ಭಾರತದಲ್ಲಿ ರೈತರು ಅಸಂಖ್ಯಾತ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ. ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತೀಯ ಕೃಷಿಯು ಮಾನ್ಸೂನ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಹವಾಮಾನ ಬದಲಾವಣೆ, ತಡವಾದ ಮಾನ್ಸೂನ್, ಕಡಿಮೆ ಮಣ್ಣಿನ ಫಲವತ್ತತೆ, ಬೆಳೆ ಕೀಟಗಳ ಹಾವಳಿ ಈತರದ ಅನೇಕ ಸಮಸ್ಯೆಗಳಿಂದ ರೈತರು ಬೇಸತ್ತಿದ್ಧಾರೆ. ಇಂತಹ ದುರತ ಕಾಲದಲ್ಲಿ ರೈತನೊಬ್ಬ ಹೆಲಿಕಾಪ್ಟರ್ ಖರೀದಿಸಲು 6.6 ಕೋಟಿ ಸಾಲಕ್ಕೆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಹಿಂಗೋಲಿಯ 22 ವರ್ಷದ ಕೃಷಿಕರೊಬ್ಬರು ಹೆಲಿಕಾಪ್ಟರ್ ಖರೀದಿಸಿ ಬಾಡಿಗೆಗೆ ನೀಡಲು 6.6 ಕೋಟಿ ರೂಗೆ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯ ತಕ್ತೋಡ ಗ್ರಾಮದ ನಿವಾಸಿ ಕೈಲಾಸ್ ಪತಂಗೆ ಗುರುವಾರ ತಮ್ಮ ಸಾಲದ ಅರ್ಜಿಯೊಂದಿಗೆ ಗೋರೆಗಾಂವ್‌ನಲ್ಲಿರುವ ಬ್ಯಾಂಕ್‌ಗೆ ಬಂದಿದ್ದಾರೆ.
ಪಿಟಿಐ ವರದಿ ಪ್ರಕಾರ, ಎರಡು ಎಕರೆ ಜಮೀನು ಹೊಂದಿರುವ ಪತಂಗೆ, ಅನಿಯಮಿತ ಮಳೆ ಮತ್ತು ಬರಗಾಲದಂತಹ ಪರಿಸ್ಥಿತಿಗಳು ವರ್ಷಗಳಿಂದ ಎದುರಾಗುತ್ತಿದ್ದು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

“ಕಳೆದ ಎರಡು ವರ್ಷಗಳಿಂದ ನನ್ನ ಜಮೀನಿನಲ್ಲಿ ಸೋಯಾಬೀನ್ ಬೆಳೆಯುತ್ತಿದ್ದೆ. ಆದರೆ ಅಕಾಲಿಕ ಮಳೆಯಿಂದಾಗಿ ಅದು ನನಗೆ ಉತ್ತಮ ಆದಾಯವನ್ನು ತರಲಿಲ್ಲ. ಬೆಳೆ ವಿಮೆಯಿಂದ ಬಂದ ಹಣವೂ ಸಾಕಾಗಲಿಲ್ಲ’ ಎಂದು ಪತಂಗೆ ಹೇಳಿದರು. ಈ ಅಂಶಗಳನ್ನು ಉಲ್ಲೇಖಿಸಿ, ಪತಂಗೆ ಒಂದು ಹೆಲಿಕಾಪ್ಟರ್ ಖರೀದಿಸಿ ಅದನ್ನು ಬಾಡಿಗೆಗೆ ಕೊಟ್ಟು ಉತ್ತಮ ಜೀವನ ಸಾಗಿಸುವ ಯೋಚನೆ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ದೊಡ್ಡ ಜನರು ಮಾತ್ರ ದೊಡ್ಡ ಕನಸುಗಳನ್ನು ಕಾಣಬೇಕು ಎಂದು ಯಾರು ಹೇಳುತ್ತಾರೆ? ರೈತರೂ ಕೂಡ ದೊಡ್ಡ ಕನಸು ಕಾಣಬೇಕು. ಹೆಲಿಕಾಪ್ಟರ್ ಖರೀದಿಸಲು 6.65 ಕೋಟಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇತರ ವ್ಯವಹಾರಗಳಲ್ಲಿ ಸಾಕಷ್ಟು ಸ್ಪರ್ಧೆ ಇದೆ, ಆದ್ದರಿಂದ ನಾನು ಇದನ್ನು ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.