• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ನಿರ್ಮಾಣ ಮಾರುಕಟ್ಟೆಯಲ್ಲಿ ರೈತ ಮತ್ತು ಕೃಷಿ

ಕೃಷಿ ಭೂಸ್ವಾಧೀನಕ್ಕೆ ಇರುವ ಕಾನೂನು ರಕ್ಷಣೆ ರೈತರ ಬದುಕಿಗೆ ಇಲ್ಲದಿರುವುದು ವಾಸ್ತವ

ಪ್ರತಿಧ್ವನಿ by ಪ್ರತಿಧ್ವನಿ
June 21, 2026
in ಅಂಕಣ
0
ನಿರ್ಮಾಣ ಮಾರುಕಟ್ಟೆಯಲ್ಲಿ ರೈತ ಮತ್ತು ಕೃಷಿ
Share on WhatsAppShare on FacebookShare on Telegram

ನಾ ದಿವಾಕರ
(ನಗರ-ಬಂಡವಾಳ ಮತ್ತು ನಾಗರಿಕ ಜಗತ್ತು ಲೇಖನದ ಮುಂದುವರೆದ ಭಾಗ)

ADVERTISEMENT

ನಗರೀಕರಣ ಮತ್ತು ನಗರಾಭಿವೃದ್ಧಿ ಈ ಎರಡೂ ಸಹ ಜಂಟಿಯಾಗಿ ಸಾಗುವ ಆಡಳಿತಾತ್ಮಕ ಕ್ರಿಯೆಗಳು. ನಗರಗಳು ಕಡಿಮೆ ಇದ್ದ ಕಾಲದಲ್ಲಿ ಇದನ್ನು ಸಣ್ಣ-ದೊಡ್ಡ ಪಟ್ಟಣಗಳಲ್ಲಿ ಗುರುತಿಸಬಹುದಿತ್ತು. ನಗರ ಸಭೆಗಳ ಉಗಮಕ್ಕೂ ಮುನ್ನ ಚಾಲ್ತಿಯಲ್ಲಿದ್ದ ಪುರಸಭೆಗಳು ತಮ್ಮ ವ್ಯಾಪ್ತಿಯ ಪಟ್ಟಣ ಅಭಿವೃದ್ಧಿಯನ್ನು ಜನಸಾಮಾನ್ಯರ ಸಾಮಾಜಿಕ ಅವಶ್ಯಕತೆ ಮತ್ತು ಜೀವನೋಪಾಯದ ಅಗತ್ಯತೆಗಳ ದೃಷ್ಟಿಯಿಂದ ನೋಡುತ್ತಿದ್ದವು. ಸಣ್ಣ ಮಾರುಕಟ್ಟೆ, ಸಂತೆಗಳು, ಸ್ವಚ್ಛ ಮೋರಿಗಳು, ತೆರೆದ ಶೌಚಗಳ ಸಮರ್ಪಕ ನಿರ್ವಹಣೆ, ನೀರು ಸರಬರಾಜು, ಬೀದಿ ದೀಪ-ರಸ್ತೆ ಹಾಗೂ ಸಣ್ಣ ವ್ಯಾಪಾರಿ ವರ್ಗಕ್ಕೆ ಬೇಕಾದ ಪೇಟೆ ಬೀದಿಗಳ ಸಮರ್ಪಕ ನಿರ್ವಹಣೆ ಇವೆಲ್ಲವೂ ಅಭಿವೃದ್ಧಿಯ ಕಾಯಕಗಳಾಗಿರುತ್ತಿದ್ದವು.

ಪುರಸಭೆಯ ಕಾರ್ಯಾಚರಣೆಯನ್ನು ನಿರ್ವಹಿಸುವವರು ರಾಜಕೀಯ ತತ್ವಗಳನ್ನು ಬದಿಗಿಟ್ಟು ಸ್ವತಂತ್ರ ಅಭ್ಯರ್ಥಿಗಳಾಗಿಯೇ ಚುನಾಯಿತರಾಗುತ್ತಿದ್ದರು. ಮಿಲೆನಿಯಲ್‌ ಮಕ್ಕಳ (20-25 ಹರೆಯದ) ಊಹೆಗೂ ನಿಲುಕಲಾರದ ಸಂಗತಿ ಎಂದರೆ, ಜನರಿಂದಲೇ ಚುನಾಯಿತರಾಗುತ್ತಿದ್ದ ಈ ಪುರಸಭಾ ಸದಸ್ಯರು, ಪುರಸಭಾಧ್ಯಕ್ಷರನ್ನೂ ಸೇರಿದಂತೆ, ಸದಾ ಜನರ ನಡುವೆ ಇರುತ್ತಿದ್ದರು. ಕಟ್ಟಕಡೆಯ ವ್ಯಕ್ತಿಗೂ ಸದಾ ನಿಲುಕುವ, ಸ್ನೇಹಪರ ಸಂಬಂಧಗಳನ್ನು ರೂಢಿಸಿಕೊಳ್ಳುತ್ತಿದ್ದರು. ವಿರೋಧ, ವೈಮನಸ್ಯ, ಭಿನ್ನಮತ ಎಲ್ಲವೂ ಇರುತ್ತಿದ್ದವು ಆದರೆ ಅದು ಜನಸಾಮಾನ್ಯರ ಬದುಕಿಗೆ ಕಂಟಕವಾಗುತ್ತಿರಲಿಲ್ಲ. ತಲೆಯ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿಯ ನಡುವೆ, ಈ ಕೆಲಸ ಮಾಡುವ ಹಾಗೂ ಇನ್ನಿತರ ಸ್ವಚ್ಚತಾ ಕಾರ್ಮಿಕರ ನಿಕೃಷ್ಟ ಬದುಕು, ಅಸಮಾನತೆ ಇವೆಲ್ಲವುಗಳ ನಡುವೆಯೂ ಮನುಜ ಸಂಬಂಧಗಳಲ್ಲಿ ಅಗತ್ಯವಾದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದು ಆ ಕಾಲದ ಹಿರಿಮೆ.

ಬದಲಾದ ಅಭಿವೃದ್ಧಿಯ ಕಲ್ಪನೆ

ಅಭಿವೃದ್ಧಿ ಎನ್ನುವುದೇ ನಿಂತ ನೀರನ್ನು ಹರಿಯುವಂತೆ ಮಾಡುವ ಒಂದು ಪ್ರಕ್ರಿಯೆ. ಈ ನೀರು ಕಲುಷಿತವಾಗದಂತೆ ಎತ್ತ ಹರಿಯುತ್ತದೆ, ಯಾರಿಗೆ ನಿಲುಕುತ್ತದೆ ಮತ್ತು ಯಾರ ಬದುಕನ್ನು ಹಸನಾಗಿಸುತ್ತದೆ ಎನ್ನುವುದು ಮುಖ್ಯ ಪ್ರಶ್ನೆ. ಆರ್ಥಿಕ ಬೆಳವಣಿಗೆಯೊಂದಿಗೇ ಗ್ರಾಮ-ಪಟ್ಟಣ-ಹೋಬಳಿಗಳು ರೂಪಾಂತರಕ್ಕೊಳಗಾಗಿ ಮುಂದಿನ ಹಂತಕ್ಕೆ ತಲುಪುವುದು ಸಹಜ ಪ್ರಕ್ರಿಯೆ. ಈ ಹಾದಿಯಲ್ಲೇ ನೂರಾರು ಪಟ್ಟಣಗಳು ರೂಪಾಂತರಗೊಂಡು, ಪುರಸಭೆಗಳು ನಗರ ಸಭೆಗಳಾಗಿ, ನಗರ ಪಾಲಿಕೆಗಳಾಗಿ ಪರಿವರ್ತನೆಯಾಗಿವೆ, ಜನಸಂಖ್ಯೆಯ ಹೆಚ್ಚಳ ಮತ್ತು ವಲಸೆ ಇದಕ್ಕೆ ಪ್ರಮುಖ ಕಾರಣವೂ ಹೌದು. ಈ ಸಹಜ ಪ್ರಕ್ರಿಯೆಯಲ್ಲೇ ನಮ್ಮ ನಡುವೆ ನಗರಗಳ ಸಂಖ್ಯೆ ಹೆಚ್ಚಾಗಿವೆ ಹಾಗೆಯೇ ಬೆಳವಣಿಗೆಯ ಓಘದಲ್ಲಿ ನಗರಗಳು ಬೃಹತ್‌ ನಗರಗಳೂ ಆಗಿವೆ.

ಜಾಗತೀಕರಣದ ನಂತರ ಉಗಮಿಸಿದ ನಗರಗಳು ಮತ್ತು ನಗರಾಭಿವೃದ್ಧಿಯ ಕಲ್ಪನೆಯಲ್ಲಿ ಹಂತಹಂತವಾಗಿ ತಳಸಮಾಜದ ಜನರನ್ನು ನಿರ್ಲಕ್ಷಿಸುವ ಧೋರಣೆ ನುಸುಳಿರುವುದನ್ನು ಸಮಕಾಲೀನ ಬೆಳವಣಿಗೆಯ ಹಾದಿಯಲ್ಲಿ ಕಾಣಬಹುದು. 21ನೆಯ ಶತಮಾನದ ಆದಿಯಲ್ಲೇ ಸಮಾಜದ ಮೇಲೆ ಹಿಡಿತ ಸಾಧಿಸಲಾರಂಭಿಸಿದ ಮಾರುಕಟ್ಟೆ-ಗ್ರಾಹಕ ಸಂಸ್ಕೃತಿ ಮತ್ತು ಈ ಚೌಕಟ್ಟಿನಲ್ಲೇ ಉದಯಿಸಿದ ಮೇಲ್ಪದರ ಸಮಾಜದ (Upper Echelons of society) ಧೋರಣೆಗಳು , ನಗರಾಭಿವೃದ್ಧಿಯ ಕಲ್ಪನೆಯನ್ನೂ ರೂಪಿಸತೊಡಗಿದ್ದು ವಾಸ್ತವ. ನವ ಉದಾರವಾದಿ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನಲ್ಲಿ ʼಅಭಿವೃದ್ಧಿʼ ಯ ಕಲ್ಪನೆಯೇ ತಳಸಮಾಜಕ್ಕೆ ವಿಮುಖವಾಗತೊಡಗಿದ್ದನ್ನು, ನಗರಾಭಿವೃದ್ಧಿಯ ಕಲ್ಪನೆಯಲ್ಲೇ ಗುರುತಿಸಬಹುದು.

ಹಾಗಾಗಿ ನಗರಗಳ ಬೆಳವಣಿಗೆ ಎಂದರೆ ಸಮತಲವಾಗಿ (Horizontally) ನಗರ ವಿಸ್ತರಣೆ ಮತ್ತು ಲಂಬಗತಿಯಲ್ಲಿ (Vertically) ಉಳ್ಳವರ-ಹಿತವಲಯದ ಅನುಕೂಲಗಳು ಎಂದು ನಿರ್ವಚಿಸಲಾಯಿತು. ಮೇಲ್ವರ್ಗ ಸಮಾಜವನ್ನೇ ಗುರಿಯಾಗಿಟ್ಟುಕೊಂಡು ಈ ಎರಡೂ ಪ್ರಕ್ರಿಯೆಗಳ ಫಲಿತಾಂಶವನ್ನು. ನಗರಗಳ ಸುತ್ತ ಬೆಳೆಯುತ್ತಲೇ ಹೋದ ಹೊಸ ಬಡಾವಣೆಗಳು, ಅಗಲವಾದ ರಸ್ತೆಗಳು, ಮೇಲ್ಸೇತುವೆಗಳು, ಬೈಪಾಸ್‌ ರಸ್ತೆಗಳು, ಐಷಾರಾಮಿ ವ್ಯಾಪಾರ ಸಂಕೀರ್ಣಗಳು (Luxury Shopping Complex) ಮತ್ತು ಈ ಅನುಕೂಲಸ್ಥ ಜನತೆಗೆ ಪೂರಕವಾದ ಶಿಕ್ಷಣ-ಆರೋಗ್ಯ-ಯೋಗಕ್ಷೇಮದ ಸಾಂಸ್ಥಿಕ ಬೆಳವಣಿಗೆಗಳಲ್ಲಿ ಕಾಣಬಹುದು. 2008-10ರ ವಿಶ್ವ ಆರ್ಥಿಕ ಬಿಕ್ಕಟ್ಟು ತಲೆದೋರಿದ ನಂತರ ಈ ಚಿತ್ರಣವೂ ಬದಲಾಗುತ್ತಾ ಹೋಗಿ, ನಗರೀಕರಣ-ನಗರಾಭಿವೃದ್ಧಿ ಎಂದರೆ ರಿಯಲ್‌ ಎಸ್ಟೇಟ್‌ ಉದ್ಯಮದ ಅಂಶಿಕ ಭಾಗ ಎಂದೇ ಪರಿಗಣಿಸಲಾಯಿತು.

ಮಾರುಕಟ್ಟೆ ಆರ್ಥಿಕತೆಯ ಆಯಾಮಗಳು

ಸಾಮಾನ್ಯವಾಗಿ ಮಧ್ಯಮ ವರ್ಗಗಳ ಜನತೆಗೆ ಅಪ್ಯಾಯಮಾನವಾಗುವ ಮೂಲ ಸೌಕರ್ಯಗಳ ಅಭಿವೃದ್ಧಿ ಮಾದರಿಯನ್ನು (Infrastructure based Development model) ಪಟ್ಟಣಗಳಲ್ಲೂ ಅಳವಡಿಸಲಾರಂಭಿಸಿದ್ದು ಈ ಹಂತದಲ್ಲೇ. ಇದರಲ್ಲಿ ಎದ್ದು ಕಾಣುವುದು ʼ ರಸ್ತೆ ಅಗಲೀಕರಣ ʼ ಎಂಬ ಸಾಮಾನ್ಯ ಜನರ ಬದುಕನ್ನು ಪಲ್ಲಟಗೊಳಿಸುವ ಒಂದು ಭೌತಿಕ ಪ್ರಕ್ರಿಯೆ. ಜನಸಂಖ್ಯೆಯ ಹೆಚ್ಚಳಕ್ಕಿಂತಲೂ ವಾಹನ ಬಳಕೆದಾರರ ಹೆಚ್ಚಳ ರಸ್ತೆ ಅಗಲೀಕರಣವನ್ನು ಪ್ರಚೋದಿಸಿತ್ತು. ಸಣ್ಣ, ಅತಿಸಣ್ಣ ವ್ಯಾಪಾರ ವಹಿವಾಟು ಅವಲಂಬಿಸಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ರಸ್ತೆ ಅಗಲೀಕರಣದಿಂದ ಬೀದಿ ಪಾಲಾಗಿರುವುದು ಸತ್ಯ. ಈ ಕುರಿತ ಸಂಶೋಧನೆ , ಅಧ್ಯಯನ ಎಷ್ಟರ ಮಟ್ಟಿಗೆ ನಡೆದಿದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಈ ಮೂಲ ಸೌಕರ್ಯಾಭಿವೃದ್ಧಿ ಕೇಂದ್ರಿತ ಅರ್ಥಿಕ ನೀತಿ ಮೂಲತಃ ಮಾರುಕಟ್ಟೆ ಮತ್ತು ಕಾರ್ಪೊರೇಟ್‌ ಬಂಡವಾಳಿಗರ ಕೂಸು. ಇದನ್ನೇ ಯಥಾವತ್ತಾಗಿ ಭಟ್ಟಿ ಇಳಿಸುವ ರಾಜಕೀಯ ಕನಸುಗಳ ಫಲಶ್ರುತಿಯೇ ಬೆಂಗಳೂರನ್ನು ಸಿಂಗಾಪೂರ್‌ ಮಾಡುವ ಕಲ್ಪನೆಗಳು. ಪುನಃ ಇದಕ್ಕೆ ಬಲಿಯಾಗಿದ್ದು ತಳಸಮಾಜದ ದುಡಿಯುವ ವರ್ಗಗಳು. ರಸ್ತೆ ಅಗಲೀಕರಣ ವೃಕ್ಷ ಸಂಪತ್ತನ್ನು ಒಮ್ಮೆಲೆ ನಾಶಪಡಿಸುವ ಒಂದು ಪ್ರಕ್ರಿಯೆಯೂ ಆಯಿತು. ಜೆಸಿಬಿ ಎಂದು ಕರೆಯಲಾಗುವ ದೈತ್ಯ ಯಂತ್ರ ಬುಲ್ಡೋಜರ್‌ ವ್ಯಾಪಕವಾಗಿ ಬಳಕೆಗೆ ಬಂದಿದ್ದು ಈ ಹಂತದಲ್ಲೇ. ಕಟ್ಟುವ ಸಂಸ್ಕೃತಿಯಿಂದ ಕೆಡವುವ ಪರಂಪರೆಗೆ ಕಾಲಿಟ್ಟ ನಮ್ಮ ವಿಶಾಲ ಸಮಾಜ ಕೆಡವುವುದರಿಂದ ಸಂಕಷ್ಟಗಳಿಗೊಳಗಾಗುವ ತಳಸಮಾಜದ ಸಂಕಟಗಳ ಕಡೆಗೆ ತಿರುಗಿಯೂ ನೋಡಲಿಲ್ಲ. ಬದಲಾಗಿ ಹೊಸದಾಗಿ ಕಟ್ಟುವ ಐಷಾರಾಮಿ ಜೀವನ ಶೈಲಿಯ ಭವ್ಯ ನಿರ್ಮಾಣಗಳನ್ನು ತೆರೆದ ಬಾಹುಗಳಿಂದ ಸ್ವಾಗತಿಸಲಾರಂಭಿಸಿತ್ತು.

ಈ ಎರಡು ಸಂಸ್ಕೃತಿಗಳ ವೈರುಧ್ಯಗಳ ನಡುವೆ ಹುಟ್ಟಿಕೊಂಡಿದ್ದು, ದೊಡ್ಡ ನಗರಗಳ ಸುತ್ತ ಉಪನಗರಗಳನ್ನು (Satellite towns) ಮತ್ತು ಬಾಹ್ಯ ವರ್ತುಲ ರಸ್ತೆಗಳನ್ನು (Peripheral Ring Road) ನಿರ್ಮಿಸುವ ನಗರಾಭಿವೃದ್ಧಿಯ ಕಲ್ಪನೆ. ವಾಸ್ವವವಾಗಿ ಇದು ನಗರ ವಿಸ್ತರಣೆಯ ಮರುವ್ಯಾಖ್ಯಾನವಾಗಿತ್ತು. ಬೃಹತ್‌ ನಗರದ ಕಲ್ಪನೆ ಹುಟ್ಟಿದ್ದು ಈ ಹೊಸ ವ್ಯಾಖ್ಯಾನದ ಆವರಣದಲ್ಲಿ. ಬೆಂಗಳೂರನ್ನು ಬೃಹತ್‌ ಮಾಡುವುದಾದರೂ ಹೇಗೆ ? ಆದಷ್ಟೂ ಸುತ್ತಲಿನ ಗ್ರಾಮಗಳನ್ನು, ಕೇರಿಗಳನ್ನು, ಕೆರೆ ಕುಂಟೆಗಳನ್ನು ಒಳಕ್ಕೆಳೆದುಕೊಂಡು (ನುಂಗಿಹಾಕಿ) ನಗರದ ಭೂ ಪ್ರದೇಶವನ್ನು ದೊಡ್ಡದು ಮಾಡುವುದು ಒಂದು ವಿಧಾನ. ಹೀಗೆ ಕಣ್ಮರೆಯಾದ ಗ್ರಾಮಗಳು ಬಡಾವಣೆಗಳಾದವು, ಮುಖ್ಯ ಸಂಪರ್ಕ ರಸ್ತೆಗಳು ಝಗಮಗಿಸಿದವು, ಆದರೆ ಈಗಲೂ ಸಹ ಹೊಸ ಬಡಾವಣೆಗಳ ಒಳಹೊಕ್ಕು ನೋಡಿದಾಗ ಅಲ್ಲಿ ಗ್ರಾಮಜೀವನದ ಚಿತ್ರಣ ಕಾಣುತ್ತದೆ.

ಬೆಳೆದಿದೆ ನೋಡಾ ಬೆಂಗಳೂರು,,,,

ಬೆಂಗಳೂರು ಸುತ್ತಲಿನ ಗ್ರಾಮಗಳನ್ನು ನುಂಗುವ ಹಂತದಿಂದ ಬಹಳ ದೂರ ಸಾಗಿದೆ. ವೈಮಾನಿಕ ನೋಟದಲ್ಲಿ ಅರಣ್ಯದಂತೆ ಕಾಣುತ್ತಿದ್ದ ಬೆಂಗಳೂರನ್ನು ಕಾಂಕ್ರೀಟ್‌ ಕಟ್ಟಡಗಳ ಮೈದಾನವನ್ನಾಗಿ ಮಾಡಿದ ಮೇಲೆ ಉಳಿದಿದ್ದು, ಹೆಚ್ಚುತ್ತಿದ್ದ ಜನಸಂಖ್ಯೆಗೆ ಅಗತ್ಯವಾದ ಉಪನಗರಗಳ ನಿರ್ಮಾಣದ ಆಯ್ಕೆ. ಬೃಹತ್‌ ಬೆಂಗಳೂರು ಅಥವಾ ಗ್ರೇಟರ್‌ ಬೆಂಗಳೂರು ಎಂಬ ಕಲ್ಪನೆಯ ಕಿಶೋರಾವಸ್ಥೆಯನ್ನು ಇಲ್ಲಿ ಗುರುತಿಸಬಹುದು. 2006ರಲ್ಲಿ ಬಿಜೆಪಿಯೊಡನೆ ಸಮ್ಮಿಶ್ರ ಸರ್ಕಾರ ರಚಿಸಿದ್ದ ಜನತಾದಳದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸಂದರ್ಭದಲ್ಲೇ ಬೆಂಗಳೂರಿನ ಸುತ್ತ ಐದು ಉಪನಗರಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿದ್ದರು. ರಾಮನಗರ, ಬಿಡದಿ, ಮಾಗಡಿ ಬಳಿಯ ಸೋಲೂರು, ಕನಕಪುರ ಸಮೀಪದ ಸಾತನೂರು, ಹೊಸಕೋಟೆಯ ನಂದಗುಡಿ ಈ ಐದು ಉಪನಗರಳ ನೀಲನಕ್ಷೆಯಲ್ಲಿ, ಕರಗಿಹೋಗಬಹುದಾಗಿದ್ದ ಹಸಿರು ಕೃಷಿ ಭೂಮಿಯ ವ್ಯಾಪ್ತಿ ಸುಮಾರು 61 ಸಾವಿರ ಎಕರೆ.

ಈ ಉಪನಗರಗಳು ಇನ್ನೂ ನಿರ್ಮಾಣವಾಗಿಲ್ಲ ಆದರೆ ಈ ಮಾರ್ಗದಲ್ಲಿರುವ ಎರಡೂ ಬದಿಯ ಕೃಷಿ ಜಮೀನುಗಳು ಹಾಗೂ ಹಾದಿಗೆ ಅಡ್ಡ ಬರುವ ಹಳ್ಳಿಗಳ ಕೃಷಿ ಭೂಮಿ ಈಗಾಗಲೇ ಮಾರುಕಟ್ಟೆಯ ಜಗುಲಿಯಲ್ಲಿ ಬಿಕರಿಯಾಗಿರುತ್ತವೆ ಅಥವಾ ಬಿಕರಿಗೆ ಸಿದ್ಧವಾಗಿರುತ್ತವೆ. ಈ ಪಟ್ಟಣಗಳನ್ನೇ ವಿಸ್ತರಿಸುತ್ತಾ ಬೆಂಗಳೂರಿನ ದಿಕ್ಕಿನಲ್ಲಿ ಅಗಲವಾದ ರಸ್ತೆಗಳನ್ನು ನಿರ್ಮಿಸುತ್ತಾ, ಅಲ್ಲಿನ ಜನರಿಗೆ ನಗರೀಕರಣದ ಸೌಂದರ್ಯವನ್ನು ಪರಿಚಯಿಸುತ್ತಾ, ಕೊನೆಗೊಂದು ದಿನ, ಬೆಂಗಳೂರಿನಲ್ಲಿ ಒಳಗೊಳ್ಳುವಂತಹ ಉಪನಗರವನ್ನು ಘೋಷಿಸುವ ಮಾದರಿಯನ್ನು ಇಲ್ಲಿ ಗುರುತಿಸಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ಒಂದು ಸ್ಪಷ್ಟ ನಿದರ್ಶನ. ಈ ಹಾದಿಯಲ್ಲಿರುವ ಯಲಹಂಕ ಉಪನಗರ ಈಗ ಬೆಂಗಳೂರಿನ ಬಡಾವಣೆಯಾಗಿದೆ. ಇತ್ತ ಕೆಂಗೇರಿಯೂ ಸಹ ಪರಿವರ್ತನೆಯಾಗಿದೆ. ಈ ಉಪನಗರ ವ್ಯಾಪ್ತಿಯೂ ಕೈಮೀರಿದಾಗ, ಮಾರುಕಟ್ಟೆಗೆ ಹೊರವಲಯದ ಟೌನ್‌ಷಿಪ್‌ಗಳು ಹೊಳೆಯುತ್ತವೆ.

ಬೆಂಗಳೂರಿಗೆ ಸಮೀಪದಲ್ಲೇ ಇರುವ ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆಯ ನಡುವೆ ಈಗಾಗಲೇ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ KWIN ಸಿಟಿ (Knowledge Wellbeing Innovation city ̲ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ ನಗರ) 5,800 ಎಕರೆ ವಿಸ್ತೀರ್ಣದ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ದೂರದಲ್ಲಿರುವ ಈ ₹40,000 ಕೋಟಿ ಯೋಜನೆಯನ್ನು ನಗರ ದಟ್ಟಣೆಯನ್ನು ನಿವಾರಿಸಲು ಬೆಂಗಳೂರಿಗೆ ಅವಳಿಯಾಗಿ ವಿನ್ಯಾಸಗೊಳಿಸಲಾಗಿದೆ. ಈ ಹೊಸ ನಗರ 5800 ಎಕರೆ ಕೃಷಿ ಭೂಮಿಯನ್ನು ಕಬಳಿಸಿದ್ದು, ಈಗಾಗಲೇ ಇಲ್ಲಿ ಪ್ರತಿ ಎಕರೆಯ ಬೆಲೆ ಐದು ಕೋಟಿಯವರೆಗೂ ತಲುಪಿದೆ. ಇಲ್ಲಿಯೂ ರೈತರು ಭೂಮಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ.

ಬಿಟ್ಟರೂ ಬಿಡದ ʼ ಬಿಡದಿ ʼ ಮಾಯೆ

ಈ ಅಭಿವೃದ್ಧಿ ಮಾದರಿಯ ಒಂದು ಭಾಗವಾಗಿ ಈಗ ಬಿಡದಿ ಟೌನ್‌ಷಿಪ್‌ ಯೋಜನೆ ಚಾಲ್ತಿಗೆ ಬಂದಿದೆ. 7481 ಎಕರೆ ಕೃಷಿ ಭೂಮಿಯನ್ನು ಬರಡು ಮಾಡುವ ಮತ್ತು ಅದನ್ನೇ ಅವಲಂಬಿಸಿ ಬದುಕುತ್ತಿರುವ ಗ್ರಾಮೀಣ ಕುಟುಂಬಗಳನ್ನು ಉಚ್ಛಾಟಿಸುವ ಈ ಐಷಾರಾಮಿ ಟೌನ್‌ಷಿಪ್‌ ನಿರ್ಮಾಣಕ್ಕೆ 18,133 ಕೋಟಿ ರೂಗಳನ್ನು ಖರ್ಚು ಮಾಡಬೇಕಿದೆ. ಈ ವಲಯದಲ್ಲೂ ಭೂಮಿಯ ಬೆಲೆ ಆಕಾಶಕ್ಕೇರಿದ್ದು ಎಕರೆಗೆ ಸರಾಸರಿ ಎರಡು ಕೋಟಿಗಿಂತಲೂ ಹೆಚ್ಚು ಮೌಲ್ಯವನ್ನು ನಿಗದಿಪಡಿಸಲಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ನೀಡುವ ಪರಿಹಾರದಲ್ಲಿ ಅವರು ಕಳೆದುಕೊಳ್ಳುವ ಮನೆ, ಗುಡಿಸಲು, ಮರಗಳು, ಕೊಳವೆಬಾವಿ, ಕೊಟ್ಟಿಗೆ ರೇಷ್ಮೆ ಕೋಠಿ ಇದಾವುದನ್ನೂ ಪರಿಗಣಿಸಲಾಗುವುದಿಲ್ಲ. ಇವುಗಳಿಗೆ ಪ್ರತ್ಯೇಕ ಪರಿಹಾರ ನಿಗದಿಪಡಿಸಲಾಗುತ್ತದೆ.

ಈ ಪ್ರದೇಶಧ 6200 ಜಮೀನು ಮಾಲೀಕರ ಪೈಕಿ ಶೇಕಡಾ 80ರಷ್ಟು ರೈತರು ಸಮ್ಮತಿ ವ್ಯಕ್ತಪಡಿಸಿರುವುದಾಗಿ ಸರ್ಕಾರದ ಅಧಿಕೃತ ವಕ್ತಾರರು ದೃಢೀಕರಿಸುತ್ತಾರೆ. ಟೌನ್‌ಷಿಪ್‌ ನಿರ್ಮಾಣದ ಆನಂತರ ವಸತಿ ಪ್ರದೇಶದಲ್ಲಿ 50:50 ಅನುಪಾತದಲ್ಲಿ, ವಾಣಿಜ್ಯ ಪ್ರದೇಶದಲ್ಲಿ 45:55 ಅನುಪಾತದಲ್ಲಿ ಪಾಲುದಾರಿಕೆ ನೀಡುವುದಾಗಿಯೂ ಹೇಳಲಾಗಿದೆ. 11 ಸಾವಿರಕ್ಕೂ ಹೆಚ್ಚು ಜನರು ಈ ಕೃಷಿ ಭೂಮಿಯನ್ನೇ ಅವಲಂಬಿಸಿದ್ದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಈ ಕುಟುಂಬಗಳನ್ನು ಒಮ್ಮೆಲೆ ಉಚ್ಛಾಟಿಸಲಾಗುತ್ತದೆ, ತಾತ್ಕಾಲಿಕ ನೆಲೆಯನ್ನೂ ಒದಗಿಸಬಹುದು ಅಥವಾ ಮಾರಾಟದ ಹಣದಿಂದ ಬದುಕಲು ಉತ್ತೇಜಿಸಬಹುದು. ಈ ಪಾಲುದಾರಿಕೆಯ ನಿಯಮಗಳು ಸಾಕಾರಗೊಳ್ಳುವ ವೇಳೆಗೆ ಒಂದು ತಲೆಮಾರು ದಾಟಿರುತ್ತದೆ (20 ವರ್ಷಗಳು). ಅಪಾಯ ಇರುವುದು ಇಲ್ಲಿ.

ಇಂದು ಕೃಷಿಯನ್ನೇ ನಂಬಿ ಬದುಕುತ್ತಿರುವ ಕುಟುಂಬಗಳಲ್ಲಿ ಎರಡನೆ ತಲೆಮಾರಿನವರು ವೃತ್ತಿಯನ್ನು ಗೌರವಿಸಿ ಮುಂದುವರೆಯಬಹುದು. ಆದರೆ ಮೂರನೆಯ ತಲೆಮಾರಿನ ಯುವ ಜನಾಂಗ ಅಥವಾ 20-30 ವಯೋಮಾನದ ಯುವ ಜನಾಂಗ ಮರಳಿ ಕೃಷಿಯನ್ನು ಅಪ್ಪಿಕೊಳ್ಳುವುದಿಲ್ಲ. ಈ ಪೀಳಿಗೆಯ ಜನಸಂಖ್ಯೆಗೆ ಸರ್ಕಾರಗಳು ನೀಡುವ ಪರಿಹಾರ ಧನ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಮರ್ಪಕವಾಗಿರುವುದೇ ? ಇದು ಸಂಶೋಧಕರು ಕಂಡುಹಿಡಿಯಬೇಕಾದ ಸಂಗತಿ. ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಶಿಕ್ಷಣ ಪಡೆದವರು ಉನ್ನತ ಉದ್ಯೋಗಗಳನ್ನು ಅರಸಿ ಹೋಗಬಹುದು. ಆದರೆ ಶಿಕ್ಷಣ ವಂಚಿತ ಯುವ ಜನಾಂಗ, ವಿಶೇಷವಾಗಿ ಹೆಣ್ಣುಮಕ್ಕಳು ಪುನಃ ವಲಸೆ ಕಾರ್ಮಿಕರಾಗಿ ದುಡಿಮೆಯಲ್ಲಿ ತೊಡಗಬೇಕಾಗುತ್ತದೆ. ತಮ್ಮದೇ ಜಮೀನಿನಲ್ಲಿ ನಿರ್ಮಾಣವಾಗುವ ಟೌನ್‌ಷಿಪ್‌ ಕಟ್ಟಡಗಳಿಗೆ ಇಟ್ಟಿಗೆ, ಮಣ್ಣು ಹೊರುವ ಕೂಲಿಕಾರರಾಗಿ ದುಡಿಯಬೇಕಾಗುತ್ತದೆ. ಇಲ್ಲಿ ಅತಿಹೆಚ್ಚು ಬಾಧೆಗೊಳಗಾಗುವುದು ಹೆಣ್ಣು ಮಕ್ಕಳು ಮತ್ತು ದುಡಿಮೆಯನ್ನೇ ಅವಲಂಬಿಸುವ ಮಹಿಳೆಯರು.

ನವ ಭಾರತದ ಕರಾಳ ಚಿತ್ರಣ

ಈ ದುರಂತ ದೃಶ್ಯವನ್ನು ಭಾರತದ ಉದ್ದಗಲಕ್ಕೂ ಕಾಣಬಹುದು. ಇದರ ನಡುವೆ ನಿಜವಾದ ನಷ್ಟ ಅನುಭವಿಸುವುದು ಕೃಷಿ ಉತ್ಪಾದನೆ ಮತ್ತು ಈ ಪ್ರದೇಶದಲ್ಲಿ ತುಣುಕು ಭೂಮಿಯೂ ಇಲ್ಲದೆ ದಿನಗೂಲಿಗಾಗಿ ಬೇಸಾಯ ಚಟುವಟಿಕೆಗಳಲ್ಲಿ ತೊಡಗಿರುವ ಕೃಷಿ ಕಾರ್ಮಿಕರು. ಇವರ ಸಂಖ್ಯೆ ಎಷ್ಟಿದೆ ಎನ್ನುವುದು ನಿಖರವಾಗಿ ತಿಳಿದಿಲ್ಲ. ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು, ಸಾಧ್ಯವಾಗದೆ ಹೋದರೆ ಉತ್ತಮ ಪರಿಹಾರ ಪಡೆಯಲು ಹಗಲುರಾತ್ರಿ ಹೋರಾಟ ನಡೆಸುವ ರೈತ ಸಂಘಗಳು , ಬೀದಿ ಪಾಲಾಗುವ ಈ ಕೃಷಿ ಕಾರ್ಮಿಕರನ್ನು ಒಳಗೊಂಡಿವೆಯೇ ? ಇದೂ ಸಹ ನಿಖರವಾದ ಮಾಹಿತಿ ಇಲ್ಲ. ಇದರ ಸಾಧ್ಯತೆಗಳೂ ಕಾಣುವುದಿಲ್ಲ ಏಕೆಂದರೆ ರೈತ ಸಂಘಗಳು ಪ್ರಧಾನವಾಗಿ ಪ್ರತಿನಿಧಿಸುವುದು ಭೂಮಿ ಇರುವ ರೈತಾಪಿಯನ್ನೇ.

ಈಗಾಗಲೇ 450 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಮುಷ್ಕರದಲ್ಲ ನಿರತರಾಗಿದ್ದಾರೆ. ಈ ಹೋರಾಟಕ್ಕೆ ವಿವಿಧ ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಗಳು, ರಾಜಕೀಯ ಪಕ್ಷಗಳು (???) ಬೆಂಬಲ ಸೂಚಿಸಿವೆ. ನೂತನ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಬಿಡದಿ ಟೌನ್‌ಷಿಪ್‌ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿಬಿಟ್ಟಿದ್ದಾರೆ. ಮತ್ತೊಂದೆಡೆ ಈ ಯೋಜನೆಗೆ ಕೈಹಾಕಿದರೆ ರಕ್ತ ಕ್ರಾಂತಿಯಾಗುತ್ತದೆ ಎಂಬ ಆವೇಶಭರಿತ ಮಾತುಗಳೂ ಕೇಳಿಬರುತ್ತಿವೆ. ಬಿಜೆಪಿ ಮತ್ತು ಜೆಡಿಎಸ್‌ ಈ ಘರ್ಷಣೆಯಿಂದ ರಾಜಕೀಯ ಲಾಭ ಗಳಿಸುವ ದಿಕ್ಕಿನಲ್ಲಿ ಯೋಚಿಸುತ್ತಿವೆ. “ ಈ ಯೋಜನೆ ನಮ್ಮದಲ್ಲ, ನಮ್ಮ ಸರ್ಕಾರ ಇರಲಿಲ್ಲ, ನಮ್ಮ ಸರ್ಕಾರದ್ದಲ್ಲ ” ಎಂದು ಹೇಳುವ ಈ ಪಕ್ಷಗಳಿಗೆ ಬಹುಶಃ 2006 ರಿಂದ 2023ರವರೆಗೆ ನಡೆಸಿದ ಆಳ್ವಿಕೆ ಮರೆತುಹೋಗಿರಬಹುದೇ ?

ನಿರುದ್ಯೋಗ ತಾಂಡವಾಡುತ್ತಿರುವ ಸಮಾಜದಲ್ಲಿ, ಉದ್ಯೋಗ ಖಾತರಿಯನ್ನು ಕಸಿದುಕೊಂಡಿರುವ ಆರ್ಥಿಕ ನೀತಿಗಳ ನಡುವೆ ಉಚ್ಛಾಟಿತ ಜನತೆಯ ಯುವ ತಲೆಮಾರು ಎತ್ತ ಪಯಣಿಸಲು ಸಾಧ್ಯ ? ಮತ್ತಷ್ಟು ವಲಸೆ ಕಾರ್ಮಿಕರು ಸೃಷ್ಟಿಯಾಗುತ್ತಾರೆ, ಸ್ಲಂಗಳು ಸೃಷ್ಟಿಯಾಗುತ್ತವೆ, ಅಭದ್ರ ನೌಕರಿಯ ಅನಿಶ್ಚಿತ ಬದುಕು ಸವೆಸುವ ಸಮಾಜಗಳು ಸೃಷ್ಟಿಯಾಗುತ್ತವೆ. ನೂತನ ಬಿಡದಿ ಟೌನ್‌ಷಿಪ್‌ ಮತ್ತು ಸುತ್ತಲಿನ ಬೆಂಗಳೂರು ನಗರದ ಪ್ರದೇಶಗಳು ಈ ಶ್ರಮಜೀವಿಗಳಿಗೆ ಆಸರೆಯಾಗುತ್ತದೆ. ಇನ್ನು ಕೆಲವೇ ವರ್ಷಗಳಲ್ಲಿ ತಾವೇ ನಿರ್ಮಿಸಿದ ನವಿರಾದ ರಸ್ತೆಗಳಲ್ಲಿ ಓಡಾಡುವ ಭಾಗ್ಯವನ್ನೂ ಈ ಶ್ರಮಿಕರು ಕಳೆದುಕೊಳ್ಳಬಹುದು. ಇವರು ಬಾಳಿ ಬದುಕಿದ ಹಳ್ಳಿಗಳು, ಶತಮಾನಗಳಿಂದ ಬೇರೂರಿದ್ದ ಗ್ರಾಮೀಣ ಸಂಸ್ಕೃತಿ ಎಲ್ಲವೂ ಕೇವಲ ನೆನಪುಗಳಾಗಿ ಉಳಿಯುತ್ತವೆ.

ಉತ್ತರದಾಯಿತ್ವದ ಕಲ್ಪನೆಯೇ ಇಲ್ಲದ ರಾಜಕೀಯ ಯುಗದಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸುವವರಾದರೂ ಯಾರು ? ಮತ್ತೊಂದು ಟೌನ್‌ಷಿಪ್‌, ಮತ್ತೊಂದು ಸ್ಮಾರ್ಟ್‌ ಸಿಟಿ, ಮತ್ತಷ್ಟು ಬರಡಾಗುವ ಕೃಷಿ ಭೂಮಿ, ಮತ್ತಷ್ಟು Proletariarise ಆದ ಮಣ್ಣಿನ ಮಕ್ಕಳು , ಭವಿಷ್ಯದ ಸಮಾಜಗಳ ನಡುವೆ ಕಾಣುತ್ತಿರುತ್ತದೆ. ಅಂತಿಮವಾಗಿ ಕಾಡುವ ಪ್ರಶ್ನೆ, ಈ ನಗರ ವಿಸ್ತರಣೆ ಅರ್ಥಾತ್‌ ಟೌನ್‌ಷಿಪ್‌ಗಳ ನಿರ್ಮಾಣ ಯಾರಿಗಾಗಿ ? ಅನ್ನ ಬೆಳೆಯುವ ರೈತನನ್ನು ಬೀದಿಪಾಲು ಮಾಡಿ, ಕೃಷಿ ಭೂಮಿಯನ್ನು ಬರಡಾಗಿಸುವ ಅಭಿವೃದ್ಧಿಯ ಕಲ್ಪನೆ ಯಾರ ಒಳಿತಿಗಾಗಿ ? ಈಗಿರುವ ಅಸಮಾನತೆಗಳನ್ನು ಮತ್ತಷ್ಟು ಹಿಗ್ಗಿಸುತ್ತಾ, ನಮ್ಮ ನಡುವೆಯೇ ಎರಡು ಸಮಾಜಗಳನ್ನು ಸೃಷ್ಟಿಸುವ ಅಭಿವೃದ್ಧಿ ಮಾದರಿ ಯಾವ ಪುರುಷಾರ್ಥಕ್ಕಾಗಿ ?

ಇದಾವುದೂ ಆದರ್ಶದ ಕಲ್ಪನೆಯ ಪ್ರಶ್ನೆಗಳಲ್ಲ, ವಾಸ್ತವದ ನೆಲೆಯಲ್ಲಿ ಜನರನ್ನು ಕಾಡಬಹುದಾದ ಪ್ರಶ್ನೆಗಳು. ಹೋರಾಟಗಳ ಸೋಲು, ಗೆಲುವು ಅಥವಾ ಪರಿಹಾರದ ಹೊಂದಾಣಿಕೆ ಈ ಪ್ರಕ್ರಿಯೆಗಳನ್ನು ಹೊರಗಿಟ್ಟು ನೋಡಿದಾಗ, ಗಾಢವಾಗಿ ಕಾಡುವ ಪ್ರಶ್ನೆ, ಭಾರತ ಎತ್ತ ಸಾಗುತ್ತಿದೆ ?

(ಈ ಲೇಖನದ ಕೆಲವು ಅಂಕಿಅಂಶಗಳನ್ನು, ಮಾಹಿತಿ ದತ್ತಾಂಶಗಳನ್ನು 18 ಜೂನ್‌ 2026ರ ಪ್ರಜಾವಾಣಿಯ “ ಅಸ್ತಿತ್ವ-ಪ್ರತಿಷ್ಠೆ ಬಿಕ್ಕಟ್ಟಿನಲ್ಲಲಿ ಬಿಡದಿ ಟೌನ್‌ ಷಿಪ್‌ ” ವರದಿಯಿಂದ ತೆಗೆದುಕೊಳ್ಳಲಾಗಿದೆ )
-೦-೦-೦-೦-

Previous Post

ಮಂಗಳ ಗ್ರಹದಲ್ಲಿ ಹರಿಯುತ್ತಿತ್ತಾ ಗಂಗೆಯಷ್ಟೇ ಬೃಹತ್ ನದಿಗಳು? ವಿಜ್ಞಾನಿಗಳ ಹೊಸ ಸಂಶೋಧನೆ ಚಕಿತಗೊಳಿಸಿದೆ!

Next Post

BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

Related Posts

ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು
Top Story

ಮತದಾನ–ಶಾಸನಬದ್ಧ ಹಕ್ಕು ಮಾತ್ರ ಆಗಿರಕೂಡದು

by ಪ್ರತಿಧ್ವನಿ
July 14, 2026
0

ಮೂಲ : ಎಸ್ ವೈ ಖುರೇಷಿ ಕನ್ನಡಕ್ಕೆ ; ನಾ ದಿವಾಕರ ಇತ್ತೀಚೆಗೆ ಕಾಂಗ್ರೆಸ್ ನಾಯಕರೊಬ್ಬರು ಮತದಾನವನ್ನು ಮೂಲಭೂತ ಹಕ್ಕು ಎಂದು ಗುರುತಿಸುವಂತೆ ಆಗ್ರಹಿಸುವ ಮೂಲಕ ಹೊಸ...

Read moreDetails
ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ..ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ!

ಒಂದು ಕ್ಷಣ ಕಣ್ಣುಮುಚ್ಚಿ.. ಆಮೇಲೆ ಓದಿ ನೋಡಿ..ಆಗ ನಿಮ್ಮಲ್ಲೂ ಮೂಡಬಹುದೊಂದು ಭಾವನೆ!

July 11, 2026
ಕ್ರೌರ್ಯಕ್ಕೆ ಮಿತಿಯಿಲ್ಲ ಹಿಂಸೆಗೆ ಕೊನೆಯಿಲ್ಲ

ಕ್ರೌರ್ಯಕ್ಕೆ ಮಿತಿಯಿಲ್ಲ ಹಿಂಸೆಗೆ ಕೊನೆಯಿಲ್ಲ

July 12, 2026
ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

ರಾಜಕೀಯ ಅಧಿಕಾರ ಮತ್ತು ದಲಿತ ಪ್ರಜ್ಞೆ

July 9, 2026
ಮಹಿಳಾ ಮೀಸಲಾತಿ –ಆಳ್ವಿಕೆಗೆ ಕಗ್ಗಂಟಾಗಿರುವುದೇಕೆ?

ಮಹಿಳಾ ಮೀಸಲಾತಿ –ಆಳ್ವಿಕೆಗೆ ಕಗ್ಗಂಟಾಗಿರುವುದೇಕೆ?

July 6, 2026
Next Post
BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada