ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಫಾರ್ಮ್ಹೌಸ್ ಒಂದರಲ್ಲಿ ನಕಲಿ ಔಷಧಿಗಳನ್ನು ಮರುಪ್ಯಾಕ್ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ ಔಷಧಿಗಳು ಹಾಗೂ ಇತರೆ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಈ ಘಟಕವನ್ನು ಪ್ರಶಾಂತ್ ಎಂಬಾತ ನಡೆಸುತ್ತಿದ್ದ ಎನ್ನಲಾಗಿದೆ. ಕಡಿಮೆ ಬೆಲೆಯ ಔಷಧಿಗಳನ್ನು ಖರೀದಿಸಿ, ಅವುಗಳಿಗೆ ವಿವಿಧ ಕಂಪನಿಗಳ ಲೇಬಲ್ ಅಂಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆಯ 30ಕ್ಕೂ ಹೆಚ್ಚು ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಯಲ್ಲಿ ನಕಲಿ ಔಷಧಿಗಳು, ಖಾಲಿ ಬಾಟಲ್ಗಳು, ನಕಲಿ ಲೇಬಲ್ಗಳು ಹಾಗೂ ಅವಧಿ ಮೀರಿದ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಈ ಜಾಲದ ಹಿಂದೆ ಇನ್ನೂ ಯಾರು ಇದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.






