ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸಿದ್ದರಾಮಯ್ಯ, ಡಾ ಮಹದೇವಪ್ಪ ಕನಸು. ಅದಕ್ಕೆ ಆಸ್ಕರ್ ಫರ್ನಾಂಡಿಸ್ ಮತ್ತು ಕೇಂದ್ರ ಸರ್ಕಾರ ನೆರವು ನೀಡಿತು ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸಿದ್ದಲಿಂಗಪುರ ಹಾಗೂ ನಾಗನಹಳ್ಳಿ ಸಮೀಪದಲ್ಲಿ ಪ್ರಗತಿಯಲ್ಲಿರುವ ಹೆದ್ದಾರಿಯ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡದಿದ್ದರೆ, ಡಿಪಿಆರ್ ಸಿದ್ಧಪಡಿಸದೇ ಮತ್ತು ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸದೇ ಇದ್ದಿದ್ದರೆ ಅನುಷ್ಠಾನಗೊಳಿಸಲು ಆಗುತ್ತಿರಲಿಲ್ಲ. ಯಾವುದೇ ಸರ್ಕಾರವಿದ್ದರೂ, ಯಾರೇ ಸಂಸದರಿದ್ದರೂ ಈ ಯೋಜನೆ ಅನುಷ್ಠಾನಕ್ಕೆ ಬರಲೇಬೇಕಾಗಿತ್ತು ಎಂದು ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ, ನಾನು ಲೋಕೋಪಯೋಗಿ ಸಚಿವ ಹಾಗೂ ಕೇಂದ್ರದಲ್ಲಿ ಯುಪಿಎ–2 ಸರ್ಕಾರವಿದ್ದಾಗ ಆಗಿರುವ ಯೋಜನೆ ಇದು. ಈ ರಾಜ್ಯ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿಯಾಗಲು ಅನುಮೋದನೆ ಸಿಕ್ಕಿದ್ದು 2014ರ ಮಾರ್ಚ್ 4ರಂದು. ಈಗ, ಬೊಗಳೆ ಬಿಡುತ್ತಿರುವ ಪ್ರತಾಪ ಸಿಂಹ ಆಗ ಸಂಸದರೇ ಆಗಿರಲಿಲ್ಲ. ಅಂಥವರು ಕಾಂಗ್ರೆಸ್‌ನ ಕೊಡುಗೆಯೇ ಇಲ್ಲವೆಂದು ಹೇಳುತ್ತಿರುವುದು ಖಂಡನೀಯ ಎಂದು ತಿರುಗೇಟು ನೀಡಿದರು.
ಈ ಹೆದ್ದಾರಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದುದ್ದನ್ನು ಮಾನದಂಡವಾಗಿ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಯಿತು. 1,882 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಪ್ರಸ್ತಾವ ಸಲ್ಲಿಸಲಾಗಿತ್ತು. 2014ರ ಮಾರ್ಚ್ 4ರಂದು ಅಧಿಸೂಚನೆ ಹೊರಡಿಸಲಾಯಿತು. ಇದನ್ನು 2021ರ ಸೆ.15ರಂದು ಲೋಕೋಪಯೋಗಿ ಸಚಿವರು ವಿಧಾನಸಭೆಯಲ್ಲೇ ಹೇಳಿದ್ದಾರೆ’ ಎಂದು ಮಾಹಿತಿ ನೀಡಿದರು.
ಅಭಿವೃದ್ಧಿ ಯಾರದ್ದೋ ಸ್ವತ್ತಲ್ಲ.
ಅಭಿವೃದ್ಧಿ ಯಾರದ್ದೋ ಸ್ವತ್ತಲ್ಲ. ಸಾಂವಿಧಾನಿಕ ಜವಾಬ್ದಾರಿ, ಸಾರ್ವಜನಿಕರ ತೆರಿಗೆ ಹಣದಲ್ಲಿ ರಸ್ತೆ ಮಾಡಿದ್ದಾರೆ. ಮೇಲ್ದರ್ಜೆಗೆ ಏರಿಸದೇ ಇದ್ದಿದ್ದರೆ ರಾಷ್ಟ್ರೀಯ ಹೆದ್ದಾರಿ ಮಾಡಲಾಗುತ್ತಿತ್ತೇ? ರಾಮನಗರದಲ್ಲಿ ಕಚೇರಿ ಮಾಡಿದವರು, 2ಸಾವಿರ ಜಮೀನು ಸ್ವಾಧೀನಪಡಿಸಿಕೊಂಡವರು, ಸರ್ವೇ ಮಾಡಿಸಿದವರು ಹಾಗೂ ತಾಂತ್ರಿಕ ವರದಿಯನ್ನೂ ಸಲ್ಲಿಸಿದ್ದವರು ನಾವು ಎಂದು ದಾಖಲೆಗಳನ್ನು ಪ್ರದರ್ಶಿಸಿದರು.
ಯೋಜನೆ ವಿಷಯದಲ್ಲಿ ಬಿಜೆಪಿಯವರು ಮಾಡುತ್ತಿರುವ ಅಪಪ್ರಚಾರವನ್ನು ಖಂಡಿಸುತ್ತೇನೆ. ರಾಜಕೀಯವಾಗಿ ಲಾಭ ಪಡೆದುಕೊಳ್ಳಲು ಸುಳ್ಳುಗಳನ್ನು ಹೇಳುವುದು ನಮ್ಮ ಜಾಯಮಾನದಲ್ಲೇ ಬಂದಿಲ್ಲ. ಅದೇನಿದ್ದರೂ ಬಿಜೆಪಿಯವರ ಕೆಲಸ ಎಂದು ಟೀಕಿಸಿದರು.
ಇನ್ನೂ 22 ಕಿ.ಮೀ. ಕೆಲಸ ಬಾಕಿ ಇದೆ!
118 ಕಿ.ಮೀ.ನಲ್ಲಿ ಅಲ್ಲಲ್ಲಿ ಸೇರಿ ಒಟ್ಟು 22 ಕಿ.ಮೀ. ಕೆಲಸವೇ ಪೂರ್ಣಗೊಂಡಿಲ್ಲ. ಇದು ಮುಗಿಯಲು ಇನ್ನೂ ಆರೇಳು ತಿಂಗಳುಗಳೇ ಬೇಕಾಗುತ್ತದೆ. ಸಿದ್ದಲಿಂಗಪುರದಲ್ಲಿ ಮೋರಿ ಇತ್ತು. ಅದನ್ನು ಮುಚ್ಚಿ ಹಾಕಲಾಗಿದೆ. ಆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರೈತರು ಜಮೀನುಗಳಿಗೆ ತೆರಳಲು ವ್ಯವಸ್ಥೆಯನ್ನೇ ಮಾಡಿಲ್ಲ. ಸೇವಾ ರಸ್ತೆಗಳಲ್ಲಿ ಸುರಕ್ಷತೆಯೇ ಇಲ್ಲ. ಆದರೂ ಚುನಾವಣೆಯಲ್ಲಿ ಲಾಭ ಪಡೆಯುವುದಕ್ಕಾಗಿ ತರಾತುರಿಯಲ್ಲಿ ಉದ್ಘಾಟಿಸಲಾಗುತ್ತಿದೆ. ಪ್ರಧಾನಿಗೆ ತಪ್ಪು ಮಾಹಿತಿ ಕೊಡುವ ಕೆಲಸವನ್ನು ಬಿಜೆಪಿಯವರು ಮಾಡಬಾರದು ಎಂದು ಮಹದೇವಪ್ಪ ಹೇಳಿದರು.
ರಾಜಕೀಯ ಲಾಭ ಪಡೆಯುವುದನ್ನು ನಿಲ್ಲಿಸಲಿ
ನಮ್ಮ ನಿರ್ಧಾರ ಹಾಗೂ ನೀವು ಮಾಡಿದ ಕೆಲಸಗಳೆರಡನ್ನೂ ಹೇಳಿಕೊಳ್ಳಿ. ಅದನ್ನು ಬಿಟ್ಟು ನೀವಷ್ಟೆ ಕ್ರೆಡಿಟ್ ಪಡೆದುಕೊಳ್ಳುವುದು ಸರಿಯಲ್ಲ. ಮೈಸೂರು ವ್ಯಾಪ್ತಿಯಲ್ಲಿ ಕೇವಲ ಏಳು ಕಿ.ಮೀ. ಮಾತ್ರವೇ ಇಲ್ಲಿನ ಸಂಸದರಿಗೆ ಬರುತ್ತದೆ. ಆದರೆ, ಎಲ್ಲವನ್ನೂ ನಾನೇ ಮಾಡಿಸಿದ್ದು ಎಂದು ಹೇಳುತ್ತಿದ್ದಾರೆ. ಸುಳ್ಳು ಹೇಳುವುದು ಹಾಗೂ ರಾಜಕೀಯ ಲಾಭ ಪಡೆಯುವುದನ್ನು ನಿಲ್ಲಿಸಲಿ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು ನೀಡಿದರು.