ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಹನ್ನೊಂದು ಅಪರಾಧಿಗಳು ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜೈಲಿನ ಹೊರಗಡೆ ಹೂವಿನ ಹಾರ ಹಾಕಿ ಸನ್ಮಾನಿಸಿ ಸಿಹಿ ತಿನ್ನಿಸಿ ಸ್ವಾಗತ ಕೋರಲಾಗಿದೆ. ಸನ್ನಡತೆ ಆಧಾರದಲ್ಲಿ ಜೈಲಿನಿಂದ ಹೊರಬಂದಿರುವ ಈ ಅಪರಾಧಿಗಳಿಂದ ಬಿಲ್ಕಿಸ್ ಬಾನು ಕುಟುಂಬದಲ್ಲಿ ಮತ್ತೆ ಆತಂಕದ ಕಾರ್ಮೋಡಗಳು ಆವರಿಸಿವೆ.
2002ರಲ್ಲಿ ಬಾನೂಗೆ ಕೇವಲ 21 ವರ್ಷಗಳಿದ್ದಾಗ ಅವಳದ್ದೇ ನೆರೆಹೊರೆಯವರಿಂದ, ಚಿರಪರಿಚಿತರಿಂದ ಭೀಕರವಾಗಿ ಅತ್ಯಾಚಾರಕ್ಕೆ ಈಡಾಗಿದ್ದಳು. ಅವಳ ಕುಟುಂಬದ ಏಳು ಜನ ಸದಸ್ಯರನ್ನು ಅವಳ ಕಣ್ಣೆದುರೇ ಕಡಿದು ಕೊಲ್ಲಲಾಗಿತ್ತು. ಅವರಲ್ಲಿ ಬಿಲ್ಕಿಸ್ ಬಾನು ಮಗಳೂ ಒಬ್ಬಳು.
ಇಂತಹ ಭೀಕರವಾದ ಅಪರಾಧವನ್ನು ಎಸಗಿದ ವ್ಯಕ್ತಿಗಳು ಈಗ ಜೈಲಿನಿಂದ ಬಿಡುಗಡೆಯಾಗಿರುವ ಕುರಿತು ಬಿಲ್ಕಿಸ್ ಬಾನು ಪತಿ ಯಾಕುಬ್ ರಸೂಲ್ ಮಾತನಾಡಿದ್ದಾರೆ. ಈ ತೀರ್ಪು ಬಂದ ಬಳಿಕ ನನ್ನ ಸಂಪೂರ್ಣ ಕುಟುಂಬ ದುಃಖದಲ್ಲಿದೆ. ಏನಾಗುತ್ತಿದೆ ಎಂಬುದೇ ಅರಿವಾಗುತ್ತಿಲ್ಲ. ಇಂತಹ ಒಂದು ಘಟನೆ ನಡೆಯುತ್ತಿದೆ ಎಂಬ ಕುರಿತು ನಮಗೆ ಯಾವುದೇ ನೋಟಿಸ್ ನೀಡಲಾಗಿಲ್ಲ, ಎಂದಿದ್ದಾರೆ.
“ಇನ್ನು ಮುಂದೆ ಏನಾಗುತ್ತದೆ ಎಂಬ ಕುರಿತು ನಮಗೆ ಆತಂಕವಿದೆ. ಮುಂದೆ ಏನು ಮಾಡಿಬೇಕಿದೆ ಎಂಬುದರ ಕುರಿತಾಗಿಯೂ ನಮಗೆ ಸ್ಪಷ್ಟತೆ ಇಲ್ಲ. ಯಾವುದೇ ಭರವಸೆ ಉಳಿದಿಲ್ಲ. ಮುಂದಿನ ದಾರಿಯೇ ಇಲ್ಲದಂತಾಗಿದೆ,” ಎಂದು ಅವರು ದ ವೈರ್’ಗೆ ಹೇಳಿಕೆ ನೀಡಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಕೇಂದ್ರ ಸರ್ಕಾರವು ಖೈದಿಗಳ ಬಿಡುಗಡೆಗೆ ಹೊಸ ಯೋಜನೆ ರೂಪಿಸಿತ್ತು. ಆ ಯೋಜನೆಯ ನಿಯಾಮವಳಿಗಳ ಪ್ರಕಾರ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಬಾರದು ಎಂದು ಸೂಚಿಸಿತ್ತು. ಆದರೂ, ಈ ನಿಯಮಾವಳಿಯನ್ನು ಮುರಿದ ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಿತ್ತು.
2004ರಲ್ಲಿ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಗೋದ್ರಾ ಹತ್ಯಾಕಾಂಡದ ಪ್ರಕರಣವೊಂದು ಗುಜರಾತಿನ ಹೊರಗಡೆ ವಿಚಾರಣೆಗೆ ಬಂದಿದ್ದು ಇದೇ ಮೊದಲು. ಗುಜರಾತಿನಲ್ಲಿ ಬಿಲ್ಕಿಸ್ ಬಾನೂಗೆ ಪದೇ ಪದೇ ಜೀವ ಬೆದರಿಕೆ ಬರುತ್ತಿದ್ದ ಕಾರಣ ಪ್ರಕರಣದ ವಿಚಾರಣರಯನ್ನು ಮುಂಬೈ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಸಿಬಿಐನ ವಿಶೇಷ ನ್ಯಾಯಾಲಯವು 11 ಜನ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017ರಲ್ಲಿ ಕೆಳ ಹಂತದ ನ್ಯಾಯಾಲಯದ ತೀರ್ಪನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದಿತ್ತು. 2019ರಲ್ಲಿ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿದ್ದ ಸುಪ್ರಿಂ ಕೋರ್ಟ್, ಬಿಲ್ಕಿಸ್ ಬಾನುಗೆ ರೂ. 50 ಲಕ್ಷ ಪರಿಹಾರ, ನೌಕರಿ ಮತ್ತು ಮನೆ ನೀಡುವಂತೆ ಸೂಚಿಸಿತ್ತು.
ಈ ಆದೆಶವನ್ನು ಸ್ವಾಗತಿಸಿದ್ದ ಬಿಲ್ಕಿಸ್ ಬಾನು, ನ್ಯಾಯಾಂಗದ ಮೇಲಿನ ನಂಬಿಕೆ ಇನ್ನಷ್ಟು ಬಲವಾಗಿದೆ ಎಂದು ಹೇಳಿದ್ದರು.