ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ನಕಲಿ ಲಸಿಕೆಗಳು ಮಾರಾಟವಾಗುತ್ತಿರುವ ಪ್ರಕರಣಗಳು ಪತ್ತೆಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯೇ ಇಂಥ ನಕಲಿ ಲಸಿಕೆಗಳನ್ನ ಗುರುತಿಸಿ ಎಚ್ಚರಿಸಿದೆ. ಭಾರತದಲ್ಲೂ ಕೋವಿಶೀಲ್ಡ್ ಲಸಿಕೆ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಇಲ್ಲೂ ನಕಲಿ ಕೋವಿಶೀಲ್ಡ್ ವ್ಯಾಕ್ಸಿನ್ಗಳು ಮಾರಾಟ ಆಗುತ್ತಿರಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೈಜ ಲಸಿಕೆ ಯಾವುದು, ನಕಲಿ ಲಸಿಕೆ ಯಾವುದು ಎಂಬುದನ್ನು ಪತ್ತೆಹಚ್ಚಲು ಕೇಂದ್ರ ಆರೋಗ್ಯ ಇಲಾಖೆಯು ಕೆಲ ಮಾರ್ಗಸೂಚಿಗಳನ್ನ ಹೊರಡಿಸಿದೆ. ರಾಜ್ಯ ಸರ್ಕಾರಗಳಿಗೆ ಈ ಮಾರ್ಗಸೂಚಿಗಳನ್ನ ಕಳುಹಿಸಿಕೊಡಲಾಗಿದೆ.
ಭಾರತದಲ್ಲಿ ಮೂರು ಲಸಿಕೆಗಳನ್ನ ಬಳಸಲು ಸದ್ಯಕ್ಕೆ ಅನುಮತಿ ನೀಡಲಾಗಿದೆ. ಸೀರಂ ಇನ್ಸ್ಟಿಟ್ಯೂಟ್ನ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೋವಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳನ್ನ ಬಳಸಲಾಗುತ್ತಿದೆ. ಈ ಮೂರು ಲಸಿಕೆಗಳನ್ನ ಗುರುತಿಸಲು ಲೇಬಲ್ ವಿವರ, ಬಣ್ಣ ಇತ್ಯಾದಿ ಅಂಶಗಳನ್ನ ಒಳಗೊಂಡ ಕೆಲ ಅಂಶಗಳನ್ನ ಪಟ್ಟಿ ಮಾಡಲಾಗಿದೆ.
“ಕೋವಿಶೀಲ್ಡ್ನ ಡೂಪ್ಲಿಕೇಟ್ ಲಸಿಕೆಗಳನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ. ಭಾರತ ಸರ್ಕಾರ ಇದನ್ನು ತನಿಖೆ ನಡೆಸುತ್ತಿದೆ. ಹಾಗೊಂದು ವೇಳೆ ನಕಲಿ ವ್ಯಾಕ್ಸಿನ್ ಮಾರಾಟವಾಗುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು” ಎಂದು ಕಳೆದ ತಿಂಗಳೇ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದರು.
ಅಸಲಿ ಕೋವಿಶೀಲ್ಡ್ ಲಸಿಕೆ ಪತ್ತೆಹಚ್ಚುವುದು ಹೇಗೆ.? :
• ಲಸಿಕೆ ಬಾಟಲ್ನ ಲೇಬಲ್ನ ಅಂಚಿನಲ್ಲಿ ದಟ್ಟ ಹಸಿರು ಶೇಡ್ ಬಣ್ಣ ಇರುತ್ತದೆ. ಅಲೂಮಿನಿಯಮ್ ಫ್ಲಿಪ್ ಆಫ್ ಸೀಲ್ ಸಂಪೂರ್ಣ ದಟ್ಟ ಹಸಿರು ಬಣ್ಣ ಹೊಂದಿರುತ್ತದೆ.
• ಒರಿಜಿನಲ್ ವ್ಯಾಕ್ಸಿನ್ನಲ್ಲಿ ಕೋವಿಶೀಲ್ಡ್ನ ಟ್ರೇಡ್ಮಾರ್ಕ್ ಸಮೇತ ಬ್ರ್ಯಾಂಡ್ ಹೆಸರು ನಮೂದಾಗಿರುತ್ತದೆ.
• ವಿಶೇಷ ಬಿಳಿ ಶಾಹಿಯಲ್ಲಿ ಅಕ್ಷರಗಳನ್ನ ಮುದ್ರಿಸಲಾಗಿರುತ್ತದೆ. ಜೆನೆರಿಕ್ ಹೆಸರಿನ ಅಕ್ಷರದ ಫಾಂಟ್ ಅನ್ನು ಅನ್-ಬೋಲ್ಡ್ ಮಾಡಲಾಗಿರುತ್ತದೆ.
• ಸೀರಂ ಇನ್ಸ್ಟಿಟ್ಯೂಟ್ನ ಲೋಗೋವನ್ನು ವಿಶೇಷ ಕೋನ ಮತ್ತು ಸ್ಥಾನದಲ್ಲಿ ಮುದ್ರಿಸಲಾಗಿರುತ್ತದೆ. ಇದನ್ನು ತಜ್ಞರು ಗುರುತಿಸಬಲ್ಲರು.
• ಇಡೀ ಲೇಬಲ್ಗೆ ವಿಶೇಷ ಹನಿಕೂಂಬ್ ಎಫೆಕ್ಟ್ ಕೊಡಲಾಗಿರುತ್ತದೆ. ಇದು ಒಂದು ನಿರ್ದಿಷ್ಟ ಕೋನದಿಂದ ಮಾತ್ರ ಕಾಣಿಸುತ್ತದೆ.
ಅಸಲಿ ಕೋವ್ಯಾಕ್ಸಿನ್ ಲಸಿಕೆ ಪತ್ತೆಹಚ್ಚುವುದು ಹೇಗೆ.? :
• ಲೇಬಲ್ ಮೇಲೆ ಯುವಿ ಹೆಲಿಕ್ಸ್ ಇರುತ್ತದೆ. ಇದು ಅಲ್ಟ್ರಾ ವಯಲೆಟ್ (ಅತಿನೇರಳೆ ಬೆಳಕು) ಲೈಟ್ನಿಂದ ಮಾತ್ರ ಗೋಚರಿಸುತ್ತದೆ.
• ಲೇಬಲ್ನಲ್ಲಿ COVAXIN ಹೆಸರಿನ ಅಕ್ಷರಗಳು ಬಹಳ ಸೂಕ್ಷ್ಮವಾಗಿ ಬರೆಯಲ್ಪಟ್ಟಿರುತ್ತವೆ. ಮೇಲ್ನೋಟಕ್ಕೆ ಇವು ಡಾಟ್ಗಳಂತೆ ಕಾಣಿಸುತ್ತವೆ.
• ಕೋವ್ಯಾಕ್ಸಿನ್ ಹೆಸರಿಗೆ ಹೋಲೋಗ್ರಾಫಿಕ್ ಎಫೆಕ್ಟ್ ಕೊಡಲಾಗಿರುತ್ತದೆ.
ಅಸಲಿ ಸ್ಪುಟ್ನಿಕ್ ವಿ ಲಸಿಕೆ ಪತ್ತೆ ಹಚ್ಚುವುದೇಗೆ.? :
• ರಷ್ಯಾದ ಎರಡು ತಯಾರಕರಿಂದ ಪ್ರತ್ಯೇಕವಾಗಿ ಸ್ಪುಟ್ನಿಕ್ ವ್ಯಾಕ್ಸಿನ್ಗಳನ್ನ ತರಿಸಲಾಗುತ್ತಿದೆ. ಹೀಗಾಗಿ ಈ ಲಸಿಕೆ ಎರಡು ಲೇಬಲ್ಗಳಲ್ಲಿ ಲಭ್ಯ ಇರುತ್ತದೆ. ಆದರೆ, ತಯಾರಕರ ಹೆಸರು ಬಿಟ್ಟು ಉಳಿದೆಲ್ಲಾ ವಿವರ ಏಕರೀತಿಯಲ್ಲಿ ಇರುತ್ತದೆ.
• ಐದು ಆಂಪೂಲ್ ಪ್ಯಾಕ್ ಕಾರ್ಟನ್ನ ಹಿಂಬದಿ ಮತ್ತು ಮುಂಬದಿಯಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಲೇಬಲ್ ಇರುತ್ತದೆ. ಇನ್ನುಳಿದ ಬದಿಗಳಲ್ಲಿ ರಷ್ಯನ್ ಭಾಷೆಯಲ್ಲಿ ಲೇಬಲ್ ಮುದ್ರಿತವಾಗಿರುತ್ತದೆ.