—-ನಾ ದಿವಾಕರ—-
ವಾರ್ಷಿಕ ಸಾರ್ವತ್ರಿಕ ಮುಷ್ಕರದಿಂದಾಚೆಗೆ ಕಾರ್ಮಿಕ ಚಳುವಳಿಗಳ ದೃಷ್ಟಿ ಹರಿಯಬೇಕಿದೆ

ಆರ್ಥಿಕ ವಿಕಾಸದತ್ತ ಸಾಗುತ್ತಿರುವ ನವ ಭಾರತ ದುಡಿಯುವ ವರ್ಗಗಳ ಮತ್ತೊಂದು ಸಾರ್ವತ್ರಿಕ ಮುಷ್ಕರಕ್ಕೆ ಸಾಕ್ಷಿಯಾಗುತ್ತಿದೆ. ವರುಷಕ್ಕೊಮ್ಮೆ ಹೀಗೆ ದೇಶದ ಎಲ್ಲ ದುಡಿಮೆಯ ವಲಯಗಳ ಕಾರ್ಮಿಕರು ಐಕ್ಯತೆಯಿಂದ ಕಾರ್ಮಿಕರ ದೈನಂದಿನ ಬದುಕಿನ ಸಮಸ್ಯೆಗಳನ್ನು, ಕೆಲಸದ ಸ್ಥಳಗಳಲ್ಲಿ ಎದುರಿಸುವ ಸಂಕಷ್ಟಗಳನ್ನು, ಸಾಮಾಜಿಕ ಪರಿಸರದಲ್ಲಿ ಅನುಭವಿಸುವ ಸಂಕಟಗಳನ್ನು ಮತ್ತು ಆರ್ಥಿಕವಾಗಿ ಮಾರುಕಟ್ಟೆಯ ಪ್ರಹಾರದಿಂದ ಅನುಭವಿಸುವ ತೊಳಲಾಟಗಳನ್ನು, ಈ ರೀತಿಯ ಸಾರ್ವತ್ರಿಕ ಮುಷ್ಕರದ ಮೂಲಕ ಹೊರಹಾಕುತ್ತಿದ್ದಾರೆ. ಬಹುಶಃ ಕಳೆದ ಎರಡು ದಶಕಗಳಿಂದ ಇದು ಆಚರಣಾತ್ಮಕ ಮಾದರಿಯಲ್ಲಿ (Ritualistic Way) ನಡೆಯುತ್ತಾ ಬಂದಿದೆ. ಈ ಸಮಸ್ಯೆಗಳೊಂದಿಗೆ ತಮ್ಮ ಭವಿಷ್ಯದ ಬದುಕಿನ ಸುಸ್ಥಿರತೆಗಾಗಿ ಹಕ್ಕೊತ್ತಾಯಗಳನ್ನು ಮಂಡಿಸುತ್ತಿರುವುದೂ ಗಮನಾರ್ಹ ಸಂಗತಿ.
ನವ ಉದಾರವಾದಿ ಆರ್ಥಿಕತೆ ಮತ್ತು ಕಾರ್ಪೋರೇಟೀಕರಣದ ಪ್ರಭಾವದಿಂದ ಶ್ರಮಿಕ ಜಗತ್ತಿನ ತಲ್ಲಣಗಳನ್ನು ಶೋಧಿಸಿ, ಆ ಸಮಾಜದ ಒಳಹೊಕ್ಕು, ಅಲ್ಲಿನ ಒಳಬಿರುಕುಗಳನ್ನು (Fault lines) ಹಾಗೂ ಜಟಿಲ ಸಿಕ್ಕುಗಳನ್ನು, ಪರಿಹರಿಸುವ ಒಂದು ವ್ಯವಧಾನವನ್ನು, ವಿವೇಚನೆಯನ್ನು ಸರ್ಕಾರಗಳು ಕಳೆದುಕೊಂಡಿರುವುದರಿಂದ, ಈ ಮುಷ್ಕರವು ಆಳ್ವಿಕೆಯನ್ನು ಎಚ್ಚರಿಸುವ ಒಂದು ಕಾರ್ಯತಂತ್ರವಾಗಿ ಅನಿವಾರ್ಯ ಎನಿಸುತ್ತದೆ. ಈ ಸಾರ್ವತ್ರಿಕ ಮುಷ್ಕರದ ಹೆಜ್ಜೆಗಳನ್ನು ಗುರುತಿಸುತ್ತಾ, ಹಕ್ಕೊತ್ತಾಯಗಳನ್ನು ಮುಕ್ತ ಹಾಗೂ ಸೂಕ್ಷ್ಮ ದೃಷ್ಟಿಯಿಂದ ನೋಡಿದಾಗ, ಪ್ರತಿವರ್ಷವೂ ಹೊಸ ಬೇಡಿಕೆಗಳು ಕಾಣುವುದಷ್ಟೇ ಅಲ್ಲದೆ, ಮೇಲ್ಪದರದಿಂದ ತಳಸಮಾಜದ ಅಸಂಘಟಿತ ವಲಯದವರೆಗಿನ ದುಡಿಯುವ ಕೈಗಳು ಹೊಸ ಹೊಸ ಸಮಸ್ಯೆಗಳಿಗೆ ಎದುರಾಗುತ್ತಿರುವುದನ್ನೂ ಗುರುತಿಸಬಹುದು. ಆದರೆ ರಾಜಕೀಯ ಅಧಿಕಾರ ಪಕ್ಷಾತೀತವಾಗಿ ಈ ಸೂಕ್ಷ್ಮ ದೃಷ್ಟಿಯನ್ನು ಕಳೆದುಕೊಂಡಿರುವುದು ವಾಸ್ತವ.

ವಸ್ತುಸ್ಥಿತಿಯ ಸ್ಥೂಲ ದತ್ತಾಂಶಗಳು
ಮೇ 2025ರಲ್ಲಿ ಸಲ್ಲಿಸಲಾಗಿರುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಮಾಹಿತಿಯ ಅನುಸಾರ ದೇಶದಲ್ಲಿ ನಿರುದ್ಯೋಗದ ಪ್ರಮಾಣವು ಏಪ್ರಿಲ್‌ನಲ್ಲಿದ್ದ ಶೇಕಡಾ 5.1 ರಿಂದ ಮೇ ವೇಳೆಗೆ ಶೇಕಡಾ 5.6ಕ್ಕೆ ಏರಿದೆ. ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ (CMIE) ವರದಿಯಲ್ಲಿ ನಮೂದಿಸಿರುವ ನಿರುದ್ಯೋಗ ಪ್ರಮಾಣ ಶೇಕಡಾ 7ರಷ್ಟಿದ್ದು, ಈ ವ್ಯತ್ಯಯಗಳಿಗೆ ಸಮೀಕ್ಷೆಯ ಮಾನದಂಡಗಳು ಕಾರಣ ಎನ್ನುವುದನ್ನು ಗಮನಿಸಬೇಕಿದೆ. 2017-18ರ ಶೇಕಡಾ 6ಕ್ಕೆ ಹೋಲಿಸಿದರೆ, ಈಗಿನ ನಿರುದ್ಯೋಗ ಪ್ರಮಾಣವು ಕಡಿಮೆಯಾಗಿರುವುದಾಗಿ ತೋರಿದರೂ, ನೆಲದ ವಾಸ್ತವಗಳನ್ನು (Ground Realities) ಸೂಕ್ಷ್ಮವಾಗಿ ಗಮನಿಸಿದರೆ ಈ ದತ್ತಾಂಶಗಳ ಹಿಂದೆ ಶ್ರಮಿಕರ ಜೀವನ-ಜೀವನೋಪಾಯದ ಹಾದಿಗಳಲ್ಲಿ ಇರುವ ಬಿರುಕುಗಳು ಸ್ಪಷ್ಟವಾಗಿ ಕಾಣುತ್ತವೆ. ಈ ರೀತಿಯ ಸ್ವತಂತ್ರ ಸಮೀಕ್ಷೆಯ ಲಭ್ಯತೆಯ ಬಗ್ಗೆ ಅನುಮಾನಗಳಿವೆ.
ಇದೇ ಅಧಿಕೃತ ಮಾಹಿತಿಯ ಅನುಸಾರ ಗ್ರಾಮೀಣ ಯುವಸಮೂಹದ ನಿರುದ್ಯೋಗದ ಪ್ರಮಾಣವು 15-29 ವಯೋಮಾನದವರಲ್ಲಿ ಶೇಕಡಾ 13.7ರಷ್ಟಿದ್ದು, ನಗರಗಳಲ್ಲಿ ಇದು ಶೇಕಡಾ 17.9ರಷ್ಟಿದೆ. ಕಾರ್ಮಿಕ ಪಡೆಯ ಭಾಗವಹಿಸುವಿಕೆಯ ದರ (LFPR) ಮೇ 2025ರಲ್ಲಿ ಶೇಕಡಾ 54.8ಕ್ಕೆ ಕುಸಿದಿರುವುದನ್ನು ದಾಖಲಿಸಲಾಗಿದೆ. ಇದು ಕಡಿಮೆ ಸಂಖ್ಯೆಯ ಜನರು ದುಡಿಮೆಯಲ್ಲಿ ತೊಡಗಿರುವುದನ್ನು ಸೂಚಿಸುತ್ತದೆ. ದುಡಿಯುವ ವಯೋಮಾನದ 90 ಕೋಟಿ ಜನಸಂಖ್ಯೆಯ ಪೈಕಿ 61 ಕೋಟಿ ಜನರು ಮಾತ್ರ ಉದ್ಯೋಗಿಗಳಾಗಿದ್ದು, ಇದರ ಪೈಕಿ 33 ಕೋಟಿ ಜನರು ಕೃಷಿಯೇತರ ವಲಯದಲ್ಲಿರುವುದನ್ನು 2023-24ರ ಸಮೀಕ್ಷೆಯೊಂದು ಸೂಚಿಸುತ್ತದೆ. 2.8 ಕೋಟಿ ಜನರು ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ದುಡಿಮೆಯಲ್ಲಿದ್ದು, ಇದರಲ್ಲಿ ಬಹುಪಾಲು ಸಂಖ್ಯೆ ವೇತನ-ಕೂಲಿ ಪಡೆಯದ ಕೌಟುಂಬಿಕ ಶ್ರಮದಲ್ಲಿ ತೊಡಗಿದ್ದಾರೆ.
ಇದೇ ಸಮೀಕ್ಷೆಯಲ್ಲಿ ಹೇಳುವಂತೆ 28 ಕೋಟಿ ವಿದ್ಯಾವಂತ ನಿರುದ್ಯೋಗಿ ಯುವಸಮೂಹವು ಯೋಗ್ಯ ಉದ್ಯೋಗಗಳ (Decent Job) ನಿರೀಕ್ಷೆಯಲ್ಲಿದೆ. ಬಹುಪಾಲು ಮಹಿಳೆಯರನ್ನೊಳಗೊಂಡ 10 ಕೋಟಿ ವಿದ್ಯಾವಂತ ಯುವ ಸಮೂಹವು, ಯಾವುದೇ ಉದ್ಯೋಗವನ್ನು ಅರಸುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಇದರ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳನ್ನು ಶೋಧಿಸುವುದು ಸಮಾಜಶಾಸ್ತ್ರೀಯ ಅಧ್ಯಯನ ಕ್ಷೇತ್ರದ ಜವಾಬ್ದಾರಿ !!!! . ಇದೇ ಸಮೀಕ್ಷೆಯಲ್ಲಿ ಉಲ್ಲೇಖಿಸುವ ಮತ್ತೊಂದು ಅಂಶವೆಂದರೆ, 15 ಕೋಟಿಗೂ ಹೆಚ್ಚಿನ ಯುವ ಸಮೂಹವು ವಿದ್ಯಾರ್ಜನೆ ಮತ್ತು ತರಬೇತಿಯ ಹಂತದಲ್ಲಿದ್ದು, ಈ ಇಡೀ ಯುವ ಸಂಕುಲ ಉದ್ಯೋಗಾವಕಾಶಗಳ ಆಕಾಂಕ್ಷೆಯೊಂದಿಗೆ ಜೀವನ ಸಾಗಿಸುತ್ತಿರುವುದು ಕಾಣುತ್ತದೆ. ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವು, ಅಸಂಪೂರ್ಣ ಉದ್ಯೋಗಿಗಳ (Under employed) ಸಮಾಜದಲ್ಲಿ ಆತಂಕಗಳನ್ನು ಸಹಜವಾಗಿಯೇ ಹೆಚ್ಚಿಸುತ್ತದೆ.
ಸಾರ್ವತ್ರಿಕ ಮುಷ್ಕರದ ಆಶಯಗಳು
ಈ ನಡುವೆಯೇ ಜುಲೈ 9ರ ಸಾರ್ವತ್ರಿಕ ಮುಷ್ಕರದಲ್ಲಿ 25 ಕೋಟಿಗೂ ಹೆಚ್ಚು ಕಾರ್ಮಿಕರು, ರೈತರು ಭಾಗವಹಿಸುತ್ತಿದ್ದಾರೆ. ಈ ಕಾರ್ಮಿಕರ ನಡುವೆ ಮೊಳಗುವ ಪ್ರಧಾನ ಘೋಷಣೆ ʼ ಕಾರ್ಮಿಕರ ಐಕ್ಯತೆ ಚಿರಾಯುವಾಗಲಿ ʼ ಸಾರ್ವತ್ರಿಕ ಮುಷ್ಕರಕ್ಕೆ ಒಂದು ಭರವಸೆಯ ಭವಿಷ್ಯವನ್ನು ಸೃಷ್ಟಿಸುವ ನಿರೀಕ್ಷೆಯೊಂದಿಗೇ ವಾರ್ಷಿಕ ಮುಷ್ಕರಗಳನ್ನು ಭಾರತದ ಸಂಘಟಿತ ಕಾರ್ಮಿಕ ಸಂಘಟನೆಗಳು ಆಯೋಜಿಸುತ್ತಿವೆ. ಭಾರತ ಅನುಸರಿಸುತ್ತಿರುವ ಮತ್ತು ಪಕ್ಷಾತೀತವಾಗಿ, ಎಡಪಂಥೀಯ ಸರ್ಕಾರವೊಂದನ್ನು ಬಿಟ್ಟರೆ, ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸಿ ಅನುಸರಿಸುತ್ತಿರುವ ಕಾರ್ಮಿಕ ನೀತಿಗಳು, ಹೊಸ ಕರಾಳ ಕಾರ್ಮಿಕ ಸಂಹಿತೆಗಳು ಮತ್ತು ನಿರ್ದಿಷ್ಟ ʼ ಉದ್ಯೋಗನೀತಿ ʼ (Employment Policy) ಇಲ್ಲದ ಹೊಸ ನಿಯಮಗಳು ಸಮಸ್ತ ಕಾರ್ಮಿಕರನ್ನು ಬಾಧಿಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಹಂತಹಂತವಾಗಿ ಕಾರ್ಪೋರೇಟ್ ಉದ್ದಿಮೆಯ ಹೆಗಲಿಗೇರಿಸುತ್ತಿರುವ ಸರ್ಕಾರಗಳು, ಉದ್ಯೋಗ ನೀಡುವುದು ಸರ್ಕಾರಗಳ ಆದ್ಯತೆಯಾಗಲೀ, ಜವಾಬ್ದಾರಿಯಾಗಲೀ ಅಲ್ಲ ಎನ್ನುವ ಧೋರಣೆಯನ್ನು ಅನುಸರಿಸುತ್ತಿರುವುದರಿಂದ, ಲಕ್ಷಾಂತರ ಸಂಖ್ಯೆಯ ಯುವ ಸಮೂಹ ವಿದ್ಯಾರ್ಜನೆಯನ್ನು ಮುಗಿಸಿ, ಮಾರುಕಟ್ಟೆಯ ಸಂತೆಯಲ್ಲಿ ತಮ್ಮ ಜೀವನ-ಜೀವನೋಪಾಯಗಳನ್ನು ಕಂಡುಕೊಳ್ಳುವುದು, ವರ್ತಮಾನ ಭಾರತದ ಒಂದು ಲಕ್ಷಣ.

ಹೀಗೆ ಮಾರುಕಟ್ಟೆಯ ಹಂಗಿಗೆ ಒಳಗಾದ ನಿರುದ್ಯೋಗಿ, ಅರೆ ಉದ್ಯೋಗಿ, ಅಸಂಪೂರ್ಣ ಉದ್ಯೋಗಿಗಳ ಬೃಹತ್ ಜನಸಂಖ್ಯೆಯನ್ನು ಈ ಸಾರ್ವತ್ರಿಕ ಮುಷ್ಕರ ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಭಾರತದ ನವ ಆರ್ಥಿಕತೆಯಲ್ಲಿ ಉತ್ಪಾದಕ ವಲಯವು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗದ ಕಾರಣ ಹೆಚ್ಚಿನ ಸಂಖ್ಯೆಯ ಯುವಸಮೂಹವು ಸೇವಾ ವಲಯ, ಗಿಗ್ ಆರ್ಥಿಕತೆ (ಓಲಾ, ಊಬರ್, ಅಮೆಜಾನ್, ಸ್ವಿಗಿ, ಝಮೋಟೋ ಇತ್ಯಾದಿ ) ಹಾಗೂ ಅಸಂಘಟಿತ ವಲಯದ ತಾತ್ಕಾಲಿಕ ಉದ್ಯೋಗಗಳನ್ನೇ ಅವಲಂಬಿಸಬೇಕಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ಅಧಿಕೃತ ಅಂಕಿಸಂಖ್ಯೆಗಳು ಲಭ್ಯವಾಗುವುದು ದುಸ್ತರವಾದರೂ, 2019-20ರ ವೇಳೆಗೆ ಉತ್ಪಾದನಾ ವಲಯದಲ್ಲಿ 6.24 ಕೋಟಿ ಉದ್ಯೋಗಗಳಿರುವುದನ್ನು ಆರ್ಥಿಕ ಸಮೀಕ್ಷಾ ವರದಿಗಳು ಸೂಚಿಸುತ್ತವೆ.
ಉಳಿದಂತೆ ಬಹುತೇಕ ಉದ್ಯೋಗಾವಕಾಶಗಳು ಇತರ ವಲಯಗಳಲ್ಲಿ ಕಾಣಬಹುದು. ಉತ್ಪಾದನಾ ವಲಯದಲ್ಲೂ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕಕಾರಿ ಅಂಶವಾಗಿದೆ. ಶಿಕ್ಷಣ , ಆರೋಗ್ಯ, ಯೋಗಕ್ಷೇಮ, ವಿಮೆ , ಬ್ಯಾಂಕಿಂಗ್ ಹಾಗೂ ಇತರ ಸಾರ್ವಜನಿಕ ವಲಯಗಳಲ್ಲಿ ಅತಿಹೆಚ್ಚು ಪ್ರಮಾಣವನ್ನು ಈ ನೌಕರರಲ್ಲಿ ಕಾಣಬಹುದು. ಶೈಕ್ಷಣಿಕ ವಲಯ ಬಹುಮಟ್ಟಿಗೆ ಸಂಪೂರ್ಣವಾಗಿ ಔದ್ಯಮೀಕರಣ-ವಾಣಿಜ್ಯೀಕರಣಕ್ಕೊಳಗಾಗುತ್ತಿರುವ ಕಾರಣ, ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗದ ವಿಶ್ವವಿದ್ಯಾಲಯದವರೆಗೆ ಬೋಧಕರ ಮತ್ತು ಬೊಧಕೇತರ ನೌಕರರು ʼ ಅತಿಥಿ ʼಗಳಾಗಿ ದುಡಿಯುತ್ತಿರುವುದು ವಿಪರ್ಯಾಸವಾದರೂ ವಾಸ್ತವ. ಅತಿಥಿ ಉಪನ್ಯಾಸಕ, ಶಿಕ್ಷಕ ಇತ್ಯಾದಿ ವರ್ಗೀಕರಣಗಳನ್ನು ಬದಿಗಿಟ್ಟು ನೋಡಿದಾಗ, ದೇಶದ ನವ ತಲೆಮಾರಿನ ಯುವ ಸಮೂಹವನ್ನು ಭವಿಷ್ಯ ಭಾರತದ ಸ್ಥಿರಾಸ್ತಿಗಳಾಗಿ ಪರಿವರ್ತಿಸಲು ಶ್ರಮಿಸಬೇಕಾದ ಈ ಕಾರ್ಮಿಕರು ಸ್ವತಃ ಅಭದ್ರತೆಯನ್ನು ಎದುರಿಸುತ್ತಿರುವ ವಿಪರ್ಯಾಸವನ್ನೂ ಕಾಣುತ್ತಿದ್ದೇವೆ.

ಆತಿಥೇಯರ ಹಂಗಿನಲ್ಲಿ ಶ್ರಮಿಕ ಪಡೆ
ಲಕ್ಷಾಂತರ ಬೋಧಕ ಹುದ್ದೆಗಳು ಖಾಲಿ ಇದ್ದರೂ ಅದನ್ನು ಭರ್ತಿಮಾಡುವಾಗ, ಶಾಶ್ವತ ನೌಕರಿ ಒದಗಿಸದೆ ʼ ಅತಿಥಿ ʼಗಳಾಗಿ ನೇಮಿಸುವ ಸರ್ಕಾರಗಳು, ʼಆತಿಥ್ಯʼ ಎಂಬ ಪದದ ಔದಾತ್ಯವನ್ನೇ ಪ್ರಶ್ನಿಸುವ ರೀತಿಯಲ್ಲಿ ಈ ನೌಕರರನ್ನು ʼ ಆತಿಥೇಯ ʼರ ಹಂಗಿಗೆ ಒಳಪಡುವಂತೆ ಮಾಡಿವೆ. ಈ ತಾತ್ವಿಕ ಅಂಶಗಳ ಹೊರತಾಗಿಯೂ ನೋಡಿದಾಗ, ಇಂದು ಲಕ್ಷಾಂತರ ಅತಿಥಿ ಬೋಧಕರು ನಿವೃತ್ತಿಯ ಅಂಚಿನಲ್ಲಿದ್ದು, ನಿವೃತ್ತಿಯಾಗಿದ್ದು, ತಮ್ಮ ಕೌಟುಂಬಿಕ ಜೀವನ ನಿರ್ವಹಣೆಗೆ ಅನ್ಯ ಉದ್ಯೋಗಗಳನ್ನು ಅವಲಂಬಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರೇ ಪ್ರಧಾನವಾಗಿರುವ ಆಶಾ-ಅಂಗನವಾಡಿ-ಬಿಸಿಯೂಟ ಕಾರ್ಮಿಕರ ವೇತನವನ್ನು ಕೊಂಚ ಮಟ್ಟಿಗೆ ಹೆಚ್ಚಿಸಲಾಗಿದೆಯಾದರೂ, ಈ ದುಡಿಮೆಗಾರರ ಭವಿಷ್ಯದ ಬದುಕಿಗೆ ಸುಭದ್ರ ಬುನಾದಿ ಒದಗಿಸುವಂತಹ ಯಾವುದೇ ನೀತಿಗಳನ್ನು ಅನುಸರಿಸಲಾಗುತ್ತಿಲ್ಲ.
ಭವಿಷ್ಯನಿಧಿ, ವಿಮಾ ಸೌಲಭ್ಯ, ಇಎಎಸ್‌ಐ ಸೌಕರ್ಯ ಮತ್ತು ಸೇವಾವಧಿಯಲ್ಲಿ ಒದಗಿಸಲಾಗುವ ಹಲವು ಅನುಕೂಲತೆಗಳು ದುಡಿಮೆಯ ಅವಧಿಯಲ್ಲಿ ಈ ಕಾರ್ಮಿಕರ ಬದುಕಿಗೆ ಸಾಂತ್ವನದ ನೆಲೆ ನೀಡುವುದಾದರೂ, ನಿವೃತ್ತಿಯ ಅನಂತರದ ಬದುಕು ಹೇಗೆ ? ಇವರನ್ನೇ ಅವಲಂಬಿಸಿದ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ರಕ್ಷಣೆ ಮತ್ತು ಪೌಷ್ಟಿಕ ಆಹಾರ ಪೂರೈಕೆಗೆ ಸರ್ಕಾರ ನಿಗದಿಪಡಿಸುವ ವೇತನಗಳು ಪೂರಕವಾಗಿದೆಯೇ ? ಈ ವೇತನ ತಾರತಮ್ಯಗಳು ಒಂದು ನೆಲೆಯಲ್ಲಿ ʼ ಸಮಾನ ದುಡಿಮೆಗೆ ಸಮಾನ ವೇತನ ʼ ಎಂಬ ವಿಶ್ವಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟಗಳ ಫಲವಾಗಿ ಸರ್ಕಾರಗಳು ಈ ಕಾರ್ಮಿಕರ ವೇತನಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿದರೂ, ಇದು ಮೇಲ್ವರ್ಗದ ಅಥವಾ ಸಂಘಟಿತ ವಲಯದ ಶಾಶ್ವತ ನೌಕರರಿಗೆ ಹೋಲಿಸಿದಾಗ ಅಸಮರ್ಪಕವಾಗಿ ಕಾಣುವುದು ಸತ್ಯ.

ಇದೇ ಪ್ರಮೇಯವನ್ನು ಈ ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗುತ್ತಿರುವ ರೈತ ಸಮುದಾಯದ ನಡುವೆಯೂ ಇಟ್ಟು ನೋಡಿದಾಗ, ಕೃಷಿ ವಲಯದ ಉತ್ಪಾದನೆ, ವಿತರಣೆ ಮತ್ತು ಸಂಗ್ರಹದ ಸೌಕರ್ಯಗಳ ಕೊರತೆಯೊಂದಿಗೇ, ರೈತ ಬೆಳೆಯುವ ಫಸಲಿಗೆ ಲಾಭದಾಯಕವಲ್ಲದಿದ್ದರೂ, ಸೂಕ್ತ ಮಾರುಕಟ್ಟೆ ಬೆಂಬಲ ಬೆಲೆಯನ್ನು ಒದಗಿಸುವುದರಲ್ಲೂ ಸರ್ಕಾರಗಳು ವಿಫಲವಾಗುತ್ತಿವೆ. ʼ ರೈತರ ಮಕ್ಕಳೇ ʼ ಅಧಿಕಾರ ರಾಜಕಾರಣವನ್ನು ನಿಯಂತ್ರಿಸುತ್ತಿದ್ದರೂ, ರೈತ ಸಮುದಾಯದ ಬೇಕು ಬೇಡಗಳನ್ನು ಸಮರ್ಪಕವಾಗಿ ಗುರುತಿಸದ ಅಸೂಕ್ಷ್ಮತೆಯನ್ನು ಕಾಣುತ್ತಿದ್ದೇವೆ. ಇದು ಭೂಮಿ ಇರುವ ರೈತರ ಬವಣೆಯಾದರೆ, ಕೃಷಿ-ಬೇಸಾಯ-ಕೃಷಿ ಸಂಬಂಧಿತ ಸಣ್ಣ ಕಸುಬುಗಳನ್ನೇ ನಂಬಿ ಬದುಕುವ ಬೃಹತ್ ಜನಸಂಖ್ಯೆ, ಅನ್ಯರ ಭೂಮಿಯಲ್ಲಿ ದಿನಗೂಲಿ ಆಧಾರದಲ್ಲಿ ದುಡಿಯುವ ಕೃಷಿ ಕಾರ್ಮಿಕರ ಬದುಕು ಇನ್ನೂ ದುರ್ಗಮ ಹಾದಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬೇಕಿದೆ.
ಇದರ ನಿಖರವಾದ ಅಂಕಿಅಂಶಗಳು ಲಭ್ಯವಾಗದಿದ್ದರೂ, ಸುತ್ತಲಿನ ಸಮಾಜದಲ್ಲಿ ಕೃಷಿ ಭೂಮಿಯಲ್ಲಿ ಅರೆಕಾಲಿಕ ಕಾರ್ಮಿಕರಾಗಿ ದುಡಿಯುವವರೇ, ವರ್ಷದ ಕೆಲವು ತಿಂಗಳುಗಳಲ್ಲಿ ನಗರಗಳ ವಲಸೆ ಕಾರ್ಮಿಕರಾಗಿ ಕಟ್ಟಡ ನಿರ್ಮಾಣ ಮತ್ತಿತರ ಮೂಲ ಸೌಕರ್ಯಗಳಗಳ ಮೊರೆ ಹೋಗುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲಿ ಮಹಿಳಾ ಕೃಷಿ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿದ್ದು, ಒಣಬೇಸಾಯದ ಪ್ರದೇಶಗಳಲ್ಲಿ ಈ ಸಮಸ್ಯೆ ತೀವ್ರವಾಗಿರುವುದು ಗಮನಿಸಬೇಕಾದ ಅಂಶ. ಆದರೆ ದೇಶದ ಬಹುತೇಕ ರೈತ ಸಂಘಟನೆಗಳು, ಎಡಪಕ್ಷಗಳ ಸಂಯೋಜಿತ ಸಂಘಟನೆಗಳನ್ನು ಹೊರತುಪಡಿಸಿ, ಈ ಕೃಷಿ ದುಡಿಮೆಗಾರರನ್ನು ಪ್ರತಿನಿಧಿಸುವುದಿಲ್ಲ. ಹಾಗಾಗಿ ಒಂದು ನೆಲೆಯಲ್ಲಿ ಅಸಂಘಟಿತ ವಲಯವನ್ನೇ ಪ್ರತಿನಿಧಿಸುವ ಈ ಅಗಾಧ ಜನಸ್ತೋಮ, ಮಾರುಕಟ್ಟೆ ಆರ್ಥಿಕತೆಯ ಪ್ರಹಾರದಿಂದ ದುರ್ಗಮ ಹಾದಿಯಲ್ಲಿ ಬದುಕು ಸವೆಸುತ್ತಿರುವುದನ್ನು ಗುರುತಿಸಬಹುದು.

ಐಕ್ಯತೆ-ಐಕಮತ್ಯ ಮತ್ತು ಸಾಂಘಿಕ ಮಿತಿಗಳು
ಈ ಹಲವು ಜಟಿಲ ಸಿಕ್ಕುಗಳ ನಡುವೆಯೇ ಜುಲೈ 9ರ ಸಾರ್ವತ್ರಿಕ ಮುಷ್ಕರ ದೇಶದ ದುಡಿಯುವ ವರ್ಗಗಳ ಹಕ್ಕೊತ್ತಾಯದ ಧ್ವನಿಯಾಗಿ ಕಂಡುಬರುತ್ತದೆ. ಈ ಒಂದು ದಿನದ ಸಾಂಕೇತಿಕ ಐಕ್ಯತೆಯನ್ನು ಭೇದಿಸಿ ಒಳಹೊಕ್ಕು ನೋಡಿದಾಗ, ಸಾಂಘಿಕವಾಗಿ ಕಾರ್ಮಿಕ ಸಂಘಟನೆಗಳು ಸಮಸ್ತ ಶ್ರಮಜೀವಿಗಳನ್ನು, ಎಲ್ಲ ಸ್ತರಗಳ ಕಾರ್ಮಿಕರನ್ನು ಪ್ರತಿನಿಧಿಸುವುದೇ ಆದರೆ, ಈ ಐಕ್ಯತೆ ಅಥವಾ ಐಕಮತ್ಯವನ್ನು ಮತ್ತಷ್ಟು ವಿಸ್ತರಿಸಬೇಕಾದ ಅಗತ್ಯತೆ ಎದ್ದು ಕಾಣುತ್ತದೆ. ಸಾಂಘಿಕ ನೆಲೆಯಲ್ಲಿ ತಾವು ಪ್ರತಿನಿಧಿಸುವ ಕಾರ್ಮಿಕ ಪಡೆಯ ಹಿತಾಸಕ್ತಿಗಳ ದೃಷ್ಟಿಯಿಂದಲೇ ಈ ಮುಷ್ಕರದಲ್ಲಿ ಭಾಗಿಯಾಗುವ ಮೇಲ್ವರ್ಗದ ಬ್ಯಾಂಕಿಂಗ್-ವಿಮಾ ಕ್ಷೇತ್ರದ ಅಥವಾ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರಿಗೆ, ತಮ್ಮಷ್ಟೇ ಅವಧಿಯ ದುಡಿಮೆ ಮಾಡಿದರೂ, ತಮಗಿಂತಲೂ ಹೆಚ್ಚಿನ ಉತ್ಪಾದಕೀಯತೆಯನ್ನು ಹೊಂದಿದ್ದರೂ, ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದರೂ, ನ್ಯಾಯಯುತ ವೇತನ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗಿರುವುದು ಗೋಚರಿಸುವುದೇ ?
ಜುಲೈ 9ರಂದು ಮೊಳಗುವ ʼಕಾರ್ಮಿಕರ ಐಕ್ಯತೆ ಚಿರಾಯುವಾಗಲಿʼ ಎಂಬ ಉದಾತ್ತ ಘೋಷಣೆಯನ್ನು ಪದಚ್ಛೇದಕ್ಕೊಳಪಡಿಸಿ ನೋಡಿದಾಗ, ಕಾರ್ಮಿಕರು ಅಥವಾ ಶ್ರಮಿಕರ ನಡುವಿನ ಅಸಮಾನತೆ, ವೇತನ ತಾರತಮ್ಯ ಮತ್ತು ಜೀವನೋಪಾಯದ ತರತಮಗಳು ಢಾಳಾಗಿ ಕಾಣುತ್ತವೆ. ಜುಲೈ 9ರ ಮುಷ್ಕರದ ಬೇಡಿಕೆಗಳಲ್ಲಿ ಒಂದಾಗಿದ್ದರೂ, ಸಾಂವಿಧಾನಿಕವಾಗಿ ʼ ಉದ್ಯೋಗದ ಹಕ್ಕು ʼ ಶಾಸನಬದ್ಧವಾಗಿ ಜಾರಿಗೊಳಿಸುವ ಆಗ್ರಹವು ಸಾಂಕೇತಿಕ ಮುಷ್ಕರಗಳನ್ನು ದಾಟಿ, ರಾಜಕೀಯ ಸ್ವರೂಪ ಪಡೆಯಬೇಕಾದ ಅಗತ್ಯತೆಯನ್ನು ಸಂಘಟಿತ ವಲಯವು ಗುರುತಿಸಬೇಕಿದೆ. ಈ ದೃಷ್ಟಿಯಿಂದ ಸಾಂಕೇತಿಕ-ತಾತ್ಕಾಲಿಕ ಐಕ್ಯತೆಯಾಗಲೀ, ಐಕಮತ್ಯವಾಗಲೀ ಪರಿಪೂರ್ಣ ಎನಿಸುವುದಿಲ್ಲ. ಇಲ್ಲಿ ಬೇಕಿರುವುದು ಕಾರ್ಮಿಕ ಹೋರಾಟಗಳ ರಾಜಕೀಯ ಐಕ್ಯತೆ ಅಥವಾ ಕಾರ್ಮಿಕರಲ್ಲಿ ಇರಲೇಬೇಕಾದ, ಇರುವ ರಾಜಕೀಯ ಪ್ರಜ್ಞೆಯ ಐಕ್ಯತೆ.

ಹೊಸ ರಾಜಕೀಯ ಪ್ರಜ್ಞೆಯ ಕಡೆಗೆ
ಈ ರಾಜಕೀಯ ಪ್ರಜ್ಞೆ (Political Consciousness) ಇಂದು ಅಧಿಕಾರ ರಾಜಕಾರಣದ ಅಂಗಳದಲ್ಲಿ ಛಿದ್ರೀಕರಣಕ್ಕೊಳಗಾಗಿರುವುದು ವಾಸ್ತವ. ಕಾರ್ಮಿಕರಲ್ಲಿ ಈ ಪ್ರಜ್ಞೆ ಮೂಡಿಸುವುದೇ ಆದರೆ ಅದು ಚುನಾವಣೆ ಆಧಾರಿತ ಅಧಿಕಾರ ಕೇಂದ್ರಿತ ಪ್ರಜಾಸತ್ತಾತ್ಮಕ ಪ್ರಜ್ಞೆಯಿಂದಾಚೆಗೆ ವಿಸ್ತರಿಸಬೇಕಿದೆ. ದುರದೃಷ್ಟವಶಾತ್ ಭಾರತದ ಕಾರ್ಮಿಕ ಚಳುವಳಿಯು ಮುಖಾಮುಖಿಯಾಗುತ್ತಲೇ ಬಂದಿರುವ ಸಮಸ್ಯೆ ಎಂದರೆ ಈ ರಾಜಕೀಯ ಪ್ರಜ್ಞೆಯನ್ನು ಸೈದ್ಧಾಂತಿಕ ನೆಲೆಯಲ್ಲಿ ಮೂಡಿಸಲು ವಿಫಲವಾಗಿರುವುದು. ರಾಜಕೀಯ ಅಧಿಕಾರದ ನೆಲೆಯಲ್ಲಿ ಕಾರ್ಮಿಕ ವಿರೋಧಿ ನೀತಿ-ಸಂಹಿತೆಗಳನ್ನು, ಆರ್ಥಿಕ ನೀತಿ-ಯೋಜನೆಗಳನ್ನು ಹಾಗೂ ಕಾರ್ಪೋರೇಟ್ ಮಾರುಕಟ್ಟೆಗೆ ಪೂರಕವಾದ ಅರ್ಥವ್ಯವಸ್ಥೆಯನ್ನು ಪೋಷಿಸುವ ಪಕ್ಷಗಳಿಗೆ ಸೈದ್ಧಾಂತಿಕವಾಗಿ ಆತುಕೊಳ್ಳುವ ಕಾರ್ಮಿಕರ ಸಂಖ್ಯೆಯೇ ಪ್ರಧಾನವಾಗಿರುವುದನ್ನು, ಎಡಪಂಥೀಯ ಕಾರ್ಮಿಕ ಚಳುವಳಿಗಳಲ್ಲೂ ಗುರುತಿಸಬಹುದು. ಹಾಗಾಗಿಯೇ ʼ ಕೆಂಬಾವುಟ ʼ ಸಾಂಕೇತಿಕ ಸ್ವರೂಪ ಪಡೆದುಕೊಂಡು, ಪಕ್ಷಾಧಾರಿತ ಲಾಂಛನ-ಚಿಹ್ನೆಗಳು ಕಾರ್ಮಿಕ ಪಡೆಯ ನಡುವೆ ರಾರಾಜಿಸುತ್ತದೆ.
ಈ ನಿಟ್ಟಿನಲ್ಲಿ ʼಕಾರ್ಮಿಕರ ಐಕ್ಯತೆʼಯ ಪ್ರಶ್ನೆ ಎದುರಾದಾಗ ಎಡಪಕ್ಷಗಳು ಗಂಭೀರ ಆತ್ಮಾವಲೋಕನಕ್ಕೆ ಮುಂದಾಗಬೇಕಿದೆ. ಎಡಪಕ್ಷಗಳ ʼಸಮಾನ ವೇದಿಕೆ ʼ (Common Platform) ಎಂಬ ಶಮನಕಾರಿ ಪ್ರಯತ್ನಗಳಿಗಿಂತಲೂ , ́ ʼಐಕ್ಯತೆʼ ́ ಎಂಬ ಚಿಕಿತ್ಸಕ ಪ್ರಯತ್ನಗಳು ವರ್ತಮಾನದ ತುರ್ತು ಎನ್ನುವುದನ್ನು ಎಲ್ಲ ಎಡಪಕ್ಷಗಳೂ ಒಪ್ಪಲೇಬೇಕಿದೆ. ದುರದೃಷ್ಟವಶಾತ್ ಭಾರತದ ಕಮ್ಯುನಿಸ್ಟ್ ಅಥವಾ ಎಡಪಂಥಿಯ ರಾಜಕೀಯ ಐಕ್ಯತೆಯನ್ನು ಸಾಂಘಿಕ ನೆಲೆಯಲ್ಲಿ ಸಾಧಿಸಲು ಅಡ್ಡಿಯಾಗಿರುವುದೇ ʼ ಕಾರ್ಮಿಕ ಸಂಘಟನೆಗಳು ʼ ಮತ್ತು ಅವುಗಳನ್ನು ನಿರ್ದೇಶಿಸುವ ʼ ಅಸ್ತಿತ್ವವಾದಿ ಚಿಂತನೆಗಳು ʼ ́(Existential Thoughts). ಈ ಐಕ್ಯತೆಯನ್ನು ಸಾಧಿಸದೆಯೇ ಸಾಂಕೇತಿಕವಾಗಿ ಐಕ್ಯತೆಯ ಘೋಷಣೆಗಳನ್ನು ಕೂಗುವುದು ಒಂದು ನೆಲೆಯಲ್ಲಿ ಆತ್ಮವಂಚನೆ ಎನಿಸಬೇಕಲ್ಲವೇ ? ಈ ಕಟು ವಿಮರ್ಶೆ ಚರ್ಚಾಸ್ಪದವಾದರೂ, ಗಂಭೀರ ಚರ್ಚೆಗೊಳಗಾಗಬೇಕಾದ ಅವಶ್ಯಕತೆಯನ್ನು ಅಲ್ಲಗಳೆಯಲಾಗುವುದಿಲ್ಲ.
ಈ ತಾತ್ವಿಕ ನೆಲೆಯಲ್ಲಿ ಜುಲೈ 9ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮರುವಿಮರ್ಶೆಗೊಳಪಡಿಸಬೇಕಿದೆ. ಇದರ ಅಗತ್ಯತೆ ಇರುವುದು ಹೌದಾದರೂ, ಮುಂದೇನು ಎಂಬ ಪ್ರಶ್ನೆಗೆ ನಿರುತ್ತರರಾಗಿ ನಿಲ್ಲಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ನವ ಉದಾರವಾದ-ಕಾರ್ಪೊರೇಟ್ ಮಾರುಕಟ್ಟೆ ಆರ್ಥಿಕತೆಯ ಪ್ರಹಾರದಿಂದ ತತ್ತರಿಸುತ್ತಿರುವ ತಳಸಮಾಜದ ಯುವ ಸಮೂಹ, ವಿಶೇಷವಾಗಿ ಅನಿಶ್ಚಿತ ಭವಿಷ್ಯದತ್ತ ಮುಖಮಾಡಿರುವ ಮಿಲೆನಿಯಂ ಯುವ ಸಮೂಹ ಈ ಪ್ರಶ್ನೆಗೆ ಉತ್ತರ ಅಪೇಕ್ಷಿಸುತ್ತದೆ. ತತ್ವ ಸಿದ್ಧಾಂತಗಳಿಂದಾಚೆ ಯೋಚಿಸಿದಾಗ ಇದಕ್ಕೆ ಉತ್ತರ ಹೊಳೆಯಬಹುದೇನೋ ಆದರೆ, ಕಾರ್ಮಿಕರ ಅಭ್ಯುದಯದ ಹಾದಿಯಲ್ಲಿ ದುಡಿಯುವ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಾದ ಸೈದ್ಧಾಂತಿಕ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಮಾರ್ಕ್ಸ್-ಲೆನಿನ್ ಪ್ರತಿಪಾದಿಸಿದ, ಡಾ. ಬಿ.ಆರ್. ಅಂಬೇಡ್ಕರ್ ಅನುಮೋದಿಸಿದ ತಾತ್ವಿಕ ನೆಲೆಗಳನ್ನು ಮರುವಿಮರ್ಶೆಗೊಳಪಡಿಸುವ ಅಗತ್ಯತೆ ನಮ್ಮ ಮುಂದಿದೆ.
ಈ ಅರಿವಿನೊಂದಿಗೇ ಜುಲೈ 9ರ ಸಾರ್ವತ್ರಿಕ ಮುಷ್ಕರವೂ ಯಶಸ್ವಿಯಾಗಲಿ ಎಂಬ ಅಭಿಲಾಷೆಯೊಂದಿಗೆ,,,,,,,
-೦-೦-೦-೦-