
ನಾ ದಿವಾಕರ
ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ನಮ್ಮ ಸಂವಿಧಾನ ರಕ್ಷಿಸುತ್ತಿದೆ ಎಂಬ ಭಾವನೆ ಜನಮಾನಸದಲ್ಲಿ ಆಳವಾಗಿ ಬೇರೂರಿದೆ. ವಾಸ್ತವಿಕ ನೆಲೆಯಲ್ಲಿ ಇದು ತಪ್ಪೇನೂ ಅಲ್ಲ. ಆದರೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಮೂಲಕ, ಸಂವಿಧಾನದ ಆಶಯಗಳನ್ನು ಈಡೇರಿಸಲು ತಳಮಟ್ಟದಲ್ಲಿ ನೆರವಾಗುವುದು ಸಾಂವಿಧಾನಿಕ ಸಂಸ್ಥೆಗಳು. ನ್ಯಾಯಾಂಗ, ಚುನಾವಣಾ ಆಯೋಗ, ಸಿಬಿಐ-ಜಾರಿ ನಿರ್ದೇಶನಾಲಯ ಮುಂತಾದ ತನಿಖಾ ಸಂಸ್ಥೆಗಳು ಮತ್ತು ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಗಳು. ನವ ಭಾರತದ ದುರಂತ ಎಂದರೆ ನ್ಯಾಯಾಂಗವನ್ನು ಹೊರತುಪಡಿಸಿ, ಉಳಿದ ಯಾವುದೇ ಸಂಸ್ಥೆಗಳೂ ಜನಸಾಮಾನ್ಯರಲ್ಲಿ ವಿಶ್ವಾಸ-ಭರವಸೆಯನ್ನು ಮೂಡಿಸಲು ಸಾಧ್ಯವಾಗಿಲ್ಲ. ಈ ಎಲ್ಲ ಸಂಸ್ಥೆಗಳೂ ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು, ಚುನಾಯಿತ ಸರ್ಕಾರಗಳ ನಿಯಂತ್ರಣಕ್ಕೊಳಪಡುತ್ತಿವೆ.
ಇದು ಇತ್ತೀಚಿನ ವಿದ್ಯಮಾನ ಅಥವಾ ಬೆಳವಣಿಗೆಯಲ್ಲ. ಕಳೆದ ಆರು ದಶಕಗಳ ಆಳ್ವಿಕೆಯ ಮಾದರಿಗಳನ್ನು (Governanace Models) ಗಮನಿಸಿದರೆ, ಚುನಾಯಿತ ಸರ್ಕಾರಗಳು ಈ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಲೇ ಬಂದಿರುವುದಕ್ಕೆ ಚರಿತ್ರೆಯೇ ಸಾಕ್ಷಿಯಾಗಿದೆ. ಸಂಸದೀಯ ಪ್ರಜಾಪ್ರಭುತ್ವದ ಆಡಳಿತದಲ್ಲಿ ʼಬಹುಮತʼ ಎನ್ನುವುದು ಜನಸಾಮಾನ್ಯರ ದೃಷ್ಟಿಯಿಂದ ಸಕಾರಾತ್ಮಕವಾಗಿ ಕಾಣುವ ವಿದ್ಯಮಾನ. ಸ್ಪಷ್ಟ ಬಹುಮತದ ಸರ್ಕಾರಗಳು ಸ್ಥಾಪನೆಯಾದಾಗಲೆಲ್ಲಾ, ತಳಮಟ್ಟದ ಸಮಾಜದ ಸಮಾಧಾನಕರ ನಿಟ್ಟುಸಿರನ್ನು ಗುರುತಿಸಬಹುದು. ವಿಪರ್ಯಾಸವೆಂದರೆ ಭಾರತದಲ್ಲಿ ಈ ಬಹುಮತದ ಸರ್ಕಾರಗಳೇ ಹೆಚ್ಚು ಅಪ್ರಜಾಸತ್ತಾತ್ಮಕವಾಗಿ ವರ್ತಿಸುತ್ತವೆ.

ಸಾಂಸ್ಥಿಕ ಸ್ವಾಯತ್ತತೆಯ ಅಗತ್ಯತೆ
ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿರುವ ವರ್ಗಗಳು ಈ ಬಹುಮತದ ಫಲಾನುಭವಿಗಳಾದರೆ, ಅದರೊಳಗಿನ ಶೋಷಿತರ ಪ್ರತಿನಿಧಿಗಳನ್ನೂ ಸೇರಿದಂತೆ, ಈ ವರ್ಗದ ಆಳ್ವಿಕೆಯು ಪ್ರಜಾತಂತ್ರದ ಮಾರ್ಗಗಳಿಗೆ ವಿಮುಖವಾಗುವ ಸಾಧ್ಯತೆಗಳೇ ಹೆಚ್ಚು. ಈ ಆತಂಕವನ್ನು ಡಾ. ಬಿ.ಆರ್. ಅಂಬೇಡ್ಕರ್ ಸಹ ಜಾತಿ ಸಮೀಕರಣದ ನೆಲೆಯಲ್ಲಿ ವ್ಯಕ್ತಪಡಿಸುತ್ತಾರೆ. ಅಂಬೇಡ್ಕರ್ ಅವರ ಈ ಆತಂಕವನ್ನು ಸಾಕ್ಷೀಕರಿಸುವಲ್ಲಿ ಸ್ವತಂತ್ರ ಭಾರತದ ಎಲ್ಲ ಸರ್ಕಾರಗಳೂ ಯಶಸ್ವಿಯಾಗಿವೆ. ಇಲ್ಲಿ ಕಂಡುಬರುವ ಆಧಿಪತ್ಯದ ರಾಜಕೀಯಕ್ಕೆ ದೇಶದ ಅಖಂಡತೆ ಮತ್ತು ಸಮಗ್ರತೆಯ ರಕ್ಷಣೆ ಒಂದು ಸಕಾರಣವಾಗಿ ರೂಪುಗೊಳ್ಳುತ್ತದೆ. ಆದರೆ ಮತ್ತೊಂದು ಮಗ್ಗುಲಲ್ಲಿ ಇಂತಹ ಬಹುಮತದ ಸರ್ಕಾರಗಳೇ ಸಾಂವಿಧಾನಿಕ ಸಂಸ್ಥೆಗಳನ್ನು ಯಥೇಚ್ಛವಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವುದನ್ನೂ ಕಳೆದ ದಶಕಗಳಲ್ಲಿ ಗುರುತಿಸಬಹುದು.
ಜನಸಂಘದ ಕಾಲದಿಂದಲೂ ಬಿಜೆಪಿ-ಸಂಘಪರಿವಾರಕ್ಕೆ ನಿಷ್ಠರಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಲವಾರು ಸಂದರ್ಭಗಳಲ್ಲಿ , ಸಿಬಿಐ ಮುಂತಾದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಕಾಂಗ್ರೆಸ್ ಸರ್ಕಾರಗಳನ್ನು ಖಂಡಿಸಿದ್ದರು. 2004ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಕಾಂಗ್ರೆಸ್ ಪಕ್ಷವು ಸಿಬಿಐ ಸಂಸ್ಥೆಯನ್ನು ರಾಜಕೀಯ ವಿರೋಧಿಗಳನ್ನು ಅಡಗಿಸಲು, ತನ್ನ ನಾಯಕರನ್ನು ರಕ್ಷಿಸುವ ಸಲುವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ವೆಂಕಯ್ಯ ನಾಯ್ಡು, ಎಲ್.ಕೆ. ಅಡ್ವಾಣಿ ಮೊದಲಾದ ಬಿಜೆಪಿ ನಾಯಕರು ಸಿಬಿಐ ಸಂಸ್ಥೆಯನ್ನು “ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ” ಎಂದೇ ಮೂದಲಿಸುತ್ತಿದ್ದು. ಕಾಂಗ್ರೆಸ್ ಸರ್ಕಾರ ಸಿಬಿಐ ಬಳಸಿಕೊಂಡು ತನ್ಮ ಮಿತ್ರಪಕ್ಷಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತದೆ ಎಂದೂ ಆರೋಪಿಸಿದ್ದರು. ಈ ಹಂತದಲ್ಲಿ ಸಿಬಿಐ ಸಂಸ್ಥೆಯನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಮತ್ತು ಸ್ವಾಯತ್ತವಾಗಿಸುವ ಆಗ್ರಹವೂ ಬಿಜೆಪಿ ನಾಯಕರಿಂದ ಕೇಳಿಬರುತ್ತಿತ್ತು.
![]()
ಬಳಕೆಯ ಹೊಸ ಮಾದರಿಗಳು
ಈಗ ಭಾರತ ಬದಲಾಗಿದೆ. ಅದೇ ಬಿಜೆಪಿಯ ಕಳೆದ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಸಿಬಿಐ, ಇ ಡಿ ಮತ್ತಿತರ ಸಾಂವಿಧಾನಿಕ ಸಂಸ್ಥೆಗಳು ಸರ್ಕಾರದ ಬತ್ತಳಿಕೆಯಲ್ಲಿರುವ ಅಸ್ತ್ರಗಳಾಗಿ ಪರಿಣಮಿಸಿವೆ. ಒಂದು ಅರ್ಥದಲ್ಲಿ ನೋಡಿದರೆ, ಬಿಜೆಪಿ ಅಥವಾ ಎನ್‌ಡಿಎ ಸರ್ಕಾರ ಈ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿಲ್ಲ, ಬದಲಾಗಿ ಬಳಕೆಯ ವಿಧಾನವನ್ನೇ ಮರುರೂಪಿಸಿದೆ. ಭವಿಷ್ಯದ ಯಾವುದೇ ಬಹುಮತದ ಸರ್ಕಾರಗಳಿಗೆ ಪೂರ್ವನಿದರ್ಶನದಂತೆ ಭಾವಿಸಬಹುದಾದ, ಬಳಕೆಯ ಮಾದರಿಯನ್ನು ಸೃಷ್ಟಿಸಿದೆ. ಈ ಸಂಸ್ಥೆಗಳ ಅವಕೃಪೆಯಿಂದ ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿಗೆ ಸೇರ್ಪಡೆಯಾದರೆ, ಭ್ರಷ್ಟಾತಿಭ್ರಷ್ಟರೂ ಸಹ ಪ್ರಾಮಾಣಿಕರಾಗಿ ಉನ್ನತ ಹುದ್ದೆಗಳನ್ನು ಪಡೆಯುವ ಸಾಧ್ಯತೆಗಳನ್ನು ಈ ಹೊಸ ನೀತಿ ಕಲ್ಪಿಸಿದೆ. ಈ ಹೊಸ ಬಳಕೆಯ ವಿಧಾನ ಭಾರತದ ಪ್ರಜಾಪ್ರಭುತ್ವವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ?
ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಹೂಡಲಾಗಿದ್ದ ಭ್ರಷ್ಟಾಚಾರದ ಆರೋಪಗಳು ಮತ್ತು ಅವರ ಅಧಿಕಾರಾವಧಿಯಲ್ಲಿ ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನಡೆದ ಹಗರಣಗಳು ನಿರಾಧಾರ ಎಂದು ದೆಹಲಿಯ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿರುವುದು, ಸಿಬಿಐ ಸಂಸ್ಥೆಯನ್ನು ಮತ್ತೊಮ್ಮೆ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿದೆ. ಆಮ್ ಆದ್ಮಿ ಸರ್ಕಾರದ ಅಬಕಾರಿ ನೀತಿಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಉದ್ದೇಶವಾಗಲೀ ಪಿತೂರಿಯಾಗಿ ಕಾಣುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಕೇಜ್ರಿವಾಲ್ , ಮನೀಶ್ ಸಿಸೋಡಿಯಾ ಮತ್ತಿತರನ್ನು ನಿರ್ದೋಷಿಗಳೆಂದು ಘೋಷಿಸಿದೆ.
![]()
2021-22ರಲ್ಲಿ ಕೇಜ್ರಿವಾಲ್ ಸರ್ಕಾರ ಜಾರಿಗೊಳಿಸಿದ್ದ ನೂತನ ಅಬಕಾರಿ ನೀತಿಯಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ ಎಂದು ಹೇಳಲಾಗಿತ್ತು. ಈ ವಿಷಯವನ್ನೇ ಪ್ರಧಾನವಾಗಿ ಮುಂದಿಟ್ಟುಕೊಂಡು ಬಿಜೆಪಿ ಮತ್ತಿತರ ವಿರೋಧ ಪಕ್ಷಗಳು ದೆಹಲಿ ಅಬಕಾರಿ ನೀತಿ ಹಗರಣವನ್ನು ಪ್ರಶ್ನಿಸಿದ್ದವು. ತದನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ನೀತಿಯನ್ನು ರದ್ದುಪಡಿಸಿತ್ತು. ಈ ಸಿಬಿಐ ನಿರ್ದೇಶಿತ ಪ್ರಕರಣದಲ್ಲಿ ಊಹೆಗಳನ್ನೇ ಪ್ರಧಾನವಾಗಿ ಪರಿಗಣಿಸಲಾಗಿದ್ದು ಅನುಮಾನಾಸ್ಪದ ವಾದಗಳನ್ನು ಆಧರಿಸಲಾಗಿದೆ ಎಂದು ನ್ಯಾಯಾಲಯ ಆರೋಪಿಸಿದೆ. ಸಿಬಿಐ ನ್ಯಾಯಾಲಯಕ್ಕೆ ಮಂಡಿಸಿರುವ ದಾಖಲೆಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸಹ ಯಾವುದೇ ಅಪರಾಧ ಕಾಣುವುದಿಲ್ಲ ಅನುಮಾನಾಸ್ಪದವಾದ ಅಂಶಗಳೂ ಸಹ ಇಲ್ಲ , ಬದಲಾಗಿ ಈ ನೀತಿಯು ಕಾನೂನಿನ ಅನುಸಾರವಾಗಿ ಸೂಕ್ತ ಸಮಾಲೋಚನೆಯ ಮೂಲಕ, ವಿವೇಕಯುತ ಕ್ರಮದ ಮೂಲಕ ಜಾರಿಗೊಳಿಸಲಾಗಿದೆ ಎಂದು ವಿಚಾರಣಾ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಎಚ್ಚರಿಕೆಯ ಮಾತುಗಳು
ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಸಾಕ್ಷ್ಯಾಧಾರಗಳ ಅನುಸಾರ ಆಗಿನ ಅಬಕಾರಿ ಸಚಿವರಾಗಿದ್ದ ಮನೀಶ್ ಸಿಸೋಡಿಯಾ ಆಗಲೀ, ಮುಖ್ಯಮಂತ್ರಿ ಕೇಜ್ರಿವಾಲ್ ಆಗಲೀ ಯಾವುದೇ ಪಿತೂರಿಯ ಒಂದು ಭಾಗವಾಗಿರುವುದನ್ನು ಕಾಣಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಸಿಸೋಡಿಯಾ ಅವರನ್ನು ಫೆಬ್ರವರಿ 2023ರಲ್ಲಿ ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಆಗಸ್ಟ್ 2024ರಲ್ಲಿ ಜಾಮೀನು ದೊರೆತಿತ್ತು. ಕೇಜ್ರಿವಾಲ್ ಅವರನ್ನು ಮಾರ್ಚ್ 2024ರಲ್ಲಿ ಬಂಧಿಸಿ, ಸೆಪ್ಟಂಬರ್ 2024ರಲ್ಲಿ ಅವರಿಗೆ ಜಾಮೀನು ನೀಡಲಾಗಿತ್ತು. ಕೇಜ್ರಿವಾಲ್ ಅವರ ವಿರುದ್ಧದ ಈ ಆರೋಪಗಳು ಮತ್ತು ಸೆರೆವಾಸದ ಶಿಕ್ಷೆಯ ಪರಿಣಾಮವಾಗಿ ಕಳೆದ ದೆಹಲಿ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಹೀನಾಯ ಸೋಲು ಅನುಭವಿಸಿತ್ತು.

ಈ ಪ್ರಕರಣದ ವಿಚಾರಣಾ ಪ್ರಕ್ರಿಯೆಯಲ್ಲಿ ಸಿಬಿಐ ಅನುಮಾನಾಸ್ಪದ ಆರೋಪಿಗಳಿಗೆ ಕ್ಷಮಾದಾನ ನೀಡಿ ಅವರನ್ನೇ ಅನುಮೋದಕರನ್ನಾಗಿ ನ್ಯಾಯಾಲಯದ ಮುಂದೆ ತರುವ ಮಾದರಿಯನ್ನು ಅನುಸರಿಸಿದ್ದು, ಇದು ವಿಚಾರಣಾ ನ್ಯಾಯಾಧೀಶರ ತೀಕ್ಷ್ಣ ಟೀಕೆಗೆ ಗುರಿಯಾಗಿದೆ. ತನಿಖಾ ಸಂಸ್ಥೆಯು ಪ್ರಧಾನವಾಗಿ ಅನುಮೋದಕರ ಹೇಳಿಕೆಗಳನ್ನೇ ಆಧರಿಸಿರುವುದನ್ನು ನ್ಯಾಯಾಧೀಶರು ಆಕ್ಷೇಪಿಸಿದ್ದು, ಇದು ಸರಿಯಾದ ವಿಧಾನವಲ್ಲ ಎಂದು ಹೇಳಿದೆ. ಈ ರೀತಿಯ ವಿಚಾರಣಾ ಮಾದರಿಯು ಸಾಂವಿಧಾನಿಕ ತತ್ವಗಳ ಉಲ್ಲಂಘನೆ ಎಂದೂ ಬಣ್ಣಿಸಿದೆ. ಅಮೆರಿಕದ ನಾಗರಿಕ ಹಕ್ಕು ಹೋರಾಟಗಾರ ಮಾರ್ಟಿಲ್ ಲೂಥರ್ ಕಿಂಗ್ ಜೂನಿಯರ್ ಅವರ “ ಅನ್ಯಾಯ ಎಲ್ಲೇ ನಡೆದರೂ ಅದು ಎಲ್ಲೆಡೆಯೂ ನ್ಯಾಯಕ್ಕೆ ಅಪಾಯಕಾರಿಯಾಗುತ್ತದೆ ” ಎಂಬ ಪ್ರಸಿದ್ಧ ಹೇಳಿಕೆಯನ್ನು ನ್ಯಾಯಾಧೀಶರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಸಿಬಿಐ ಸಂಸ್ಥೆಯನ್ನು ತೀವ್ರವಾಗಿ ಟೀಕಿಸಿರುವ ನ್ಯಾಯಾಲಯ, ಪೂರ್ವನಿರ್ಧರಿತ ತೀರ್ಮಾನವನ್ನು ಬೆಂಬಲಿಸಲು ಸಂಸ್ಥೆಯು ಸತ್ಯಗಳನ್ನು ಪೋಣಿಸಲು ಯತ್ನಿಸಿದೆ ಎಂದು ಆರೋಪಿಸಿದೆ. ಸಿಬಿಐ ನಿರೂಪಣೆಯು ಪರಸ್ಪರ ಸಂಬಂಧವಿಲ್ಲದ ಸನ್ನಿವೇಶಗಳ ಮೇಲೆ ಅವಲಂಬಿತವಾಗಿದ್ದು ಖಾಲಿ ಬಿಟ್ಟ ಜಾಗಗಳನ್ನು ಭರ್ತಿ ಮಾಡುವುದು ನ್ಯಾಯಾಲಯದ ಕೆಲಸವಲ್ಲ ಎಂದು ಹೇಳಿದೆ. ಈ ಪ್ರಕರಣದ ಎಲ್ಲ 23 ಆರೋಪಿಗಳನ್ನೂ ನಿರ್ದೋಷಿಗಳೆಂದು ಘೋಷಿಸಿರುವ ವಿಚಾರಣಾ ನ್ಯಾಯಾಲಯ, ಸಿಬಿಐ ತನಿಖಾಧಿಕಾರಿಯ ವಿರುದ್ಧ ಇಲಾಖಾ ತನಿಖೆಯನ್ನು ನಡೆಸುವಂತೆ ಆದೇಶಿಸಿದೆ. ಬಹುಶಃ ಸಿಬಿಐ ವಿರುದ್ಧ ನ್ಯಾಯಾಲಯವೊಂದು ಮಾಡಿರುವ ಅತ್ಯಂತ ಗಂಭೀರ ಆರೋಪಗಳಲ್ಲಿ ಈ ಪ್ರಕರಣ ಅಪರೂಪದ್ದಾಗಿ ಕಾಣುತ್ತದೆ.

ಮೌಲ್ಯಗಳ ರಕ್ಷಣೆ –ಜನರ ಕರ್ತವ್ಯ
ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ನ್ಯಾಯಾಂಗ ಪ್ರಕ್ರಿಯೆಯ ಫಲಿತಾಂಶವನ್ನು ಊಹಿಸಲಾಗುವುದಿಲ್ಲ. ನ್ಯಾಯಾಲಯದ ಸುಪರ್ದಿಯಲ್ಲಿರುವುದರಿಂದ ಸಾರ್ವಜನಿಕವಾಗಿ ಖಚಿತ ಅಭಿಪ್ರಾಯಗಳನ್ನೂ ಮಂಡಿಸಲಾಗುವುದಿಲ್ಲ. ಆದರೆ ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದಾಗ ನಮ್ಮನ್ನು ಕಾಡಬೇಕಿರುವುದು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯ ಪ್ರಶ್ನೆ ಮತ್ತು ಸಾಂಸ್ಥಿಕ ದುರ್ಬಳಕೆ-ದುರುಪಯೋಗದ ಅನೈತಿಕ ರಾಜಕಾರಣ. ಅಂತಿಮವಾಗಿ ಕೇಜ್ರಿವಾಲ್ ನಿರಪರಾಧಿಯಾಗಿಯೇ ಹೊರಹೊಮ್ಮುತ್ತಾರೋ ಅಥವಾ ಉನ್ನತ ನ್ಯಾಯಾಲಯಗಳಲ್ಲಿ ಪುನಃ ದೋಷಿ ಎಂದು ನಿರೂಪಿಸಲ್ಪಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ. ಆದರೆ ಈ ಪ್ರಕರಣದಿಂದಾಚೆಗೆ ನೋಡಬೇಕಿರುವುದು ಭಾರತೀಯ ಪ್ರಜಾತಂತ್ರದ ಭವಿಷ್ಯ, ನೈತಿಕ ಅಡಿಪಾಯ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯ ಕಡೆಗೆ.
ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆ ಸ್ವತಂತ್ರವಾಗಿರಬೇಕು. ಈ ನಿಟ್ಟಿನಲ್ಲಿ ಈವರೆಗೆ ಕೇಂದ್ರದಲ್ಲಿ ಆಡಳಿತ ನಡೆಸಿರುವ ಎಲ್ಲ ಪಕ್ಷಗಳೂ ತಪ್ಪು ಹಾದಿಯನ್ನೇ ಅನುಸರಿಸಿವೆ. ಈ ತಪ್ಪುಹಾದಿಯನ್ನೇ ಹೊಸ ಮಾದರಿಯನ್ನಾಗಿ ರೂಪಿಸಲಾಗಿದ್ದು, ಇದನ್ನು ವಿರೋಧಿಸುವ ನೈತಿಕತೆಯನ್ನೂ ವಿರೋಧ ಪಕ್ಷಗಳು ಕಳೆದುಕೊಂಡಿವೆ. ಆದರೆ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇರುವುದು ಜನರಿಗಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ. ಈ ತಳಸಮಾಜದ ದೃಷ್ಟಿಯಿಂದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸಂರಕ್ಷಿಸುವುದು ದೇಶದ ನಾಗರಿಕರ ಆದ್ಯತೆ ಮತ್ತು ಕರ್ತವ್ಯವಾಗಬೇಕಿದೆ. ಇದು ಕೇವಲ ರಾಜಕೀಯ ಪ್ರಶ್ನೆಯಲ್ಲ, ಸಾಂವಿಧಾನಿಕ ಮೌಲ್ಯಗಳ ಪ್ರಶ್ನೆ.
-೦-೦-೦-೦-






