ್ಥಿಕತೆ ಮತ್ತು ಸೈದ್ಧಾಂತಿಕ ಸವಾಲು
ಭಾರತ ಸಾಗುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ ನಿರ್ದೇಶಿತ ಆರ್ಥಿಕ ಪಥದಲ್ಲಿ ಈ ಪ್ರಶ್ನೆ ಪ್ರಮುಖವಾಗಿ ಮುನ್ನಲೆಗೆ ಬರಬೇಕಲ್ಲವೇ ? ಈ ಜವಾಬ್ದಾರಿ ಯಾರದು ? ಸರ್ಕಾರಗಳಿಗೆ, ಜನಪ್ರತಿನಿಧಿಗಳಿಗೆ, ರಾಜಕೀಯ ಪಕ್ಷಗಳಿಗೆ ಚುನಾವಣಾ ಕೇಂದ್ರಿತ ಮತಬ್ಯಾಂಕ್ ಹಿತಾಸಕ್ತಿಗಳಿಂದಾಚೆ ಯೋಚಿಸುವ ವಿವೇಕ-ವಿವೇಚನೆಯೇ ಇಲ್ಲದಿರುವುದರಿಂದ, ಇದು ನಾಗರಿಕ ಸಮಾಜವನ್ನು ಪ್ರತಿನಿಧಿಸುವ ಜನಪರ ಚಿಂತನೆಯ ಬೌದ್ಧಿಕ ಸಂಸ್ಥೆಗಳ ಜವಾಬ್ದಾರಿಯಾಗುತ್ತದೆ. ಇಲ್ಲಿ ಭಾರತದ ಎಡಪಕ್ಷಗಳು ತಮ್ಮ ಪಾರಂಪರಿಕ ಮಾರ್ಗಗಳಿಗಿಂತಲೂ ಭಿನ್ನವಾಗಿ ಆಲೋಚನೆ ಮಾಡಬೇಕಾಗುತ್ತದೆ. ಬಹುಮುಖ್ಯವಾಗಿ ಮುಖ್ಯವಾಹಿನಿಯ ಎಡಪಕ್ಷಗಳು ತಮ್ಮ ವ್ಯಾಪ್ತಿಯಲ್ಲಿರುವ ಮಾನವ ಸಂಪನ್ಮೂಲ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಬಳಸಿಕೊಂಡು, ಸ್ವಾವಲಂಬನೆಯಿಂದ ಪರಾವಲಂಬನೆಗೆ ಜಾರುವ ಕೋಟ್ಯಂತರ ಕೃಷಿ-ಗ್ರಾಮೀಣ ಕಾರ್ಮಿಕರ ಸ್ಥಿತಿಗತಿಗಳನ್ನು ಅಧ್ಯಯನ-ಸಂಶೋಧನೆ ಮಾಡಲು ಮುಂದಾಗುವುದು ವರ್ತಮಾನದ ತುರ್ತು. ಆಗ ಏನಿಲ್ಲವೆಂದರೂ, ಈ ದುಡಿಯುವ ವರ್ಗಗಳ ಸಂಖ್ಯೆ, ಪ್ರಮಾಣ, ಸಮಸ್ಯೆ ಮತ್ತು ಬಿಕ್ಕಟ್ಟುಗಳನ್ನಾದರೂ ವಿಶಾಲ ಸಮಾಜದ ಮುಂದೆ ತೆರೆದಿಡಲು ಸಾಧ್ಯವಾದೀತು.
ಮಾರ್ಕ್ಸ್, ಏಂಗೆಲ್ಸ್, ಲೆನಿನ್, ಮಾವೋ ಮೊದಲಾದವರ ಪರಂಪರೆಯನ್ನು ಸ್ವೀಕರಿಸಿ, ಸಾಂಸ್ಥಿಕವಾಗಿ ಹಾಗೂ ಸಾಂಘಿಕವಾಗಿ ಪ್ರತಿನಿಧಿಸುತ್ತಿರುವ ಎಡಪಕ್ಷಗಳಲ್ಲಿ ಈ ಹೊಸ ಚಿಂತನೆ ಮೂಡಬೇಕಿದೆ. ಅಸ್ತಿತ್ವ ಮತ್ತು ಅಸ್ಮಿತೆಯನ್ನು ಶಾಶ್ವತಗೊಳಿಸುವ, ಕಾರ್ಮಿಕ ಸಂಘಟನೆ-ರಾಜಕೀಯ ಪಕ್ಷಗಳ ʼಭವನʼಗಳ ನಿರ್ಮಾಣಕ್ಕಿಂತಲೂ ಮುಖ್ಯವಾಗಿ ಆಗಬೇಕಿರುವುದು ಈ ರೀತಿಯ ಅಧ್ಯಯನಗಳು. ಬಹುಮುಖ್ಯವಾಗಿ ಮೇಲ್ಪದರದ-ವೈಟ್ ಕಾಲರ್ ವರ್ಗಕ್ಕೆ ಸೇರಿದ–ವೇತನ ಭವಿಷ್ಯ ನಿಧಿಯ ಸವಲತ್ತುಗಳ ಫಲಾನುಭವಿಗಳಾಗಿರುವ ಸಂಘಟಿತ ಕಾರ್ಮಿಕ ವಲಯ ಮತ್ತು ಸಾಂವಿಧಾನಿಕ ಸೌಲಭ್ಯಗಳ ಫಲಾನುಭವಿ ತಳಸಮುದಾಯಗಳ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಂಭೀರ ಆಲೋಚನೆ ಮಾಡಬೇಕಿದೆ. ಆಧುನಿಕ ಆರ್ಥಿಕತೆಯ ಅಭಿವೃದ್ಧಿ ಪಥದಲ್ಲಿ ಅವಕಾಶವಂಚಿತರಾಗಿ ರೂಪುಗೊಳ್ಳುವ ಅಸಂಖ್ಯಾತ ಜನರ ಭವಿಷ್ಯವೇ ಭಾರತದ ಭವಿಷ್ಯವನ್ನೂ ನಿರ್ಧರಿಸುವುದರಲ್ಲಿ ನಿರ್ಣಾಯಕವಾಗುತ್ತದೆ ಎನ್ನುವ ವಾಸ್ತವವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗಂಭೀರ ಬೌದ್ಧಿಕ ಚಿಂತನೆ ಮತ್ತು ಭೌತಿಕ ಕಾರ್ಯಸೂಚಿಗಳನ್ನು ರೂಪಿಸುವುದು ಸಂಘಟಿತ ಕಾರ್ಮಿಕರ ಹಾಗೂ ಮುಖ್ಯವಾಹಿನಿ ಎಡಪಕ್ಷಗಳ ಮೊದಲ ಆದ್ಯತೆಯಾಗಬೇಕಿದೆ. ಇದು ಅಸಾಧ್ಯವೇನಲ್ಲ.

ದೇವನಹಳ್ಳಿ ರೈತರ ಯಶಸ್ಸಿನ ಹಾದಿ
ಈ ಹಿನ್ನೆಲೆಯಲ್ಲಿ ಸಮಕಾಲೀನ ಸಂದರ್ಭದ ರೈತ ಹೋರಾಟಗಳ ಸಾಫಲ್ಯ ವೈಫಲ್ಯಗಳನ್ನು ಪರಾಮರ್ಶಿಸುವಾಗ, ವರ್ತಮಾನ ಭಾರತದ ಹೊಸ ಅರ್ಥವ್ಯವಸ್ಥೆ ಮತ್ತು ಪಕ್ಷಾತೀತವಾಗಿ ಎಲ್ಲ ಮುಖ್ಯವಾಹಿನಿ ರಾಜಕೀಯ ಪಕ್ಷಗಳೂ ಅನುಸರಿಸುತ್ತಿರುವ ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ಗಮನದಲ್ಲಿಡಬೇಕಾಗುತ್ತದೆ. ಇತ್ತೀಚೆಗೆ ತಮ್ಮ 1198 ದಿನಗಳ ಸುದೀರ್ಘ ಹೋರಾಟದ ಫಲವಾಗಿ ಸರ್ಕಾರವನ್ನು ಮಣಿಸಿದ ದೇವನಹಳ್ಳಿ ರೈತರ ಗೆಲುವು ರೈತ ಸಮುದಾಯದಷ್ಟೇ ಅಲ್ಲದೆ, ಇತರ ಜನಪರ ಹೋರಾಟಗಳಿಗೂ ಸ್ಪೂರ್ತಿದಾಯಕವಾಗಿರುವುದು ವಾಸ್ತವ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ವ್ಯಾಪ್ತಿಗೆ ಬರುವ 13 ಗ್ರಾಮಗಳ 1777 ಎಕರೆ ಫಲವತ್ತಾದ ಕೃಷಿ ಭೂಮಿಯ ಪೈಕಿ 1282 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಲಿ (ಕೆಐಎಡಿಬಿ) ಮೂರು ವರ್ಷಗಳ ಹಿಂದೆ, 2021ರಲ್ಲಿ ಅಧಿಸೂಚನೆ ಹೊರಡಿಸಿದ್ದು ಈ ಹೋರಾಟದ ಕಿಡಿ ಹೊತ್ತಿಕೊಳ್ಳಲು ಕಾರಣವಾಗಿತ್ತು.
ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಹರಡಿಕೊಂಡಿರುವ ಈ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ಅತ್ಯಾಧುನಿಕ ತಂತ್ರಜ್ಞಾನದ “ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ” ನಿರ್ಮಿಸುವುದು ಸರ್ಕಾರದ ಮೂಲ ಉದ್ದೇಶವಾಗಿತ್ತು. ಈ ಯೋಜನೆಯನ್ನು ಮೂಲತಃ ರೂಪಿಸಿದ್ದು ಹಿಂದಿನ ಬಿಜೆಪಿ ಸರ್ಕಾರವೇ ಆದರೂ, ನವ ಬಂಡವಾಳಶಾಹಿ ಅಭಿವೃದ್ಧಿ ಮಾದರಿಯಾಗಿ, ಕಾಂಗ್ರೆಸ್ ಸರ್ಕಾರಕ್ಕೂ ಸಹಜವಾಗಿ ಒಪ್ಪಿಗೆಯಾಗಿತ್ತು. ಈ ಭೂ ಸ್ವಾಧೀನ ಪ್ರಕ್ರಿಯೆಗೆ ಸ್ಥಳೀಯ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದೇ ಅಲ್ಲದೆ, ಶೇಕಡಾ 80ರಷ್ಟು ರೈತರು ಲಿಖಿತವಾಗಿ ತಮ್ಮ ನಿರಾಕರಣೆಯನ್ನು ದಾಖಲಿಸಿದ್ದರು. ಈ ಭೂ ಸ್ವಾಧೀನದಿಂದ 3000ಕ್ಕೂ ಹೆಚ್ಚು ರೈತರು ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುವ ಆತಂಕದ ನಡುವೆ, ರೈತರು ಯಾವುದೇ ರಾಜಕೀಯ ಸಂಪರ್ಕವಿಲ್ಲದೆಯೇ ತಮ್ಮದೇ ಆದ ಹೋರಾಟವನ್ನು ರೂಪಿಸಿದ್ದರು.
ಈ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರವೂ ಪ್ರಯತ್ನಿಸಿದರೂ ಸಹ ಅಂತಿಮವಾಗಿ ರೈತರ ನಿರ್ಧಾರ ಮತ್ತು ಕರ್ನಾಟಕದ ಜನಪರ ಸಂಘಟನೆಗಳ ಐಕಮತ್ಯದ ಪರಿಣಾಮವಾಗಿ ಕೊನೆಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ಒಪ್ಪಿಕೊಂಡಿದೆ. ಆದರೆ ಸರ್ಕಾರದ ಈ ತೀರ್ಮಾನದ ನಂತರವೂ ಇದೇ ಗ್ರಾಮಗಳ ಕೆಲವು ರೈತರು ತಾವು ಸ್ವ ಇಚ್ಛೆಯಿಂದ ಭೂಮಿಯನ್ನು ಬಿಟ್ಟುಕೊಡಲು ತಯಾರಾಗಿದ್ದೇವೆ ಎಂದು ಸರ್ಕಾರಕ್ಕೆ ಖಚಿತಪಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸರ್ಕಾರಗಳು ಅನುಸರಿಸುವ ʼ ಹಿಂಬಾಗಿಲಿನ ʼ ತಂತ್ರಗಾರಿಕೆಯ ಸಂಕೇತವಾಗಿ ಮಾತ್ರ ನೋಡಬಹುದು. ಸರ್ಕಾರವು ಒಂದು ನಿರ್ದಿಷ್ಟ ಯೋಜನೆಯನ್ನು ಮುಂದಿಟ್ಟು ಭೂ ಸ್ವಾಧೀನಕ್ಕೆ ಮುಂದಾದರೂ, ಅದರ ಹಿಂದೆ ಅಡಗಿರುವ ಕಾರ್ಪೋರೇಟ್ ಬಂಡವಾಳಶಾಹಿ ಹಿತಾಸಕ್ತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
ಏಕೆಂದರೆ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ಎನ್ನುವುದು ಮೂಲ ಘಟಕವಾಗಿದ್ದು, ಅದರ ಸುತ್ತಲೂ ಪೂರಕವಾದ ವಸತಿ ಬಡಾವಣೆಗಳು, ಆಧುನಿಕ ತಂತ್ರಜ್ಞಾನದ ಉದ್ಯಮಗಳು, ವಾಣಿಜ್ಯ ಮಾಲ್‌ಗಳು, ಉಪ ಉತ್ಪನ್ನಗಳನ್ನು (Anxiliaries) ತಯಾರಿಸುವ ಸಣ್ಣ ಕೈಗಾರಿಕೆಗಳು ಇವೆಲ್ಲವೂ ಸಹ ಕಾರ್ಪೋರೇಟ್ ಸಾಮ್ರಾಜ್ಯದ ವಿಸ್ತರಣೆಯ ಮಾದರಿಯಾಗಿರುತ್ತದೆ. ಈ ಕಾರ್ಪೋರೇಟ್ ಔದ್ಯಮಿಕ ವಿಸ್ತರಣೆಯ ಪ್ರಧಾನ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ದಿಮೆಗಳೇ ಆಗಿರುತ್ತಾರೆ. ಈ ಉದ್ದಿಮೆದಾರರು ಸ್ವಾಧೀನಕ್ಕೆ ಗುರುತಿಸಲಾದ ಕೃಷಿ ಭೂಮಿಯ ಹಕ್ಕನ್ನು GPA (General Power of attorney) ಮೂಲಕ ರೈತರಿಂದಲೇ ಪಡೆದುಕೊಳ್ಳುತ್ತಾರೆ. ಭೂಮಿಯನ್ನು ಮಾರಾಟ ಮಾಡುವ, ಪರಿಹಾರ ನೀಡುವ ಮತ್ತು ಅಂತಿಮ ಕಾನೂನಾತ್ಮಕ ಪ್ರಕ್ರಿಯೆಯನ್ನು ಪೂರೈಸುವ ಹಕ್ಕನ್ನು ಈ ಉದ್ದಿಮೆಗಳಿಗೆ ನೀಡಲಾಗುತ್ತದೆ.

ಕಾರ್ಪೋರೇಟ್-ರಿಯಲ್ ಎಸ್ಟೇಟ್ ತಂತ್ರಗಾರಿಕೆ
ದೇವನ ಹಳ್ಳಿ ರೈತರು ತಮ್ಮ ಹೋರಾಟದಲ್ಲಿ ಗೆದ್ದಿರುವ ಸಂಭ್ರಮದಲ್ಲಿ, ಈ ವಾಸ್ತವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಇಡೀ ಗ್ರಾಮಗಳ ರೈತರನ್ನು ಸಂಪರ್ಕಿಸಿ, ಅವರ ಕೃಷಿ ಭೂಮಿಯನ್ನು ಒಪ್ಪಿಸಲು ಸಮ್ಮತಿಸುವಂತೆ ಮಾಡಲು, ಹಲವು ಪ್ರಲೋಭನೆಗಳನ್ನು ಮುಂದಿಡಲಾಗುತ್ತದೆ. ಪ್ರತಿ ಎಕರೆಗೆ ಮಾಹೆಯಾನ ಇಂತಿಷ್ಟು ಹಣವನ್ನು ನೀಡುವುದಾಗಿ ಭರವಸೆ ನೀಡಿ, ತಮ್ಮ ಪರವಾಗಿ GPA ಮಾಡಿಸಿಕೊಳ್ಳುವ ರಿಯಲ್ ಎಸ್ಟೇಟ್ ಉದ್ಯಮಿಗಳು , ಮೂಲ ಬೆಲೆಯ ಆಧಾರದಲ್ಲಿ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ. ಈ ಒಪ್ಪಂದ ಜಾರಿಯಾದರೆ, ತಾವು ಆಶ್ವಾಸನೆ ನೀಡಿದ ಹಾಗೆ ಪ್ರತಿ ತಿಂಗಳೂ ರೈತರಿಗೆ ಪರಿಹಾರ ರೂಪದಲ್ಲಿ ಹಣ ನೀಡುತ್ತಲೇ ಹೋಗುತ್ತಾರೆ. ಅಂತಿಮವಾಗಿ, ಸರ್ಕಾರದ ವತಿಯಿಂದ, ಕೆಐಎಡಿಬಿ ಮೂಲಕ ಭೂ ಸ್ವಾಧೀನ ಪ್ರಕ್ರಿಯೆ ಜಾರಿಯಾಗುವಾಗ, ತಾವು ಒಪ್ಪಂದ ಮಾಡಿಕೊಂಡ ಮೂಲ ಬೆಲೆಯನ್ನೇ ಪರಿಹಾರ ರೂಪದಲ್ಲಿ ನೀಡಿ, ಅಂದಿನ ಮಾರುಕಟ್ಟೆ ದರದಲ್ಲಿ ಸರ್ಕಾರಿ ಸಂಸ್ಥೆಗೆ ಮಾರಾಟ ಮಾಡುತ್ತಾರೆ. ಆಗ ಚಾಲ್ತಿಯಲ್ಲಿರುವ ಮಾರುಕಟ್ಟೆ ದರವನ್ನು ಸರ್ಕಾರದಿಂದ ಪರಿಹಾರ ರೂಪದಲ್ಲಿ ಪಡೆದು ರೈತರಿಗೆ ತಮ್ಮ ಒಪ್ಪಂದದಂತೆ ಮೂಲ ಬೆಲೆಯನ್ನೇ ಕೊಡುತ್ತಾರೆ.
ಈ ಮಾದರಿಯನ್ನು ಭಾರತದ ಯಾವುದೇ ರಾಜ್ಯದಲ್ಲಾದರೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಆಂಧ್ರಪ್ರದೇಶದ ಅಮರಾವತಿ ನಗರ ನಿರ್ಮಾಣದಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗಿದೆ. ಆದರೆ ರೈತರು ಏಕೆ ಅಂತಿಮವಾಗಿ ಭೂಮಿಯನ್ನು ಬಿಟ್ಟುಕೊಡಲು ಸಿದ್ಧವಾಗುತ್ತಾರೆ ? ಈ ಪ್ರಶ್ನೆ ಜಟಿಲವೂ ಹೌದು, ಸೂಕ್ಷ್ಮವೂ ಹೌದು. ದೇವನ ಹಳ್ಳಿಯ ಕೃಷಿ ಭೂಮಿಯ ಉದಾಹರಣೆಯನ್ನೇ ತೆಗೆದುಕೊಂಡರೆ, ರಾಜ್ಯ ಸರ್ಕಾರವು ತನ್ನ ಯೋಜಿತ ಏರೋಸ್ಪೇಸ್ ಪಾರ್ಕ್ ನಿರ್ಮಾಣವನ್ನು ಕೈಬಿಡುವುದಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದೆ. ಇದಕ್ಕಾಗಿ ಸಮ್ಮತಿಸುವ ರೈತರ ಒಂದು ಗುಂಪನ್ನು ಸಿದ್ಧಪಡಿಸಲು ರಾಜಕೀಯ ಪ್ರಭಾವ, ಪಕ್ಷ ರಾಜಕಾರಣದ ತಂತ್ರಗಳನ್ನು ಬಳಸಲಾಗುತ್ತದೆ. ಈಗ ರೈತರು ಉಳಿಸಿಕೊಂಡಿರುವ ಭೂಮಿಯಲ್ಲಿ ಕೃಷಿ ಮುಂದುವರೆದರೂ, ಅದರ ಸುತ್ತಲೂ ರಿಯಲ್ ಎಸ್ಟೇಟ್ ಉದ್ದಿಮೆಗಳು ವಾಣಿಜ್ಯ, ವಸತಿ ಮತ್ತು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತವೆ. ಕೆಐಎಡಿಬಿ ಈ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಒತ್ತಾಸೆಯಾಗಿ ನಿಲ್ಲುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ನೋಡಿದಾಗ, ದೇವನಹಳ್ಳಿ ವಿಮಾನ ನಿಲ್ದಾಣದ ಸುತ್ತಮುತ್ತ, ದೊಡ್ಡಬಳ್ಳಾಪುರದವರೆಗೂ ವಿಸ್ತರಿಸಿದಂತೆ, ಅತ್ಯಾಧುನಿಕ ನಗರಗಳನ್ನು ನಿರ್ಮಾಣ ಮಾಡಲು ಈಗಾಗಲೇ ರಾಜ್ಯ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ.

ಈಗಾಗಲೇ ದೇವನಹಳ್ಳಿ ವಿಮಾನ ನಿಲ್ದಾಣದಿಂದ 45 ಕಿಲೋಮೀಟರ್ ದೂರದಲ್ಲಿ ಒಂದು ಅತ್ಯಾಧುನಿಕ ನಗರ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಇದನ್ನು ತಂತ್ರಜ್ಞಾನ-ಕಾರ್ಪೋರೇಟ್ ಮಾರುಕಟ್ಟೆ ಪರಿಭಾಷೆಯಲ್ಲಿ KWIN CITY (Knowledge Wellbeing Innovation & Research City) ಎಂದು ಕರೆಯಲಾಗುತ್ತದೆ. ಅಂದರೆ ಜ್ಞಾನ, ಯೋಗಕ್ಷೇಮ ನಾವೀನ್ಯತೆ ಮತ್ತು ಸಂಶೋಧನೆ, ಈ ನಾಲ್ಕೂ ಕ್ಷೇತ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸಂಸ್ಥೆಗಳು, ಉದ್ದಿಮೆಗಳು ಇಲ್ಲಿ ತಲೆ ಎತ್ತುತ್ತವೆ. ನೆಲಮಂಗಲ, ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರದ ಭೂ ಪ್ರದೇಶಗಳನ್ನು ಆಕ್ರಮಿಸುವ ಈ KWIN ನಗರವು ಸಹಜವಾಗಿಯೇ ತನ್ನ ಔದ್ಯಮಿಕ ಬೆಳವಣಿಗೆ, ವಸತಿ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ, ಹೆದ್ದಾರಿಗಳು, ಗಗನಚುಂಬಿ ಕಟ್ಟಡಗಳು , ಆಧುನಿಕ ಸಾರಿಗೆ ಮತ್ತು ಅದಕ್ಕೆ ತಕ್ಕಂತಹ ವಿಶಾಲ ರಸ್ತೆಗಳು ಇವೆಲ್ಲದರ ಕೇಂದ್ರವಾಗುತ್ತದೆ. ಎಲಕ್ಕಿಂತಲೂ ಹೆಚ್ಚಾಗಿ ಇಡೀ ನಗರ ನಿರ್ಮಾಣ, ನಿರ್ವಹಣೆ, ನೀರು ವಿದ್ಯುತ್ ಸಂವಹನ ಸಾಧನಗಳು ಇವೆಲ್ಲವನ್ನೂ ಸಹ ಕಾರ್ಪೋರೇಟ್ ಮಾರುಕಟ್ಟೆಯ ಬಂಡವಾಳಿಗರು ವಹಿಸಿಕೊಳ್ಳುತ್ತಾರೆ.
ಈಗಾಗಲೇ ರಾಜ್ಯ ಸರ್ಕಾರ ಈ ನಗರ ನಿರ್ಮಾಣಕ್ಕಾಗಿ 5,800 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸಜ್ಜಾಗಿದ್ದು, ಬಹುತೇಕವಾಗಿ ಯಶಸ್ವಿಯಾಗಿದೆ. ಇಲ್ಲಿ ತಾತ್ವಿಕವಾಗಿ ಸುಸ್ಥಿರ ಅಭಿವೃದ್ಧಿ (Sustainable development) ಎಂಬ ಆಧುನಿಕ ಮಾರುಕಟ್ಟೆ ಮಂತ್ರವನ್ನು ಬಳಸಲಾದರೂ, ಇಲ್ಲಿ ಪ್ರಧಾನವಾಗಿ ಬಂಡವಾಳ ಹೂಡುವುದು, ನಿರ್ವಹಿಸುವುದು ಖಾಸಗಿ ಕಾರ್ಪೋರೇಟ್ ಬಂಡವಾಳಶಾಹಿಯೇ ಆಗಿರುತ್ತದೆ. ಹಾಗೆಯೇ ಈ ನಗರಕ್ಕೆ ಸಂಪರ್ಕ ಸಾಧಿಸಲು ಬೇಕಾಗುವ ವಿಮಾನ, ರೈಲು, ಮೆಟ್ರೋ ಮತ್ತು ರಸ್ತೆ ಸಾರಿಗೆ ವ್ಯವಸ್ಥೆಗಳೆಲ್ಲವೂ ಸಹ ಕಾರ್ಪೋರೇಟ್ ಉದ್ದಿಮೆಗಳ ಹೂಡಿಕೆಯ ವಲಯಗಳಾಗುತ್ತವೆ. ಈ ನವ ನಗರವು ಬೆಂಗಳೂರು-ಪುಣೆ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿ ನಿರ್ಮಾಣವಾಗುವುದರಿಂದ, ಇಲ್ಲಿ ಯಾವುದೇ ರೀತಿಯ ಸಾಂಪ್ರದಾಯಿಕ ಕೃಷಿ, ಮಾರುಕಟ್ಟೆ ಅಥವಾ ವಿತರಣಾ ವ್ಯವಸ್ಥೆಗಳಿಗೆ ಅವಕಾಶ ಕಲ್ಪಿಸಲಾಗುವುದಿಲ್ಲ. ಈ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಬೆಂಗಳೂರು-ಹುಬ್ಬಳ್ಳಿ-ಮುಂಬಯಿ ಎಕ್ಸ್‌ಪ್ರೆಸ್ ರೈಲು ಮಾರ್ಗಕ್ಕೆ, ಹೆದ್ದಾರಿಗೆ ( ರಾಷ್ಟೀಯ ಹೆದ್ದಾರಿ 48 ಮತ್ತು 648) ಸಂಪರ್ಕಿಸಲಾಗುತ್ತದೆ.
ಈ ಪ್ರದೇಶದಲ್ಲಿ 465 ಎಕರೆ ಭೂಮಿಯಲ್ಲಿ ಸೌರ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣವನ್ನು ಸಹ ಯೋಜಿಸಲಾಗಿದ್ದು ಇದು 0.69 ದಶಲಕ್ಷ ಮೆಗಾವ್ಯಾಟ್ ಇಂಧನವನ್ನು ಉತ್ಪಾದಿಸುತ್ತದೆ ಎನ್ನಲಾಗಿದೆ. ಅಂದರೆ ಈ ನಗರಕ್ಕೆ ಅಗತ್ಯವಾದ ಸಂಪೂರ್ಣ ವಿದ್ಯುತ್ ಸೌಲಭ್ಯವನ್ನು ಇಲ್ಲಿಂದ ಒದಗಿಸಲು ಸಾಧ್ಯವಾಗುತ್ತದೆ. ಶೇಕಡಾ 50ರಷ್ಟು ಪ್ರದೇಶಕ್ಕೆ ಮಳೆ ನೀರು ಸಂಗ್ರಹ (Rain water Harvesting) ತಂತ್ರಜ್ಞಾನದ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಉಳಿದಂತೆ ಶೇಕಡಾ 20ರಷ್ಟು ನೀರನ್ನು ಅಂತರ್ಜಲ ಬಳಕೆಯಿಂದ, ಬೋರ್‌ವೆಲ್‌ಗಳ ಮೂಲಕ ಒದಗಿಸಲಾಗುತ್ತದೆ. ಇದನ್ನೇ ಸುಸ್ಥಿರ ಅಭಿವೃದ್ಧಿ ಮಾದರಿ ಎನ್ನಲಾಗುತ್ತದೆ. ಆದರೆ ಈ ಅಭಿವೃದ್ಧಿ ಮಾದರಿಯ ಫಲಾನುಭವಿಗಳು ಯಾರಾಗುತ್ತಾರೆ ? ಶತಮಾನಗಳಿಂದ ಇಲ್ಲಿ ನೆಲೆಯೂರಿದ ನೆಲ ಸಂಸ್ಕೃತಿ, ದಶಕಗಳಿಂದ ಇಲ್ಲಿನ ಕೃಷಿ, ರೇಷಿಮೆ ಬೆಳೆ ಮತ್ತು ಉದ್ಯಮ ಮತ್ತು ಬೇಸಾಯವನ್ನು ಅವಲಂಬಿಸಿ ಬದುಕುತ್ತಿರುವ ಅಸಂಖ್ಯಾತ ಕುಟುಂಬಗಳು ಇದರಿಂದ ಹೊರತಾಗುತ್ತವೆ.
ಮುಂದುವರೆಯುತ್ತದೆ,,,,,













