ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ವೇಳೆ ಮಾಧ್ಯಮಗಳಲ್ಲಿ ಹೆಚ್ಚಿಗೆ ಪ್ರಚಾರದ ಗೀಳಿಗೆ ಹೋಗದೆ ತಾನಾಯ್ತು ತನ್ನ ಕೆಲಸ ಆಯ್ತು ಅನ್ನೋ ಸಿದ್ದರಾಮಯ್ಯ, ಮಾಧ್ಯಮಗಳು ಪ್ರಶ್ನೆ ಕೇಳುವಾಗ ತಿರುಗಿಸಿ ಮರುಪ್ರಶ್ನೆ ಹಾಕುತ್ತ ಸಾಗುವುದನ್ನು ಸಾಕಷ್ಟು ಬಾರಿ ಕಂಡಿದ್ದೇವೆ. ತಾನು ಹೇಳಬೇಕಿರುವುದನ್ನು ಮಾತ್ರ ಹೇಳುತ್ತಾರೆ. ಪತ್ರಕರ್ತರು ಕೇಳುವ ಗೊಂದಲಕಾರಿ ಹಾಗು ಸುತ್ತಿ ಬಳಸಿ ಉತ್ತರ ಪಡೆಯುವ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರವನ್ನೇ ನೀಡದೆ ಜಾಣ್ಮೆ ಪ್ರದರ್ಶನ ಮಾಡ್ತಾರೆ. ಇದೀಗ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳೇ ಗೆಲುವಿಗೆ ಮಾನದಂಡ ಎನ್ನುವುದನ್ನು ರಾಜಕೀಯ ಪಕ್ಷಗಳು ಅರಿತುಕೊಂಡಂತೆ ಕಾಣಿಸುತ್ತಿದೆ.
14 ಮಾಧ್ಯಮಗಳ ಟಿವಿ ಆ್ಯಂಕರ್ಗಳ ಚರ್ಚೆಗೆ ಹೋಗಲ್ಲ..!
ಪ್ರಧಾನಿ ನರೇಂದ್ರ ಮೋದಿ ನೇತತ್ವದ ಬಿಜೆಪಿ ವಿರುದ್ಧ ಪ್ರಬಲವಾಗಿ ಇಂಡಿಯಾ ಒಕ್ಕೂಟ ರಚನೆಯಾಗಿದ್ದು ಬುಧವಾರ ನಡೆದ ಸಭೆಯಲ್ಲಿ ಒಂದು ಸಾಲಿನ ನಿರ್ಣಯ ತೆಗೆದುಕೊಳ್ಳಲಾಗಿದೆ. ದೇಶಾದ್ಯಂತ 14 ಟಿವಿ ಚಾನೆಲ್ಗಳನ್ನು ಗುರುತಿಸಿದ್ದು, ಆ ಟಿವಿ ಚಾನೆಲ್ಗಳ ಆ್ಯಂಕರ್ಗಳು ನಡೆಸುವ ಚರ್ಚಾ ಸ್ಪರ್ಧೆಯಲ್ಲಿ ಭಾಗಿಯಾಗಬಾರದು ಅನ್ನೋ ನಿರ್ಧಾರವನ್ನು ಪ್ರಕಟ ಮಾಡಲಾಗಿದೆ. ಇದನ್ನು ತುರ್ತುಪರಿಸ್ಥಿತಿ ಮೈಂಡ್ಸೆಟ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದ್ದಾರೆ. ಆದರೆ ಬಿಜೆಪಿ ಪರವಾಗಿ ಮಾನಸಿಕತೆ ಹೊಂದಿರುವ ಟಿವಿ ಆ್ಯಂಕರ್ಗಳು, ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಕೂರಿಸಿಕೊಂಡು ಬಿಜೆಪಿ ಪರವಾಗಿ ಬಿಂಬಿಸುವ ಕೆಲಸ ಮಾಡುತ್ತಾರೆ. ಜೊತೆಗೆ ಚರ್ಚೆಗೆ ಸಮಯವನ್ನೇ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಇಂಡಿಯಾ ಒಕ್ಕೂಟ ಈ ನಿರ್ಧಾರ ಮಾಡಿದೆ.
ತಮಿಳುನಾಡಿನಲ್ಲಿ ಇಂದಿನಿಂದ ಗೃಹಲಕ್ಷ್ಮೀ ಯೋಜನೆ ಜಾರಿ..!
ಕರ್ನಾಟಕ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ದೇಶಾದ್ಯಂತ ರಾಜಕೀಯ ಪಕ್ಷಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಐದೂ ಗ್ಯಾರಂಟಿಗಳ ಜೊತೆಗೆ ಗೃಹಲಕ್ಷ್ಮೀ ಸೇರಿಕೊಂಡಿದ್ದರಿಂದಲೇ ಭರ್ಜರಿ ಜಯ ನಮ್ಮದಾಯ್ತು ಎಂದು ಕಾಂಗ್ರೆಸ್ ಕೂಡ ನಂಬಿದೆ. ಮಹಿಳೆಯರು ಪ್ರತಿತಿಂಗಳು ನೀಡುವ 2 ಸಾವಿರ ಸಹಾಯಧನ ಹಣಕ್ಕಾಗಿ ಕಾಂಗ್ರೆಸ್ ಕಡೆಗೆ ವಾಲಿದ್ದಾರೆ ಎನ್ನುವ ಸರ್ವೇ ಮಾಹಿತಿ ಸಿಕ್ಕ ಬಳಿಕ ಇಂಡಿಯಾ ಒಕ್ಕೂಟದ ಸರ್ಕಾರಗಳು ಇರುವ ಕಡೆ ಜಾರಿಗೆ ನಿರ್ಧಾರ ಆಗಿದೆ. ಇಂದಿನಿಂದ ತಮಿಳುನಾಡಿನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದಿದ್ದು, ಡಿಎಂಕೆ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಜನದಿನದ ಅಂಗವಾಗಿ ಇಂದಿನಿಂದ ಯೋಜನೆಗೆ ಚಾಲನೆ ನೀಡಲಾಗಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿಯಿಂದಲೇ ಸಹಾಯಧನ ಯೋಜನೆ..!
ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಫಲವಾಗಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದನ್ನು ಮನಗಂಡ ಬಿಜೆಪಿಯ ಶಿವರಾಜ್ ಸಿಂಗ್ ಚೌವ್ಹಾಣ್, ಜೂನ್ 10 ರಿಂದ ಪ್ರತಿ ಕುಟುಂಬದ ಹೆಣ್ಣು ಮಕ್ಕಳಿಗೆ 1 ಸಾವಿರ ನೀಡುವ ಯೋಜನೆ ಜಾರಿ ಮಾಡಿದ್ದಾರೆ. ಆದರೆ ಕೆಲವೊಂದು ನಿಯಮಗಳು ಕಠಿಣವಾಗಿದ್ದು ಹೆಚ್ಚಿನ ಜನರಿಗೆ ಯೋಜನೆ ಲಾಭ ಸಿಕ್ಕಿಲ್ಲ ಎನ್ನಲಾಗ್ತಿದೆ. ಇದೀಗ ತಮಿಳುನಾಡಿನಲ್ಲಿ 1 ಕೋಟಿಗೂ ಅಧಿಕ ಕುಟುಂಬಗಳ ಮಹಿಳೆಯರು ಪಡಿತರ ಚೀಟಿ ಆಧಾರದಲ್ಲಿ ಪ್ರತಿ ತಿಂಗಳು 1 ಸಾವಿರದಂತೆ ಯೋಜನೆ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಸಿಎಂ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ. ಒಟ್ಟಾರೆ ಕರ್ನಾಟಕದಲ್ಲಿ ಕಾಂಗ್ರೆಸ್ ತೆಗೆದುಕೊಳ್ತಿರೋ ರಾಜಕೀಯ ತಂತ್ರಗಾರಿಕೆ ದೇಶಾದ್ಯಂತ ಇತರೆ ಪಕ್ಷಗಳಿಗೆ ಮಾದರಿ ಆದಂತೆ ಆಗಿದೆ ಅನ್ನೋದು ಮಾತ್ರ ಸತ್ಯ.
ಕೃಷ್ಣಮಣಿ