ನವದೆಹಲಿ:ಮಾ.17: ಪ್ರಧಾನಿ ನರೇಂದ್ರ ಮೋದಿಗೆ ನೋಬೆಲ್ ಶಾಂತಿ ಪ್ರಶಸ್ತಿ ಸಿಗುವ ಎಲ್ಲಾ ಅರ್ಹತೆಗಳು ಇವೆ ಎಂದು ನೋಬೆಲ್ ಶಾಂತಿ ಪ್ರಶಸ್ತಿ ಡೆಪ್ಯುಟಿ ಲೀಡರ್ ಅಸ್ಲೆ ತೋಜೆ ಅಭಿಪ್ರಾಯಪಟ್ಟಿದ್ದಾರೆ ಎಂದು ಭಾರತೀಯ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಪ್ರಧಾನಿ ಮೋದಿ ವಿಶ್ವ ಮನ್ನಣೆ ಪಡೆದಿರುವ ನಾಯಕ. ಭಾರತದಲ್ಲಿ ಸಾಕಷ್ಟು ವರ್ಷಗಳಿಂದ ಮೋದಿ ನಾಯಕತ್ವ ಆಳ್ವಿಕೆ ನಡೆಯುತ್ತಿದೆ. ರಷ್ಯಾ ಹಾಗು ಉಕ್ರೇನ್ ನಡುವಿನ ಯುದ್ಧದ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡಿದ್ದರು. ಇದಕ್ಕಾಗಿ ಪ್ರಧಾನಿ ಮೋದಿ ಅವರನ್ನು ನೊಬೆಲ್ ಪ್ರಶಸ್ತಿಗೆ ಪರಿಗಣಿಸಬಹುದು ಎಂದು ನೊಬೆಲ್ ಸಮಿತಿಯ ಸದಸ್ಯ ಅಸ್ಲೆ ತೋಜೆ ಹೇಳಿದ್ದಾರೆ ಎಂದು ಟ್ವೀಟ್ ಮಾಡಲಾಗಿತ್ತು. ಈ ವಿಚಾರ ಅಬ್ಬರದ ಪ್ರಚಾರ ವೇಗವನ್ನೂ ಪಡೆದಿತ್ತು. ಆದರೆ ಇದೀಗ ನಕಲಿ ಟ್ವೀಟ್ ಪೋಸ್ಟ್ ಮಾಡಲಾಗಿದೆ ಎಂದು ಸ್ವತಃ ನೊಬೆಲ್ ಸಮಿತಿಯ ಸದಸ್ಯ ಅಸ್ಲೆ ತೋಜೆ (Nobel Prize Committee Asle Toje) ಉಲ್ಲೇಖಿಸಿದ್ದಾರೆ.
ಒಂದೇ ದಿನದಲ್ಲಿ ಸುಳ್ಳಿನ ಹೇಳಿಕೆಗೆ ಬಿತ್ತು ಬ್ರೇಕ್..!
(Nobel Prize Committee Asle Toje) ನೊಬೆಲ್ ಸಮಿತಿಯ ಸದಸ್ಯ ಅಸ್ಲೆ ತೋಜೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದನ್ನು ಗಮನಿಸಿದ್ದ ಅಸ್ಲೆ ತೋಜೆ, ನಾನು ಅದನ್ನು ಹೇಳಿದ್ದೇನೆ ಎನ್ನುವ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ನೊಬೆಲ್ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂಬ ವರದಿಗಳು ಸುಳ್ಳು ಎಂದಿದ್ದಾರೆ. ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕ ಅಸ್ಲೆ ಟೋಜೆ, ನಾವು ನೋಬೆಲ್ ಬಗ್ಗೆ ಚರ್ಚಿಸಬಾರದು. ನಾನು ಆ ರೀತಿಯ ಅಭಿಪ್ರಾಯ ಬರುವಂತಹ ಹೇಳಿಕೆಯನ್ನೂ ನೀಡಿಲ್ಲ. ಭಾರತಕ್ಕೆ ನಾನು ನಾರ್ವೇಜಿಯನ್ ನೊಬೆಲ್ ಸಮಿತಿಯ ಉಪ ನಾಯಕನಾಗಿ ಬಂದಿಲ್ಲ. ನಾನು ಅಂತಾರಾಷ್ಟ್ರೀಯ ಶಾಂತಿ ಮತ್ತು ಜಾಗೃತಿ ನಿರ್ದೇಶಕನಾಗಿ ಹಾಗು ಭಾರತದ ಸ್ನೇಹಿತನಾಗಿ ಇಲ್ಲಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದ್ದಾರೆ. ರಷ್ಯಾ ಹಾಗು ಉಕ್ರೇನ್ ಸಂಘರ್ಷದ ಸಮಯದಲ್ಲಿ “ಇದು ಯುದ್ಧದ ಯುಗವಲ್ಲ” ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಮೋದಿ ನೆನಪಿಸಿದ ವಿಚಾರವಾಗಿ ಮಾತನಾಡಿದ್ದರು. ಇದೇ ಕಾರಣಕ್ಕೆ ನೋಬೆಲ್ ಶಾಂತಿ ಪ್ರಶಸ್ತಿ ಎನ್ನುವ ವರದಿಗಳು ಆಗಿದ್ದವು.
‘ಭಾರತ ಸ್ನೇಹಿತನಾಗಿ ರಷ್ಯಾ ಎಚ್ಚರಿಸಿತ್ತು’
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಮಾತನಾಡಿ ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಒಂದು ದುರಂತ. ಯುದ್ಧ ಅಂತ್ಯ ಮಾಡಬೇಕಿದೆ. ವಿಶ್ವದ ಇತರೆ ರಾಷ್ಟ್ರಗಳು ಯುದ್ಧ ನಿಲ್ಲಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಭಾರತದ ಮಧ್ಯಸ್ಥಿಕೆಯನ್ನು ನಾವು ನೆನಪಿಸಿಕೊಳ್ಳಬೇಕು. ಪರಮಾಣು ಶಸ್ತ್ರಾಸ್ತ್ರ ಬಳಕೆ ಸರಿಯಲ್ಲ. ವಿವಾದಗಳನ್ನು ಯುದ್ಧದ ಮೂಲಕ ಪರಿಹರಿಸಿಕೊಳ್ಳಲು ಮುಂದಾಗಬಾರದು. ಇದೇ ಸಂದೇಶವನ್ನು ಭಾರತ ರಷ್ಯಾಗೆ ನೀಡಿದೆ ಎಂದಿದ್ದರು. ಭಾರತ ಯಾವುದೇ ಏರು ದನಿಯಲ್ಲಿ ಇದನ್ನು ಮನದಟ್ಟು ಮಾಡಲಿಲ್ಲ. ಆದರೆ ಇದೇ ವಿಷಯವನ್ನು ಭಾರತ ಸ್ನೇಹಪರವಾಗಿ ತಿಳಿಸಿತು. ಭಾರತವು ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ, ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಇದರ ಅಗತ್ಯವಿದೆ ಎಂದಿದ್ದರು.
ಭಾರತದಲ್ಲಿ ಸುಳ್ಳನ್ನೇ ಸತ್ಯ ಎನ್ನುವ ಜಮಾನ..!!
ಭಾರತದಲ್ಲಿ ಸುಳ್ಳನ್ನು ಹೇಳಿ ಜನರನ್ನು ನಂಬಿಸುವ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಯಾವುದಾದರೂ ಚುನಾವಣೆಗಳು ಬಂದ ವೇಳೆ ಹಸಿ ಸುಳ್ಳುಗಳನ್ನೇ ಪ್ರಚಾರ ಮಾಡಲಾಗುತ್ತದೆ. ವಾಟ್ಸ್ ಆ್ಯಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರ ಮುಗ್ದತೆಯನ್ನು ಸೆಳೆಯುವ ಕೆಲಸ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಉತ್ಪೇಕ್ಷೆ ಮಾಡಿ ರಿಪೋರ್ಟ್ ಹಾಕುವುದು. ಇಡೀ 70 ವರ್ಷದಲ್ಲಿ ಮಾಡಿದ್ದ ಸಾಲವನ್ನು ತೀರಿಸಿದ್ದಾರೆ ಅಂತಾ ಸುಳ್ಳು ಹೇಳುವುದು. ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಚೇತರಿಕೆಗೆ ಸಾಥ್ ನೀಡಿದ್ದಾರೆ ಎನ್ನುವುದು. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಮೇಲೆ ನಡೆದ ಏರ್ ಸ್ಟ್ರೈಕ್ನಲ್ಲಿ 400 ಜನ ಪಾಕಿಸ್ತಾನಿ ಭಯೋತ್ಪಾಧಕರನ್ನು ಹೊಡೆದು ಹಾಕಿದ್ದೇವೆ ಎನ್ನುವುದು. ಹೀಗೆ ಚುನಾವಣೆ ಬರುತ್ತಿದ್ದ ಹಾಗೆ ಸುಳ್ಳುಗಳ ವಿಶ್ವವಿದ್ಯಾಲಯಗಳು ಆರಂಭವಾಗುತ್ತವೆ. ಅಭಿವೃದ್ಧಿ ಹೆಸರಿನಲ್ಲಿ ಗೆಲ್ಲಲಾಗದ ಬಿಜೆಪಿ ರಾಮಮಂದಿರ, ದೇವರು, ಮಂದಿರ, ಮಸೀದಿ , ಚರ್ಚ್ ವಿಚಾರದಲ್ಲಿ ಸಂಘರ್ಷ ಸೃಷ್ಟಿಸಿ ಗೆಲುವು ಸಾಧಿಸುತ್ತದೆ ಎನ್ನುವುದು ವಿಪಕ್ಷಗಳ ಆರೋಪ. ಇದೇ ಆರೋಪಕ್ಕೆ ನೋಬೆಲ್ ಶಾಂತಿ ಪುರಸ್ಕಾರ ಕೂಡ ಸೇರಿಕೊಳ್ಳಲಿದೆ ಎನ್ನಬಹುದು.
—–ಕೃಷ್ಣಮಣಿ—-