ದೆಹಲಿ ಉಸಿರಾಡೋದಕ್ಕೂ ಕಷ್ಟಪಡ್ತಿದೆ. ಮನೆಯೊಳಗಿದ್ದರೂ ಮಾಸ್ಕ್ ಧರಿಸಿಕೊಂಡೇ ಇರ್ಬೇಕಾದ ಪರಿಸ್ಥಿತಿ ಉಂಟಾಗಿದೆ. ದಟ್ಟ ಹೊಗೆ, ವಿಷಗಾಳಿಯಿಂದ ರಾಷ್ಟ್ರ ರಾಜಧಾನಿ ಅಕ್ಷರಶಃ ಗ್ಯಾಸ್ ಚೇಂಬರ್‌ನಂತಾಗಿದೆ. ದೆಹಲಿ ಪರಿಸ್ಥಿತಿ ಗಂಭೀರ ಸ್ವರೂಪ ಪಡೀತಿದ್ದಂತೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿದೆ.
ದಟ್ಟವಾದ ಹೊಗೆ… ಪರಸ್ಪರರ ಮುಖ ಕಾಣಿಸದಿರುವಷ್ಟು ಆವರಿಸಿರೋ ವಿಷಯುಕ್ತ ಗಾಳಿ.. ಹೊರಗೆ ಓಡಾಡೋದೂ ಕಷ್ಟ, ಉಸಿರಾಡಿದ್ರೆ ಮಾರಕ ಕಾಯಿಲೆ ಫಿಕ್ಸ್ ಅನ್ನುವಂಥಾ ಸ್ಥಿತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣಗೊಂಡಿದೆ. ಪರಿಸ್ಥಿತಿ ಗ್ಯಾಸ್ ಚೇಂಬರ್‌ನಂತಾಗಿದ್ದು, ವಾಯುಮಾಲಿನ್ಯದ ಕಾರಣಕ್ಕೆ ರಾಜಧಾನಿ ಲಾಕ್‌ಡೌನ್ ಮಾಡೋ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯ ಆಕಾಶದ ತುಂಬಾ ದಟ್ಟ ಹೊಗೆಯ ಹೊದಿಕೆಯೇ ಕಾಣಿಸ್ತಿದೆ. ಜೀವಕ್ಕೇ ಸಂಚಕಾರ ತಂದೊಡ್ಡೋ ಈ ಹೊಗೆ ದೆಹಲಿ ಜನರನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ಈಗಾಗಲೇ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್, ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಚಾಟಿ ಬೀಸಿದೆ. ಕಳೆದೊಂದು ವಾರದಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ವಿಷಗಾಳಿಯಿಂದ ಜನ್ರನ್ನು ಕಾಪಾಡಲು ಏನ್ ಕ್ರಮ ಕೈಗೊಂಡಿದ್ದೀರಿ ಅಂತಾ ಪ್ರಶ್ನಿಸಿರೋ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ರಮಣ, ತುರ್ತಾಗಿ ಏನ್ ಕ್ರಮ ಕೈಗೊಳ್ತೀರಾ, ಎರಡು ದಿನಗಳ ಕಾಲ ಲಾಕ್ಡೌನ್ ಮಾಡ್ತೀರಾ ಅಂತಾ ಪ್ರಶ್ನಿಸಿದ್ರು. ಒಂದೇ ತಿಂಗಳ ಅವಧಿಯಲ್ಲಿ ದೆಹಲಿ ಗಾಳಿ ಕಲುಷಿತಗೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾತ್ರ ನಿಧಾನಗತಿ ಅನುಸರಿಸ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ದೆಹಲಿ ಸರ್ಕಾರಕ್ಕೆ ಪಂಚ ಪ್ರಶ್ನೆಗಳನ್ನು ಕೇಳೋ ಮೂಲಕ ತರಾಟೆಗೆ ತೆಗೆದುಕೊಂಡಿದೆ.

ದೆಹಲಿ ವಾಯು ಮಾಲಿನ್ಯ ಸುಧಾರಿಸಲು ತುರ್ತಾಗಿ ಏನ್ ಕ್ರಮ ಕೈಗೊಂಡಿದ್ದೀರಿ ಅಂತಾ ಕೇಳಿರೋ ಸುಪ್ರೀಂಕೋರ್ಟ್ ಎರಡು ದಿನಗಳ ಲಾಕ್ಡೌನ್ ಮಾಡ್ತೀರಾ ಅಂತಾ ಪ್ರಶ್ನಿಸಿದೆ. ಇನ್ನು ದೆಹಲಿಯ ವಾಯುಮಾಲಿನ್ಯಕ್ಕೆ ರೈತರನ್ನೇ ಯಾಕೆ ಹೊಣೆ ಮಾಡ್ತೀರಾ, ಇತರ ಕಾರಣಗಳ ಬಗ್ಗೆ ಯಾಕೆ ನಿರ್ಲಕ್ಷ್ಯ ವಹಿಸ್ತಿದ್ದೀರಾ ಅಂತಾ ಪ್ರಶ್ನಿಸಲಾಯ್ತು. ಇನ್ನು ಎಲ್ಲದಲ್ಲೂ ರೈತರನ್ನು ದೂಷಿಸೋದು ಫ್ಯಾಷನ್ ಆಗಿಬಿಟ್ಟಿದೆ. ಕೊನೆಗೆ ರೈತರಿಗೆ ಪರ್ಯಾಯ ಪರಿಹಾರ ಸೂಚಿಸದೆ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಅಂತಾ ಕೋರ್ಟ್ ಅಭಿಪ್ರಾಯಪಟ್ಟಿದೆ.
ಅತ್ತ ಸುಪ್ರೀಂಕೋರ್ಟ್ ಚಾಟಿ ಬೀಸ್ತಿದ್ದಂತೆ ಎಚ್ಚೆತ್ತುಕೊಂಡ ಕೇಜ್ರಿವಾಲ್ ಸರ್ಕಾರ, ತುರ್ತು ಮೀಟಿಂಗ್ ಮಾಡಿ ಪರಿಸ್ಥೀತಿ ಅವಲೋಕನ ಮಾಡಿದೆ. ಸಂಜೆ 5 ಗಂಟೆಗೆ ತುರ್ತು ಸಭೆ ಕರೆದ ಅರವಿಂದ್ ಕೇಜ್ರಿವಾಲ್, ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಸುಪ್ರೀಂಕೋರ್ಟ್ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ತಿದ್ದಂತೆ ದೆಹಲಿಯಲ್ಲಿ ಮತ್ತೆ ಒಂದು ವಾರ ಎಲ್ಲಾ ಶಾಲೆಗಳನ್ನು ಬಂದ್ ಮಾಡೋ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಜನದಟ್ಟಣೆ, ವಾಹನ ಬಳಕೆ ಕಡಿಮೆ ಮಾಡೋ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ಮುಂದಿನ 48 ಗಂಟೆಗಳಲ್ಲಿ ದೆಹಲಿ ವಾಯು ಗುಣಮಟ್ಟ ಮತ್ತಷ್ಟು ಹದಗೆಡಲಿದ್ದು, ವಾಯುಮಾಲಿನ್ಯ ನಿಯಂತ್ರಿಸದಿದ್ರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಅಂತಾ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ.
