ಬೆಂಗಳೂರು: ಮಾಜಿ ಸಚಿವ ಬಿ.ಸಿ ನಾಗೇಶ್ ಅವರ ಅಗಲಿಕೆಯಿಂದ ನಾವು ಒಬ್ಬ ನಂಬಿಕಸ್ಥ ಗೆಳೆಯ, ಆದರ್ಶ ನಾಯಕ ಹಾಗೂ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಇದು ಭಾರತೀಯ ಜನತಾ ಪಕ್ಷಕ್ಕೆ, ರಾಜ್ಯಕ್ಕೆ ಮತ್ತು ವೈಯಕ್ತಿಕವಾಗಿ ನನಗೂ ತುಂಬಲಾರದ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಗಲಿದ ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ.

ನಿನ್ನೆ ನಿಧನ ಹೊಂದಿದ ಬಿ.ಸಿ ನಾಗೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗೇಶ್ ಅವರು, ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಸಾರ್ವಜನಿಕ ಜೀವನದಲ್ಲಿ ನಿರಂತರ ಕ್ರಿಯಾಶೀಲರಾಗಿದ್ದರು. ತಮ್ಮ ತಂದೆಯವರ ಕಾಲದಿಂದಲೂ ಅಪಾರ ಜನಸಂಪರ್ಕ ಹೊಂದಿದ್ದು, ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ನಾಗೇಶ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ್ದರು. ನಾನು ನೀರಾವರಿ ಸಚಿವನಾಗಿದ್ದಾಗ, ಒತ್ತಡ ಹೇರಿ ತಮ್ಮ ಕ್ಷೇತ್ರಕ್ಕೆ ಲಿಫ್ಟ್ ಇರಿಗೇಷನ್ ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡು ಅನುಷ್ಠಾನಕ್ಕೆ ತಂದಿದ್ದರು. ಗೊಬ್ಬರದ ವ್ಯಾಪಾರ, ಬೆಲೆ ಏರಿಕೆ ಹಾಗೂ ಮಾರುಕಟ್ಟೆಯ ಸಮಸ್ಯೆಗೆ ಸಂಬಂಧಿಸಿದಂತೆ ರೈತರ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು. ಸರ್ಕಾರ ಮತ್ತು ಮಾರುಕಟ್ಟೆಯ ಮೇಲೆ ತಮ್ಮದೇ ಆದ ಪ್ರಭಾವ ಬೀರಿದ್ದರು ಎಂದು ಬಿ.ಸಿ ನಾಗೇಶ್ ಅವರ ರಾಜಕೀಯ ಸೇವೆಗಳನ್ನು ನೆನಪಿಸಿಕೊಂಡರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ
ನಾಗೇಶ್ ಅವರು ನಮ್ಮ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಶ್ರಮಿಸಿದ್ದರು. ಅಲ್ಲದೆ, ‘ವಿವೇಕ’ ಯೋಜನೆಯಡಿಯಲ್ಲಿ ಒಂದೇ ವರ್ಷದಲ್ಲಿ 9,000 ಶಾಲಾ ಕೊಠಡಿಗಳನ್ನು ನಿರ್ಮಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿ, ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು.

”ನಾವು ಒಬ್ಬ ನಂಬಿಕಸ್ಥ ಗೆಳೆಯ, ಆದರ್ಶ ಸಾರ್ವಜನಿಕ ನಾಯಕ ಹಾಗೂ ರಾಜಕಾರಣಿಯನ್ನು ಕಳೆದುಕೊಂಡಿದ್ದೇವೆ. ಇದು ಭಾರತೀಯ ಜನತಾ ಪಕ್ಷಕ್ಕೆ, ರಾಜ್ಯಕ್ಕೆ ಮತ್ತು ವೈಯಕ್ತಿಕವಾಗಿ ನನಗೂ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.






